ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿಯ ಪರಮಾನಂದ

Last Updated 30 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ನವ~ ಎಂಬ ಪದಕ್ಕೆ `ಹೊಸದು ಮತ್ತು ಒಂಬತ್ತು~ ಎಂಬ ಎರಡು ಅರ್ಥಗಳಿವೆ. ರಾತ್ರಿಯು ಸಮಾಧಾನ ಮತ್ತು ವಿಶ್ರಾಂತಿಯನ್ನು ನೀಡುತ್ತದೆ, ನವೋಲ್ಲಾಸವನ್ನು ತರುತ್ತದೆ. ಇದು ಜೀವನದ ಮೂರು ಸ್ತರಗಳಿಗೆ (ಸ್ಥೂಲ, ಸೂಕ್ಷ್ಮ, ಹಾಗೂ ಆನುಷಂಗಿಕ) ನೆಮ್ಮದಿ ತುಂಬುತ್ತದೆ.

ಈ ಕಾಲಾವಧಿಯು ಆತ್ಮಾವಲೋಕನ ಮಾಡಿಕೊಳ್ಳಲು ಹಾಗೂ ಮೂಲಕ್ಕೆ ಮರಳಲು ಸುಸಮಯ. ಈ ಸಮಯದಲ್ಲಿ ಪ್ರಕೃತಿಯು ಹಳೆಯದನ್ನು ತೊರೆಯುತ್ತದೆ, ಜೀವನವು ಪುನರುಲ್ಲಾಸಗೊಳ್ಳುತ್ತದೆ ಮತ್ತು ಚೈತನ್ಯದಲ್ಲಿ ಉಲ್ಲಾಸಭರಿತವಾಗಿ ಹೊಮ್ಮುತ್ತದೆ.

ಶಿಶುವು ಜನನದ ಮುನ್ನ ತನ್ನ ತಾಯಿಯ ಗರ್ಭದಲ್ಲಿ 9 ತಿಂಗಳು ಕಳೆಯುವಂತೆ ನವರಾತ್ರಿಯ ಒಂಬತ್ತು ಹಗಲು ಹಾಗೂ ರಾತ್ರಿಗಳ ಸಮಯದಲ್ಲಿ ಸಾಧಕನು ಉಪವಾಸ, ಪೂಜೆ, ಮೌನ ಹಾಗೂ ಧ್ಯಾನದ ಮೂಲಕ ಪ್ರೇಮ, ಶಾಂತಿ ಹಾಗೂ ಆನಂದಮಯವಾಗಿರುವ ನೈಜವಾದ ಮೂಲ ರೂಪಕ್ಕೆ ತೆರಳುತ್ತಾನೆ. ಉಪವಾಸ ದೇಹದಲ್ಲಿನ ವಿಷವನ್ನು ಹೊರಹಾಕುತ್ತದೆ. ಮೌನವು ಮಾತನ್ನು ಶುಚಿಗೊಳಿಸುತ್ತದೆ. ಧ್ಯಾನವು ನಮ್ಮನ್ನು ಚೈತನ್ಯದ ಆಳಕ್ಕೆ ಒಯ್ಯುತ್ತದೆ.

ನವರಾತ್ರಿಯಲ್ಲಿ ನಮ್ಮ ಮನಸ್ಸು ದೈವೀ ಪ್ರಜ್ಞೆಯಲ್ಲಿರಬೇಕು. ನಮ್ಮನ್ನು ನಾವು `ನಾನು ಹೇಗೆ ಜನಿಸಿದೆ? ನನ್ನ ಮೂಲವೇನು?~ ಎಂದು ಕೇಳಿಕೊಳ್ಳಬೇಕು. ಆಗ ನಾವು ಜಯಶಾಲಿಗಳಾಗುತ್ತೇವೆ. ವ್ಯಾಮೋಹ, ಹೇವರಿಕೆ, ಸಂದಿಗ್ದ ಮತ್ತು ಭಯ ಎಂಬ ನಕಾರಾತ್ಮಕ ಶಕ್ತಿಗಳು ನಮ್ಮನ್ನು ಕಾಡಿದಾಗ, ನಾವು ಗೊಂದಲಗೊಂಡು ಗೊಣಗಾಡುತ್ತೇವೆ. ಇವೆಲ್ಲದರಿಂದ ಮುಕ್ತರಾಗಲು ನಾವು ನಮ್ಮಳಗಿನ ಶಕ್ತಿಯ ಆಕರವನ್ನು ತಲುಪಬೇಕು.

ಈ 9 ರಾತ್ರಿ ಹಾಗೂ ಹತ್ತು ಹಗಲು ದೇವೀ ಶಕ್ತಿಯನ್ನು ಒಂಬತ್ತು ರೂಪಗಳನ್ನು ಆರಾಧಿಸಲಾಗುತ್ತದೆ. ಮೊದಲನೆಯ ಮೂರು ದಿನಗಳಂದು ನಾವು ಶೌರ್ಯ ಹಾಗೂ ಆತ್ಮವಿಶ್ವಾಸದ ಸಾಕಾರ ರೂಪವಾದ ದುರ್ಗೆಯನ್ನು,  ನಂತರದ ಮೂರು ದಿನಗಳು ಐಶ್ವರ್ಯದ ಸಾಕಾರ ರೂಪವಾದ ಲಕ್ಷ್ಮಿಯನ್ನೂ ಮತ್ತು ಕೊನೆಯ ಮೂರು ದಿನ ಜ್ಞಾನದ ಸಾಕಾರ ರೂಪವಾದ ಸರಸ್ವತಿಯನ್ನು ಪೂಜಿಸುತ್ತೇವೆ.

ಮಧು, ಕೈಟಭ, ಮಹಿಷಾಸುರ, ಶುಂಭ, ನಿಶುಂಭ ಮುಂತಾದ ಅಸುರರನ್ನು ಸಂಹರಿಸಿ ಶಾಂತಿ ಹಾಗೂ ಸೌಹಾರ್ದಗಳು ನೆಲೆಸುವಂತೆ ಮಾಡಲು ದೇವಿಯು ಹೇಗೆ ಆವಿರ್ಭವಿಸಿದಳು ಎಂಬುದರ ಬಗ್ಗೆ ಅನೇಕ ಕಥೆಗಳಿವೆ. ಯಾರನ್ನಾದರೂ ಯಾವಾಗಲಾದರೂ ಆವರಿಸಬಹುದಾದ ನಕಾರಾತ್ಮಕ ಶಕ್ತಿಗಳ ಪ್ರತೀಕ ಈ ಅಸುರರು. ಮಧು ಎಂದರೆ ವ್ಯಾಮೋಹ ಮತ್ತು ಕೈಟಭ ಎಂದರೆ ಹೇವರಿಕೆ.

ರಕ್ತಬೀಜಾಸುರ ಎಂದರೆ ವ್ಯಸನಗಳು. ಮಹಿಷಾಸುರ ಎಂದರೆ ಬೇಸರ, ಜಡತ್ವ. ಆತ್ಮಸಂಶಯವೇ ಶುಂಭ, ಎಲ್ಲದರ ಬಗ್ಗೆ ಅನುಮಾನವೇ ನಿಶುಂಭ.
ಈ ಎಲ್ಲ ಅಸುರರನ್ನು ಸಂಹರಿಸಬಲ್ಲ ಪ್ರಾಣ ಶಕ್ತಿಯ ಸಂಭ್ರಮಾಚರಣೆಯೇ ನವರಾತ್ರಿ. ಈ ಅವಧಿಯಲ್ಲಿ ಮಾಡುವ ಉಪಾಸನೆ, ದೈವಿಕ ಶಕ್ತಿಯು ತೇಜಸ್ಸನ್ನು ನೀಡಿ ಜಡತ್ವವನ್ನು ಹೋಗಲಾಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT