ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖರ ಫಲಿತಾಂಶಕ್ಕೆ ಹಾಕ್-ಐ

Last Updated 5 ಜೂನ್ 2012, 19:30 IST
ಅಕ್ಷರ ಗಾತ್ರ

ಹಿಂದೆ ಜನರು ಎತ್ತಿನ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದರು. ಪತ್ರ ರವಾನಿಸಲು ಪಾರಿವಾಳ ಬಳಸುತ್ತಿದ್ದರು. ಈಗಲೂ ಅದನ್ನು ಮುಂದುವರಿಸಬೇಕೇ? ಈಗ ತಂತ್ರಜ್ಞಾನವಿಲ್ಲದೆ ಬದುಕೇ ಇಲ್ಲ ಎನ್ನುವಂತಾಗಿದೆ. ಸುಲಭದ ಹಾದಿ ಇದ್ದರೂ ಸಮಯವನ್ನೇಕೆ ಸುಖಾಸುಮ್ಮನೇ ವ್ಯರ್ಥ ಮಾಡಬೇಕು?~

-ಕ್ರೀಡೆಯಲ್ಲಿ ತಂತ್ರಜ್ಞಾನ ಅಳವಡಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಮುಂದಿಡುವ ಪ್ರಶ್ನೆ ಇದು.
ಹೌದು, ಕ್ರೀಡೆಯಲ್ಲಿ ತಂತ್ರಜ್ಞಾನ ಬಳಸಬೇಕೇ ಅಥವಾ ಬೇಡವೇ? ಎಂಬ ಬಗ್ಗೆ ಈಗ ತುಂಬಾ ಚರ್ಚೆ ನಡೆಯುತ್ತಿದೆ.

ಆದರೆ ನಿಖರತೆ ದೃಷ್ಟಿಯಿಂದ ತಂತ್ರಜ್ಞಾನದತ್ತ ಒಲವು ಹೆಚ್ಚುತ್ತಿದೆ. ಕ್ರೀಡೆಗಳಲ್ಲಿ ಬಹುಬೇಗ ಹಾಗೂ ನಿಖರವಾದ ತೀರ್ಪು ಪಡೆಯಲು ತಂತ್ರಜ್ಞಾನ ಸಹಕಾರಿ. ಅಂಪೈರ್‌ಗಳ ಕೆಲಸವನ್ನು ಅದು ಸುಲಭ ಮಾಡಿದೆ.
 
ಏಕೆಂದರೆ ಅಂಪೈರ್‌ಗೆ ಅನುಮಾನ ಬಂದರೆ ತಂತ್ರಜ್ಞಾನದ ಸಹಾಯ ಪಡೆಯಬಹುದು ಅಥವಾ ಅಂಪೈರ್ ತಪ್ಪು ಮಾಡಿದ್ದಾರೆ ಎಂದು ಗೊತ್ತಾದಾಗ ಇದರ ನೆರವು ಪಡೆದು ಅನುಮಾನವನ್ನು ಬಗೆಹರಿಸಿಕೊಳ್ಳಬಹುದು. ಮಾನವ ಸಹಜ ತಪ್ಪುಗಳನ್ನು ಕಡಿಮೆ ಮಾಡಬಹುದು.

ಆ ತಂತ್ರಜ್ಞಾನಗಳಲ್ಲಿ `ಹಾಕ್-ಐ~ ಕೂಡ ಒಂದು. ಟೆನಿಸ್, ಕ್ರಿಕೆಟ್, ಫುಟ್‌ಬಾಲ್ ಹಾಗೂ ಸ್ನೂಕರ್‌ನಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಚೆಂಡಿನ ಹಾದಿಯನ್ನು ಗ್ರಾಫಿಕ್ ಸಹಾಯದಿಂದ ನಿಖರವಾಗಿ ಗುರುತಿಸಲು ಇದು ನೆರವಾಗುತ್ತದೆ. ಕಂಪ್ಯೂಟರ್ ಮೂಲಕ ಇದು ಕೆಲಸ ಮಾಡುತ್ತದೆ.

ಈ ತಂತ್ರಜ್ಞಾನದಲ್ಲಿ ಹೈ ಸ್ಪೀಡ್ ಸಾಮರ್ಥ್ಯದ ಆರು ವಿಡಿಯೊ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ 10 ಕ್ಯಾಮೆರಾ ಬಳಸಿ ಚೆಂಡಿನ ಚಲನೆಯ ಚಿತ್ರ ತೆಗೆಯಲಾಗಿತ್ತು.

ಚೆಂಡಿನ ಚಲನೆಯ ಪ್ರತಿ ಫ್ರೇಮ್‌ಗಳನ್ನು ಈ ಕ್ಯಾಮೆರಾಗಳು ಏಕಕಾಲದಲ್ಲಿ ದಾಖಲಿಸಿಕೊಳ್ಳುತ್ತವೆ. ಸೆಕೆಂಡ್‌ಗೆ 60 ಫ್ರೇಮ್‌ಗಳನ್ನು ಸೆರೆ ಹಿಡಿಯುವ ಸಾಮರ್ಥ್ಯವಿದೆ. ಒಂದು ಕ್ಯಾಮೆರಾ ಒಂದು ಸೆಕೆಂಡ್‌ಗೆ ಚಲಿಸುವ ಚೆಂಡಿನ ನೂರು ಚಿತ್ರಗಳನ್ನು ತೆಗೆಯುತ್ತದೆ.

ಚೆಂಡು ಗಾಳಿಯಲ್ದ್ದ್‌ದಾಗಲೇ ಅದು ಫೋಟೊ ತೆಗೆಯಲು ಶುರು ಮಾಡುತ್ತದೆ. ಈ ಕ್ಯಾಮೆರಾಗಳು ತೆಗೆದು ಫೋಟೊಗಳನ್ನು ಒಂದುಗೂಡಿಸಲಾಗುತ್ತದೆ. ಹಾಗಾಗಿ ಚೆಂಡಿನ ಪೂರ್ಣ ಚಲನವಲನ ಗೊತ್ತಾಗುತ್ತದೆ. ಕಂಪ್ಯೂಟರ್ ಸಹಾಯದಿಂದ ಅನಿಮೇಷನ್ ಚಿತ್ರದ ಮೂಲಕ ಚೆಂಡು ಗಾಳಿಯಲ್ಲಿ ತೇಲಿದ್ದು ಹಾಗೂ ಪಿಚ್ ಆಗಿದ್ದನ್ನು ವಿವರಿಸಲಾಗುತ್ತದೆ. 3ಡಿ ತಂತ್ರಜ್ಞಾನವನ್ನೂ ಇಲ್ಲಿ ಬಳಸಲಾಗುತ್ತದೆ.

ರಿಪ್ಲೇನಲ್ಲಿ ಗೊತ್ತಾಗದ ಅಂಶಗಳನ್ನು ಇದರಲ್ಲಿ ಪತ್ತೆ ಹಚ್ಚಬಹುದು. ಹಾಗಾಗಿ ಟಿವಿ ಕ್ಯಾಮೆರಾಗಳಿಗಿಂತ ಇದು `ಪವರ್‌ಫುಲ್~. ಕ್ರಿಕೆಟ್‌ನಲ್ಲಿ ಚೆಂಡಿನ ಹಾದಿಯನ್ನು ಗುರುತಿಸಿ ಎಲ್‌ಬಿಡಬ್ಲ್ಯು ಔಟ್ ನಿರ್ಧರಿಸಬಹುದು. ಒಬ್ಬ ಬ್ಯಾಟ್ಸ್ ಮನ್ ಪ್ಯಾಡ್‌ಗೆ ಬಡಿದ ಚೆಂಡಿನ ಮುಂದಿನ ಹಾದಿಯ ಸಾಧ್ಯತೆಯನ್ನು ಇದು ಗುರುತಿಸುತ್ತದೆ.
 
ಈ ಮೂಲಕ ಚೆಂಡು ವಿಕೆಟ್‌ಗೆ ಬಡಿಯುತ್ತಿತ್ತೊ ಇಲ್ಲವೊ ಎಂಬುದನ್ನು ಪತ್ತೆ ಹಚ್ಚಬಹುದು. ಒಂದು ಓವರ್‌ನ್ಲ್ಲಲಿ ಆರು ಎಸೆತಗಳು ಯಾವ ರೀತಿ ಇದ್ದವು ಎಂಬುದನ್ನು ಗ್ರಾಫಿಕ್ ಮೂಲಕ ಈ ಪದ್ಧತಿಯನ್ನು ಬಳಸಿ ತೋರಿಸುವುದನ್ನು ನೀವು ಟಿವಿಯಲ್ಲಿ ವೀಕ್ಷಿಸಿರಬಹುದು.

ಟೆನಿಸ್‌ನಲ್ಲಿ (ಲೈನ್ ಕಾಲ್ಸ್) ಚೆಂಡು ಕೋರ್ಟ್‌ನ ಗೆರೆಯಿಂದ ಹೊರಬಿದ್ದಿದೆಯೇ ಅಥವಾ ಒಳಗೆ ಬಿದ್ದಿದೆಯೇ ಎಂಬುದನ್ನು ಪತ್ತೆ ಹಚ್ಚಬಹುದು. ಗೆರೆಗೆ ಕೂದಲೆಳೆಯಷ್ಟು ಚೆಂಡು ತಾಗಿದ್ದರೂ ಈ ತಂತ್ರಜ್ಞಾನದಿಂದ ಪತ್ತೆ ಹಚ್ಚಬಹುದು. ಆದರೆ ಟಿವಿ ರಿಪ್ಲೇನಲ್ಲಿ ಇದು ಅಸಾಧ್ಯ.

ಈ ವಿಡಿಯೊ ಕ್ಯಾಮೆರಾಗಳನ್ನು ಟೆನಿಸ್‌ನಲ್ಲಿ ಕೋರ್ಟ್‌ಗೆ ಗುರಿಯಾಗಿಸಿ ಹಾಗೂ ಕ್ರಿಕೆಟ್‌ನಲ್ಲಿ ಪಿಚ್‌ಗೆ ಗುರಿಯಾಗಿಸಿ ಜೋಡಿಸಿರಲಾಗುತ್ತದೆ. ಈ ಕ್ಯಾಮೆರಾಗಳು ಇಡೀ ಪಂದ್ಯ ಮುಗಿಯುವವರೆಗೆ ಅತ್ತಿತ್ತ ಚಲಿಸುವಂತಿಲ್ಲ.

ಹಾಕ್-ಐ ತಂತ್ರಜ್ಞಾನದ ಪ್ರಕಾರ ಪ್ರತಿ ತಂಡ ತೀರ್ಪು ಪುನರ್ ಪರಿಶೀಲನೆಗಾಗಿ ಮೂರು ಬಾರಿ ಮೇಲ್ಮನವಿ ಸಲ್ಲಿಸಬಹುದು. ಅಕಸ್ಮಾತ್ ತೀರ್ಪು ಆತನ ಅಥವಾ ತಂಡದ ವಿರುದ್ಧವಾಗಿ ಬಂದರೆ ಒಂದು ಅವಕಾಶ ಕಳೆದುಕೊಳ್ಳುತ್ತಾನೆ. ಪರವಾಗಿದ್ದರೆ ಆ ಅವಕಾಶವನ್ನು ಮತ್ತೆ ಉಪಯೋಗಿಸಿಕೊಳ್ಳಬಹುದು.

ಇದಷ್ಟೇ ಅಲ್ಲ; ಪಂದ್ಯ ಮುಗಿದ ಮೇಲೆ ಆಟಗಾರರು ತಮ್ಮ ಆಟದ ವಿಧಾನವನ್ನು ಪರಿಶೀಲಿಸಬಹುದು. ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ತಿದ್ದಿಕೊಳ್ಳಲು ಈ ತಂತ್ರಜ್ಞಾನ ಸಹಾಯಕ. ಕೋಚ್‌ಗಳಿಗೆ ಕೂಡ ಇದು ಮಾರ್ಗದರ್ಶಕ. ಎದುರಾಳಿಯ ಆಟದ ವೈಖರಿಯನ್ನು ತಿಳಿಯಬಹುದು. 

ಇದು ಇಂಗ್ಲೆಂಡ್‌ನ ಕಂಪ್ಯೂಟರ್ ವಿಜ್ಞಾನಿ ಡಾ.ಪಾಲ್ ಹಾಕಿನ್ಸ್ ಅವರ ಆವಿಷ್ಕಾರ. ಇದನ್ನು ಮೊದಲು ಕ್ರಿಕೆಟ್‌ನಲ್ಲಿ ಬಳಸಲು ಉದ್ದೇಶಿಸಿದ್ದರು. ಬಳಿಕ ಬೇರೆ ಕ್ರೀಡೆಗಳತ್ತಲೂ ಇದರ ಚಿತ್ತ  ಹರಿಯಿತು. 2001ರಿಂದ ಇದು ಬಳಕೆಯಲ್ಲಿದೆ.

2001ರ ಮೇನಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಇದನ್ನು ಮೊದಲ ಬಾರಿ ಬಳಸಲಾಗಿತ್ತು. ಅಂಪೈರ್ ನೀಡಿದ್ದ ತೀರ್ಪಿನ ಮರು ಪರಿಶೀಲನೆಗೆ (ಡಿಆರ್‌ಎಸ್) ಇದರ ಮೊರೆ ಹೋಗಲಾಗಿತ್ತು. ಭಾರತದಲ್ಲಿ ನಡೆದ 2011ರ ವಿಶ್ವಕಪ್‌ನ್ಲ್ಲಲೂ ಇದನ್ನು ಬಳಸಲಾಗಿತ್ತು. 2006ರ್ಲ್ಲಲಿ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಮೊದಲು ಈ ತಂತ್ರಜ್ಞಾನದ ಮೊರೆ ಹೋಗಲಾಗಿತ್ತು.

ಈ ತಂತ್ರಜ್ಞಾನಕ್ಕೆ ಆಟಗಾರರಲ್ಲಿಯೇ ಪರ ವಿರೋಧ ವ್ಯಕ್ತವಾಗುತ್ತಿದೆ. ಕ್ರಿಕೆಟ್‌ನಲ್ಲಿ ಇದನ್ನು ಅಳವಡಿಸಲು ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ದೋನಿ ಒಪ್ಪುತ್ತಿಲ್ಲ. ಆದರೆ ವೀರೇಂದ್ರ ಸೆಹ್ವಾಗ್ ಸೇರಿದಂತೆ ವಿದೇಶದ ಪ್ರಮುಖ ಆಟಗಾರರು ಒಲವು ಹೊಂದಿದ್ದಾರೆ. ಟೆನಿಸ್‌ನಲ್ಲಿ ರಫೆಲ್ ನಡಾಲ್, ಆ್ಯಂಡ್ರೆ ಅಗಾಸ್ಸಿ ಅವರಂಥವರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ ರೋಜರ್ ಫೆಡರರ್ ವಿರೋಧಿಸ್ದ್ದಿದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT