ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲೆಗ ನೀತಿ ಸಂಹಿತೆಯ ತೂಗುಗತ್ತಿ

Last Updated 8 ಏಪ್ರಿಲ್ 2013, 10:06 IST
ಅಕ್ಷರ ಗಾತ್ರ

ಯಾದಗಿರಿ: ಚುನಾವಣೆಗಳು ಘೋಷಣೆ ಆಗುತ್ತಿದ್ದಂತೆಯೇ ಎಲ್ಲೆಡೆಯೂ ಭರಾಟೆ, ಆರ್ಭಟಗಳು, ಮೈಕಾಸುರನ ರುದ್ರಾವತಾರ ಸಾಮಾನ್ಯ. ಈಗ ಅದೆಲ್ಲವೂ ಇತಿಹಾಸ ಎನ್ನುವಂತಾಗಿದೆ. ನಗರದಲ್ಲಿ ಈಗ ನೀತಿ ಸಂಹಿತೆಯ ತೂಗು ಗತ್ತಿ ನೇತಾಡುತ್ತಿದ್ದು, ಎಲ್ಲೆಡೆಯೂ ವಾತಾವರಣ ಸ್ತಬ್ಧಗೊಂಡಂತಾಗಿದೆ.

ಜಿಲ್ಲಾ ಕೇಂದ್ರವಾಗಿರುವ ನಗರದಲ್ಲಿ ಚುನಾವಣೆಯ ಗಾಳಿ ಇನ್ನೂ ಆರಂಭವಾಗಿಲ್ಲವೇ ಎನ್ನುವ ಯೋಚನೆ ನಗರದ ನಿವಾಸಿಗಳನ್ನು ಕಾಡುತ್ತಿದೆ. ಚುನಾವಣೆಗಳು ಬಂತೆಂದರೆ ಸಾಕು, ಅಟೋ, ಇನ್ನಿತರ ವಾಹನಗಳಲ್ಲಿ ಮೈಕ್ ಹಚ್ಚಿಕೊಂಡು ಪ್ರಚಾರ ನಡೆಸಲಾಗುತ್ತಿತ್ತು. ಅಲ್ಲದೇ ಅಲ್ಲಲ್ಲಿ ಸಭೆ, ಸಮಾರಂಭಗಳೂ ಆರಂಭವಾಗುತ್ತಿದ್ದವು. ಬಂದವರಿಗೆ ಊಟ, ಉಪಹಾರಗಳ ವ್ಯವಸ್ಥೆಯೂ ಇರುತ್ತಿತ್ತು. ಆದರೆ ಅದೆಲ್ಲವೂ ಈ ಬಾರಿ ಕಾಣುವುದು ಅಸಾಧ್ಯವೇನೋ.

ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿರ್ದೇಶನದಂತೆ ಚುನಾವಣಾ ನೀತಿ ಸಂಹಿತೆಯನ್ನು ಬಿಗಿಯಾಗಿ ಜಾರಿಗೊಳಿಸಲಾಗುತ್ತಿದ್ದು, ಎಲ್ಲೆಡೆಯೂ ನೀತಿ ಸಂಹಿತೆ ಉಲ್ಲಂಘನೆ ತಡೆಯಲು ರಚಿಸಲಾಗಿರುವ ತಂಡಗಳ ಕಣ್ಗಾವಲು ಇದೆ. ಹಾಗಾಗಿ ಯಾವ ರಾಜಕೀಯ ಪಕ್ಷಗಳ ನಾಯಕರೂ ಅಬ್ಬರದ ಪ್ರಚಾರವಾಗಲಿ, ಸಭೆ, ಸಮಾರಂಭಗಳನ್ನಾಗಲಿ ಮಾಡಲು ಮುಂದಾಗುತ್ತಿಲ್ಲ. ಹೀಗಾಗಿ ಚುನಾವಣೆ ಇದ್ದರೂ, ಒಂದು ರೀತಿಯ ಮೌನ ಆವರಿಸಿದೆ.

ದರ ನಿಗದಿ:
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಾಗಲಿ, ಪಕ್ಷದವರಾಗಲಿ ಸಭೆ, ಸಮಾರಂಭಗಳನ್ನು ಆಯೋಜಿಸಿದಲ್ಲಿ ಅದಕ್ಕೆ ತಗಲುವ ವೆಚ್ಚವನ್ನು ಚುನಾವಣಾ ಅಧಿಕಾರಿಗಳೇ ನಿರ್ಧರಿಸುತ್ತಾರೆ. ಅದಕ್ಕಾಗಿ ಯಾವಾವ ಸಾಮಗ್ರಿ ಎಷ್ಟೆಷ್ಟು ದರ ಎಂಬುದನ್ನು ನಿಗದಿಪಡಿಸಿದ್ದಾರೆ.

ಒಂದು ಸಮಾರಂಭದಲ್ಲಿ ಬಳಸುವ ಒಂದು ಕುರ್ಚಿ ರೂ.2, ಒಂದು ಟೇಬಲ್‌ಗೆ ರೂ.200, ಪೆಂಡಾಲ್‌ಗೆ ಇಂತಿಷ್ಟು ಎಂಬ ದರಗಳನ್ನು ಚುನಾವಣಾ ಅಧಿಕಾರಿಗಳು ಮೊದಲೇ ನಿಗದಿ ಪಡಿಸಿದ್ದು, ರಾಜಕೀಯ ಪಕ್ಷಗಳು ಬಳಸುವ ಸಾಮಗ್ರಿಗಳನ್ನು ಆಧರಿಸಿ, ಅದರ ವೆಚ್ಚವನ್ನು ಪಕ್ಷದ ಅಭ್ಯರ್ಥಿ ಲೆಕ್ಕಕ್ಕೆ ಹಾಕಲಾಗುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳ ನಾಯಕರು ಸಭೆ, ಸಮಾರಂಭಗಳ ಗೋಜಿಗೆ ಹೋಗದ, ಬಡಾವಣೆಗಳ ಮುಖಂಡರ ಮನೆಯ ಆವರಣದಲ್ಲಿಯೇ ಮತ ಯಾಚನೆಗೆ ಮುಂದಾಗಿದ್ದಾರೆ.

ಇನ್ನು ನಗರದಾದ್ಯಂತ ಕಂಡು ಬರುತ್ತಿದ್ದ ಕಟೌಟ್, ಬ್ಯಾನರ್‌ಗಳಿಗೂ ಕಡಿವಾಣ ಹಾಕಲಾಗಿದೆ. ಎಲ್ಲೆಂದರಲ್ಲಿ ರಾರಾಜಿಸುತ್ತಿದ್ದ ಕಟೌಟ್, ಬ್ಯಾನರ್‌ಗಳು ಈಗ ಕಾಣುತ್ತಿಲ್ಲ. ಏಕೆಂದರೆ, ಕಟೌಟ್, ಬ್ಯಾನರ್‌ಗಳಿಗೂ ಮಿತಿ ನಿಗದಿಪಡಿಸಲಾಗಿದ್ದು, ಅದಕ್ಕೂ ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಹೀಗಾಗಿ ನಗರದಾದ್ಯಂತ ತುಂಬಿ ತುಳುಕುತ್ತಿದ್ದ ಕಟೌಟ್, ಬ್ಯಾನರ್‌ಗಳಿಲ್ಲದೇ ನಗರದ ಸೌಂದರ್ಯ ಸ್ವಲ್ಪ ಮಟ್ಟಿಗಾದರೂ ಉಳಿಯುವಂತಾಗಿದೆ.

ಕ್ರಮ ಅಗತ್ಯ:
ಇನ್ನೊಂದೆಡೆ ನಗರದಾದ್ಯಂತ ನೀತಿ ಸಂಹಿತೆ ಜಾರಿಯಾಗಿದ್ದರೂ, ಅಲ್ಲಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದ ನಾಮಫಲಕಗಳು ಈಗಲೂ ಹಾಗೆಯೇ ನಿಂತಿವೆ. ಮುಖ್ಯ ರಸ್ತೆಗಳಲ್ಲಿನ ನಾಮಫಲಕಗಳಿಗೆ ಕಾಗದ ಹಚ್ಚುವುದು ಅಥವಾ ಕಿತ್ತು ಹಾಕಲಾಗಿದೆ.

ಆದರೆ ನಗರದ ವಿವಿಧ ಬಡಾವಣೆಗಳಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ಅವಧಿಯಲ್ಲಿ ನಡೆದ ಕಾಮಗಾರಿಗಳ ನಾಮಫಲಕಗಳು ಇನ್ನೂ ರಾರಾಜಿಸುತ್ತಲೇ ಇವೆ. ಹಲವಾರು ಉದ್ಯಾನಗಳ ಉದ್ಘಾಟನೆ ನಾಮಫಲಕಗಳು, ಬಸವೇಶ್ವರ ನಗರದಲ್ಲಿ ಮಾಜಿ ಶಾಸಕರ ಕಾಲದಲ್ಲಿ ಆಗಿದ್ದ ರಸ್ತೆ ಕಾಮಗಾರಿಯ ನಾಮಫಲಕಗಳು ಸೇರಿದಂತೆ ಹಲವಾರು ನಾಮಫಲಕಗಳು ಹಾಗೆಯೇ ಉಳಿದಿವೆ. ಇವುಗಳೂ ಕೂಡ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಇವುಗಳನ್ನು ಮುಚ್ಚುವುದು ಇಲ್ಲವೇ ತೆರವುಗೊಳಿಸುವ ಕಾರ್ಯ ಆಗಬೇಕು ಎನ್ನುತ್ತಾರೆ ಸಾಯಿಶ್ರಿ ಸೇವಾ ಸಂಸ್ಥೆ ಕಾರ್ಯದರ್ಶಿ ಸೈದಪ್ಪ ಗುತ್ತೇದಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT