ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಂಗಳೂರು:`ನಮಗೆ ಸ್ವಲ್ಪ ಹೊಲಾ ಐತ್ರಿ, ಆದ್ರ ಬರಗಾಲದಿಂದ ಬೆಳೆ ಅಷ್ಟಾಗಿ ಬರಾಂಗಿಲ್ರಿ, ನಾರಾಯಣ ನಾಲ್ಕು ತಿಂಗಳ ಹಿಂದಷ್ಟೇ ಲಗ್ನಾ ಆಗ್ಯಾನ್ರಿ, ಆದ್ರ ಇಂದ್ ಅವ್ನ ಪತ್ತೇನೇ ಇಲ್ಲ. ನನ್ ನಾದಿನಿ, ಮಾವಂಗೆ ಏನಂತ ಉತ್ತರ ಹೇಳ್ಲಿ...~

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಾರಾಯಣ ಅವರ ಅಣ್ಣ ಮಹಾಂತೇಶ ಗೌಡ ಕಾತರಕಿ ರೋದಿಸುತ್ತಿದ್ದರು. ಅವರ ಇತರ ಸಂಬಂಧಿಕರು ಮೌನಕ್ಕೆ ಶರಣಾಗಿದ್ದರು. ದೋಣಿ ದುರಂತದಲ್ಲಿ ಗಾಯಗೊಂಡಿರುವ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು `ಸುಳ್ಳು~ ಹೇಳಿ ಅವರೆಲ್ಲ ಕೊಪ್ಪಳದಿಂದ ಇಲ್ಲಿಗೆ ಬಂದಿದ್ದರು.

ದೋಣಿ ಮುಳುಗಿ ಒಂದೂವರೆ ದಿನವಾದರೂ ನಾಪತ್ತೆಯಾದವರ ಬಗ್ಗೆ ಯಾವುದೇ ಸುಳಿವು ಸಿಗದೆ ಇದ್ದುದರಿಂದ ಅವರು ಕಂಗಾಲಾಗಿದ್ದರು.

ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಇಲ್ಲಿನ ಅಳಿವೆ ಬಾಗಿಲಿನ ಸಮೀಪ ಪ್ರಕ್ಷುಬ್ಧಗೊಂಡಿದ್ದ ಸಮುದ್ರದಲ್ಲಿ ದೋಣಿ ಮುಳುಗಿತ್ತು. ಒಟ್ಟು ಏಳು ಮಂದಿ ಇದ್ದರು. ಈ ಪೈಕಿ ತಿರುವನಂತಪುರದ ವಿನ್ಸೆಂಟ್ ಎಂಬವರನ್ನು ರಕ್ಷಿಸಲಾಗಿತ್ತು. ಉಳಿದವರು ಎಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ.

ಶುಕ್ರವಾರ ಬೆಳಿಗ್ಗೆ ಮಳೆ ಸುರಿದುದು ಬಿಟ್ಟರೆ ಬಳಿಕ ಬಿಸಿಲಿನ ವಾತಾವರಣ ಇತ್ತು. ಹಲವು ಮೀನುಗಾರಿಕಾ ದೊಣಿಗಳು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನ ಆಗಿಲ್ಲ.

ಕೊಪ್ಪಳ ಜಿಲ್ಲೆ ಹಿರೇಸಿಂದೋಳಿಗೆಯ ನಾರಾಯಣ (22) ಅವರು ಮೂರು ವರ್ಷಗಳಿಂದ ಮಂಗಳೂರಿನಲ್ಲಿ ಹಲವು ದೋಣಿಗಳಲ್ಲಿ ದುಡುಯುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆಯಷ್ಟೇ ಅವರು ಸೋದರ ಮಾವನ ಮಗಳನ್ನು ಮದುವೆಯಾಗಿದ್ದರು. ಪತ್ನಿಯನ್ನು ಇನ್ನೂ ಮನೆಗೆ ಕರೆತಂದಿರಲಿಲ್ಲ. ಈ ತಿಂಗಳು ಕರೆತರುವ ವಿಚಾರ ಮಾಡಿಕೊಂಡಿದ್ದರು. ಆಗಲೇ ಈ ದುರಂತ ಸಂಭವಿಸಿದೆ.

ಬುಧವಾರ ರಾತ್ರಿ 11.04ಕ್ಕೆ ನಾರಾಯಣ ಅವರು ಕೊನೆಯದಾಗಿ ತಮ್ಮ ಮೊಬೈಲ್‌ನಿಂದ ಊರಿಗೆ ಮಾತನಾಡಿದ್ದರು. `ನಮ್ಮ ದೋಣಿ ಅಪಾಯದಲ್ಲಿ ಸಿಲುಕಿದೆ. ಕಡಲಿನ ಅಬ್ಬರ ಇಳಿಯುವ ವರೆಗೆ ಕಡಲ ಮಧ್ಯದಲ್ಲೇ ಇರಲು ಮಾಲೀಕರು ತಿಳಿಸಿದ್ದಾರೆ, ನನ್ನ ಮೊಬೈಲ್‌ನಲ್ಲಿ    ಚಾರ್ಜ್ ಮುಗಿಯುತ್ತಿದೆ~ ಎಂದು ಅವರು ಹೇಳಿದ್ದರು. ಅದುವೇ ಅವರ ಕೊನೆಯ ಮಾತಾಗಿತ್ತು.

ಕೊಪ್ಪಳದವರೇ ಆದ ವೆಂಕಟೇಶ್ ಎಂಬವರಿಂದ ಮಾಹಿತಿ ತಿಳಿದ ಅಣ್ಣ ಮಹಾಂತೇಶ ಗೌಡ ಅವರಲ್ಲದೆ, ದೊಡ್ಡಪ್ಪ ಆರ್.ಎಲ್.ಮಾಣಿಪಾಟೀಲ್, ಇತರ ಸಂಬಂಧಿಕರಾದ ಸಿ.ಎಸ್.ಮಾಣಿಪಾಟೀಲ್, ಶಂಕ್ರಪ್ಪ ಗೋವಿಂದ ರೆಡ್ಡಿ, ಮುತ್ತು ಗೋವಿಂದರೆಡ್ಡಿ ಅವರು ಮಂಗಳೂರಿಗೆ ಆಗಮಿಸಿದ್ದರು.

ಎಲ್ಲಾದರೂ ನಾರಾಯಣ ಸಿಗುತ್ತಾನೋ ಎಂಬ ಆಶಾಭಾವನೆಯಿಂದ ತಂಡಗಳಾಗಿ ವಿಂಗಡಿಸಿಕೊಂಡು ಉಳ್ಳಾಲ ಕಡಲ ತೀರ, ಬೆಂಗ್ರೆ, ತಣ್ಣೀರುಬಾವಿಗಳಲ್ಲಿ ಶುಕ್ರವಾರ ಪೂರ್ತಿ ಹುಡುಕಾಡಿದರು. ಅವರ ಹುಡುಕಾಟದ ದೃಶ್ಯ ಮನಮಿಡಿಯುವಂತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT