ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ವಿವಿಧೆಡೆ ಕಾರ್ಮಿಕರ ದಿನಾಚರಣೆ:ಜಾಗೃತ ಹೋರಾಟದಿಂದ ಹಕ್ಕು ಪಡೆಯಲು ಸಾಧ್ಯ

Last Updated 2 ಮೇ 2012, 6:00 IST
ಅಕ್ಷರ ಗಾತ್ರ

ತುಮಕೂರು: ಕಾರ್ಮಿಕರು ಜಾಗೃತ ಹೋರಾಟದ ಮೂಲಕವೇ ಹಕ್ಕು, ಪ್ರತಿಫಲಾಕ್ಷೆ ಪಡೆಯಲು ಸಾಧ್ಯ. ಹೋರಾಡದಿದ್ದರೆ ಮಾಲೀಕ ರಿಂದ ಕಾರ್ಮಿಕರಿಗೆ ನಿಜವಾದ ಪ್ರತಿಫಲ ಸಿಗಲಾ ರದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರ್ ಹೇಳಿದರು.

ಸಿಐಟಿಯು ಜಿಲ್ಲಾ ಸಮಿತಿ ಮಂಗಳವಾರ ನಗರ ದಲ್ಲಿ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುವ, ಅಸಂಘಟಿತ ಕಾರ್ಮಿಕರ ಮಕ್ಕಳ ಶಿಕ್ಷಣ, ಆರೋಗ್ಯದತ್ತ ಗಮನ ಹರಿಸಬೇಕಾಗಿದೆ. ಈ ವರ್ಗದ ಕಾರ್ಮಿಕರ ಜೀವನ ದುಃಸ್ಥಿತಿಯಲ್ಲಿದೆ ಎಂದರು.

ಕಾರ್ಮಿಕರ ಹೋರಾಟ ಜಾತಿ, ಮತ, ಧರ್ಮವನ್ನು ಮೀರಿದ ಮನುಕುಲದ ಕಲ್ಯಾಣಕ್ಕಾಗಿ ನಡೆಯುತ್ತಿರುವ ಹೋರಾಟ ವಾಗಿದೆ. ವಿಶ್ವದ ಎಲ್ಲ ಕಾರ್ಮಿಕರು ಕೆಂಪು ಬಾವುಟದ ಚಾಮರದಡಿ ಒಂದಾಗಬೇಕು. ಒಗ್ಗೂಡಿ ಸಾಮರಸ್ಯದ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಜಗತ್ತಿನ ಎಲ್ಲ ಜಾತಿ, ಧರ್ಮಗಳು ಒಂದೇ ಆಗಿವೆ. ಆದರೆ ಶೋಷಣೆ ಮಾಡುವವರು, ಶೋಷಿತರು ಎಂಬ ಎರಡು ವರ್ಗಗಳಷ್ಟೇ ಜಗತ್ತಿನಲ್ಲಿವೆ. ಶೋಷಣೆ ಮಾಡುವ ವರ್ಗ ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಬಹುಸಂಖ್ಯೆಯ ಜನರನ್ನು ಶೋಷಣೆ ಮಾಡುತ್ತಿದೆ. ಈ ಶೋಷಣೆ ಮಾಡುವ ಬಂಡವಾಳಶಾಹಿಗಳನ್ನು ಬಗ್ಗು ಬಡಿಯಲು ಜಾಗೃತ ಹೋರಾಟದ ಅಗತ್ಯವಿದೆ ಎಂದು ಹೇಳಿದರು.

ಕಾರ್ಮಿಕರು ದೇಶದ ಸಂಪತ್ತು. ಕಾರ್ಮಿಕರ ಏಳ್ಗೆ ಹೊಂದದೆ ದೇಶ ಏಳ್ಗೆ ಸಾಧ್ಯವಿಲ್ಲ. ಆದರೆ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಕಾರ್ಮಿ ಕರು ಕೇವಲ ಸೌಲಭ್ಯಗಳಿಗಾಗಿ ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳದೆ ಸೌಹಾರ್ದ ಹೋರಾಟ, ಪ್ರಾಮಾಣಿಕ ಕೆಲಸ ಮಾಡುವುದನ್ನೂ ರೂಢಿಸಿಕೊಳ್ಳಬೇಕು ಎಂದರು.

ಅಂಗನವಾಡಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷೆ ಕಮಲಾ ಮಾತನಾಡಿ, ದೇಶದಲ್ಲಿ ಗೌರವ ಧನದ ಹೆಸರಿನಲ್ಲಿ ಮಹಿಳೆಯರನ್ನು ಶೋಷಿಸುವ ಕೆಲಸವನ್ನು ಸರ್ಕಾರಗಳೇ ಮಾಡತೊಡಗಿವೆ. ಇದರಿಂದಾಗಿ ಕನಿಷ್ಠ ಕೂಲಿ ಕೊಡುವಂತೆ ಬಂಡವಾಳಶಾಹಿ ಕಂಪೆನಿಗಳ ಕಿವಿ ಹಿಂಡುವ ಶಕ್ತಿಯನ್ನು ಸರ್ಕಾರಗಳು ಕಳೆದುಕೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರು ಹೋರಾಟ, ತ್ಯಾಗದ ಮೂಲಕ ಪಡೆದ ಹಕ್ಕುಗಳನ್ನೂ ಬಂಡವಾಶಶಾಹಿಗಳ ಪರವಾಗಿ ವರ್ತಿಸುತ್ತಿರುವ ಸರ್ಕಾರಗಳು ಜಾರಿ ಮಾಡುತ್ತಿಲ್ಲ. ಕಾರ್ಮಿಕರೆಲ್ಲರೂ ಒಂದಾಗಿ ದೊಡ್ಡ ಮಟ್ಟದ ಹೋರಾಟ ಮಾಡುವ ಅಗತ್ಯ ಹೆಚ್ಚಿದೆ ಎಂದು ತಿಳಿಸಿದರು.

ದೇಶದಲ್ಲಿ ಶೇ 45ರಷ್ಟು ಮಕ್ಕಳು ಅಪೌಷ್ಟಿಕತೆ ಯಲ್ಲಿ ನರುಳುತ್ತಿದ್ದು, ಇದೊಂದು ರಾಷ್ಟ್ರೀಯ ಅಪಮಾನ ಎಂದು ಪ್ರಧಾನಿ ಕರೆದಿದ್ದಾರೆ. ಆದರೆ ಐಸಿಡಿಎಸ್ ಯೋಜನೆಯನ್ನು ಸಮಗ್ರ, ಪರಿಣಾಮಕಾರಿಯಾಗಿ ಜಾರಿ ಮಾಡಲು ವಾರ್ಷಿಕ ರೂ. 73 ಸಾವಿರ ಕೋಟಿ ಬೇಕಾಗಿದೆ ಎಂದು ಸಮೀಕ್ಷೆ ಹೇಳಿದರೆ, ಕೇಂದ್ರ ಸರ್ಕಾರ ಕೇವಲ ರೂ. 23 ಸಾವಿರ ಕೋಟಿ ನೀಡಿ ಕೈತೊಳೆದುಕೊಂಡಿದೆ.

ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಐಸಿಡಿಎಸ್ ಯೋಜನೆಯಡಿ ಕೆಲಸ ಮಾಡುತ್ತಿ ರುವ ಅಂಗನವಾಡಿ ಕಾರ್ಯಕರ್ತೆಯರು ಮೂರು ಹೊತ್ತು ಊಟ ಮಾಡದಂಥ ದುಃಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಗೌರವಧನದ ಹೆಸರಿನಲ್ಲಿ ಅತಿ ಕಡಿಮೆ ಕೂಲಿ ನೀಡುವ ಮೂಲಕ ಸರ್ಕಾರಗಳೇ ಮಹಿಳೆಯರ ಶೋಷಣೆಯಲ್ಲಿ ತೊಡಗಿವೆ ಎಂದು ಕಿಡಿಕಾರಿದರು.

ಸಿಐಟಿಯು ಉಪಾಧ್ಯಕ್ಷ ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸಯ್ಯದ್ ಮುಜೀಬ್, ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ನಾಗೇಶ್, ಎ.ಆರ್. ದೇವರಾಜ್, ಬೆಟ್ಟಸ್ವಾಮಿ, ಅನಸೂಯಾ, ಶ್ರೀಧರ ಟಿ.ಎಸ್.ಅನಸೂಯಾ, ಕೆ.ಮಂಜುನಾಥ್ ಮತ್ತಿತರರು ಇದ್ದರು.

ಕಾರ್ಮಿಕರು- ಧರ್ಮ ಗುರುಗಳು: ತುಮಕೂರು ಜಿಲ್ಲಾ ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ಗುಬ್ಬಿ ವೀರಣ್ಣ ಕಲಾ ಮಂದಿರದಲ್ಲಿ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.

ಹಿರೇಮಠದ ಡಾ.ಶಿವಾನಂದಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಾರ್ಮಿಕರು ಮತ್ತು ಧಾರ್ಮಿಕ ಗುರುಗಳು ಒಂದೇ ಆಗಿದ್ದಾರೆ ಎಂದು ಬಣ್ಣಿಸಿದರು.ಕಾರ್ಮಿಕರು ತೆರೆಯ ಹಿಂದೆ ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಿದರೆ, ಧಾರ್ಮಿಕ ಗುರುಗಳು ತೆರೆಯ ಮುಂದೆ ಕೆಲಸ ಮಾಡುತ್ತಾರೆ. ಕಾರ್ಮಿಕರು ಶ್ರಮ ಸಂಸ್ಕೃತಿಯ ಪ್ರತೀಕ, ದೇಶದ ಸೂತ್ರಧಾರರು ಎಂದರು.

ಕಾರ್ಮಿಕ ಮುಖಂಡ ರೇವಣ್ಣ, ನಗರಸಭೆ ಅಧ್ಯಕ್ಷೆ ದೇವಿಕಾ, ಉಪಾಧ್ಯಕ್ಷ ಅಸ್ಲಾಂ ಪಾಷಾ, ಸದಸ್ಯರಾದ ಎಂ.ಪಿ.ಮಹೇಶ್, ಹನುಮಂತ ರಾಯಪ್ಪ, ಬೆಳ್ಳಿಲೋಕೇಶ್ ಹಾಜರಿದ್ದರು.ಎಐಟಿಯುಸಿ ಆಶ್ರಯದಲ್ಲಿ ನಗರದ ಚರ್ಚ್ ಸರ್ಕಲ್‌ನಲ್ಲಿ ಕಾರ್ಮಿಕ ದಿನಾಚರಣೆ ಆಯೋಜಿಸಲಾಗಿತ್ತು. ಕಾರ್ಮಿಕ ದಿನದ ಅಂಗವಾಗಿ ಮೆರವಣಿಗೆ ನಡೆಯಿತು.

ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಕಿರುತೆರೆ ನಟ ಹನುಮಂತೇಗೌಡ ಮಾತನಾಡಿದರು. ಮಾಜಿ ಶಾಸಕ ಎಚ್.ನಿಂಗಪ್ಪ, ಪಕ್ಷದ ರಾಜ್ಯ ಘಕಟದ ಹಿರಿಯ ಉಪಾಧ್ಯಕ್ಷ ಕೆ.ಬಿ.ಬೋರೇಗೌಡ, ನಗರ ಘಟಕದ ಜ್ಯೋತಿಪ್ರಕಾಶ್ ಮಿರ್ಜಿ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT