ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸಿಂಗ್ ಪಠ್ಯಕ್ರಮದಲ್ಲಿ ಬದಲಾವಣೆ

Last Updated 31 ಮಾರ್ಚ್ 2011, 19:10 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದೇಶಗಳಲ್ಲಿ ಕೆಲಸ ಮಾಡಬಯಸುವ ಭಾರತದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆ ದೇಶದವರು ಮತ್ತೊಂದು ಅರ್ಹತಾ ಪರೀಕ್ಷೆ ನಡೆಸುವುದು ಅವಮಾನಕರ ವಿಷಯವಾಗಿದ್ದು, ಆದ್ದರಿಂದ ರಾಜ್ಯದ ನರ್ಸಿಂಗ್ ಶಿಕ್ಷಣದ ಪಠ್ಯಕ್ರಮದಲ್ಲಿ ಕೆಲ ಬದಲಾವಣೆಗಳನ್ನು ತರಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಪ್ರಕಟಿಸಿದರು.

ನಗರದಲ್ಲಿ ಗುರುವಾರ ಸರ್ಕಾರಿ ನರ್ಸಿಂಗ್ ಕಾಲೇಜಿನ 2010-11ನೇ ಸಾಲಿನ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ‘ಜ್ಯೋತಿ ಬೆಳಗಿಸುವ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾರಂಭ’ ಉದ್ಘಾಟಿಸಿ ಮಾತನಾಡಿದ ಅವರು, ‘ವಿದೇಶಗಳಲ್ಲಿ ಉದ್ಯೋಗ ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸ್ಪೋಕನ್ ಇಂಗ್ಲಿಷ್ ಮತ್ತು ನೂತನ ತಂತ್ರಜ್ಞಾನಗಳನ್ನೊಳಗೊಂಡ ಪಠ್ಯಕ್ರಮ ರೂಪುಗೊಳಿಸಲಾಗುತ್ತಿದೆ. ಅಲ್ಲದೇ ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಡಿಜಿಟಲ್ ಗ್ರಂಥಾಲಯ ಸೌಕರ್ಯವನ್ನು ಉಚಿತವಾಗಿ ಬಳಸಿಕೊಳ್ಳಲು ಅವಕಾಶ ನೀಡಲಾಗುವುದು’ ಎಂದು ನುಡಿದರು.

ಕಾಲೇಜುಗಳ ‘ವ್ಯವಹಾರದ’ ಬಗ್ಗೆ ವರದಿ: ಪ್ರತಿವರ್ಷ ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಿಂದ 54,000 ವಿದ್ಯಾರ್ಥಿಗಳು ಪದವಿ ಪಡೆದು ಹೊರಬರುತ್ತಿದ್ದಾರೆ. ಆದರೆ ಎಷ್ಟೋ ವಿದ್ಯಾರ್ಥಿಗಳು ಪ್ರವೇಶ ಪಡೆದು ಒಮ್ಮೆಲೇ ಪರೀಕ್ಷೆಗೆ ಹಾಜರಾಗುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಗುಣಮಟ್ಟದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸೇವೆಗೆ ಲಭ್ಯರಾಗುವುದಿಲ್ಲ. ಇಂಥ ಕಾಲೇಜುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸಮಿತಿಯೊಂದನ್ನು ರಚಿಸಲಾಗಿದೆ. ಇನ್ನು ಕೆಲ ದಿನಗಳಲ್ಲಿ ಆ ಮಾಹಿತಿಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಾಗಿ ತಿಳಿಸಿದರು.

ನರ್ಸ್‌ಗಳ ವಿರುದ್ಧವೇ ಹೆಚ್ಚು ಆರೋಪ: ಹಲವು ಬಾರಿ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳನ್ನು ವಿಚಾರಿಸಿದಾಗ ಅವರು ನರ್ಸ್‌ಗಳ ವರ್ತನೆ ಮತ್ತು ಲಂಚ ಪಡೆಯುವ ಬಗ್ಗೆಯೇ ಆರೋಪಿಸಿದ್ದಾರೆ. ಆದ್ದರಿಂದ ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಬಡ ರೋಗಿಗಳಿಂದ ಹಣ ಕೇಳಬೇಡಿ. ನಿಮ್ಮ ವರ್ತನೆಯನ್ನೂ ತಿದ್ದಿಕೊಳ್ಳಿ. ಮೂರು ತಿಂಗಳು ಸಮಯ ನೀಡುತ್ತೇನೆ ಎಂದು ಎಚ್ಚರಿಸಿದ ಸಚಿವರು, ಈ ಮೂರು ತಿಂಗಳಲ್ಲಿ ವರ್ತನೆಯಲ್ಲಿ ಬದಲಾವಣೆ ಆದರೆ ನಿಮಗೂ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಪ್ರಕಟಿಸಿದರು.

ರೋಗಿಗಳ ಮೊಬೈಲ್‌ಗೆ ಕರೆ: ‘ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ರೋಗಿಗಳ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸುತ್ತಿದ್ದು, ಯಾವುದೇ ಸಂದರ್ಭಗಳಲ್ಲಿ ಅವರಿಗೆ ಫೋನ್ ಮಾಡಿ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ. ಇನ್ನು ಮುಂದೆ ತಿಂಗಳಲ್ಲಿ ಒಂದು ದಿನವನ್ನು ಇದೇ ಉದ್ದೇಶಕ್ಕಾಗಿ ಮೀಸಲಾಗಿಡಲಾಗುವುದು’ ಎಂದು ತಿಳಿಸಿದರು.

ಶೇ 50ರಷ್ಟು ಮೀಸಲು: ಬಿ.ಎಸ್ಸಿ ಮತ್ತು ಎಂ.ಎಸ್ಸಿ ನರ್ಸಿಂಗ್ ಶಿಕ್ಷಣವನ್ನು ಈಗಾಗಲೇ ಸೇವೆಯಲ್ಲಿದ್ದವರು ಪಡೆಯಲು ಅನುಕೂಲವಾಗುವಂತೆ ಈ ಪದವಿಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಅವರಿಗಾಗಿ ತೆಗೆದಿರಿಸಲಾಗುವುದು ಎಂದು ಹೇಳಿದರು.

ಆರು ತಿಂಗಳು ಜೈಲು: ಸರ್ಕಾರಿ ವೈದ್ಯರಿಗೆ ಈಗ ವೇತನವನ್ನು ರೂ 85,000ಕ್ಕೆ ಹೆಚ್ಚಿಸಲಾಗಿದೆ. ಅವರು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವಂತಿಲ್ಲ. ಈ ನಿಯಮ ಮೀರಿದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರು ತಿಂಗಳ ಜೈಲುಶಿಕ್ಷೆಯನ್ನೂ ನೀಡಲಾಗುವುದು ಎಂದರು.

ಸ್ನೇಹಾ ಶುಶ್ರೂಷಾ ಮಹಾವಿದ್ಯಾಲಯದ ಅಧ್ಯಕ್ಷ ಡಾ.ಕೆ.ಆರ್.ಶ್ರೀನಿವಾಸ್, ಶುಶ್ರೂಷಾ ಮತ್ತು ತರಬೇತಿ ವಿಭಾಗದ ಸಹಾಯಕ ನಿರ್ದೇಶಕ ಪ್ರೊ.ಎಚ್.ಎಚ್.ದಾಸೇಗೌಡ, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ.ಓ.ಎಸ್.ಸಿದ್ದಪ್ಪ, ವಿಕ್ಟೋರಿಯಾ ಆಸ್ಪತ್ರೆಯ ಶುಶ್ರೂಷಾ ವಿಭಾಗದ ಸೂಪರಿಂಟೆಂಡೆಂಟ್ ಎಸ್.ಬಿ.ಆಲಮೇಲ್ಕರ್, ವಾಣಿವಿಲಾಸ ಆಸ್ಪತ್ರೆಯ ಶುಶ್ರೂಷಾ ವಿಭಾಗದ ಸೂಪರಿಂಟೆಂಡೆಂಟ್ ಎ.ತುಳಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಎಸ್.ಹೇಮಾವತಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT