ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಸಿದ ದಿನದಿಂದಲೇ `ಲೆಕ್ಕ'

ಅಭ್ಯರ್ಥಿಯ ಖರ್ಚು-ವೆಚ್ಚ ದಾಖಲಿಸಲು ಕ್ರಮ
Last Updated 5 ಏಪ್ರಿಲ್ 2013, 9:12 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಧಾನಸಭೆ ಚುನಾವಣೆಗೆ ಏ. 10ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ನೀಡಬೇಕಾದ ಮಾಹಿತಿ, ಅನುಸರಿಸಬೇಕಾದ ನೀತಿ- ನಿಯಮಗಳ ಕುರಿತಂತೆ ಚುನಾವಣಾ ಆಯೋಗ ಮಾರ್ಗದರ್ಶಿ ಸೂತ್ರಗಳನ್ನು ನಿಗದಿಪಡಿಸಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಡೆಯಲಿದೆ. ವಿಧಾನಸಭೆಗೆ ನಿಗದಿ ಮಾಡಿರುವ ನಿಗದಿತ 2 `ಬಿ' ನಮೂನೆಯ ಅರ್ಜಿಯಲ್ಲಿ ನಾಮಪತ್ರ ಸಲ್ಲಿಸಬೇಕು.

ನಾಮಪತ್ರಕ್ಕೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾದರೆ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯಲ್ಲಿರುವ ಓರ್ವ ಸೂಚಕರ ಹೆಸರು ನಮೂದಿಸಬೇಕು. ಆದರೆ, ಪ್ರಾದೇಶಿಕ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರದಲ್ಲಿ 10 ಸೂಚಕರ ಹೆಸರು ನಮೂದಿಸುವುದು ಕಡ್ಡಾಯ.

ಹೆಚ್ಚುವರಿ ನಾಮಪತ್ರಕ್ಕೆ ಠೇವಣಿ ಇಲ್ಲ
ನಾಮಪತ್ರ ಸಲ್ಲಿಕೆಯ ವೇಳೆ ಸಾಮಾನ್ಯವರ್ಗದ ಅಭ್ಯರ್ಥಿ ್ಙ 10 ಸಾವಿರ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿ ್ಙ 5 ಸಾವಿರ ಠೇವಣಿ ಮೊತ್ತ ಇಡಬೇಕು. ಓರ್ವ ಅಭ್ಯರ್ಥಿ ಕನಿಷ್ಠ ಒಂದು, ಗರಿಷ್ಠ ನಾಲ್ಕು ನಾಮಪತ್ರ ಸಲ್ಲಿಸಬಹುದು. ಹೆಚ್ಚುವರಿ ನಾಮಪತ್ರಗಳಿಗೆ ಹೆಚ್ಚಿನ ಠೇವಣಿ ಮೊತ್ತ ಸಲ್ಲಿಸುವ ಅಗತ್ಯವಿಲ್ಲ.

ನಾಮಪತ್ರಗಳ ಪರಿಶೀಲನೆ ವೇಳೆ ಅಭ್ಯರ್ಥಿಯೊಬ್ಬ ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿ ಏಕಕಾಲದಲ್ಲಿಯೇ ಅಂತಹ ನಾಮಪತ್ರಗಳ ಪರಿಶೀಲನೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆಯೋಗ ಸೂಚನೆ ನೀಡಿದೆ. ನಾಮಪತ್ರ ಸಲ್ಲಿಸುವ ವೇಳೆ ಆಯೋಗ ನಿಗದಿಪಡಿಸಿದ ಅರ್ಜಿಗಳಲ್ಲಿಯೇ ಅಭ್ಯರ್ಥಿಗಳು ಸಮಗ್ರ ಮಾಹಿತಿ ಸಲ್ಲಿಸಬೇಕು. ಆಸ್ತಿ ವಿವರ, ಅಪರಾಧ ಪ್ರಕರಣಗಳ ವಿವರಗಳ ಮಾಹಿತಿ ನೀಡಬೇಕು. ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಸುವುದಿಲ್ಲ ಎಂದು ಪ್ರಮಾಣ ಮಾಡಿದ ಪ್ರಮಾಣಪತ್ರವನ್ನು ಕೂಡ ಅಭ್ಯರ್ಥಿಗಳು ಸಲ್ಲಿಸುವುದು ಕಡ್ಡಾಯ.

ನಿಗದಿತ ಮೊತ್ತ...
ಚುನಾವಣಾ ಆಯೋಗದಿಂದ ಕಾನೂನು ಬದ್ಧವಾಗಿ ನೋಂದಾಯಿತವಾದ ಪಕ್ಷಗಳ ಅಭ್ಯರ್ಥಿಗಳಿಗೆ ಉಚಿತವಾಗಿ ಆಯಾ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ನೀಡಲಾಗುತ್ತಿದೆ. ಆದರೆ, ನೋಂದಣಿಯಾಗದ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳಿಗೆ ಉಚಿತ ಮತದಾರರ ಪಟ್ಟಿ ನೀಡುವುದರ ಮೇಲೆ ನಿರ್ಬಂಧ ಹೇರಲಾಗಿದೆ. ಇಂತಹ ಅಭ್ಯರ್ಥಿಗಳು ನಿಗದಿತ ಮೊತ್ತ ಪಾವತಿಸಿ ಮತದಾರರ ಪಟ್ಟಿ ಪಡೆಯಬೇಕು.

ನಾಮಪತ್ರ ಸಲ್ಲಿಸುವ ದಿನದಿಂದಲೇ ಅಭ್ಯರ್ಥಿಯ ಖರ್ಚು-ವೆಚ್ಚದ ವಿವರಗಳ ದಾಖಲೀಕರಣ ಆರಂಭವಾಗಲಿದೆ. ಅಭ್ಯರ್ಥಿಯು ಬ್ಯಾಂಕ್ ಖಾತೆ ತೆರೆದು ಅದರ ಮೂಲಕವೇ ಹಣದ ವ್ಯವಹಾರ ನಡೆಸಬೇಕಾಗಿದೆ. ಅಭ್ಯರ್ಥಿಗೆ ಗರಿಷ್ಠ ್ಙ 16 ಲಕ್ಷ ವೆಚ್ಚ ಮಿತಿ ನಿಗದಿಪಡಿಸಲಾಗಿದೆ.

ಏ. 10ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ಏ. 17ರವರೆಗೆ ಉಮೇದುವಾರಿಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಏ. 18ರಂದು ನಾಮಪತ್ರಗಳ ಪರಿಶೀಲನೆ, ಏ. 20ರಂದು ಉಮೇದುವಾರಿಕೆ ಹಿಂಪಡೆಯಲು ಅಂತಿಮ ದಿನವಾಗಿದೆ.

ನಾಮಪತ್ರ ಸಲ್ಲಿಕೆ ಕೇಂದ್ರಗಳಿಗೆ ಆಗಮಿಸುವ ಅಭ್ಯರ್ಥಿಗಳು ಚುನಾವಣಾ ಆಯೋಗ ನಿಗದಿಪಡಿಸಿದ ಬೆಂಬಲಿಗರು ಹಾಗೂ ವಾಹನಗಳನ್ನು ಮಾತ್ರ ಆವರಣಕ್ಕೆ ಕರೆತರಲು ಅನುಮತಿ ನೀಡಿದೆ. ನಾಮಪತ್ರ ಸಲ್ಲಿಕೆ ಕೇಂದ್ರದ 100 ಮೀಟರ್ ಆವರಣದಲ್ಲಿ ಅಭ್ಯರ್ಥಿಗೆ ಸಂಬಂಧಿಸಿದ ಮೂರು ವಾಹನ ಮತ್ತು ಅಭ್ಯರ್ಥಿ ಸೇರಿದಂತೆ ಐವರ ಪ್ರವೇಶಕ್ಕೆ ಮಾತ್ರ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.

ಏಕಗವಾಕ್ಷಿ ಕೊಠಡಿ, ಕಂಟ್ರೋಲ್ ರೂಂ
ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಚುನಾವಣಾ ಸಂಬಂಧ ಪಡೆದುಕೊಳ್ಳಬೇಕಾದ ನಿರಾಪೇಕ್ಷಣಾ ಪತ್ರ ಮತ್ತು ಪರವಾನಗಿ ಇತ್ಯಾದಿಗಳನ್ನು ನೀಡಲು ನಗರಸಭೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಮಾಡಿದ್ದು, ಈ ತಂಡವು ಕಚೇರಿ ವೇಳೆಯಲ್ಲಿ ಕಾರ್ಯ ನಿರ್ವಹಿಸಲಿದೆ.

ನಗರಸಭೆಯ ಒಬ್ಬ ಸಿಬ್ಬಂದಿ, ಪೊಲೀಸ್ ಇಲಾಖೆಯ ಒಬ್ಬ ಸಿಬ್ಬಂದಿ, ಸಾರಿಗೆ ಇಲಾಖೆಯ ಒಬ್ಬ ಸಿಬ್ಬಂದಿ ಸೇವೆಯಲ್ಲಿ ನಿರತರಾಗಿರುತ್ತಾರೆ ಎಂದರು ಅವರು ತಿಳಿಸಿದ್ದಾರೆ.

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂಬಂಧ ಚುನಾವಣಾಧಿಕಾರಿ ಕಚೇರಿಯಾಗಿ ನಗರಸಭಾ ಅಧ್ಯಕ್ಷರ ಕಾರ್ಯಾಲಯ ಕೊಠಡಿ ದೂರವಾಣಿ: 08182-272354, ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ)ಯಾಗಿ ಉಪಾಧ್ಯಕ್ಷರ ಕಾರ್ಯಾಲಯ ಕೊಠಡಿ ದೂರವಾಣಿ: 08182-220588 ಕಾರ್ಯ ನಿರ್ವಹಿಸಲಿವೆ.

ಈ ಕೊಠಡಿಯಲ್ಲಿ ದಿನದ 24 ಗಂಟೆ 3 ಪಾಳಿಗಳಲ್ಲಿ ಅಗತ್ಯ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ ಎಂದು ನಗರಸಭಾ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT