ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೂ ಇದ್ದೇವೆ... ಕಾಣುತ್ತಿಲ್ಲವೇ?

ಇಂದು ವಿಶ್ವ ಅಂಗವಿಕಲರ ದಿನಾಚರಣೆ
Last Updated 3 ಡಿಸೆಂಬರ್ 2013, 6:36 IST
ಅಕ್ಷರ ಗಾತ್ರ

ತುಮಕೂರು: ನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಂಚಾಯಿತಿ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳು ಶೇ 3ರಷ್ಟು ಹಣವನ್ನು ಅಂಗವಿಕಲರ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಬೇಕು ಎಂಬ ನಿಯಮವಿದೆ. ಆದರೆ ಯಾವುದೇ ಸಂಸ್ಥೆ ತನ್ನ ಮೀಸಲು ಹಣವನ್ನು ಅಂಗವಿಕಲರಿಗೆ ಸಂಪೂರ್ಣವಾಗಿ ವೆಚ್ಚ ಮಾಡುತ್ತಿಲ್ಲ. ಬದಲಿಗೆ ವರ್ಷದಲ್ಲಿ ಒಂದೆರಡು ಟ್ರೈಸಿಕಲ್‌ ಅಥವಾ ಸಣ್ಣಪುಟ್ಟ ವಸ್ತುಗಳನ್ನು ನೀಡಿ ಕೈತೊಳೆದುಕೊಳ್ಳಲಾಗುತ್ತಿದೆ. ಇದರಿಂದ ಅಂಗವಿಕಲರಿಗೆ ನಿಯಮದಂತೆ ಸಿಗಬೇಕಾದ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬ ಅಸಮಾಧಾನವಿದೆ.

ಅಂಗವಿಕಲರ ಕಲ್ಯಾಣ ಇಲಾಖೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಯಡಿ ಹಣ ಬರುತ್ತಿದ್ದು, ಅದನ್ನು ನೇರವಾಗಿ ಬಳಕೆ ಮಾಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಕಲ್ಯಾಣ ಇಲಾಖೆಯ ಮೂಲಕವೂ ವೆಚ್ಚ ಮಾಡಲು ಅವಕಾಶವಿದ್ದರೂ, ಹಣವನ್ನು ಬಳಕೆ ಮಾಡುತ್ತಿಲ್ಲ.

ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಈ ಸಾಲಿನಲ್ಲಿ 79 ಮಂದಿಗೆ ಟ್ರೈಸಿಕಲ್‌ ನೀಡಲಾಗಿದೆ. ಆಧಾರ್‌ ಯೋಜನೆಯಡಿ ಸ್ವಂತ ಉದ್ಯೋಗ ಕೈಗೊಳ್ಳಲು 16 ಮಂದಿಗೆ ರೂ. 5.6 ಲಕ್ಷ ಧನ ಸಹಾಯ ನೀಡಲಾಗಿದೆ. ಒಬ್ಬರಿಗೆ ರೂ. 35 ಸಾವಿರ ವೈದ್ಯಕೀಯ ಭತ್ಯೆ ನೀಡಲಾಗಿದೆ. ಮೂವರಿಗೆ ವ್ಹೀಲ್‌ಚೇರ್‌ ಮತ್ತು 688 ವಿದ್ಯಾರ್ಥಿಗಳಿಗೆ ರೂ. 6.2 ಲಕ್ಷ ವಿದ್ಯಾರ್ಥಿ ವೇತನ ನೀಡಲಾಗಿದೆ.

ಅಂಗವಿಕಲರನ್ನು ಮದುವೆಯಾಗುವರನ್ನು ಪ್ರೋತ್ಸಾಹಿಸುವ ಸಲುವಾಗಿ ವಿವಾಹ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕಳೆದ ವರ್ಷ ಈ ಯೋಜನೆ ಜಾರಿಯಾಗಿದ್ದು, ರೂ. 50 ಸಾವಿರ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಈ ವರ್ಷ 5– 6 ಮಂದಿ ಅಂಗವಿಕಲರನ್ನು ಮದುವೆಯಾಗಿದ್ದು, ಅವರಿಗೆ ಯೋಜನೆಯ ಪ್ರಯೋಜನ ದೊರೆಯಲಿದೆ.

29 ಸಾವಿರ ಅಂಗವಿಕಲರು:  ಜಿಲ್ಲೆಯಲ್ಲಿ 29 ಸಾವಿರ ಅಂಗವಿಕಲರಿದ್ದಾರೆಂದು ಅಂಗವಿಕಲರ ಗಣತಿಯಿಂದ ಮಾಹಿತಿ ದೊರೆತಿದೆ. ಇದರಲ್ಲಿ ಪುರುಷರು 13882 ಮತ್ತು ಮಹಿಳೆಯರು 15126 ಮಂದಿ ಇದ್ದಾರೆ. ಇವರಲ್ಲಿ 14 ಸಾವಿರಕ್ಕೂ ಹೆಚ್ಚು ಮಂದಿ ದೈಹಿಕ ಅಂಗವಿಕಲರಿದ್ದಾರೆ.

ಇದರಲ್ಲಿ ಮಧುಗಿರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 3786 ಮಂದಿ ಅಂಗವಿಕಲರಿದ್ದಾರೆ. ಶಿರಾ 2ನೇ ಸ್ಥಾನದಲ್ಲಿದ್ದು, 3622 ಅಂಗವಿಕಲರಿದ್ದಾರೆ. ಆದರೆ ಅಂಗವಿಕಲರ ಕಲ್ಯಾಣ ಇಲಾಖೆ 25 ಸಾವಿರ ಮಂದಿಗೆ ಅಂಗವಿಕಲರ ಪ್ರಮಾಣ ಪತ್ರ ನೀಡಿದೆ. ಸುಮಾರು 4 ಸಾವಿರ ಮಂದಿಗೆ ಪ್ರಮಾಣ ಪತ್ರ ದೊರೆತಿಲ್ಲ.

ಇವರಲ್ಲಿ ಕೆಲವರು ಹಳೆಯ ಪ್ರಮಾಣ ಪತ್ರ ಬಳಕೆ ಮಾಡುತ್ತಿದ್ದಾರೆ. ಪ್ರಮಾಣ ಪತ್ರ ಇಲ್ಲದಿರುವ ಅಂಗವಿಕಲರು ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಎಲ್ಲ ಅಂಗವಿಕಲರಿಗೂ ಸರ್ಕಾರಿ ಸೌಲಭ್ಯ ಸರಿಯಾಗಿ ದೊರೆಯುತ್ತಿಲ್ಲ ಎನ್ನುತ್ತಾರೆ ಜಿಲ್ಲಾ ಅಂಗವಿಕಲರ ಸಂಘದ ಗಂಗರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT