ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಕಾರ್ಯ ವೈಖರಿ- ಇಂದು ಮತ್ತೊಂದು ಸಾಮಾನ್ಯ ಸಭೆ

Last Updated 7 ಜುಲೈ 2012, 6:05 IST
ಅಕ್ಷರ ಗಾತ್ರ

ಕೊಪ್ಪಳ: ನಾಲ್ಕು ತಿಂಗಳ ನಂತರ ಜು. 7ರಂದು ನಗರಸಭೆಯ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ. ಪ್ರತಿ ಬಾರಿ ಏನಾದರೊಂದು ವಿಷಯ ಪ್ರಸ್ತಾಪಗೊಂಡು ಸಭೆ ಪೂರ್ಣವಾಗಿ ನಡೆಯದೇ ಇರುವುದು ಒಂದೆಡೆಯಾದರೆ, ಜನರ ಸಮಸ್ಯೆ, ನಾಗರಿಕ ಸೌಲಭ್ಯಗಳ ಬಗ್ಗೆ ಯಾವ ಗಂಭೀರ ಚರ್ಚೆ, ಪರಿಹಾರ ಕಂಡು ಹಿಡಿದ ಉದಾಹರಣೆಯೂ ಇಲ್ಲ.

ಈ ಮೂರು ವರ್ಷಗಳಲ್ಲಿ ನಗರಸಭೆಯ ಬಜೆಟ್‌ನಲ್ಲಿ ಘೋಷಿಸಿದ ಕಾಮಗಾರಿಗಳು ಯಾವವೂ ಪೂರ್ಣಗೊಂಡಿಲ್ಲ. ಕೆಲವು ಕಾಮಗಾರಿಗಳಂತೂ ಆರಂಭಗೊಂಡಿಲ್ಲ. ಹಾಗಂತ ನಗರಸಭೆಗೆ ಹಣಕಾಸಿನ ಕೊರತೆ ಇಲ್ಲ. ಆದರೆ, ನಗರದಲ್ಲಿ ಮಾತ್ರ ಸಮರ್ಪಕ ನೀರಿನ ಪೂರೈಕೆ ಇಲ್ಲ. ಘನ ತ್ಯಾಜ್ಯ ವಸ್ತುವಿನ ಸಮರ್ಪಕ ವಿಲೇವಾರಿ ಇಲ್ಲ! ಉದ್ಯಾನವನದಂತಹ ಸೌಲಭ್ಯವೂ ಇಲ್ಲ.

ನಗರಸಭೆ ನಡೆಸಿರುವ ಸಮೀಕ್ಷೆ ಪ್ರಕಾರ, ನಗರದಲ್ಲಿ ಪ್ರತಿದಿನ 25 ಟನ್‌ನಷ್ಟು ಘನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ಘನ ತ್ಯಾಜ್ಯ ವಿಲೇವಾರಿಗಾಗಿ ವಾಹನಗಳಿವೆ, ಅಗತ್ಯ ಸಿಬ್ಬಂದಿ ಇದೆ. ಹಣದ ಕೊರತೆ ಸಹ ಇಲ್ಲ. ಆದರೂ, ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾತ್ರ ಸಮರ್ಪಕವಾಗಿಲ್ಲ ಎಂಬ ದೂರುಗಳಿವೆ.

ಘನ ತ್ಯಾಜ್ಯ ವಿಲೇವಾರಿಗಾಗಿ ನಗರಸಭೆಯು 2010-11ನೇ ಸಾಲಿನಲ್ಲಿ 22,500 ಲಕ್ಷ ರೂಪಾಯಿ ವೆಚ್ಚ ಮಾಡಿದೆ. 2011-12ನೇ ಸಾಲಿನಲ್ಲಿ ಘನ ತ್ಯಾಜ್ಯ ವಿಲೇವಾರಿಗಾಗಿ 97.59 ಲಕ್ಷ ರೂಪಾಯಿ ಹಾಗೂ ಘನ ತ್ಯಾಜ್ಯ ವಿಲೇವಾರಿಗಾಗಿ ಕೈಗಾಡಿ, ವಾಹನ ದುರಸ್ತಿ, ಕ್ರಿಮಿ ನಾಶಕ ಖರೀದಿ, ವಾಹನಗಳ ಬಾಡಿಗೆಗಾಗಿ 29 ಲಕ್ಷ ರೂಪಾಯಿ ವೆಚ್ಚ ಮಾಡಿದೆ.

2012-13ನೇ ಸಾಲಿನಲ್ಲಿ ಈ ಉದ್ದೇಶಕ್ಕಾಗಿ 1.60 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ. ಇಷ್ಟೆಲ್ಲಾ ಹಣಕಾಸಿನ ಸೌಲಭ್ಯ ಇದ್ದರೂ ವಿಲೇವಾರಿ ನಡೆಯುತ್ತಿಲ್ಲ. ಮನೆ-ಮನೆ ಕಸ ಸಂಗ್ರಹ ಕಾರ್ಯ ನಿಂತು ಹೋಗಿದೆ.

28.4.2012ರಂದು ಹೈಕೋರ್ಟ್ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ ಹಾಗೂ ಲೋಕ ಅದಾಲತ್‌ನ ಸದಸ್ಯ ಎ.ಎನ್.ಯಲ್ಲಪ್ಪ ಅವರ ಉಪಸ್ಥಿತಿಯಲ್ಲಿ ಗುಲ್ಬರ್ಗದಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಹಲವಾರು ನಿರ್ದೇಶನಗಳನ್ನು ನೀಡಲಾಗಿದೆ.

ಜೈವಿಕ ಘನತ್ಯಾಜ್ಯದ ಸಂಗ್ರಹ ಮತ್ತು ವಿಲೇವಾರಿಗೆ ಸರಿಯಾದ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಹೋಟೆಲ್‌ಗಳು, ಆಸ್ಪತ್ರೆ, ಸಂತೆ, ಮದುವೆ ಮಂಟಪಗಳಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದ್ದಾರೆ.

ಇನ್ನು, 11.5.2012ರಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಹ ಇದೇ ವಿಷಯ ಕುರಿತು ಚರ್ಚೆ ನಡೆದಿದೆ. ನಗರದಲ್ಲಿ ಮನೆ ಮನೆ ಕಸ ಸಂಗ್ರಹ ಕಾರ್ಯ ಸಂಪೂರ್ಣ ನಿಂತು ಹೋಗಿದೆ. ಕೂಡಲೇ ಈ ಕಾರ್ಯವನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ, ಲೋಕ ಅದಾಲತ್‌ನಲ್ಲಿ ನೀಡಿದ ನಿರ್ದೇಶನವಾಗಲಿ, ಜಿಲ್ಲಾಧಿಕಾರಿ ನೀಡಿದ ಸೂಚನೆಯನ್ನಾಗಲಿ ನಗರಸಭೆ ಸರಿಯಾಗಿ ಪಾಲನೆ ಮಾಡುತ್ತಿಲ್ಲ.

ಮಾರುಕಟ್ಟೆ ಕಾಮಗಾರಿ: ನಗರದಲ್ಲಿ ಸುಸಜ್ಜಿತ ತರಕಾರಿ ಹಾಗೂ ಇನ್ನಿತರ ಮಾರುಕಟ್ಟೆ ನಿರ್ಮಾಣದ ಆಸೆ ಕೈಗೂಡುತ್ತಿಲ್ಲ. ಮಾರುಕಟ್ಟೆ ನಿರ್ಮಾಣಕ್ಕಾಗಿ 2011-12ನೇ ಸಾಲಿನಲ್ಲಿ 5 ಕೋಟಿ ರೂಪಾಯಿ, 2012-13ನೇ ಸಾಲಿನಲ್ಲಿ 2.50 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಇಲ್ಲ.

ನಗರದಲ್ಲಿ ಉತ್ತಮ ನಾಗರಿಕ ಸೌಲಭ್ಯವನ್ನು ಒದಗಿಸಬೇಕು ಎಂಬ ಬಗ್ಗೆ ನಗರಸಭೆ ಸದಸ್ಯರಿಗೆ ಕಾಳಜಿ ಇದ್ದಂತಿಲ್ಲ. ಕೋಟ್ಯಂತರ ರೂಪಾಯಿ ಅನುದಾನ ಇದ್ದರೂ ಯಾವುದೇ ಕಾಮಗಾರಿ ನಡೆಯುತ್ತಿಲ್ಲ ಎಂದರೆ ಹೇಗೆ ಎಂದು ಎಐಟಿಯುಸಿ ಜಿಲ್ಲಾ ಮುಖಂಡ ಬಸವರಾಜ ಶೀಲವಂತರ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT