ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆಯಲ್ಲಿ 500 ಎಕರೆ ಭಸ್ಮ

Last Updated 26 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಭಾನುವಾರ ಕಾಳ್ಗಿಚ್ಚಿನಿಂದ ಅಪಾರ ಅರಣ್ಯ ಸಂಪತ್ತು ನಾಶವಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ.  ಹಾಸನ ಜಿಲ್ಲೆಯ ರಾಮನಾಥಪುರ ಹೋಬಳಿ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ಕಾಡಿಗೆ ಬೆಂಕಿ ಬಿದ್ದಿದೆ.

ಎಚ್.ಡಿ.ಕೋಟೆ ವರದಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ವನ್ಯಜೀವಿ ವಲಯ ಮತ್ತು ಇನ್ನಿತರ ಅರಣ್ಯ ಪ್ರದೇಶದಲ್ಲಿ ಶನಿವಾರ ಕಾಣಿಸಿಕೊಂಡ ಬೆಂಕಿಯನ್ನು ಅರಣ್ಯ ಸಿಬ್ಬಂದಿ ಭಾನುವಾರ ನಂದಿಸಿ ಹಿಂದಿರುಗುವಷ್ಟರಲ್ಲಿ ಅಕ್ಕಪಕ್ಕದ ಅರಣ್ಯಕ್ಕೆ ಮತ್ತೆ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯ ನಾಶವಾಗಿದೆ.

ದಟ್ಟೇಹಳ್ಳ, ಬಸೀಕಟ್ಟೆ, ಸೋರೆಕುಪ್ಪೆ, ಮೇಟಿಕುಪ್ಪೆ-1, ಹದ್ದುಗೋಡು ಮುಂಟಿ ಸೇರಿದಂತೆ ಇನ್ನಿತರ ಅರಣ್ಯ ವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೋಟ್ಯಂತರ ಮೌಲ್ಯದ ಅರಣ್ಯ ಸಂಪತ್ತು ನಾಶವಾಗಿದೆ ಎನ್ನಲಾಗಿದೆ.

ಮೇಟಿಕುಪ್ಪೆ ಅರಣ್ಯ ವಲಯದ ಜೋಡಿಕಟ್ಟೆ, ಹೆಬ್ಬಾಳ್ಳಕಟ್ಟೆ, ದೇವಮ್ಮನಕಟ್ಟೆ ಮತ್ತು ಇನ್ನಿತರ ಭಾಗದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ 500 ಎಕರೆ ಅರಣ್ಯ ಸುಟ್ಟುಹೋಗಿದೆ. ಅಲ್ಲಲ್ಲಿ ಬೆಂಕಿ ನಂದಿಸಲು ಆದಿವಾಸಿಗಳನ್ನು ಬಳಸಿಕೊಂಡು ಪ್ರಯತ್ನಿಸಲಾಗಿತ್ತು.

ಸ್ಥಳಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಹುಲಿ ಯೋಜನೆ) ಬಿ.ಜಿ.ಹೊಸಮಠ್, ಉಪ ಅರಣ್ಯ ಸಂರಕ್ಷಣಾಧಿಕಾರಿ ವಿಜಯರಂಜನ್‌ಸಿಂಗ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಭೇಟಿ ನೀಡಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.

ರಾಮನಾಥಪುರ ವರದಿ:  ಇಲ್ಲಿಗೆ ಸಮೀಪದ ಹಂಪಾಪುರ ಮತ್ತು ಗಂಗೂರು ಬಳಿ ಗೊಬ್ಬಳಿ ಕಾವಲು ಅರಣ್ಯ ಪ್ರದೇಶಕ್ಕೆ ಭಾನುವಾರ ಬೆಂಕಿ ಬಿದ್ದು 150 ಎಕರೆ ಕಾಡು ನಾಶವಾಗಿದೆ.

ಗೊಬ್ಬಳಿ ಕಾವಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹಂಪಾಪುರ ಮತ್ತು ಗಂಗೂರು ಬಳಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿದರು. ಆದರೆ, ಅಗ್ನಿಶಾಮಕ ದಳದ ವಾಹನ ಕಾಡಿನೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಮಧ್ಯಾಹ್ನದಿಂದ ಜೋರಾಗಿ ಬೀಸುತ್ತಿದ್ದ ಬಿರುಗಾಳಿಗೆ ಕಾಡಿನ ಸುತ್ತ ಹಬ್ಬಿಕೊಂಡು ಹೋಗುತ್ತಿದ್ದ ಬೆಂಕಿ ಮುಗಿಲಿನೆತ್ತರಕ್ಕೆ ಕಾಣಿಸಿಕೊಂಡು ಸಂಜೆವರೆಗೂ ಉರಿಯುತ್ತಲೇ ಇತ್ತು.

ಅರಣ್ಯ ಪ್ರದೇಶದ ಪಕ್ಕದ ಹೊಲದಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹೋಗಿರುವ ಪರಿಣಾಮವಾಗಿ ಅದು ಕಾಡಿನತ್ತ ಹಬ್ಬಿದೆ ಎಂದು ವನ ಪಾಲಕ ಮಲ್ಲಯ್ಯ ತಿಳಿಸಿದ್ದಾರೆ.

ತೀರ್ಥಹಳ್ಳಿ ವರದಿ: ತಾಲ್ಲೂಕಿನ ಕನ್ನಂಗಿ ಸಮೀಪದ ಬಸವನಗದ್ದೆ, ಕಳ್ಳಿಗದ್ದೆ ಹಾಗೂ ಮಂಡಗದ್ದೆ ಭಾಗದ ಕಾಡಿಗೆ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ.

ಕನ್ನಂಗಿ ಸಮೀಪ ಅಲಸೆಯಲ್ಲಿ ಕಾಡಿಗೆ  ಎರಡು ದಿನಗಳ ಹಿಂದೆ ಬೆಂಕಿ ತಗುಲಿದ್ದು, ಬಿಸಿಲಿನ ಝಳ ಹೆಚ್ಚಾದ್ದರಿಂದ ಕಾಡ್ಗಿಚ್ಚು ತೀವ್ರ ಗತಿಯಲ್ಲಿ ಹರಡುತ್ತಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದೆ.

ಬೇಸಿಗೆಯ ಈ ದಿನಗಳಲ್ಲಿ ಕಾಡಿಗೆ ಆಗಾಗ ಬೆಂಕಿ ತಗಲುತ್ತಿದ್ದು, ಕಾಡಿನ ನಡುವೆ ಇರುವ ಹಳ್ಳಿಗಳಲ್ಲಿನ ಜನತೆ ಭಯದ ವಾತವರಣದಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಿದಿರಿನ ಮೆಳೆಗಳು ಒಣಗಿ ನಿಂತಿರುವುದರಿಂದ ಮತ್ತು ಮರಗಳು ಎಲೆಗಳನ್ನು ಉದುರಿಸುತ್ತಿರುವುದರಿಂದ ಬೆಂಕಿಯ ಕೆನ್ನಾಲಿಗೆ ಕಾಡಿನ ವಿಸ್ತಾರಕ್ಕೆ ಹರಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೆಚ್ಚು ಗಾಳಿ ಬಿಸುತ್ತಿರುವುದರಿಂದ ಬೆಂಕಿ ಪ್ರಖರವಾಗಿ ಉರಿಯುತ್ತಿದೆ. ಅಪಾರ ಪ್ರಮಾಣದ ಸಸ್ಯ ಹಾಗೂ ಪ್ರಾಣಿ ಸಂಪತ್ತು ವಿಪತ್ತಿಗೆ ಸಿಲುಕಿದೆ. ಬಸವನಗದ್ದೆಯ ಸತೀಶ್, ಪ್ರಸನ್ನ ಹಾಗೂ ಕಳ್ಳಿಗದ್ದೆಯ ಹುಚ್ಚಪ್ಪ ನಾಯಕರ ಅಡಿಕೆ ತೋಟಗಳಿಗೆ ಸಹ ಬೆಂಕಿ ತಗುಲಿ ಹಾನಿ ಸಂಭವಿಸಿದೆ.

ಘಟನೆ ಸ್ಥಳಕ್ಕೆ ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ ಭೇಟಿ ನೀಡಿ, ಸ್ಥಳೀಯರಿಗೆ ಸಾಂತ್ವನ ಹೇಳಿದರು. ನಂತರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ಒಣಗಿರುವ ಬಿದಿರು ಮೆಳೆಗಳನ್ನು ಕಾಡಿನಿಂದ ತೆರವುಗೊಳಿಸದೆ ಇರುವುದು ಬೆಂಕಿ ಹೆಚ್ಚಾಗಲು ಕಾರಣವಾಗಿದೆ.

ಈ ಭಾಗದ ಜನತೆ ಬೆಂಕಿ ಭಯದಿಂದ ಮುಕ್ತರಾಗಿಲ್ಲ. ಅಗ್ನಿಶಾಮಕ ದಳದವರು ಮತ್ತು ಸ್ಥಳೀಯ ಸಿಬ್ಬಂದಿಯೊಂದಿಗೆ ಸತತವಾಗಿ ಶ್ರಮಿಸುತ್ತಿದ್ದರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT