ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಬದುಕಿದ್ದೆವು ಎನ್ನಲೂ ಗುರುತಿಲ್ಲ

ಇವರು ಜನಗಣತಿಯ ಲೆಕ್ಕಕ್ಕೂ ಸಿಗದವರು !
Last Updated 1 ಫೆಬ್ರುವರಿ 2013, 8:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಪುಟ್ಟತಿಮ್ಮನಹಳ್ಳಿಯಿಂದ ಕಲ್ಲಶೆಟ್ಟಹಳ್ಳಿ, ಮರಳಕುಂಟೆಯಿಂದ ಕಾಡದಿಬ್ಬೂರು, ಅಡವಿಗೊಲ್ಲವಾರಹಳ್ಳಿಯಿಂದ ಮಂಚನಬಲೆ ಹೀಗೆ ಹಳ್ಳಿಯಿಂದ ಹಳ್ಳಿಗೂ ಸುತ್ತಿದರೂ ಇವರಿಗೆ ಇಂದಿಗೂ ನೆಲೆಯಿಲ್ಲ, ಗುರುತಿಲ್ಲ.

`ಜನಗಣತಿ ವೇಳೆ ಸರ್ಕಾರ ಪ್ರತಿಯೊಂದನ್ನುಗಣನೆಗೆ ತೆಗೆದುಕೊಳ್ಳುತ್ತದೆ. ಆದರೆ ನಮ್ಮನ್ನು ಹೊರತುಪಡಿಸಿ' ಎಂದು ನಿರ್ಭಾವುಕರಾಗಿ ಹೇಳುವ ಆಂಧ್ರಪ್ರದೇಶದ ಕದಿರಿಯ ನಾಗೇಶ್. `ನಾವು ಅಲೆಮಾರಿಗಳು. ನಮಗೆ ಮತದಾನ ಮಾಡುವ ಹಕ್ಕಿನಿಂದ ಅಷ್ಟೇ ಅಲ್ಲ, ಜನಗಣತಿಯಲ್ಲೂ ನಮ್ಮ ಹೆಸರು ಮತ್ತು ಇತರ ಮಾಹಿತಿ ದಾಖಲಿಸುವ ಅವಕಾಶದಿಂದಲೂ ವಂಚಿತರಾಗ್ದ್ದಿದೆವೆ. ಅದಕ್ಕಾಗಿ ನಮ್ಮನ್ನು ಯಾವ ರಾಜಕಾರಣಿಯೂ ನಮ್ಮ ಬಗ್ಗೆ ಕ್ಯಾರೆ ಎನ್ನುವುದಿಲ್ಲ ಎಂದು ನೋವು ತೋಡಿಕೊಂಡರು.

ನೆರೆಯ ಆಂಧ್ರಪ್ರದೇಶದಿಂದ ಬಹಳಷ್ಟು ಮಂದಿ ಗಡಿ ದಾಟಿಕೊಂಡು ಜಿಲ್ಲೆಗೆ ಪ್ರವೇಶಿಸುತ್ತಿದ್ದು, ಸ್ಥಳಾವಕಾಶ ಸಿಕ್ಕ ಕಡೆಯಲ್ಲೆಲ್ಲ ಅವರು ಗುಡಿಸಲು ಹಾಕಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹರಕಲು ಬಟ್ಟೆ, ಗೋಣಿ ಚೀಲ, ಹೊದಿಕೆಗಳಿಂದ ಗುಡಿಸಲುಗಳನ್ನು ಸಿದ್ಧಪಡಿಸಿಕೊಂಡು ಮಳೆ, ಚಳಿ ಮತ್ತು ಬಿಸಿಲ ಲೆಕ್ಕಿಸದೆ ನವಜಾತ ಶಿಶು, ಗರ್ಭೀಣಿಯರೊಂದಿಗೆ ಜೀವನ ನಡೆಸುತ್ತಿದ್ದಾರೆ.

`ಇದೇ ಊರು ಮತ್ತು ಗ್ರಾಮದವರೆಂದೂ ಹೇಳಿಕೊಳ್ಳಲು ನಮ್ಮ ಬಳಿ ಖಚಿತ ವಿಳಾಸವೂ ಇಲ್ಲ. ಇವತ್ತು ಈ ಊರು, ನಾಳೆ ಮತ್ತೊಂದು ಮತ್ತೊಂದು ಊರು ಎಂಬಂತೆ ದಾರಿ ಎಲ್ಲೆಲ್ಲಿ ಕರೆದೊಯ್ಯುವುದೋ, ಅಲ್ಲಲ್ಲಿ ಹೋಗುತ್ತಿದ್ದೇವೆ. ಸುಭದ್ರ ಮತ್ತು ಖಚಿತ ನೆಲೆಯನ್ನೇ ಹೊಂದಿರದ ನಡೆದುಕೊಂಡು ಹೋಗುವುದಷ್ಟೇ ಗೊತ್ತು.

ನಾವು ಕಣ್ಮರೆಯಾದಾಗಲೇ ಅಲೆಮಾರಿ ಜೀವನವೂ ಕೊನೆಯಾಗುತ್ತದೆ' ಎನ್ನುತ್ತಾರೆ ಅಲೆಮಾರಿ ಸಮುದಾಯದವರು.

ನೆರೆಯ ಆಂಧ್ರಪ್ರದೇಶದಲ್ಲಿ ಭೀಕರ ಬರಗಾಲ ಮತ್ತು ಇನ್ನಿತರ ಸಮಸ್ಯೆಗಳು ಕಾಡುತ್ತಿದ್ದು, ಅಲ್ಲಿನ ನಿರ್ಗತಿಕರು ಮತ್ತು ಬಡವರು ಉದ್ಯೋಗಾವಕಾಶ ಮತ್ತು ಆಸರೆಯ ನಿರೀಕ್ಷೆಯಲ್ಲಿ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಾರೆ. ಕೆಲವರು ಬಾಗೇಪಲ್ಲಿ ಮತ್ತು ಚಿಂತಾಮಣಿ ಮೂಲಕ ಪ್ರವೇಶಿಸಿದರೆ, ಇನ್ನೂ ಕೆಲವರು ಕೋಲಾರ ಮೂಲಕ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ. ಅತ್ತ ನಗರಪ್ರದೇಶದಲ್ಲಿಯೂ ಇರಲಾಗದೇ, ಇತ್ತ ಗ್ರಾಮೀಣ ಪ್ರದೇಶದಲ್ಲೂ ಜೀವನ ಮಾಡಲಾಗದೇ ಅನಿಶ್ಚಿತತೆಯಲ್ಲೇ ಒಂದೊಂದೇ ದಿನಗಳನ್ನು ಕಳೆಯುತ್ತಿದ್ದಾರೆ.

ನೆರೆ ರಾಜ್ಯದಿಂದ ಬಂದಿರುವ ನೂರಾರು ಕುಟುಂಬಗಳು ಗಡಿಗ್ರಾಮಗಳಲ್ಲಿ ವಾಸವಾಗಿದ್ದು, ಅಲ್ಲಿನ ಸ್ಥಳೀಯರ ತೀವ್ರ ಪ್ರತಿಭಟನೆ ಮತ್ತು ಪ್ರತಿರೋಧಕ್ಕೂ ಗುರಿಯಾಗುತ್ತಿದ್ದಾರೆ. ಗ್ರಾಮಸ್ಥರು ಅವರನ್ನು ಸಂಶಯದಿಂದ ನೋಡುತ್ತಿದ್ದು, ಸ್ಥಳವನ್ನು ತೆರವುಗೊಳಿಸುವಂತೆ ಒತ್ತಡವೂ ಹೇರುತ್ತಿದ್ದಾರೆ.

`ಬಡ ಕುಟುಂಬದಲ್ಲಿ ಹುಟ್ಟಿದ ನನಗೆ ಶಾಲೆಯಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಗ್ರಾಮಗಳಲ್ಲಿ ಜಮೀನ್ದಾರರ ಹೊಲಗದ್ದೆಗಳಲ್ಲಿ ಕೂಲಿಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ಸಿಗುತ್ತಿದ್ದ ಅಲ್ಪಸ್ವಲ್ಪ ನಂಬಿಕೊಂಡು ಬದುಕುತ್ತಿದ್ದೆ. ಮದುವೆಯಾಯಿತು. ಮಕ್ಕಳಾದವು. ಆದರೆ ಜಮೀನ್ದಾರರ ತಮ್ಮ ಜಮೀನನ್ನು ಬೇರೆಯವರಿಗೆ ಮಾರಿದಾಗ, ನಾನು ಕೂಲಿ ಕೆಲಸ ಕಳೆದುಕೊಳ್ಳಬೇಕಾಯಿತು.

ಮಳೆಯಾಗದೇ ಬರಗಾಲ ಆವರಿಸಿದ ಕಾರಣ, ಬೇರೆ ಗ್ರಾಮಗಳಲ್ಲೂ ಕೆಲಸ ಸಿಗಲಿಲ್ಲ. ಬೇರೆ ಮಾರ್ಗ ಕಾಣದೇ ಆಂಧ್ರಪ್ರದೇಶ ಬಿಟ್ಟು ಇಲ್ಲಿಗೆ ಕುಟುಂಬ ಸಮೇತ ಬಂದಿದ್ದೇನೆ. ನನ್ನ ಬಳಿ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್ ಇಲ್ಲ. ಚಿಕ್ಕಬಳ್ಳಾಪುರದಲ್ಲೇ ಸಣ್ಣಪುಟ್ಟ ಕೆಲಸ ಹುಡುಕಿಕೊಂಡು ಜೀವನ ನಡೆಸುತ್ತಿದ್ದೇನೆ. ಆದರೆ ಇಲ್ಲಿ ಎಷ್ಟು ದಿನ ಇರುತ್ತೇವೋ ಗೊತ್ತಿಲ್ಲ' ಎಂದು ನಾಗೇಶ್ `ಪ್ರಜಾವಾಣಿ'ಗೆ ತಿಳಿಸಿದರು.

`ಚಿಕ್ಕಬಳ್ಳಾಪುರ ನಗರದ ಬರಡು ಜಮೀನಿನಲ್ಲಿ ಗುಡಿಸಲು ಹಾಕಿಕೊಳ್ಳಲು ಯಾರೂ ಅವಕಾಶ ನೀಡಲಿಲ್ಲ. ಗುಡಿಸಲು ಹಾಕಿಕೊಂಡು ಎರಡೇ ದಿನಕ್ಕೆ ನಮ್ಮನ್ನೂ ಅಲ್ಲಿಂದ ಖಾಲಿ ಮಾಡಿಸಲಾಯಿತು. ಗ್ರಾಮಗಳಲ್ಲೂ ನಮಗೆ ಸ್ಥಳಾವಕಾಶ ಸಿಗಲಿಲ್ಲ. ಕೆಲವರು ಒಪ್ಪಿಗೆ ಕೊಟ್ಟರಾದರೂ ಕೆಲವರಿಂದ ವಿರೋಧ ವ್ಯಕ್ತವಾಯಿತು.

ಆದರೂ ಕೈಕಾಲು ಹಿಡಿದುಕೊಂಡು ಕಾಡಿ-ಬೇಡಿ ಗ್ರಾಮವೊಂದರ ಗಡಿಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದೇವೆ. ಆದರೆ ಇಲ್ಲಿಂದ ಯಾವಾಗ ನಮ್ಮನ್ನು ಓಡಿಸಲಾಗುವುದೋ ಗೊತ್ತಿಲ್ಲ' ಎಂದು ಅವರು ಹೇಳಿದರು.

`ನಮ್ಮಂತೆಯೇ ನೂರಾರು ಕುಟುಂಬಗಳು ಗಡಿಗ್ರಾಮಗಳಲ್ಲಿ ಹೀಗೆಯೇ ನೆಲೆ ಕಂಡುಕೊಂಡಿದ್ದು, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಬದುಕುತ್ತಿದ್ದಾರೆ. ಬರಡು ಜಮೀನುಗಳಲ್ಲಿ ವಾಸವಿರುವ ನಮಗೆ ಇಲ್ಲಿ ಹಾವುಗಳ ಕಾಟ ವಿಪರೀತವಿದೆ. ಅವುಗಳಿಂದ ಕಚ್ಚಿಸಿಕೊಂಡಿದ್ದೇವೆ.

ಒಂದು ವೇಳೆ ಪ್ರಾಣಕ್ಕೆ ಅಪಾಯವಾದರೆ, ಇಲ್ಲಿಯೇ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಆಸ್ಪತ್ರೆಗೆ ಹೋಗಲು ನಮ್ಮ ಬಳಿ ವಾಹನವೂ ಇಲ್ಲ. ಸರಿಯಾದ ವಿಳಾಸವೂ ಗೊತ್ತಿಲ್ಲ. ಇನ್ನು ನಮ್ಮ ಮಕ್ಕಳು ಕೂಡ ಶಿಕ್ಷಣವಿಲ್ಲದೇ ಹೀಗೆ ಅಲೆಮಾರಿ ಜೀವನ ನಡೆಸಬೇಕು.

ಬದುಕಿರುವಷ್ಟು ದಿನ ಹೀಗೆಯೇ ಬದುಕಬೇಕು. ಈ ದೇಶದ ನಿವಾಸಿಗಳಾಗಿದ್ದರೂ ಲೆಕ್ಕಕ್ಕೆ ಇಲ್ಲದಂತೆ. ನಾವು ಬದುಕಿದರೂ ಅಥವಾ ಸತ್ತರೂ ನಮ್ಮ ಗುರುತು ಕೂಡ ಇಲ್ಲಿ ಇರುವುದಿಲ್ಲ' ಎಂದು ಅವರು ನೋವಿನಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT