ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಸಿದ ನಂದನ್‌ ನಿಲೇಕಣಿ

Last Updated 21 ಮಾರ್ಚ್ 2014, 19:32 IST
ಅಕ್ಷರ ಗಾತ್ರ

ಬೆಂಗಳೂರು:ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರದ (ಆಧಾರ್‌) ಮಾಜಿ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಅವರು ₨ 7,879.51 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.

ನಂದನ್‌ ಅವರ ಬಳಿ ₨ 4,089.61 ಕೋಟಿ ಆಸ್ತಿ ಇದೆ. ಅವರ ಪತ್ನಿ ರೋಹಿಣಿ ನಿಲೇಕಣಿ ₨ 3,789.89 ಕೋಟಿ ಆಸ್ತಿಯ ಒಡೆತನ ಹೊಂದಿದ್ದಾರೆ. ರಾಜ್ಯದಲ್ಲಿ ಈವರೆಗೆ ಲೋಕಸಭಾ ಚುನಾವಣೆ ಕಣಕ್ಕಿಳಿದಿರುವವರ ಪೈಕಿ ನಂದನ್‌ ನಿಲೇಕಣಿ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

ಹೂಡಿಕೆಯೇ ಹೆಚ್ಚು: ನಂದನ್‌ ಕುಟುಂಬದ ಆಸ್ತಿಯಲ್ಲಿ ₨ 7,525 ಕೋಟಿ ಮೊತ್ತ ಹೂಡಿಕೆ ರೂಪದಲ್ಲಿದೆ. ಈ ಪೈಕಿ ₨ 6,061.25 ಕೋಟಿಯಷ್ಟು ಆಸ್ತಿ ಅವರ ಪಾಲುದಾರಿಕೆಯಲ್ಲೇ ಅಸ್ತಿತ್ವಕ್ಕೆ ಬಂದಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಇನ್ಫೋಸಿಸ್‌ನಲ್ಲಿ ಷೇರುಗಳ ರೂಪದಲ್ಲಿದೆ. ಇನ್ಫೋಸಿಸ್‌ನಲ್ಲಿ ನಂದನ್‌ ₨ 3,192.17 ಕೋಟಿ ಮೌಲ್ಯದ ಷೇರುಗಳನ್ನು ಹೊಂದಿದ್ದರೆ, ಅವರ ಪತ್ನಿ ₨ 2,869.08 ಕೋಟಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ.

ಇವರ ಬಳಿ ತಲಾ ₨ 30,000 ನಗದು ಇದೆ. ಆದರೆ, ನಂದನ್‌ ದಂಪತಿಯ ಬ್ಯಾಂಕ್‌ ಖಾತೆಗಳಲ್ಲಿ ₨ 116.59 ಕೋಟಿಯಷ್ಟು ದೊಡ್ಡ ಮೊತ್ತವಿದೆ. ಇವರು ಯಾರ ಬಳಿಯೂ ಸಾಲ ಪಡೆದಿಲ್ಲ. ಪತಿ ₨ 1.22 ಕೋಟಿಯನ್ನು ಬೇರೆಯವರಿಗೆ ಸಾಲವಾಗಿ ನೀಡಿದ್ದರೆ, ಪತ್ನಿ ₨ 5.80 ಕೋಟಿ ನೀಡಿದ್ದಾರೆ. ಇವರ ಮನೆಯಲ್ಲಿ ₨ 2.08 ಕೋಟಿ ಮೌಲ್ಯದ ಕಲಾಕೃತಿಗಳಿವೆ ಎಂಬ ಮಾಹಿತಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿದೆ.

ನಂದನ್‌ ಅವರ ವಾರ್ಷಿಕ ಆದಾಯ ₨ 97.84 ಲಕ್ಷ. ಈ ಪೈಕಿ ₨ 15.62 ಲಕ್ಷ ಆದಾಯಕ್ಕೆ ತೆರಿಗೆ ಪಾವತಿಸುತ್ತಿದ್ದಾರೆ. ₨ 82.22 ಲಕ್ಷ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ಅದೇ ರೀತಿ ರೋಹಿಣಿ ಅವರ ಒಟ್ಟು ವಾರ್ಷಿಕ ಆದಾಯ ₨ 70.57 ಲಕ್ಷ. ಅದರಲ್ಲಿ ₨ 4.50 ಲಕ್ಷ ತೆರಿಗೆ ವ್ಯಾಪ್ತಿಯಲ್ಲಿದ್ದರೆ, ₨ 66.06 ಲಕ್ಷ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ.

ಪತ್ನಿ ರೋಹಿಣಿ ನಿಲೇಕಣಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎಂ.ಕೃಷ್ಣಪ್ಪ (ವಿಜಯನಗರ), ಆರ್‌.ವಿ.ದೇವರಾಜ್‌ ಮತ್ತಿತರರ ಜೊತೆ ಜಯನಗರದ ಅಶೋಕ ಸ್ಥಂಭದ ಸಮೀಪವಿರುವ ಕಾಂಗ್ರೆಸ್‌ ಚುನಾವಣಾ ಕಚೇರಿಯಿಂದ ಜಯನಗರ 4ನೇ ಹಂತದಲ್ಲಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದ ನಂದನ್‌ ನಿಲೇಕಣಿ, ಚುನಾವಣಾಧಿಕಾರಿಯನ್ನು ಭೇಟಿಮಾಡಿ ನಾಮಪತ್ರ ಸಲ್ಲಿಸಿದರು.

ಅಧಿಕೃತವಾಗಿ ಚುನಾವಣಾ ಕಣಕ್ಕೆ ಧುಮುಕಿದ ನಿಲೇಕಣಿ ಅವರಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಎಐಸಿಸಿ ವಕ್ತಾರ ಎಂ.ವಿ.ರಾಜೀವ್‌ ಗೌಡ, ಕಳೆದ ವಿಧಾನ­ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ­ಗಳಾಗಿದ್ದ ಡಾ.ಗುರ್ರಪ್ಪ ನಾಯ್ಡು, ಎಂ.ಸಿ.­ವೇಣುಗೋಪಾಲ್‌, ಚೇತನ್‌ ಗೌಡ, ಉದ್ಯಮಿ ಯು.ಬಿ.ವೆಂಕಟೇಶ್‌, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ­ರಾದ ಎಂ.ಉದಯಶಂಕರ್‌, ಜಿ.ಎನ್‌.ಆರ್‌.­ಬಾಬು ಮತ್ತಿತರರು ಶುಭ ಹಾರೈಸಿದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ನಂದನ್‌, ‘ಅಧಿಕಾರದ ಹಪಾಹಪಿ ಇರುವವರ ಬದಲಿಗೆ ನಗರದ ಅಭಿವೃದ್ಧಿಯ ಬಗ್ಗೆ ಯೋಚಿಸುವವರುಚುನಾವಣಾ ರಾಜಕೀಯಕ್ಕೆ ಬರಬೇಕು ಎಂದು ಬೆಂಗಳೂರಿನ ಜನತೆ ಬಯಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ.ಈ ಬಾರಿ ನನ್ನ ಗೆಲುವು ಖಚಿತ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT