ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾವಿಡ ಸಂಸ್ಕೃತಿಯ ಕಡೆಗಣನೆ: ಡಾ.ಕೆ.ಮರುಳಸಿದ್ಧಪ್ಪ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `5 ಮತ್ತು 8ನೇ ತರಗತಿಗಳಿಗೆ ಸಿದ್ಧಪಡಿಸಿರುವ ಸಮಾಜ ವಿಜ್ಞಾನದ ಹೊಸ ಪಠ್ಯದಲ್ಲಿ ಅಚ್ಚು ಹಾಕಲು ಉದ್ದೇಶಿಸಿರುವ ಸಾಂಸ್ಕೃತಿಕ ಭಾರತದ ಭೂಪಟದಿಂದ ಅಂತರರಾಷ್ಟ್ರೀಯ ಬಿಕ್ಕಟ್ಟು ಉಂಟಾಗಲಿದೆ~ ಎಂದು ವಿಮರ್ಶಕ ಡಾ.ಕೆ.ಮರುಸಿದ್ಧಪ್ಪ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಭೀಮವಾದ) ಜಿಲ್ಲಾ ಘಟಕವು ಮಂಗಳವಾರ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ `ಪಠ್ಯದಲ್ಲಿ ಕೇಸರೀಕರಣ; ಸಂವಿಧಾನ ವಿರೋಧಿ ಹಗರಣ- ಒಂದು ಚರ್ಚೆ~ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಯಾವುದೇ ಸೂಕ್ತ ಚಾರಿತ್ರಿಕ ಆಧಾರಗಳಿಲ್ಲದೇ ಬರ್ಮಾ, ಟಿಬೆಟ್ ಮೊದಲಾದ ಪ್ರದೇಶಗಳನ್ನು ಸೇರಿಸಿ ಸಾಂಸ್ಕೃತಿಕ ಭಾರತ ಎಂಬ ಭೂಪಟವನ್ನು ವಿನ್ಯಾಸಗೊಳಿಸಲಾಗಿದೆ. ಇದು ಮಕ್ಕಳನ್ನು ದಾರಿ ತಪ್ಪಿಸುವುದಲ್ಲದೇ ನೆರೆ ಹೊರೆಯ ದೇಶಗಳ ಜತೆಗಿನ ಸಂಬಂಧವನ್ನೂ ಹಾಳು ಮಾಡುತ್ತದೆ~ ಎಂದು ಅವರು ಹೇಳಿದರು.

`ಅಂತರರಾಷ್ಟ್ರೀಯ ಸಾಮರಸ್ಯಕ್ಕೆ ಧಕ್ಕೆ ತರುವ ಇಂತಹ ಪ್ರಯತ್ನ ರಾಷ್ಟ್ರದ್ರೋಹವೇ ಸರಿ. ಇದೇ ಕೆಲಸವನ್ನು ಚೀನಿಯರು ಬೌದ್ಧ ಚೀನಾ ಎಂದೂ, ಪಾಕಿಸ್ತಾನ ಅಥವಾ ಬಾಂಗ್ಲಾದೇಶಗಳು ಮುಸ್ಲಿಂ ಆಳ್ವಿಕೆಯ ಉಪ ಖಂಡ ಎಂದೂ ಭೂಪಟಗಳನ್ನು ಪ್ರಕಟಿಸಿದರೆ ಎಂತಹ ಅಪಾಯಕಾರಿ ಪರಿಸ್ಥಿತಿ ಉದ್ಭವಿಸಬಹುದು!~ ಎಂದು ಅವರು ತಿಳಿಸಿದರು.

`ಭಾರತ ಬಹುಧರ್ಮ ಮತ್ತು ಸಂಸ್ಕೃತಿಗಳ ದೇಶ ಎಂಬುದನ್ನು ಮರೆಮಾಚಿ ಏಕರೂಪಿ ಸಂಸ್ಕೃತಿಯ ದೇಶವೆಂದು ಬಿಂಬಿಸಲು ಹೊರಟಿರುವುದು ಘೋರ ಅಪರಾಧ~ ಎಂದು ಬಣ್ಣಿಸಿದ ಅವರು, `ಕಾಗೇರಿ ವೈಯಕ್ತಿಕವಾಗಿ ಸಜ್ಜನರಾಗಿರಬಹುದು. ಆದರೆ ಅವರು ಭ್ರಷ್ಟಾಚಾರ, ಅತ್ಯಾಚಾರ, ಬ್ಲೂ ಫಿಲಂ ವೀಕ್ಷಣೆ ಪ್ರಕರಣಗಳಲ್ಲಿ ಸಿಲುಕಿರುವ ಸಚಿವರಿಗಿಂತಲೂ ಹೆಚ್ಚು ಅಪಾಯಕಾರಿ. ಯಾಕೆಂದರೆ ಮಕ್ಕಳಿಗೆ ವಿಷ ತುಂಬುವ ಕಾರ್ಯ ನೀಚತನದ್ದು~ ಎಂದರು.

ಉದ್ಘಾಟನಾ ಭಾಷಣ ಮಾಡಿದ ಲೋಕಸಭಾ ಸದಸ್ಯ ಎಚ್.ವಿಶ್ವನಾಥ್, `ಉದ್ದೇಶಿತ ಹೊಸ ಪಠ್ಯದಲ್ಲಿ ದಕ್ಷಿಣ ಭಾರತದ ದ್ರಾವಿಡ ಸಂಸ್ಕೃತಿಯನ್ನು ಕೊಚ್ಚಿ ಕೊಲೆ ಮಾಡುವ ಯತ್ನ ನಡೆದಿದೆ. ಮಿಥ್ಯೆಯನ್ನು ಸತ್ಯವನ್ನಾಗಿಸುವ ಸಂಚು ನಡೆಸಿದೆ. ಪಠ್ಯಕ್ರಮದ ಮೂಲಕ ಮಕ್ಕಳಲ್ಲಿ ಹಿಂದುತ್ವ, ಆರ್‌ಎಸ್‌ಎಸ್ ಸಿದ್ಧಾಂತ ತುರುಕಲು ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ~ ಎಂದರು.

`ಎಳೆಯ ಮನಸ್ಸುಗಳನ್ನು ಕೆಡಿಸುವ ಪ್ರಯತ್ನ ಅಕ್ಷಮ್ಯ ಅಪರಾಧ. ಸಮಾಜಶಾಸ್ತ್ರವನ್ನು ತಿರುಚುವ, ಚರಿತ್ರೆಯನ್ನೇ ತಿದ್ದಿ ಬರೆಯುವ ಯತ್ನ ಮಕ್ಕಳಿಗೆ ಮಾತ್ರವಲ್ಲ; ಇಡೀ ನಾಡು ಮತ್ತು ದೇಶಕ್ಕೆ ಬಗೆಯುವ ದ್ರೋಹ~ ಎಂದು ಅವರು ದೂರಿದರು.

`ಆರ್‌ಎಸ್‌ಎಸ್ ಮೂಲದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅರವಿಂದ ಲಿಂಬಾವಳಿ ಅವರನ್ನು ಶಿಕ್ಷಣ ಸಚಿವರನ್ನಾಗಿ ಆಯ್ಕೆ ಮಾಡಿದ್ದರಲ್ಲಿಯೇ ಬಿಜೆಪಿಯ ರಹಸ್ಯ ಕಾರ್ಯಸೂಚಿಯನ್ನು ಕಾಣಬಹುದು~ ಎಂದು ಅಭಿಪ್ರಾಯಪಟ್ಟ ಅವರು, `ಕೇಂದ್ರದ ಯುಪಿಎ ಸರ್ಕಾರ 2005ರಲ್ಲಿ ರೂಪಿಸಿದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ಎನ್‌ಸಿಎಫ್) ಮಾರ್ಗದರ್ಶಿ ಸೂತ್ರಗಳನ್ನು ರಾಜ್ಯ ಸರ್ಕಾರ ಗಾಳಿಗೆ ತೂರಿದೆ~ ಎಂದು ದೂರಿದರು.

`ಕಾಗೇರಿ ಅವರು ಮಂತ್ರಿಯಾದ 30 ದಿನಗಳ ಬಳಿಕ ಪಠ್ಯಕ್ರಮವನ್ನು ಆಮೂಲಾಗ್ರವಾಗಿ ಬದಲಾಯಿಸುವುದಾಗಿ, ಅದಕ್ಕಾಗಿ ನೀಲನಕ್ಷೆ ಸಿದ್ಧವಿರುವುದಾಗಿ ಹೇಳಿಕೆ ನೀಡಿದ್ದರು. ಆ ನೀಲನಕ್ಷೆಯನ್ನು ಸಾರ್ವಜನಿಕರ ಮುಂದೆ ಮಂಡಿಸುವಂತೆ ನಾನು ಒತ್ತಾಯಿಸಿದ್ದೆ. ಆ ಹೇಳಿಕೆ ನೀಡಿದ ಎರಡು ವರ್ಷಗಳ ನಂತರ ಒಂದು ಸಭೆಗೆ ಪ್ರೊ.ಬಿ.ಕೆ.ಚಂದ್ರಶೇಖರ್ ಮತ್ತು ನನ್ನನ್ನು ಕರೆಯಲಾಯಿತು. ಆ ಸಭೆಯಲ್ಲಿದ್ದ ಬಹುತೇಕರಿಗೆ ಭಾರತೀಯ ಸಂಸ್ಕೃತಿ, ರಾಷ್ಟ್ರೀಯ ಮನೋಭಾವ, ಬಡಜನರ ಸ್ಥಿತಿಗತಿಗಳ ಬಗ್ಗೆ ಅರಿವು ಇರಲಿಲ್ಲ. ಅದನ್ನು ಕಾಗೇರಿ ಅವರಿಗೆ ನೇರವಾಗಿಯೇ ಹೇಳಿದೆ. ಈಗ ಅವರು ನಾನು ಮತ್ತು ಬಿಕೆಸಿ ಪಠ್ಯ ಬದಲಾವಣೆಗೆ ಒಪ್ಪಿಗೆ ನೀಡಿದ್ದೆವು ಎಂದು ಸುಳ್ಳು ಹೇಳುತ್ತಿದ್ದಾರೆ~ ಎಂದು ಅವರು ಟೀಕಿಸಿದರು.

`ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್ ಮೊದಲಾದ ಜಾತ್ಯತೀತ ಮತ್ತು ವೈಚಾರಿಕ ಮನೋಭಾವವುಳ್ಳ ರಾಜಕೀಯ ಪಕ್ಷಗಳಿಗೆ ಪತ್ರ ಬರೆದು ಪಠ್ಯಕ್ರಮದ ಕೇಸರೀಕರಣದ ವಿರುದ್ಧ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡುತ್ತೇನೆ~ ಎಂದರು. ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ದಸಂಸ (ಭೀಮವಾದ) ರಾಜ್ಯ ಸಂಚಾಲಕ ಆರ್.ಮೋಹನ್ ರಾಜ್ ಮಾತನಾಡಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT