ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ವಿದ್ಯುತ್ತಿಗಾಗಿ ರೈತರಿಂದ ರಸ್ತೆ ತಡೆ

Last Updated 2 ಅಕ್ಟೋಬರ್ 2012, 4:15 IST
ಅಕ್ಷರ ಗಾತ್ರ

ಸಿರುಗುಪ್ಪ:  ನಿರಂತರ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೇಸತ್ತಿರುವ ತಾಲ್ಲೂಕಿನ ಏತ ನೀರಾವರಿ ಪಂಪ್‌ಸೆಟ್‌ನ ನೂರಾರು ರೈತರು ಸೋಮವಾರ ತೆಕ್ಕಲಕೋಟೆ ಬಳಿಯ ಜೆಸ್ಕಾಂ ಕಚೇರಿ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ತೆಕ್ಕಲಕೋಟೆಯ ಬಳ್ಳಾರಿ ರಸ್ತೆಯಲ್ಲಿರುವ ಜೆಸ್ಕಾಂ ಕಚೇರಿ ಎದುರು ತಾಲ್ಲೂಕಿನ ಮಣ್ಣೂರು, ಸೂಗೂರು, ನಡವಿ, ನಿಟ್ಟೂರು, ಹೆರಕಲ್, ರುದ್ರಪಾದ, ಮುದ್ದಟ್ಟನೂರು, ಉಡೆಗೋಳ ಗ್ರಾಮಗಳ ನೂರಾರು ರೈತರು ಮೂರು ಗಂಟೆ ಕಾಲ ರಸ್ತೆ ತಡೆ ನಡೆಸಿ ನಿರಂತರ ಸಮರ್ಪಕ ವಿದ್ಯುತ್ ಕೊಡಿ ಎಂದು ಒತ್ತಾಯಿಸಿದರು.

`ಮಳೆಯಿಲ್ಲದೇ ಕಂಗೆಟ್ಟಿರುವ ನಮಗೆ ತುಂಗಭದ್ರಾ ನದಿಯಲ್ಲಿರುವ ನೀರನ್ನಾದರೂ ಹರಿಸಿಕೊಳ್ಳಲು ನಮ್ಮ ಪಂಪ್‌ಸೆಟ್‌ಗಳಿಗೆ ಸತತ ಕರೆಂಟು ಕೊಡಿ, ಇಲ್ಲದಿದ್ದರೆ ಬೆಳೆಗಳು ಒಣಗುತ್ತವೆ, ಅದನ್ನು ನೋಡಲು ಆಗುವುದಿಲ್ಲ ಇದಕ್ಕಿಂತ ವಿಷ ಕುಡಿದು ಸಾಯುವುದೇ ಮೇಲು~ ಎಂದು ಧರಣಿ ನಿರತ ರೈತರು ಜೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ಎರಡು ವಾರಗಳಿಂದ ನೂರಾರು ಪಂಪ್‌ಸೆಟ್‌ಗಳು ಆರಂಭವಾಗದ್ದರ ಬಗ್ಗೆ ಕೇಳುವವರು ಯಾರೂ ಇಲ್ಲ ಎಂಬಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮಣ್ಣೂರು ಮತ್ತು ಸೂಗೂರು ಗ್ರಾಮಕ್ಕೆ ಸರಬರಾಜು ಮಾಡುವ ವಿದ್ಯುತ್ ಪರಿವರ್ತಕ ಸುಟ್ಟುಹೋಗಿದ್ದು ಇದನ್ನು ಬದಲಾಯಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬ ಅಂಶವನ್ನು ತೆರೆದಿಟ್ಟರು.
ಜೆಸ್ಕಾಂ ಅಧಿಕಾರಿಗಳಾದ ದಾಸಪ್ಪ, ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್ ಸಮಸ್ಯೆ ನೀಗಿಸುವ ಭರವಸೆ ನೀಡಿದರೂ ರೈತರನ್ನು ಸಮಾಧಾನ ಮಾಡಲು ಆಗಲಿಲ್ಲ.

ಧರಣಿ ನಡೆಸಿದ ಕಾಲಕ್ಕೆ ಇದೇ ರೀತಿ ಹೇಳಿ ಇಲ್ಲಿಂದ ನಾಪತ್ತೆಯಾಗುವ ನೀವು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, ನಮಗೆ ಸಮಾಧಾನ ಹೇಳುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದೀರಿ ಎಂದು ಏರು ಧ್ವನಿಯಲ್ಲಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. 

ಶಾಸಕ ಭೇಟಿ: ಶಾಸಕ ಎಂ.ಎಸ್. ಸೋಮಲಿಂಗಪ್ಪ ಸ್ಥಳಕ್ಕೆ ಬಂದು ರೈತರಿಗೆ ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆಯನ್ನು ವಿವರಿಸಿದರು. ರಾಜ್ಯದ ಸಮಸ್ಯೆ ನಮಗೆ ಬೇಕಿಲ್ಲ, ನಮ್ಮ ಫಸಲಿನ ರಕ್ಷಣೆ ನಮಗೆ ಮುಖ್ಯ, ನಿರಂತರ ವಿದ್ಯುತ್ ಸರಬರಾಜು ಆಗಬೇಕು ಅಷ್ಟೇ ಎಂದು ಪ್ರತಿಭಟನಾ ರೈತರು ಬಿಗಿಪಟ್ಟು ಹಿಡಿದರು. ಹಾಗೂ ಹೀಗೂ ಅಧಿಕಾರಿಗಳು, ಶಾಸಕರು ರೈತರ ಮನವೊಲಿಸಿ ಭರವಸೆ ನೀಡಿದ ನಂತರ ಧರಣಿಯನ್ನು ಹಿಂಪಡೆದರು.

ರೈತ ಹೋರಾಟಗಾರ ಎನ್.ಮೋಹನ್‌ಕುಮಾರ್, ಪ್ರತಾಪ ಚೌಧರಿ, ಎಪಿಎಂಸಿ ಸದಸ್ಯ ವೀರನಗೌಡ, ಪಂಪನಗೌಡ, ಫಕ್ಕೀರಪ್ಪ, ವಿರೂಪಾಕ್ಷಪ್ಪ, ವೀರನಗೌಡ, ಕೆ.ನಾಗರಾಜ, ಸೂರಿಬಾಬು, ಪುರುಷೋತ್ತಮ  ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.

ಡಿವೈಎಸ್‌ಪಿ ಎನ್.ರುದ್ರಮುನಿ, ಸಿಪಿಐಗಳಾದ ಎನ್.ಲೋಕೇಶ್, ಕಾಳಿಕೃಷ್ಣ  ಹಾಜರಿದ್ದರು.

ಜೆಸ್ಕಾಂ ಕಚೇರಿಗೆ ಮುತ್ತಿಗೆ
ಕಂಪ್ಲಿ: ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ರಾಮಸಾಗರ ಗ್ರಾಮದ ಕರ್ನಾಟಕ ಜನಶಕ್ತಿ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು, ರೈತರು ಪಟ್ಟಣದ ಜೆಸ್ಕಾಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕಳೆದ ಹಲವಾರು ದಿನಗಳಿಂದ ಪಂಪ್‌ಸೆಟ್ ಮತ್ತು ಕೊಳವೆಬಾವಿ ಆಶ್ರಿತ ರೈತರು ವಿದ್ಯುತ್ ಇಲ್ಲದೆ ಬೆಳೆಗಳು ಒಣಗುತ್ತಿವೆ. ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ರಾತ್ರಿ ವೇಳೆ ವಿದ್ಯುತ್ ಸಂಪೂರ್ಣ ಸ್ಥಗಿತಗೊಳ್ಳುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಅಡಚಣೆಯಾಗಿದೆ ಎಂದು ದೂರಿದರು.

ಈ ಸಮಸ್ಯೆ ಸಡಿಪಡಿಸುವಂತೆ ಹಲವಾರು ಬಾರಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ ನಿಗದಿಪಡಿಸಿರುವ ಅನುಸೂಚಿ ಪ್ರಕಾರ ವಿದ್ಯುತ್ ಪೂರೈಕೆ ಮಾಡದ ಜೆಸ್ಕಾಂ ವಿರುದ್ಧ ರೈತರು ಘೋಷಣೆಗಳನ್ನು ಕೂಗಿದರು.

ಸ್ಥಳಕ್ಕೆ ಆಗಮಿಸಿದ ಎಇಇ ಸತೀಶ್ ಇನ್ನು ಮುಂದೆ ನಿಗದಿಪಡಿಸಿರುವ ಅನುಸೂಚಿ ಪ್ರಕಾರ ವಿದ್ಯುತ್ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಧರಣಿ ನಿರತರಿಗೆ ತಿಳಿಸಿದರು.

ಕರ್ನಾಟಕ ಜನಶಕ್ತಿ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು, ರೈತರು, ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT