ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಬನ್ನಿಮಂಟಪ, ನನ್ನದೊಂದು ಬಿನ್ನಹ..

Last Updated 18 ಅಕ್ಟೋಬರ್ 2012, 5:45 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: `ದಕ್ಷಿಣ ಭಾರತವನ್ನೇ ತಮ್ಮ ಪಾಳೇಪಟ್ಟಿಗೆ ಒಳಪಡಿಸಿಕೊಂಡಿದ್ದ ವಿಜಯನಗರ ಆಳರಸರ ಕಾಲದಲ್ಲಿ, 15ನೇ ಶತಮಾನದಲ್ಲಿ ಹುಟ್ಟು ಪಡೆದ ನನ್ನನ್ನು ದಸರಾ ಬನ್ನಿ ಮಂಟಪ ಎಂದು ಕರೆಯುತ್ತಾರೆ~.

`ಕಾವೇರಿ ರಂಗ ಪವಡಿಸಿರುವ ಶ್ರೀರಂಗಪಟ್ಟಣದ ಪೂರ್ವ ದಿಕ್ಕಿನಲ್ಲಿ, ಕಿರಂಗೂರು ಬಳಿ ಬೆಳ್ಳನೆಯ ಬಣ್ಣ ಬಳಿದುಕೊಂಡು ನಿಂತಿದ್ದೇನೆ. ಅತ್ಯಾಕರ್ಷಕ ಉಬ್ಬು ಶಿಲ್ಪಗಳುಳ್ಳ 24 ಕಾಲುಗಳಿದ್ದರೂ ತಲೆಯ ಭಾಗಕ್ಕೆ ಬೇನೆ ಬಂದಿದೆ. ಅರಳಿ ಹಾಗೂ ಆಲದ ಮರದ ಬೇರುಗಳು ನನ್ನ ಮೆದುಳಿನಾಳಕ್ಕೆ ಇಳಿದು ಬಾಧೆ ಕೊಡುತ್ತಿವೆ.

ಇಂದೋ ನಾಳೆಯೋ ನಿನ್ನನ್ನು ನೆಲಕ್ಕೆ ಉರುಳಿಸದೆ ಬಿಡುವುದಿಲ್ಲ ಎಂದು ಶಪಥ ತೊಟ್ಟಂತೆ ಬೆದರಿಕೆ ಒಡ್ಡುತ್ತಿವೆ. ನನ್ನ ದೇಹದ ಎಡಭುಜ ಈಗಾಗಲೇ ಮುರಿದು ಬಿದ್ದಿದೆ. ಅಂಗಾಂಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಳೆ ಸುರಿದರೆ ನೀರು ತಳಗುಂಟು ಜಿನುಗಿ ಒದ್ದೆಯಾಗುತ್ತೇನೆ~

`ನನ್ನ ಕಾಲುಗಳ ಮೇಲಿರುವ ಕೂರ್ಮ, ಉಗ್ರನರಸಿಂಹ, ವರಾಹ ಸೇರಿದಂತೆ ವಿಷ್ಣುವಿನ ದಶಾವತಾರದ ಚಿತ್ರಗಳು ಶೋಭೆ ತರುವಂತಿವೆ. ನೃತ್ಯ ಗಣೇಶ, ಮೃದಂಗ ಗಣೇಶ, ಮತ್ಸ್ಯ ಕನ್ಯೆ, ಗಜಲಕ್ಷ್ಮಿ, ಕಿಂಕರರು-ಹೀಗೆ ಬಗೆ ಬಗೆಯ ಉಬ್ಬು ಶಿಲ್ಪಗಳು ನನ್ನ ಆಕರ್ಷಣೆ ಹೆಚ್ಚಿಸಿವೆ. ಆದರೆ ಈ ಉಬ್ಬು ಶಿಲ್ಪಗಳನ್ನು ವಿಕಾರಗೊಳಿಸಲಾಗುತ್ತಿದೆ.

ನನ್ನ ಸ್ಥಿತಿ ಹೀಗಿದ್ದರೂ ದಸರಾ ಹೆಸರಿನಲ್ಲಿ ಮೂರು ದಿನದ ಮಟ್ಟಿಗೆ ಸುಣ್ಣ ಬಳಿದು, ಬಾಳೆ ಕಂದು ಕಟ್ಟಿ ವಿದ್ಯುತ್ ದೀಪಗಳ ಉಡುಗೆ ತೊಡಿಸುತ್ತಾರೆ. ನನ್ನ ಸ್ಥಿತಿ ಕಂಡು `ಒಳಗೆಲ್ಲ ಹುಳುಕು, ಮೇಲೆಲ್ಲಾ ಥಳಕು~ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ನನ್ನ ಜತೆಯಲ್ಲೇ ಹುಟ್ಟಿದ, ಎಡ ಮಗ್ಗುಲಲ್ಲಿರುವ ಕೊಳ ಪಾಚಿ ಕಟ್ಟಿಕೊಂಡು ಗಬ್ಬು ನಾರುತ್ತಿದೆ. ಅದನ್ನು ಸ್ವಚ್ಛಗೊಳಿಸುವ ಇರಾದೆಗೆ ಯಾರಿಗೂ ಇದ್ದಂತಿಲ್ಲ. ವಾಸ್ತುಶಿಲ್ಪ, ಪರಂಪರೆಯ ಬಗ್ಗೆ ನಿಜವಾದ ಕಾಳಜಿ ಇರುವವರು ಇನ್ನಾದರೂ ಸಿಕ್ತಾರಾ?. ನನ್ನ ಮುರಿದ ಭಾಗವನ್ನು ಸರಿ ಮಾಡ್ತಾರಾ?~

ಎಂದು ದಸರಾ ಬನ್ನಿ ಮಂಟಪ ತನ್ನ ಕಣ್ಣೀರ ಕಥೆ ಹೇಳುತ್ತಿದೆ. ವಿಜಯನಗರ ಅರಸರ ಕಾಲದಲ್ಲಿ ಹಂಪಿಯಲ್ಲಿ ನಾಡಹಬ್ಬ ದಸರಾ ಉತ್ಸವ ನಡೆಯುತ್ತಿದ್ದ ಕಾಲಘಟ್ಟದಲ್ಲಿ ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ವಿಜಯನಗರದ ಸಾಮಂತರು ದಸರಾ ಉತ್ಸವ ಆಚರಿಸುತ್ತಿದ್ದರು. ಮೈಸೂರು ಒಡೆಯರ್ ಕಾಲದಲ್ಲಿ ಅದು ಔನ್ನತ್ಯ ಮುಟ್ಟಿತ್ತು.

ಆ ದಿನಗಳಲ್ಲಿ ದಸರಾ ಬನ್ನಿ ಮಂಟಪ ಜೀವ ಕಳೆಯಿಂದ ಶೋಭಿಸುತ್ತಿತ್ತು. ಕಲ್ಲು ಹಾಗೂ ಚುರುಕಿ ಗಾರೆ ಬಳಸಿ ನಿರ್ಮಿಸಿರುವ ಈ ಮಂಟಪ ಸಮರ್ಪಕ ನಿರ್ವಹಣೆ ಇಲ್ಲದೆ ಶಿಥಿಲವಾಗುತ್ತಿದೆ. ಗಿಡ, ಗಂಟಿಗಳು ಬೆಳೆದು ಮಂಟಪದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿವೆ. ದಸರಾ ಉತ್ಸವದ ಸಂದರ್ಭದಲ್ಲಾದರೂ ಮಂಟಪದ ಶಿಥಿಲ ಭಾಗವನ್ನು ದುರಸ್ತಿ ಮಾಡುವ, ಬೇರುಗಳನ್ನು ತೆಗೆಸಿ ಸಂಭಾವ್ಯ ಅಪಾಯ ತಪ್ಪಿಸುವ ಕೆಲಸ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT