ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

Last Updated 19 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಈಶಾನ್ಯ ರಾಜ್ಯಗಳ ನಾಗರಿಕರ ಮೇಲೆ ಹಲ್ಲೆ ಬೆದರಿಕೆ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ನಗರದಾದ್ಯಂತ ಭಾರಿ ಬಂದೋಬಸ್ತ್ ಕಲ್ಪಿಸಲಾಗುವುದು~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದರು.

`ರಂಜಾನ್ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸರ ನಿರಂತರ ಗಸ್ತಿನ ಜತೆಗೆ ಹೆಚ್ಚಿನ ಸಿಬ್ಬಂದಿ ಬಾಡಿಗೆ ವಾಹನಗಳಲ್ಲಿ ನಗರದಾದ್ಯಂತ ಸಂಚರಿಸಲಿದ್ದಾರೆ. ಅಲ್ಲದೇ, ಕಾನೂನು ಸುವ್ಯವಸ್ಥೆ ಕದಡುವ ಕಿಡಿಗೇಡಿಗಳನ್ನು ಪತ್ತೆ ಮಾಡಲು ನಗರದಾದ್ಯಂತ ಸಾವಿರಾರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಶಾಂತಿಗೆ ಧಕ್ಕೆ ತರಲೆತ್ನಿಸಿದವರನ್ನು ಬಂಧಿಸಿ ಅವರ ವಿರುದ್ಧ ಧರ್ಮ, ಸ್ಥಳ, ವರ್ಣ, ಭಾಷೆಯ ಆಧಾರದಲ್ಲಿ ಕೋಮುಗಳ ನಡುವೆ ದ್ವೇಷ ಮೂಡಿಸಿದ ಆರೋಪದಡಿ (ಭಾರತ ದಂಡ ಸಂಹಿತೆ 153ಎ) ಪ್ರಕರಣ ದಾಖಲಿಸಿಕೊಳ್ಳಲಾಗುವುದು~ ಎಂದು ಮಿರ್ಜಿ ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

`ಈಶಾನ್ಯ ರಾಜ್ಯಗಳ ನಾಗರಿಕರು ವಾಸವಾಗಿರುವ ಸ್ಥಳಗಳಲ್ಲಿ ಮತ್ತು ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಸೋಮವಾರ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ನಗರದ 18 ಸಾವಿರ ಪೊಲೀಸರು ಬಂದೋಬಸ್ತ್‌ನಲ್ಲಿ ತೊಡಗಿರುತ್ತಾರೆ.

ಜತೆಗೆ ಕ್ಷಿಪ್ರ ಕಾರ್ಯಾಚರಣೆ ಪಡೆಯ (ಆರ್‌ಎಎಫ್) ಮೂರು ತುಕಡಿಗಳು, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಮೂರು ಕಂಪೆನಿಗಳು, ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) 25  ತುಕಡಿಗಳು, ನಗರ ಸಶಸ್ತ್ರ ಪಡೆಯ (ಸಿಎಆರ್) 35 ತುಕಡಿಗಳು, ಒಂದೂವರೆ ಸಾವಿರ ತರಬೇತಿನಿರತ ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳದ 600 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು~ ಎಂದು ಹೇಳಿದರು.

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಈಶಾನ್ಯ ರಾಜ್ಯಗಳ ನಾಗರಿಕರ ಒಕ್ಕೂಟದ ಅಧ್ಯಕ್ಷ ಒಬೆಡ್ ಹಾವೊಕಿಪ್, `ನಮ್ಮ ರಾಜ್ಯಗಳ ಜನರಲ್ಲಿ ಮೂಡಿದ್ದ ಆತಂಕ ಈಗ ಕಡಿಮೆಯಾಗಿದೆ. ಇನ್ನೂ ಕೆಲವರು ಭಯದಿಂದ ನಗರ ತೊರೆಯುತ್ತಿದ್ದಾರೆ. ನಮ್ಮವರ ರಕ್ಷಣೆಗೆ ಕರ್ನಾಟಕ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ.

ಅಲ್ಲದೇ, ನಗರ ಪೊಲೀಸರೂ ಕೂಡ ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಶಾಂತಿ ಸಭೆ ನಡೆಸಿ ನಾಗರಿಕರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ವಾರದೊಳಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದೆ. ಆದರೂ, ನಗರದಲ್ಲಿ ವಾಸವಾಗಿರುವ ಈಶಾನ್ಯ ರಾಜ್ಯದವರಿಗೆ ಹಲ್ಲೆಯ ಭಯ ಶಾಶ್ವತವಾಗಿ ಮನೆ ಮಾಡಲಿದೆ~ ಎಂದರು.

ಯುವಕರ ಮೇಲೆ ಹಲ್ಲೆ: ಇಬ್ಬರ ಬಂಧನ
ಬೆಂಗಳೂರು:
ಡಾರ್ಜಿಲಿಂಗ್ ಮೂಲದ ಯುವಕರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅಶ್ರಫ್ ಮತ್ತು ಇಮ್ರಾನ್ ಎಂಬುವರನ್ನು ಅಶೋಕನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ನೀಲಸಂದ್ರದವರಾದ ಆರೋಪಿಗಳು ಶುಕ್ರವಾರ (ಆ.18) ಕುಮಾರ್ ಚೆಟ್ರಿ, ರಿಜೆನ್ ಗುರುಂಗ್, ಪ್ರಕಾಶ್‌ರಾಯ್ ಮತ್ತು ಅರುಣ್ ಚೆಟ್ರಿ ಎಂಬುವರಿಗೆ ನಗರ ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದ್ದರು.
ಅಲ್ಲದೆ, ಕಬ್ಬಿಣದ ಸಲಾಕೆಯಿಂದ ಕುಮಾರ್ ಚೆಟ್ರಿ ಅವರ ಮೊಣಕಾಲಿಗೆ ಹೊಡೆದಿದ್ದರು. ಹಲ್ಲೆ ಸಂಬಂಧ ಕುಮಾರ್ ನೀಡಿದ್ದ ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT