ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹ

Last Updated 19 ಜನವರಿ 2011, 6:45 IST
ಅಕ್ಷರ ಗಾತ್ರ

ಕೆಜಿಎಫ್: ಕಳೆದ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಿದ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಹಾಗೂ ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಬಿಜೆಪಿಯ ನಿಯೋಗ ಸೋಮವಾರ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಕಳೆದ ಚುನಾವಣೆಯಲ್ಲಿ ನಾರಾಯಣಸ್ವಾಮಿ ನಡೆಸಿದರು ಎನ್ನಲಾದ ಪಕ್ಷ ವಿರೋಧಿ ಚಟುವಟಿಕೆ ವಿವರಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕ್ಯಾಸಂಬಳ್ಳಿ ಜಿ.ಪಂ. ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಾರಾಯಣಸ್ವಾಮಿ ಅವರ ಸಂಬಂಧಿಕರಾದ ಕಾರಣ, ಅವರ ಪತ್ನಿ ಹಾಗೂ ಪುತ್ರ ಜೆಡಿಎಸ್ ಪರವಾಗಿ ಬಹಿರಂಗವಾಗಿಯೇ ಪ್ರಚಾರ ಮಾಡಿದರು. ಬೇತಮಂಗಲದಲ್ಲಿ ಕಾಂಗ್ರೆಸ್‌ನ ಅ.ಮು.ಲಕ್ಷ್ಮೀನಾರಾಯಣ ಮತ್ತು ಪಾರಾಂಡಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ನ ವಿಜಯಶಂಕರ್ ಅವರಿಗೆ ಬೆಂಬಲ ಸೂಚಿಸಿದ್ದರು. ಅವರ ಪಕ್ಷ ವಿರೋಧಿ ಚಟುವಟಿಕೆಯಿಂದ ಎರಡು ಜಿ.ಪಂ ಕ್ಷೇತ್ರ ಹಾಗೂ ನಾಲ್ಕೈದು ತಾ.ಪಂ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಅಲ್ಪಮತದಿಂದ ಪರಾಜಿತರಾದರು ಎಂದು ಮುಖಂಡರು ದೂರಿದರು ಎನ್ನಲಾಗಿದೆ.

ನಾರಾಯಣಸ್ವಾಮಿ ಅಧಿಕಾರ ಅನುಭವಿಸಲು ಬಿಜೆಪಿಗೆ ಬಂದರು. ಪಕ್ಷದ ತತ್ವ, ಸಿದ್ಧಾಂತದಲ್ಲಿ ನಂಬಿಕೆ ಇಲ್ಲದ ಅವರು, ಇನ್ನೂ ತಮ್ಮ ರಾಜಕೀಯ ಗುರು ಶ್ರೀನಿವಾಸಗೌಡರಿಗೆ ನಿಷ್ಠೆಯಿಂದ ಇದ್ದಾರೆ. ಅಧಿಕಾರಾವಧಿ ಮುಗಿಯುತ್ತಿದ್ದಂತೆಯೇ ಜೆಡಿಎಸ್ ಸೇರಲಿದ್ದಾರೆ ಎಂದು ಮುಖಂಡರು ಆರೋಪಿಸಿದರು.

ಪಕ್ಷದ ವಿಚಾರವನ್ನು ಬೀದಿಗೆ ತರುವುದು ಬೇಡ. ಆರೋಪಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು ನಾಯಕರು ಕಿವಿಮಾತು ಹೇಳಿದರು ಎನ್ನಲಾಗಿದೆ. ಬಿಜೆಪಿ ಮುಖಂಡ ನವೀನ್‌ರಾಂ, ಕೋಮುಲ್‌ನ ಮಾಜಿ ಅಧ್ಯಕ್ಷ ಜಯಸಿಂಹಕೃಷ್ಣಪ್ಪ, ಜಿ.ಪಂ.ಸದಸ್ಯೆ ಮುತ್ಯಾಲಮ್ಮ, ಸುಂದರಪಾಳ್ಯ ಗ್ರಾ.ಪಂ. ಅಧ್ಯಕ್ಷ ಮುನಿಸ್ವಾಮಿರೆಡ್ಡಿ, ರಾಮಸಾಗರ ಗ್ರಾ.ಪಂ. ಅಧ್ಯಕ್ಷ ಹೇಮಾರೆಡ್ಡಿ, ಜಕ್ಕರಕೊಪ್ಪ ಗ್ರಾ.ಪಂ. ಅಧ್ಯಕ್ಷ ಅಮರ ನಾರಾಯಣರೆಡ್ಡಿ, ಕೃಷ್ಣಪ್ಪ ನಾಯ್ಡು, ತಾ.ಪಂ. ಸದಸ್ಯರಾದ ತೇಜ, ರಾಮಚಂದ್ರರೆಡ್ಡಿ, ಬಾಬು, ಎಪಿಎಂಸಿಯ ಮಾಜಿ ಅಧ್ಯಕ್ಷ ಡಾ.ಕೃಷ್ಣಮೂರ್ತಿ, ಕರಡಗೂರು ಹರಿರೆಡ್ಡಿ ಮುಂತಾದವರು ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT