ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನಾನು ಚುನಾವಣೆ ಸ್ಪರ್ಧಾ ಆಕಾಂಕ್ಷಿಯಲ್ಲ'

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್ ಸ್ಪಷ್ಟನೆ
Last Updated 2 ಏಪ್ರಿಲ್ 2013, 4:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದು ಬಯಸಿದ್ದೆ. ಪಕ್ಷದ ವರಿಷ್ಠ ಕುಮಾರಸ್ವಾಮಿಯವರ ಬಳಿ ಮನವಿ ಕೂಡ ಮಾಡಿದ್ದೆ. ಆದರೆ ಈ ಬಾರಿ ಹಾಲಿ ಶಾಸಕ ಕೆ.ಪಿ.ಬಚ್ಚೇಗೌಡರಿಗೆ ಬಿಟ್ಟುಕೊಡು ಎಂದರು. ಅದಕ್ಕೆ ನಾನು ಈ ಬಾರಿ ಸ್ಪರ್ಧಿಸದೇ ಕೆ.ಪಿ.ಬಚ್ಚೇಗೌಡರ ಗೆಲುವಿಗೆ ಶ್ರಮಿಸುತ್ತೇನೆ' ಎಂದು ಜೆಡಿಎಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಕೆ.ವಿ.ನಾಗರಾಜ್ ಸ್ಪಷ್ಟಪಡಿಸಿದರು.

ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಜೆಡಿಎಸ್ ಮುಖಂಡರ ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಈ ವಿಷಯ ತಿಳಿಸಿದ ಅವರು, `ನಾನು ಸ್ಪರ್ಧಾ ಆಕಾಂಕ್ಷಿಯಾಗಿದ್ದೆ. ಆದರೆ ಈಗ ನಾನು ಸ್ಪರ್ಧಿಸುತ್ತಿಲ್ಲ. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ' ಎಂದರು.

`ಕೆ.ಪಿ.ಬಚ್ಚೇಗೌಡ ಅವರು ನನಗೆ ಆಪ್ತರು. ಅವರೊಂದಿಗೆ ಯಾವುದೇ ವೈಮನಸ್ಸಿಲ್ಲ. ಆದರೂ ನನಗೊಮ್ಮೆ ಶಾಸಕನಾಗಲು ಅವಕಾಶ ಮಾಡಿಕೊಡಿ ಎಂದು ಕುಮಾರಸ್ವಾಮಿಯವರಿಗೆ ಕೋರಿದ್ದೆ. ಆದರೆ ನನ್ನ ಮನವಿಗೆ ಉತ್ತರಿಸಿದ ಅವರು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಸೂಚಿಸಿದರು. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ, ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ' ಎಂದು ಅವರು ತಿಳಿಸಿದರು.

`ನಾನು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷನಾಗಿ ನೇಮಕಗೊಂಡಿದ್ದ ದಿನವೇ ವಿಷಯವನ್ನು ಪ್ರಚಾರಪಡಿಸಬಹುದಿತ್ತು. ಆದರೆ ನಾನು ಹಾಗೆ ಮಾಡಲು ಬಯಸಲಿಲ್ಲ. ನಾನು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ಸ್ವೀಕರಿಸುತ್ತೇನೆಂದು ಹೇಳಿದ್ದೆ. ಅದರಂತೆಯೇ ನಿಮ್ಮೆಲ್ಲರ ಒಪ್ಪಿಗೆ ಮೇರೆಗೆ ನಾನು ಇಂದು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತೇನೆ' ಎಂದು ಅವರು ಹೇಳಿದರು.

`ಈ ಎಲ್ಲ ದಿಢೀರ್ ಬದಲಾವಣೆ ಕುರಿತು ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಆತಂಕಪಡಬೇಕಿಲ್ಲ. ಕೆ.ಪಿ.ಬಚ್ಚೇಗೌಡ ಗೆಲುವಿಗೆ ನಾವೆಲ್ಲರೂ ಶ್ರಮಿಸೋಣ. ಚಿಕ್ಕಬಳ್ಳಾಪುರ ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ಅದನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳೋಣ' ಎಂದರು.

ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, `ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದಲ್ಲಿ, ನಿಶ್ಚಿತವಾಗಿಯೂ ಗೆಲುವು ಸಾಧಿಸಬಹುದು. ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ಜನಪರ ಕಾರ್ಯಗಳಿಗಾಗಿ ಜೆಡಿಎಸ್ ಪರ ಮತ ಚಲಾಯಿಸುವಂತೆ ಜನರಲ್ಲಿ ಮನವಿ ಮಾಡೋಣ'

ಜೆಡಿಎಸ್ ಮುಖಂಡರಾದ ಜಿ.ಆರ್.ನಾರಾಯಣಸ್ವಾಮಿ, ಕೆ.ಟಿ.ನಾರಾಯಣಸ್ವಾಮಿ, ಆವಲುಕೊಂಡ ರಾಯಪ್ಪ, ಕೊಳವನಹಳ್ಳಿ ಮುನಿರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಮುನೇಗೌಡ, ನಗರಸಭೆ ಸದಸ್ಯರಾದ ಪಿ.ಶ್ರೀನಿವಾಸ್, ಶ್ರೀನಿವಾಸರೆಡ್ಡಿ, ಕಿಸಾನ್ ಕೃಷ್ಣಪ್ಪ ಮತ್ತಿತರ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT