ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯಲ್ಲಿ ನೀರಿಲ್ಲದಿದ್ದರೂ ಬೆಳೆ ಮಾತ್ರ ಸಮೃದ್ಧ

Last Updated 4 ಫೆಬ್ರುವರಿ 2013, 19:32 IST
ಅಕ್ಷರ ಗಾತ್ರ

ತಿರುಚನಾಪಳ್ಳಿ: ಮೆಟ್ಟೂರು ಜಲಾಶಯದಿಂದ ಆರಂಭಿಸಿ ಕಾವೇರಿ ನದಿ ಬಂಗಾಳಕೊಲ್ಲಿ ಸೇರುವ ಕಾವೇರಿಪಟ್ಟಣ ಪೂಂಪುಹಾರ್‌ವರೆಗೆ ನದಿಯ ಪಾತ್ರದಲ್ಲಿಯೇ ಸಾಗಿದರೆ ಎಲ್ಲಿಯೂ ನೀರಿಲ್ಲ. ಸೇಲಂ, ತಿರುಚನಾಪಳ್ಳಿ, ತಂಜಾವೂರು ಜಿಲ್ಲೆಗಳಲ್ಲಿ ಕಾವೇರಿ ನದಿಯ ವಿಸ್ತಾರ ದೊಡ್ಡದಾಗಿದೆಯೇ ವಿನಾ ನೀರು ಅಲ್ಲಲ್ಲಿ ಹರಿಯದೆ ನಿಂತುಬಿಟ್ಟಿದೆ. ಆದರೆ ಕಾವೇರಿ ನದಿಯ ದಂಡೆಯಲ್ಲಿ, ಕಾಲುವೆಗಳು ಸಾಗುವ ದಾರಿಯಲ್ಲಿ ಸಾಂಬಾ ಬೆಳೆ ಮಾತ್ರ ಚೆನ್ನಾಗಿಯೇ ಇದೆ.

ಸೇಲಂನಿಂದ ತಿರುಚನಾಪಳ್ಳಿಗೆ ಸಾಗುವ ಮಾರ್ಗದ ಅಕ್ಕಪಕ್ಕ ಜಮೀನುಗಳನ್ನು ನೋಡಿದರೆ ಸಂತಸದ ಬುಗ್ಗೆ ಹರಿಯುತ್ತದೆ. ಮನಸ್ಸಿಗೆ ಖುಷಿಯಾಗುತ್ತದೆ. ಎತ್ತ ನೋಡಿದರೂ ಹಸಿರೇ ಹಸಿರು. ಮುಖ್ಯವಾಗಿ ಬತ್ತ, ಬಾಳೆ, ಕಬ್ಬು ನಳನಳಿಸುತ್ತಿವೆ. ಕೊಂಚ ಜಾಗವನ್ನೂ ಬಿಡದೇ ಬೆಳೆದ ಈ ಬೆಳೆಗಳು ಕಣ್ಮನ ತಣಿಸುತ್ತವೆ. ಆ ದಾರಿಯಲ್ಲಿ ಸಾಗುವುದು ಮನಸ್ಸಿಗೆ ಆನಂದ ಉಂಟು ಮಾಡುತ್ತದೆ. ತಂಜಾವೂರು ಜಿಲ್ಲೆಯಲ್ಲಿ ಮಾತ್ರ ಅಲ್ಲಲ್ಲಿ ಬೆಳೆಗಳು ಒಣಗಿವೆ. ಆದರೆ ಒಟ್ಟಾರೆಯಾಗಿ ಸಾಂಬಾ ಬೆಳೆ ಚೆನ್ನಾಗಿಯೇ ಇದೆ.

ಕಾಣಿಸದ ಬರದ ಛಾಯೆ:
ನದಿಯನ್ನು ಮಾತ್ರ ನೋಡಿದರೆ ತಮಿಳುನಾಡಿಗೆ ನೀರು ಬಿಡಲೇ ಬೇಕು ಎಂದು ಯಾರಿಗಾದರೂ ಅನ್ನಿಸುತ್ತದೆ. ಆದರೆ, ಬೆಳೆಯನ್ನು ನೋಡಿದರೆ ಹಾಗೆ ಅನ್ನಿಸುವುದಿಲ್ಲ. ಬರದ ಛಾಯೆ ಕಾಣಿಸುವುದಿಲ್ಲ. ಸೇಲಂ, ವಾಲತೈ, ಮುಸರಿ, ನಾಮಕ್ಕಲ್, ಕರೂರು ಮುಂತಾದ ಕಡೆ ಬೆಳೆ ಚೆನ್ನಾಗಿದೆ. ಅಲ್ಲಿನ ರೈತರು ಬೆಳೆ ತೆಗೆಯುವ ಪರಿ ನೋಡಿದರೆ ಅಚ್ಚರಿಯಾಗುತ್ತದೆ. ಅವರ ಶ್ರಮವನ್ನು ಮೆಚ್ಚದೇ ಇರಲು ಸಾಧ್ಯವೇ ಇಲ್ಲ.

ಸಮೃದ್ಧ ಅಂತರ್ಜಲ:
ನದಿಯಲ್ಲಿ ನೀರಿಲ್ಲ, ಬೆಳೆ ಚೆನ್ನಾಗಿದೆ ಎಂದರೆ ಹೇಗೆ? ಎಂದು ತಲೆ ಕೆಡಿಸಿಕೊಂಡರೆ ತಮಿಳುನಾಡು ಸರ್ಕಾರ ರೈತರ ಅನುಕೂಲಕ್ಕಾಗಿ ಕೈಗೊಂಡ ಕ್ರಮಗಳು ನಮ್ಮ ಅನುಭವಕ್ಕೆ ಬರುತ್ತದೆ. ಸೇಲಂನಿಂದ ನಾಮಕ್ಕಲ್, ತಿರುಚನಾಪಳ್ಳಿವರೆಗೆ ಅಂತರ್ಜಲ ಚೆನ್ನಾಗಿದೆ. ಪಂಪ್‌ಸೆಟ್‌ನಿಂದ ಹೊಲಗಳಿಗೆ ಹರಿಯುವ ನೀರನ್ನು ನೋಡಿದರೆ ನಮಗೆ ನದಿಯ ನೆನಪಾಗುತ್ತದೆ. ಅಷ್ಟೊಂದು ಭಾರಿ ಪ್ರಮಾಣದಲ್ಲಿ ನೀರು ಹೊಲಕ್ಕೆ ಬಂದು ಬೀಳುತ್ತದೆ. ಕೊಳವೆಗಳಿಂದ ನೀರು ಹೊಲಕ್ಕೆ ಬೀಳುವುದನ್ನು ನೋಡಿದರೆ ಜಲಪಾತದ ನೆನಪಾಗುತ್ತದೆ.

ಕರ್ನಾಟಕದಿಂದ ಬಿಟ್ಟ ನೀರನ್ನೆಲ್ಲಾ ಕಾಲುವೆಗೆ ಹರಿಸಲಾಗಿದೆ. ಎಲ್ಲ ಜಲಾಶಯಗಳನ್ನೂ ಖಾಲಿ ಮಾಡಲಾಗಿದೆ. ಅಲ್ಲದೆ ಬಹುತೇಕ ಎಲ್ಲ ಕೆರೆಗಳಲ್ಲಿಯೂ ಭರ್ತಿ ಮಾಡಿಕೊಳ್ಳಲಾಗಿದೆ. ಇದರಿಂದ ಅಂತರ್ಜಲ ಚೆನ್ನಾಗಿದೆ. ಅಲ್ಲದೆ 2002-03ನೇ ಸಾಲಿನಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಭೀಕರ ಬರಗಾಲ ಬಂದಿತ್ತು. ಆಗಲೂ ತಮಿಳುನಾಡಿನಲ್ಲಿ ಕಾವೇರಿ ನದಿ ಒಣಗಿ ಹೋಗಿತ್ತು. ಅಂತರ್ಜಲ ಕೂಡ ಕುಸಿದು ಹೋಗಿತ್ತು. ಆಗಲೇ ತಮಿಳುನಾಡು ಸರ್ಕಾರ ಎಚ್ಚೆತ್ತುಕೊಂಡು ಅಂತರ್ಜಲ ಸುಧಾರಣೆಗೆ ಕೈಗೊಂಡ ಕ್ರಮಗಳು ಈಗ ಫಲ ನೀಡುತ್ತಿದೆ. ಆಗ 300-400 ಅಡಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ಈಗ 100 ಅಡಿಯ ಒಳಗೇ ಬರಪೂರ ನೀರು ಸಿಗುತ್ತದೆ.  ಮಳೆ ನೀರು ಸಂಗ್ರಹದ ವ್ಯವಸ್ಥೆ ಕೂಡ ಚೆನ್ನಾಗಿದೆ. ಇದರಿಂದ ಈಗ ಅಲ್ಲಿ ಅಂತರ್ಜಲದ ಸಮಸ್ಯೆ ಕಾಡುತ್ತಿಲ್ಲ.

ತೀವ್ರವಾಗಿರದ ಕುಡಿಯುವ ನೀರಿನ ಸಮಸ್ಯೆ:
ಸುಮಾರು 12 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಸಾಂಬಾ ಬೆಳೆಯನ್ನು ರಕ್ಷಣೆ ಮಾಡಲು ಕಾವೇರಿ ನೀರು ಬಿಡಿ ಎಂದು ತಮಿಳುನಾಡು ಸರ್ಕಾರ ಕೇಳುತ್ತಿದೆಯೇ ವಿನಾ ಅಪ್ಪಿತಪ್ಪಿಯೂ ಕುಡಿಯುವ ನೀರು ಬೇಕು ಎಂದು ಕೇಳುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಕೂಡ ಅಲ್ಲಿನ ಅಂತರ್ಜಲದ ಮಟ್ಟ. ಸುಮಾರು ಒಂದೂವರೆ ಕೋಟಿ ಜನ ಕುಡಿಯುವ ನೀರಿಗಾಗಿಯೂ ಕಾವೇರಿ ನದಿಯನ್ನೇ ಅವಲಂಬಿಸಿದ್ದಾರೆ. ಅಂದರೆ ತಮಿಳುನಾಡಿನ ಒಟ್ಟು ಜನಸಂಖ್ಯೆಯ ಶೇ 25ರಷ್ಟು ಮಂದಿ ಕುಡಿಯುವ ನೀರಿಗಾಗಿ ಕಾವೇರಿಯನ್ನೇ ನಂಬಿದ್ದಾರೆ. ಆದರೂ ಕುಡಿಯುವ ನೀರಿಗಾಗಿ ತಮಿಳುನಾಡಿನ ಬೇಡಿಕೆ ಅಷ್ಟೊಂದು ತೀವ್ರವಾಗಿಲ್ಲ.

ಸೇಲಂ, ತಿರುಚನಾಪಳ್ಳಿ, ನಾಮಕ್ಕಲ್, ತಂಜಾವೂರು ಮುಂತಾದ ನಗರಗಳಲ್ಲಿ ಜನರಿಗೆ ನೀರು ಒದಗಿಸುವ ಜವಾಬ್ದಾರಿಯನ್ನು ಅಲ್ಲಿಯ ಸ್ಥಳೀಯ ಸಂಸ್ಥೆಗಳು ವಹಿಸಿಕೊಂಡಿವೆ. ಆದರೆ ಈ ನಗರಗಳಲ್ಲಿರುವ ಬಹುತೇಕ ಎಲ್ಲ ವಸತಿ ಗೃಹಗಳು ಮತ್ತು ಇತರ ಕೆಲವು ಸಂಘ ಸಂಸ್ಥೆಗಳು ತಮಗೆ ಬೇಕಾದ ನೀರನ್ನು ತಾವೇ ಪೂರೈಸಿಕೊಳ್ಳುತ್ತವೆ. ಎಲ್ಲ ವಸತಿ ಗೃಹಗಳ ಬಳಿಯೂ ಟ್ಯಾಂಕರ್‌ಗಳು ಇವೆ. ಕೊಳವೆ ಬಾವಿಯ ಮೂಲಕ ನೀರನ್ನು ಎತ್ತಿ ಬಳಸಿಕೊಳ್ಳುತ್ತವೆ. ಇದಕ್ಕೆ ಆಯಾ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ನೀಡಲಾಗಿದೆ.

ಹೆಚ್ಚು ನೀರು ಬೇಕಾಗದ ಬೆಳೆಗಳು:
ತಂಜಾವೂರು ಜಿಲ್ಲೆಯಲ್ಲಿ ಬರ ಅಲ್ಲಲ್ಲಿ ಕಾಣಿಸುತ್ತದೆ. ಪುಟ್ಟುಕೋಟೈ, ತಿರುತ್ತರೈಪುಂಡಿ, ಮಾಲಾಡುದೊರೈ, ನಾಗಪಟ್ಟಣಂ ,ಕುಂಭಕೋಣಂ ಮುಂತಾದ ಕಡೆ ಓಡಾಡಿದರೆ ಬರ ಕೊಂಚ ಕಣ್ಣಿಗೆ ಬೀಳುತ್ತದೆ. ಕೆಲವು ಕಡೆ ಇನ್ನೂ ಜಮೀನುಗಳು ಖಾಲಿ ಇವೆ. ಕೆಲವು ಕಡೆ ಬೆಳೆಗಳು ಒಣಗಿವೆ. ಇಲ್ಲಿ ಬತ್ತ, ಕಬ್ಬು, ಬಾಳೆಗಳಿಗಿಂತ ಜೋಳ, ಹತ್ತಿ ಮುಂತಾದ ಬೆಳೆಗಳು ಸಿಗುತ್ತವೆ. ಹೆಚ್ಚು ನೀರು ಬೇಕಾಗದ ಬೆಳೆಯನ್ನೇ ಇಲ್ಲಿ ಬೆಳೆಯಲಾಗಿದೆ.

ತಿರುಚನಾಪಳ್ಳಿಯ ಬಳಿಯೇ ಕಾವೇರಿ ನದಿಗೆ ಗ್ರಾಂಡ್ ಅಣೆಕಟ್ಟು ನಿರ್ಮಿಸಲಾಗಿದೆ. ಅಲ್ಲಿ ಮೂರು ಹಂತಗಳಲ್ಲಿ ನೀರನ್ನು ಹೊರಕ್ಕೆ ಬಿಡಲಾಗುತ್ತದೆ. ನೀರು ಒಂದೇ ಬಾರಿಗೆ ಹರಿಸಿದರೆ ಕೆಳಭಾಗದ ಹೊಲಗಳಿಗೆ ತೊಂದರೆಯಾಗುತ್ತದೆ ಎಂದು ಕೊಲೆರೂನ್ ನದಿಯ ಕಡೆಗೆ ಒಂದು ಅಣೆಕಟ್ಟು, ಕಾವೇರಿ ನದಿಗೆ ಒಂದು ಹಾಗೂ ವೆನ್ನಾರ್ ಭಾಗಕ್ಕೆ ಒಂದು ಅಣೆಕಟ್ಟು ನಿರ್ಮಿಸಿ ಸರದಿಯಂತೆ ನೀರು ಬಿಡಲಾಗುತ್ತದೆ. ನೀರಿನ ರಭಸ ತಡೆಯಲು ಮಾಡಿಕೊಂಡ ವ್ಯವಸ್ಥೆ ಇದೆ. ಇದೇ ಗ್ರಾಂಡ್ ಅಣೆಕಟ್ಟು. ಕಾವೇರಿ ಭಾಗದಲ್ಲಿ ಬೆಳೆ ಚೆನ್ನಾಗಿದೆ. ಆದರೆ ಗ್ರಾಂಡ್ ಅಣೆಕಟ್ಟಿನಿಂದ ನೀರು ಬಿಡುವ ಪ್ರದೇಶಗಳಲ್ಲಿ ಮಾತ್ರ ಬೆಳೆ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ವೆನ್ನಾರ್ ಪ್ರದೇಶದಲ್ಲಿ ಇನ್ನಷ್ಟು ಬೆಳೆ ವಿಫಲವಾಗಿದೆ.

ತಿದ್ದುಪಡಿ: ಸೋಮವಾರದ ಸಂಚಿಕೆಯಲ್ಲಿ -2013ರ ಜೂನ್ 1ರಿಂದ 9ರವರೆಗೆ ಮೆಟ್ಟೂರು ಅಣೆಕಟ್ಟೆಗೆ ಕರ್ನಾಟಕದಿಂದ  1.6 ಟಿಎಂಸಿ ನೀರು ಹರಿದುಬಂದಿದೆ - ಎನ್ನುವಲ್ಲಿ 2012ರ ಬದಲಿಗೆ 2013 ಎಂದು ತಪ್ಪಾಗಿ ಪ್ರಕಟವಾಗಿರುವುದಕ್ಕೆ ವಿಷಾದಿಸುತ್ತೇವೆ. - ಸಂ)

(ನಾಳಿನ ಸಂಚಿಕೆಯಲ್ಲಿ ಭಾಗ -3)

ಈ ಭೂಮಿ ನೀರನ್ನೂ ಕೊಡುತ್ತದೆ, ಬೆಳೆಯನ್ನೂ ಕೊಡುತ್ತದೆ
ನದಿಯಲ್ಲಿ ನೀರಿಲ್ಲ. ಆದರೆ ಬೆಳೆ ಚೆನ್ನಾಗಿಯೇ ಇದೆಯಲ್ಲ ಎಂದು ವಾಲತ್ತೈ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಪ್ರಶ್ನೆ ಮಾಡಿದರೆ `ಇಂದ ನೆಲಂ ತಣ್ಣಿಯೂಂ ಕುಡುಕುರುದು, ಥಾನ್ಯಂಗಳಂ ಕುಡುಕುರುದು (ಈ ಭೂಮಿ ನೀರನ್ನೂ ಕೊಡುತ್ತದೆ. ಬೆಳೆಯನ್ನೂ ಕೊಡುತ್ತದೆ)' ಎನ್ನುತ್ತಾನೆ. `ತಣ್ಣೀರ್‌ಕಾಗ ಒಕ್ಕಾಂದಿಟ್ಟ ವಾಳ್ಗೆಪೋಗಾದು (ಕಾವೇರಿ ನೀರಿಗಾಗಿ ಕಾಯುತ್ತಾ ಇದ್ದರೆ ಜೀವನ ನಡೆಯಬೇಕಲ್ಲ). ಮಳೆ ಕೊರತೆಯಿಂದ ಕುರುವೈ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಈಗಲೂ ಬೆಳೆಯದೇ ಹಾಗೆ ಇದ್ದರೆ ಮುಂದಿನ ದಿನದ ಗತಿಯೇನು? ಎಂದು ಪ್ರಶ್ನಿಸಿದ.

ತಂಜಾವೂರು ಜಿಲ್ಲೆ ರೈತರು ನಿಜವಾಗಿಯೂ ಕಷ್ಟದಲ್ಲಿದ್ದಾರೆ. `ಇಂದವಾಟಿ ಮಳೆಯುಂ ಇಲ್ಲೈ, ಥಾನಿಯುಂ ಇಲ್ಲೈ. (ಈ ಬಾರಿ ಮಳೆಯೂ ಇಲ್ಲ. ಬೆಳೆಯೂ ಇಲ್ಲ)' ಎಂದು ತಿರುತ್ತಲೈಪುಂಡಿಯ ಹೊಲದಲ್ಲಿದ್ದ ರೈತರು ಹೇಳುತ್ತಾರೆ. ಚಾನೆಲ್ ಕಡೈಸಿ ವರೈಕ್ಕುಂ ತಣ್ಣಿ ಪೋಗಾದು (ಕಾಲುವೆಯ ಕೊನೆ ಭಾಗಗಳಿಗೆ ನೀರು ಬರುವುದೇ ಇಲ್ಲ) ಎಂದೂ ಅವರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT