ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ನೇರ ವರ್ಗಾವಣೆ; ಗ್ರಾಹಕರ ಜೇಬಿಗೆ ಕತ್ತರಿ!

ಅನಿಲ ಏಜೆನ್ಸಿ, ಅಧಿಕಾರಿಗಳಿಂದ ದೊರೆಯದ ಸಮರ್ಪಕ ಉತ್ತರ
Last Updated 11 ಡಿಸೆಂಬರ್ 2013, 8:34 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ನೂತನವಾಗಿ ಜಾರಿಯಾಗಿರುವ ‘ನಗದು ನೇರ ವರ್ಗಾವಣೆ’ ಯೋಜನೆ ಗ್ರಾಹಕರಿಗೆ ‘ಹೊರೆ’ಯಾಗಿ ಪರಿಣಮಿಸಿದೆ! ಸರ್ಕಾರದಿಂದ ದೊರೆಯುವ ಸವಲತ್ತು ಸಮರ್ಪಕವಾಗಿ ಹಾಗೂ ನೇರವಾಗಿ ಫಲಾನುಭವಿಗೆ ತಲುಪಬೇಕು ಎಂಬ ಉದ್ದೇಶಕ್ಕೆ ಹಿನ್ನಡೆಯಾಗಿದೆ.

ಜಿಲ್ಲೆಯಲ್ಲಿ ಡಿ.1ರಿಂದ ಯೋಜನೆ ಜಾರಿಗೊಳಿಸಲಾಗಿದೆ. ಎಲ್ಲ ಅಡುಗೆ ಅನಿಲ ಸಿಲಿಂಡರ್‌ ಗ್ರಾಹಕರು, ವಿಶಿಷ್ಟ ಗುರುತು ಪ್ರಾಧಿಕಾರ ನೀಡುವ ‘ಆಧಾರ್‌’ ಸಂಖ್ಯೆ ಪಡೆದುಕೊಳ್ಳಬೇಕು. ಅದನ್ನು ಅಡುಗೆ ಅನಿಲ ಸಿಲಿಂಡರ್‌ ಏಜೆನ್ಸಿ ಹಾಗೂ ಬ್ಯಾಂಕ್‌ನೊಂದಿಗೆ ಜೋಡಣೆ ಮಾಡಿಸಬೇಕು. ಹೀಗೆ ಜೋಡಿಸಿದರೆ ಸರ್ಕಾರದ ಸಹಾಯಧನ ನೇರವಾಗಿ ಬ್ಯಾಂಕ್‌ ಖಾತೆಗಳಿಗೆ ಬರುತ್ತದೆ ಎಂದು ಸರ್ಕಾರ ಹೇಳಿದೆ. ಇದರಂತೆ, ಬ್ಯಾಂಕ್‌ಗಳಿಗೆ ‘ಆಧಾರ್‌’ ಜೋಡಿಸಿದವರಿಗೆ ₨ 156 ಖೋತಾ ಆಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ! ಇದು ಗ್ರಾಹಕರಲ್ಲಿ ಆತಂಕ ಹಾಗೂ ಗೊಂದಲ ಮೂಡಿಸಿದೆ.

ಖೋತಾ ಹೇಗೆ?: ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ ಹೊರತುಪಡಿಸಿ ವಿವಿಧ 204 ಬ್ಯಾಂಕ್ ಶಾಖೆಗಳಿವೆ. 2.95 ಲಕ್ಷ ಅಡುಗೆ ಅನಿಲ ಸಿಲಿಂಡರ್‌ ಗ್ರಾಹಕರಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ, ಕೇವಲ 78 ಸಾವಿರ ಮಂದಿ ಮಾತ್ರ ‘ಆಧಾರ್‌’ ನೋಂದಣಿ ಮಾಡಿಸಿದ್ದಾರೆ. ಬಹಳ ಮಂದಿಗೆ ಆಧಾರ್‌ ಕಾರ್ಡ್‌ ಈವರೆಗೂ ತಲುಪಿಲ್ಲ. ಕೆಲವರು ಆನ್‌ಲೈನ್‌ನಲ್ಲಿ ‘ಆಧಾರ್‌’ ಸಂಖ್ಯೆ ಪಡೆದು ಅಡುಗೆ ಅನಿಲ ಸಿಲಿಂಡರ್‌ ಏಜೆನ್ಸಿ ಹಾಗೂ ಬ್ಯಾಂಕ್‌ಗಳಿಗೆ ಕೊಟ್ಟಿದ್ದಾರೆ. ಅಂಥವರಿಗೆ ಸಹಾಯಧನ ನೇರವಾಗಿ ಖಾತೆಗೆ ಜಮಾ ಆಗುತ್ತಿದೆ.

‘ಆಧಾರ್‌’ ನೋಂದಣಿ ಮಾಡಿಸಿದವರಿಗೆ ಅಡುಗೆ ಅನಿಲ ಏಜೆನ್ಸಿಯವರು ₨ 1,013.50 ಪಡೆಯುತ್ತಿದ್ದಾರೆ (ಸರಬರಾಜು ಮಾಡುವವರು ಸೇವಾ ಶುಲ್ಕವೆಂದು ಎಂದು ಹೇಳಿ ಒಟ್ಟು ₨1,030 ಪಡೆಯುತ್ತಾರೆ!) ಗ್ರಾಹಕರ ಖಾತೆಗೆ ₨ 435 ಮಾತ್ರ ಹಾಕಲಾಗುತ್ತಿದೆ.

ಹೊಸ ವ್ಯವಸ್ಥೆಗಿಂತ ಮೊದಲು ನಾವು ಸಿಲಿಂಡರ್‌ವೊಂದಕ್ಕೆ ₨ 422 ಕೊಡುತ್ತಿದ್ದೆವು. ಇದೀಗ, ₨ 1,013.50 ಕೊಟ್ಟು ಕೇವಲ ₨ 435 ಸಹಾಯಧನ ಪಡೆದರೆ ₨156 ಖೋತಾ ಆದಂತಾಗುತ್ತಿದೆ. ಬ್ಯಾಂಕ್‌ನವರನ್ನು ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಅನಿಲ ಏಜೆನ್ಸಿಯವರು ನಮಗೂ ಗೊತ್ತಿಲ್ಲ. ಕೆಲವು ದಿನಗಳು ಬಿಟ್ಟು ಬರಬಹುದು ಎನ್ನುತ್ತಾರೆ. ಹೀಗಾದರೆ, ನಾವು ಯಾರನ್ನು ಕೇಳಬೇಕು? ನೇರವಾಗಿ ಸಹಾಯಧನ ಕೊಡುತ್ತೇವೆ ಎನ್ನುವ ಸರ್ಕಾರ ಗ್ರಾಹಕರಿಗೆ ₨ 156 ಹೊರೆ ಮಾಡಿದರೆ ಹೇಗೆ? ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.

ಗ್ರಾಹಕರು ತಮ್ಮ ಅಡುಗೆ ಅನಿಲ ಏಜೆನ್ಸಿ ಹಾಗೂ ಬ್ಯಾಂಕ್‌ನಲ್ಲಿ ‘ಆಧಾರ್‌’ ಸಂಖ್ಯೆಯನ್ನು ಮೂರು ತಿಂಗಳ ಒಳಗೆ ನೋಂದಣಿ ಹಾಗೂ ಜೋಡಿಸಬೇಕು (ಲಿಂಕಿಂಗ್‌). ನೋಂದಣಿ ನಂತರ ಗ್ರಾಹಕರ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಹಣ ನೇರವಾಗಿ ಸಂದಾಯವಾಗುತ್ತದೆ. 2014ರ ಫೆಬ್ರುವರಿವರೆಗೆ ನೋಂದಣಿಗೆ ಅವಕಾಶವಿದ್ದು, ಈ ಅವಧಿಯವರೆಗೂ ಸಬ್ಸಿಡಿ ದರದಲ್ಲೇ ಸಿಲಿಂಡರ್‌ ವಿತರಿಸಲಾಗುವುದು. ಮೂರು ತಿಂಗಳ ಕಾಲಾವಕಾಶದ ನಂತರ, ಗ್ರಾಹಕರು ಮಾರುಕಟ್ಟೆ ದರದಲ್ಲೇ ಸಿಲಿಂಡರ್‌ ಖರೀದಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT