ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದ, ಗಾಯನದ ಆಮೋದ

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೋಲ್ಕತ್ತಾ ಬಳಿಯ ಹೌರಾ ಮೂಲದ ಪಂಡಿತ್ ತರುಣ್ ಭಟ್ಟಾಚಾರ್ಯ ವೇದಿಕೆಗೆ ಆಗಮಿಸಿದಾಗ ಶ್ರೋತೃಗಳ ಮುಖದಲ್ಲಿ ನಗು ಸುಳಿದು ಹೋಯಿತು. ವಿಶ್ವ ವಿಖ್ಯಾತರಾದ ಭಟ್ಟಾಚಾರ್ಯರ ಸಂತೂರ್ ವಾದನವನ್ನು ಕೇಳುವುದೇ ಒಂದು ಸಂಭ್ರಮ. ಅಂಥ ಕಲಾವಿದರ ಉಲ್ಲಾಸಭರಿತ ಸಂತೂರ್ ನಾದವನ್ನು ಕೇಳಲು ಎಲ್ಲರೂ ಕಾತರರಾಗಿದ್ದ ಸಮಯವದು. ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಬಿಸಿಲ ಧಗೆಯಲ್ಲಿ ಬೆಂದಿದ್ದವರಿಗೆ ಭಟ್ಟಾಚಾರ್ಯರ ಕಾರ್ಯಕ್ರಮ ಸಂಜೆಯ ಆಹ್ಲಾದಕರ ತಂಗಾಳಿಯ ಅನುಭವ ನೀಡಿತು.

ಕೆಲ ಹೊತ್ತು ಸಂತೂರ್ ಟ್ಯೂನ್ ಮಾಡಿ, ಸರಿಯಿದೆಯೇ ಎಂದೆಲ್ಲ ಪರೀಕ್ಷಿಸಿದ ನಂತರ, `ಬಹಳ ವರ್ಷದ ನಂತರ ಈ ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದೇನೆ. ಈಗ ನಿಮಗಾಗಿ ಚಾರುಕೇಶಿ (ಥಾಟ್- ಚಾರುಕೇಶಿ) ರಾಗವನ್ನು ಪ್ರಸ್ತುತಪಡಿಸುತ್ತೇನೆ' ಎಂದು ವಾದನವನ್ನು ಆರಂಭಿಸಿದರು. ಸುಮಾರು 25 ನಿಮಿಷ ಆಲಾಪ್ ಜೋಡ್ ಜಾಲಾ ನುಡಿಸಿದರು.

ರಾಗದ ಸ್ವರೂಪವನ್ನು ಬೇರೆ ಬೇರೆ ವೇಗಗಳಲ್ಲಿ, ಭಿನ್ನ ವಿಭಿನ್ನ ಸಂಯೋಜನೆಗಳಲ್ಲಿ ನುಡಿಸಿದ್ದರಿಂದ ರಾಗದ ಸೌಂದರ್ಯವನ್ನು ಪೂರ್ತಿಯಾಗಿ ಸವಿಯುವ ಅವಕಾಶ ಶ್ರೋತೃಗಳಿಗೆ ಲಭ್ಯವಾಯಿತು. ಅಲ್ಲದೇ ಸ್ವತಃ ತಾವೇ ವಾದನವನ್ನು ಅನುಭವಿಸುತ್ತ, ಸಂಭ್ರಮಿಸುತ್ತ ವಾದ್ಯದ ಮೇಲೆ ಬೆರಳುಗಳನ್ನು ಕುಣಿಸುತ್ತ, ನಾದವನ್ನು ಹೊಮ್ಮಿಸುತ್ತಿದ್ದ ರೀತಿ ಶ್ರೋತೃಗಳ ಕಿವಿಗಳಿಗಷ್ಟೇ ಅಲ್ಲದೇ, ಕಣ್ಣುಗಳಿಗೂ ಮುದ ನೀಡುವಂತಿತ್ತು.

ಆಲಾಪ್ ಹಾಗೂ ಜೋಡ್ ಜಾಲಾ ವಾದನದ ನಂತರ ಝಪ್‌ತಾಳವನ್ನು ನುಡಿಸುವ ಮೂಲಕ ಪಂ. ರವೀಂದ್ರ ಯಾವಗಲ್ ತಬಲಾದಲ್ಲಿ  ಭಟ್ಟಾಚಾರ್ಯರಿಗೆ ಸಾಥ್ ನೀಡಲಾರಂಭಿಸಿದರು. ಒಬ್ಬರ ಕಲೆಯನ್ನು ಮತ್ತೊಬ್ಬರು ಪ್ರಶಂಸಿಸುತ್ತ ವಾದನದಲ್ಲಿ ತಲ್ಲೆನರಾಗಿದ್ದ ರೀತಿ ಕಣ್ಮನ ಸೆಳೆಯುತ್ತಿತ್ತು. ನಂತರ ಆರಂಭವಾದ `ಸವಾಲ್- ಜವಾಬ್'ನಲ್ಲಿ ತರುಣ್ ವಾದನಕ್ಕೆ ಯಾವಗಲ್ಲರ ತಬಲಾ ಜವಾಬು ವ್ಯಕ್ತಗೊಂಡ ರೀತಿ ರೋಚಕವಾಗಿತ್ತು. ನಂತರ ತೀನ್ ತಾಳದಲ್ಲಿ ಮುಂದುವರೆದ ಸಂತೂರ್ ವಾದನ ಶ್ರೋತೃಗಳಿಗೆ ಪರಮಾನಂದದ ಅನುಭವ ನೀಡಿತು.

ಯಾವಗಲ್‌ಗೆ ಮೆಚ್ಚುಗೆ
ಕಾರ್ಯಕ್ರಮ ಮುಗಿದ ನಂತರ ಮಾತನಾಡಿದ ಭಟ್ಟಾಚಾರ್ಯರು, `ಇದೇ ಮೊದಲ ಬಾರಿಗೆ ನಾವಿಬ್ಬರೂ ಒಟ್ಟಿಗೇ ಕಾರ್ಯಕ್ರಮ ನೀಡಿದ್ದು ಎಂದರೆ ನೀವು ನಂಬುತ್ತೀರಾ? ಎಂಥ ಒಳ್ಳೆಯ ಕಲಾವಿದ. ಆದರೆ ಬಹುಪಾಲು ಎಲ್ಲಾ ಕಲಾವಿದರಿಗೆ ಸಾಥ್ ನೀಡಿರುವ ಯಾವಗಲ್ಲರು, ಈಗ ಕೊನೆಗೆ ನನಗೆ ಸಾಥ್ ನೀಡುತ್ತಿದ್ದಾರೆ' ಎಂದು ಅವರ ತಬಲಾ ವಾದನಕ್ಕೆ ತುಂಬುಮೆಚ್ಚುಗೆ  ವ್ಯಕ್ತಪಡಿಸಿದರು.

ನಗರದ `ರಾಜಗುರು ಸ್ಮೃತಿ', ತನ್ನ ವಾರ್ಷಿಕ ಸಂಗೀತ ಸಮಾರೋಹದ ಸಲುವಾಗಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದ ನೋಟವಿದು. ಕಳೆದ ಶನಿವಾರ ಸಂಜೆ 5.30ಕ್ಕೆ ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅರಳುಪ್ರತಿಭೆಯ ಪ್ರಬುದ್ಧ ಪ್ರಸ್ತುತಿ
ಕಾರ್ಯಕ್ರಮದಲ್ಲಿ  ಕಿರಾಣಾ ಘರಾಣಾ ಪದ್ಧತಿಯ ಮೇರು ಪ್ರತಿಭೆ ಬಸವರಾಜ ರಾಜಗುರು ಅವರ ಮೊಮ್ಮಗ ವಿಶ್ವರಾಜ ರಾಜಗುರು ಗಾಯನವನ್ನು ಪ್ರಸ್ತುತಪಡಿಸಿದರು. ಇನ್ನೂ ಕಲಿಕೆಯ ಹಂತದಲ್ಲಿರುವ ವಿಶ್ವರಾಜ ಯಮನ್ (ಥಾಟ್- ಕಲ್ಯಾಣ್) ರಾಗವನ್ನು ಆರಿಸಿಕೊಂಡಿದ್ದರು.

ವಿಲಂಬಿತ್ ಏಕ ತಾಳದಲ್ಲಿ `ಮೇರೋ ಮನ...' ಎಂಬ ಬಂದಿಶ್ ಹಾಡಿದ ನಂತರ ಧೃತ್ ತೀನ್ ತಾಳದಲ್ಲಿ `ಗಗರನ ಭವರ...' ಎಂಬ ಬಡಾ ಖಯಾಲ್ ಅನ್ನು ಪ್ರಸ್ತುತಪಡಿಸಿದರು. ನಂತರ ಸ್ವಾಮಿ ನೀನು ಶಾಶ್ವತ ನೀನು, ಪಾಲಿಸೆನ್ನ ಮುದ್ದು ಶಾರದೆ, ಬಾನಂಗಳದಲಿ ಕಂಕಣ ಕಟ್ಟಿದೆ ಎಂಬ ಹಾಡುಗಳನ್ನೂ ಹಾಡಿದರು. ಇವರಿಗೆ ಹಾರ್ಮೋನಿಯಂನಲ್ಲಿ ಅಶ್ವಿನ್ ವಾಲಾವಲ್ಕರ್ ಹಾಗೂ ತಬಲಾದಲ್ಲಿ  ಗಜಾನನ ಹೆಗಡೆ ಸಾಥ್ ನೀಡಿದರು.

ನಂತರ ವೇದಿಕೆ ಏರಿದ್ದು ಪುಣೆ ಮೂಲದ ಉದಯೋನ್ಮುಖ ಗಾಯಕ ರಮಾಕಾಂತ ಗಾಯಕ್‌ವಾಡ್. ತನ್ನ ತಂದೆ ತಾಯಿಯ ಬಳಿ ಪಟಿಯಾಲಾ ಘರಾಣಾ ಪದ್ಧತಿಯಲ್ಲಿ ಶಾಸ್ತ್ರೀಯ  ಸಂಗೀತವನ್ನು ಕಲಿತಿರುವ ಇವರು ಕಿರಿಯ ವಯಸ್ಸಿನಲ್ಲೇ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ  ಗುರುತಿಸಿಕೊಂಡವರು.

ಮೊಟ್ಟ ಮೊದಲನೆ ಬಾರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಲು ಆಗಮಿಸಿದ್ದ ಅವರು, ಬೆಂಗಳೂರಿನ ಶ್ರೋತೃಗಳಿಗಾಗಿ ಮಾರ್ವಾ (ಥಾಟ್- ಮಾರ್ವಾ) ರಾಗವನ್ನು ಆರಿಸಿಕೊಂಡಿದ್ದರು. ವಿಲಂಬಿತ್ ಏಕ್ ತಾಳದಲ್ಲಿ `ಪಿಯಾ ಮೋರಾ...' ಎಂಬ ಚೋಟಾ ಖಯಾಲ್‌ನೊಂದಿಗೆ ಗಾಯನವನ್ನು ಆರಂಭಿಸಿದರು. ಆಲಾಪ್ ಗಾಯನ ಕೇಳುತ್ತಿದ್ದರೆ ಗುಡುಗುವ ಮೋಡಗಳನ್ನು ಪೋಣಿಸಿ ಅವುಗಳಿಂದ ನಾದವನ್ನು ಹೊಮ್ಮಿಸಿದಷ್ಟು ಧೃಡವಾಗಿತ್ತು. ಅವರ ಗಾಯನ ಶೈಲಿ. ಕೊನೆಗೆ ಧೃತ್ ತೀನ್ ತಾಳದಲ್ಲಿ `ಗುರು ಪ್ರೇಮ್...' ಎಂಬ ಬಡಾ ಖಯಾಲನ್ನು ಅಷ್ಟೇ ಚೆನ್ನಾಗಿ ಹಾಡಿದರು.

ಕೊನೆಯ ಗಾಯನಕ್ಕೆ `ಯಾದ ಪಿಯಾ ಕಿ ಆಯೆ' ಎಂಬ ಜನಪ್ರಿಯ ಠುಮ್ರಿಯೊಂದನ್ನು ಆಯ್ಕೆ ಮಾಡಿಕೊಂಡಿಕೊಂಡಿದ್ದರು. ಠುಮ್ರಿ ಗಾಯನದಲ್ಲಿ ಪ್ರಮುಖ ಪಾತ್ರವಹಿಸುವ ಭಾವ ತನ್ಮಯತೆ ಇವರ ಗಾಯನದಲ್ಲಿ ಕರಾರುವಕ್ಕಾಗಿ ವ್ಯಕ್ತವಾದುದರಿಂದ ಅದು ಸುಲಭವಾಗಿ ಕೇಳುಗರ ಮನಮುಟ್ಟಿತು.

ತಬಲಾದಲ್ಲಿ ಗುರುಮೂರ್ತಿ ವೈದ್ಯ ಹಾಗೂ ಹಾರ್ಮೋನಿಯಂನಲ್ಲಿ ಅಶ್ವಿನ್ ವಾಲಾವಲ್ಕರ್ ನೀಡಿದ ಸಾಥ್ ಹಾಡಿನ ಮೆರುಗನ್ನು ಹೆಚ್ಚಿಸಿದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT