ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾಕ್ಷಿ ಮೇಳ: 1000 ಟನ್ ಮಾರಾಟ ಗುರಿ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ದ್ರಾಕ್ಷಿ ಪೂರೈಕೆ ಮಾಡಲು ‘ದ್ರಾಕ್ಷಿ ಮೇಳ’ವನ್ನು ಆಯೋಜಿಸಲಾಗಿದ್ದು, ಈ ಬಾರಿ 1000 ಟನ್ ವಹಿವಾಟು ಮಾಡುವ ಗುರಿ ಹೊಂದಲಾಗಿದೆ’ ಎಂದು ತೋಟಗಾರಿಕೆ ಸಚಿವ ಎಸ್.ಎ.ರವೀಂದ್ರನಾಥ್ ತಿಳಿಸಿದರು.

ನಗರದಲ್ಲಿ ಬುಧವಾರ ‘ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ’ (ಹಾಪ್‌ಕಾಮ್ಸ್)ದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ದ್ರಾಕ್ಷಿ ಮೇಳ-2011’ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಬೆಂಗಳೂರು, ಕೋಲಾರ, ವಿಜಾಪುರ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ರೈತರು ಬೆಳೆದ ದ್ರಾಕ್ಷಿಯನ್ನು ಖರೀದಿಸಲಾಗುವುದು.
 
ಮಾರುಕಟ್ಟೆ ಬೆಲೆಗಿಂತ ಶೇ 10ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು. ಈ ಮೇಳವು ಬುಧವಾರದಿಂದ ಮಾರ್ಚ್ ಕೊನೆಯ ವಾರದವರೆಗೂ ಮುಂದುವರೆಯಲಿದೆ’ ಎಂದು ಹೇಳಿದರು.

‘ರೈತರು ಹಾಗೂ ಗ್ರಾಹಕರ ಮಧ್ಯವರ್ತಿಯಾಗಿ ಹಾಪ್‌ಕಾಮ್ಸ್ ಕಾರ್ಯನಿರ್ವಹಣೆ ಮಾಡಲಿದೆ. ಆ ಮೂಲಕ ರೈತರಿಗೆ ಸ್ಥಳದಲ್ಲೇ ಹಣ ಪಾವತಿ ಮಾಡಿ ಖರೀದಿ ಮಾಡಲಾಗುವುದು. ಕಡಿಮೆ ದರದಲ್ಲಿ ಮಾರಾಟ ಮಾಡುವ ಮೂಲಕ ಗ್ರಾಹಕರಿಗೆ ಅನುಕೂಲ ಕಲ್ಪಿಸುವುದು ಈ ಮೇಳದ ಉದ್ದೇಶವಾಗಿದೆ’ ಎಂದರು.

ಶಿಥಿಲೀಕರಣ ಘಟಕ ಸ್ಥಾಪನೆಯಿಲ್ಲ: ದ್ರಾಕ್ಷಿ ಬೆಳೆ ಹಾಳಾಗದಂತೆ ತಡೆದು, ಉತ್ತಮ ಬೆಲೆ ಬಂದ ನಂತರ ಮಾರಾಟ ಮಾಡುವ ಉದ್ದೇಶದಿಂದ ಶಿಥಿಲೀಕರಣ ಘಟಕವನ್ನು ಸ್ಥಾಪಿಸಬೇಕು ಎಂಬ ಬೆಳೆಗಾರರ ಬೇಡಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ‘ಸರ್ಕಾರ ತಾನಾಗಿಯೇ ಶಿಥಿಲೀಕರಣ ಘಟಕವನ್ನು ಸ್ಥಾಪಿಸುವುದಿಲ್ಲ. ಖಾಸಗಿಯವರು ಸ್ಥಾಪನೆಗೆ ಆಸಕ್ತಿ ವಹಿಸಿದರೆ ಶೇ 50ರಷ್ಟು ಧನ ಸಹಾಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ನೀಡಲಿವೆ’ ಎಂದರು.

ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಮಾತನಾಡಿ, ‘ತೋಟಗಾರಿಕೆ ಇಲಾಖೆಯು ಹಾಪ್‌ಕಾಮ್ಸ್‌ಗಳ ಮೂಲಕ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲಾಗುವುದು’ ಎಂದರು. ಹಾಪ್‌ಕಾಮ್ಸ್ ಅಧ್ಯಕ್ಷ ಬಿ.ವಿ.ಚಿಕ್ಕಣ್ಣ ಮಾತನಾಡಿ, ‘ಬೀಜವಿಲ್ಲದ ದ್ರಾಕ್ಷಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಗ್ರಾಹಕರು ಇವುಗಳನ್ನೇ ಇಷ್ಟಪಡುತ್ತಾರೆ.
 
ಬೆಂಗಳೂರಿನ ವಿವಿಧ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮೇಳ ಆಯೋಜಿಸಲಾಗಿದೆ. ಥಾಮ್ಸನ್ ಸೀಡ್‌ಲೆಸ್, ಸೋನಾಕಾ, ಶರದ್, ಕೃಷ್ಣ ಶರದ್, ಇಂಡಿಯನ್ ಬ್ಲಾಕ್ ಗ್ಲೋಬ್, ರೆಡ್‌ಗ್ಲೋಬ್, ಫ್ಲೇಂ ಸೀಡ್‌ಲೆಸ್, ಬೆಂಗಳೂರು ನೀಲಿ, ದಿಲ್‌ಕುಶ್ ತಳಿಯ ದ್ರಾಕ್ಷಿಗಳನ್ನು ಮಾರಾಟಕ್ಕಿಡಲಾಗಿದೆ. ಇವುಗಳಲ್ಲಿ ಕೆಲ ತಳಿಗಳನ್ನು ಜ್ಯೂಸ್, ವೈನ್ ತಯಾರಿಕೆಗೂ ಬಳಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT