ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಸುದ್ದಿ : ಕುಂದು ಕೊರತೆ

Last Updated 10 ಡಿಸೆಂಬರ್ 2012, 12:44 IST
ಅಕ್ಷರ ಗಾತ್ರ

ರಾಜಕಾಲುವೆ ದುರಸ್ತಿಗೊಳಿಸಿ
ಬೆಂಗಳೂರು ನಗರ ಆರ್.ಟಿ. ನಗರಕ್ಕೆ ಸಮೀಪದಲ್ಲಿ ಇರುವ (ವಾರ್ಡ್ ನಂ. 33) ಬಾಬುರೆಡ್ಡಿ ಲೇಔಟ್, ಮನ್ನಾರಾಯನಪಾಳ್ಯ ಎಕ್ಸ್‌ಟೆನ್ಷನ್, 2ನೇ ಕ್ರಾಸ್‌ನಲ್ಲಿ ರಾಜಕಾಲುವೆಗೆ ಒಳಚರಂಡಿ ಪೈಪ್‌ಗಳನ್ನು ಅಳವಡಿಸಿದ್ದಾರೆ. ರಾಜಕಾಲುವೆಯಲ್ಲಿ ಐದು ಅಡಿ ಎತ್ತರಕ್ಕೆ ಮಣ್ಣು ತುಂಬಿಕೊಂಡಿದೆ.

ಮಹಾನಗರ ಪಾಲಿಕೆ  ಸದಸ್ಯರಿಗೆ ಹಾಗೂ ಸಂಬಂಧಿಸಿದ ಎಂಜಿನಿಯರ್‌ಗೆ ಫೋಟೊದೊಂದಿಗೆ ದೂರು ಸಲ್ಲಿಸಿದ್ದೇವೆ. ದುರಸ್ತಿಗೊಳಿಸಲು ಮನವಿ ಪತ್ರವನ್ನೂ ನೀಡಿದ್ದೇವೆ.ನಮ್ಮ ಮನೆಗಳ ಸಂಪ್‌ಗೆ ಮತ್ತು ಬಾವಿಗಳಿಗೆ ಮಲಿನ ನೀರು ಬೆರೆಯುತ್ತಿದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಗಮನಹರಿಸಿ ಸರಿಪಡಿಸಲು ವಿನಂತಿ
-ನಾಗೇಂದ್ರ ಎನ್. (33 ಜನರ ಸಹಿ ಇದೆ)

ತಂಗುದಾಣ ನಿರ್ಮಿಸಿ
ಪದ್ಮನಾಭನಗರದ ಅತ್ತಿಮಬ್ಬೆ ಮುಖ್ಯರಸ್ತೆಯಲ್ಲಿ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಕಟ್ಟಡದ ಎದುರು ತಂಗುದಾಣವನ್ನು ಕೆಡವಿದ್ದಾರೆ. ಇದುವರೆಗೂ ಅಲ್ಲಿ ಯಾವುದೇ ಕಾಮಗಾರಿ ನಡೆಯುವ ಸೂಚನೆಯೂ ಕಂಡುಬರುತ್ತಿಲ್ಲ. ಕೂಡಲೆ ಅಲ್ಲಿ ಸುಸಜ್ಜಿತ ತಂಗುದಾಣ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ರಾಮಕೃಷ್ಣ ಆಶ್ರಮದ ಬಳಿಯೂ ಒಂದು ಬಸ್ ತಂಗುದಾಣ ನಿರ್ಮಿಸಲು ಮನವಿ.
- ವಿ. ಕೆ. ಸುಬ್ಬಣ್ಣ

ಬಸ್ ಸಂಚಾರ ಆರಂಭಿಸಿ
ಬಿ.ಎಂ.ಟಿ.ಸಿ. ಎ ಎಸ್ ಮಾರ್ಗಗಳಿಂದ ತುಂಬಾ ಅನುಕೂಲವಾಗಿದೆ. ಇದರಂತೆಯೇ ಬ್ಯಾಡರಹಳ್ಳಿಯಿಂದ ಮೈಸೂರು ರಸ್ತೆ, ಬಿಡದಿ, ಕೆಂಗೇರಿ, ರಾಜರಾಜೇಶ್ವರಿ ನಗರಕ್ಕೆ ಬಸ್ಸು ಸಂಚಾರ ಮಾಡಬೇಕಾಗಿ ವಿನಂತಿ. ಮಾರ್ಗವನ್ನು ಈ ರೀತಿ ಕೋರಲಾಗಿದೆ. - ಬ್ಯಾಡರಹಳ್ಳಿಯಿಂದ ಪ್ರಾರಂಭವಾಗಿ ಭಾರತನಗರ, ಮುದ್ದಿನಪಾಳ್ಯ, ಮಲ್ಲತ್ತಹಳ್ಳಿ ಕೆರೆ, ವಿದ್ಯಾನಿಕೇತನ ಪಬ್ಲಿಕ್ ಶಾಲೆ, ಅಮ್ಮ ಆಶ್ರಮ, ಮರಿಯಪ್ಪನಪಾಳ್ಯ, ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ, ಮೈಸೂರು ರಸ್ತೆ, ರಾಜರಾಜೇಶ್ವರಿ ನಗರ - ದೇವಸ್ಥಾನ, ಕೆಂಗೇರಿ, ಬಿಡದಿ ಹೀಗೆ ಹೊಸ ಬಸ್ಸು ಸಂಚಾರವನ್ನು ಪ್ರಾರಂಭ ಮಾಡಬೇಕಾಗಿ ವಿನಂತಿ. ಈ ಮಾರ್ಗದಲ್ಲಿ ರಸ್ತೆಗಳ ಗುಣಮಟ್ಟವೂ ಸಂಚಾರಕ್ಕೆ ಯೋಗ್ಯವಾಗಿದೆ.
- ಎಸ್. ರಾಜಶೇಖರ್

ಸುರಂಗ ಮಾರ್ಗ ಸ್ವಚ್ಛಗೊಳಿಸಿ
ಬಳ್ಳಾರಿ ರಸ್ತೆಯ ಸಿ ಬಿ ಐ ಕಚೇರಿಯ ಮುಂಭಾಗ ಹಾಗೂ ಹೆಬ್ಬಾಳ ಬಸ್ ನಿಲ್ದಾಣದ ಮುಂದೆ ಇರುವ ಸುರಂಗ ಮಾರ್ಗ ಭಯಂಕರ ಹೊಲಸಾಗಿದೆ. ಕಸ, ದೂಳಿನಿಂದ ತುಂಬಿಕೊಂಡಿದ್ದು ಸರಾಗ ನಡೆದುಹೋಗಲು ತೊಂದರೆಯಾಗುತ್ತದೆ. ಸಂಬಂಧಪಟ್ಟವರು  ಈ ಕಡೆ ಗಮನ ಹರಿಸಿ ನೈರ್ಮಲ್ಯ ಕಾಪಾಡುವಂತೆ ಮಾಡಲಿ.
- ರಾಂನಗರ ದೇವ್ರಾಜ್

ಬಸ್ ನಾಪತ್ತೆಯಾಗಿದೆ!
ಪ್ರತಿ ದಿನ ಮಧ್ಯಾಹ್ನ 12 ಗಂಟೆಯಿಂದ ಮೂರು ಗಂಟೆಯವರೆಗೆ ಬ್ಲಾಕ್ ಬೋರ್ಡ್ ಬಿ.ಎಂ.ಟಿ.ಸಿ. ಬಸ್ಸುಗಳು ದಿಢೀರ್ ಎಂದೂ ಕಣ್ಮರೆಯಾಗಿ ಬಿಡುತ್ತವೆ. ಪುಷ್ಪಕ್, ವೋಲ್ವೊ ಬಸ್ಸುಗಳ ಸಂಚಾರ ಮಾತ್ರ ನಿರಂತರವಾಗಿರುತ್ತದೆ. ರಾತ್ರಿ 8 ರಿಂದ 9ರ ವರೆಗೂ ಇದೇ ಪುನರಾವರ್ತನೆಯಾಗುತ್ತದೆ.

ಬ್ಲಾಕ್ ಬೋರ್ಡ್ ಬಸ್ಸುಗಳು ನಿಧಾನವಾಗಿ ಕಡಿಮೆ ಮಾಡುತ್ತಿರುವುದರ ರಹಸ್ಯ ಏನು? ಮಾರ್ಗ ಸಂಖ್ಯೆ 1, 4, 5, 6, 7, 8, 9, 10, 11, 14 ಬ್ಲಾಕ್ ಬೋರ್ಡ್ ಬಸ್ಸುಗಳು ಈ ಸಮಯದಲ್ಲಿ ನಾಪತ್ತೆಯಾಗಲು ಕಾರಣ ಏನು? ಬಿ.ಎಂ.ಟಿ.ಸಿ. ಈ ಪ್ರಶ್ನೆಗೆ ಉತ್ತರಿಸಬಲ್ಲದೆ?
- ಕಾಡನೂರು ರಾಮಶೇಷ

ಹಳದಿ ದೀಪ ಬೆಳಗಲಿ
ಓಕಳಿಪುರಂ, ನವರಂಗ್ ಟಾಕೀಸ್, ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ವೃತ್ತ ಮುಂತಾದ ರಸ್ತೆಗಳಲ್ಲಿ ಅಳವಡಿಸಿರುವ ರಸ್ತೆ ಸಂಚಾರಿ ನಿಯಂತ್ರಣ ದೀಪಗಳಲ್ಲಿ ಹಳದಿ ದೀಪ ಅಳವಡಿಸಿದರೂ ಉರಿಯುತ್ತಿಲ್ಲ. ಇದರಿಂದಾಗಿ ವಾಹನ ದಟ್ಟಣೆ ಪ್ರದೇಶಗಳಲ್ಲಿಯ ವರ್ತುಲಗಳಲ್ಲಿ ವಾಹನ ರಸ್ತೆ ದಾಟಿಸುವುದು ದುಸ್ತರವಾಗಿದೆ.

ಕಾರಣ ಬೆಂಗಳೂರು ಮಹಾನಗರದ ಎಲ್ಲ ವರ್ತುಲಗಳಲ್ಲಿರುವ ಸಂಚಾರ ನಿಯಂತ್ರಣ ದೀಪಗಳ ವ್ಯವಸ್ಥೆಯಲ್ಲಿ ಕೆಂಪು ದೀಪ ಆರಿದ ನಂತರ ಸುಮಾರು 10 ರಿಂದ 15 ಸೆಕೆಂಡು ಹಳದಿ ದೀಪ ಉರಿಯುವಂತೆ ಮಾಡುವುದು ಅವಶ್ಯ. ನಗರದೆಲ್ಲೆಡೆ ಈ ಕ್ರಮ ಅನುಷ್ಠಾನಕ್ಕೆ ಬರಲಿ.
-ಬಸವರಾಜ ಹುಡೇದಗಡ್ಡಿ

ಸುರಂಗ ಮಾರ್ಗ ಬೇಕು
ರಾಜಾಮಹಲ್ ಗುಟ್ಟಹಳ್ಳಿ, 2ನೇ ಮುಖ್ಯ ರಸ್ತೆ ಕಡೆಯಿಂದ, ಬಳ್ಳಾರಿ ರಸ್ತೆ ಕಡೆಗೆ ದಾಟಬೇಕಾದರೆ 20 ನಿಮಿಷಗಳು ಬೇಕಾಗುತ್ತದೆ. ಜೀವದ ಭಯವನ್ನು ಇಟ್ಟುಕೊಂಡು ದಾಟಬೇಕಾಗಿದೆ. ಬೆಳಿಗ್ಗೆ 9 ಗಂಟೆಗೆ ಟ್ರಾಫಿಕ್ ಜಾಮ್ ಆಗುತ್ತದೆ. ಹಾಗಾಗಿ ಸಂಬಂಧಪಟ್ಟವರು ಈ ರಸ್ತೆ ದಾಟಲು ಸುರಂಗಮಾರ್ಗ ನಿರ್ಮಿಸಿದರೆ ಅನುಕೂಲವಾಗುತ್ತದೆ. 
-ಬಿ.ಎಂ. ಸುಂದರರಾವ್

ಮೆಟ್ರೊ ನಿಲ್ದಾಣವರೆಗೂ ಜಿ-5 ಬರಲಿ
ತಲಘಟ್ಟಪುರದಿಂದ ಕಾರ್ಪೊರೇಷನ್ ಮಾರ್ಗದಲ್ಲಿ ಓಡಾಡುವ ಜಿ-5 ಬಸ್ ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣದವರೆಗೆ ಬಂದರೆ ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ.ಈ ಮಾರ್ಗದಲ್ಲಿ ಓಡಾಡುವ ಜನರು, ಮಹಾತ್ಮಗಾಂಧಿ ರಸ್ತೆಯ ಸುತ್ತಮುತ್ತಲಿನ ಪ್ರದೇಶಕ್ಕೆ ಕೆಲಸಕ್ಕೆ ಬರುವವರು, ಎರಡು ಮೂರು ಬಸ್‌ಗಳನ್ನು ಬದಲಾಯಿಸಿ ಬರಬೇಕು.

ಈ ಮಾರ್ಗದಿಂದ ಎಂ.ಜಿ. ರಸ್ತೆಯ ಮೆಟ್ರೊಗೆ ಯಾವುದೇ ಬಸ್ ಇರುವುದಿಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರಲ್ಲಿ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಈ ಮಾರ್ಗದಲ್ಲಿ ಪ್ರಯಾಣಿಸುವ ಜನರ ಬವಣೆಯನ್ನು ನೀಗಿಸುವರೆಂದು ಕಾಯುತ್ತಿದ್ದೇವೆ.
- ಸವಿತಾ ನಂದಕುಮಾರ್

ದೊಡ್ಡಗುಂಡಿ ಮುಚ್ಚಿಸಿ
ಬನಶಂಕರಿ ಬಸ್ ನಿಲ್ದಾಣದಿಂದ ಹುಣಸೇಮರದ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಬಾರೀ ಹೊಂಡಗಳಾಗಿ ಹಲವು ತಿಂಗಳುಗಳೇ ಆಗಿದ್ದರು ಇದುವರೆಗೂ ಆ ಹೊಂಡಗಳು ಸಂಬಂಧಿಸಿದವರ ಕಣ್ಣಿಗೆ ಬಿದ್ದಂತೆ ಕಾಣುತ್ತಿಲ್ಲ (ಜಾಣ ಕುರುಡು ಇದ್ದರೂ ಇರಬಹುದು). ಪ್ರತಿದಿನ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ  ಹಳ್ಳಗಳು, ಕೊಳಚೆ ನೀರು ಇದ್ದೇ ಇರುತ್ತದೆ.

ವಾಹನ ಸವಾರರಿಗೆ ಈ ರಸ್ತೆಯಲ್ಲಿ ವಾಹನ ಓಡಿಸಲು ಸವಾಲೇ ಸರಿ. ದ್ವಿಚಕ್ರ ವಾಹನ ಸವಾರರಿಗಂತೂ ಇಲ್ಲಿ ವಾಹನ ಚಲಿಸುವುದಕ್ಕೆ ಜೀವ ಭಯ ಕಾಡದೆ ಇರದು. ಸಂಬಂಧಪಟ್ಟವರು ಇತ್ತ ಗಮನಹರಿಸಿ ಈ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಹಳ್ಳಗಳನ್ನು ಮುಚ್ಚಿಸಿ ವಾಹನ ಸವಾರರಿಗೆ ಅನುಕೂಲ ಮಾಡಬಾರದೆ?ಈ ಭಾಗದ ನಗರಸಭೆ ಸದಸ್ಯರಿಗೆ, ವಿಧಾನಸಭೆ ಸದಸ್ಯರಿಗೆ ಇದು ಕಾಣಿಸುತ್ತಿಲ್ಲವೇ ಎನಿಸುತ್ತದೆ.
- ವಿ.ಆರ್.ಎನ್. ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT