ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿ ವಜಾ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಗೆ ಒಳಗಾಗಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಅವರ ಪತ್ನಿ ವಾಣಿಶ್ರಿ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಇತ್ಯರ್ಥಗೊಳಿಸಿತು.

`ರಾಜಕೀಯಕ್ಕೆ ಬಂದ ಮೇಲೆ ವಿಶ್ವನಾಥ್ ಅವರು ಸುಮಾರು 70 ಕೋಟಿ ರೂಪಾಯಿಗಳಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಕರ್ನಾಟಕ ಗೃಹ ಮಂಡಳಿಗೆ ಸೇರಿರುವ ಸುಮಾರು 3.5 ಎಕರೆ ಜಮೀನನ್ನು ಹೆಸರಘಟ್ಟ ಹಾಗೂ ಶ್ರೀರಾಮನಹಳ್ಳಿಯಲ್ಲಿ ಹೊಂದಿದ್ದಾರೆ~ ಎಂದು ದೂರಿ ಶಶಿಧರ್ ಎಂಬುವರು ಸಲ್ಲಿಸಿರುವ ದೂರು ಇದಾಗಿದೆ.

`ಈ ಆರೋಪದ ಮೇಲೆ ಇವರನ್ನು ಬಂಧಿಸಲು ಪೊಲೀಸರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ವಿನಾಕಾರಣ ಅರ್ಜಿ ಸಲ್ಲಿಸಲಾಗಿದೆ~ ಎಂದು ಲೋಕಾಯುಕ್ತ ಪೊಲೀಸರು ಸೋಮವಾರ ತಿಳಿಸಿದ್ದರು. ಹೀಗಾಗಿ ಅರ್ಜಿಗೆ ಮಾನ್ಯತೆ ಇಲ್ಲ ಎಂದು ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ಅಭಿಪ್ರಾಯಪಟ್ಟರು.

ಮದ್ಯದಂಗಡಿ- ನೋಟಿಸ್
ನಗರದ ಕೋನಪ್ಪನ ಅಗ್ರಹಾರದ ಬಳಿ ಮದ್ಯದಂಗಡಿ ತೆರೆಯಲು ನೀಡಲಾದ ಅನುಮತಿಯನ್ನು ಪ್ರಶ್ನಿಸಿ ಅಲ್ಲಿನ ಗ್ರಾಮ ಪಂಚಾಯಿತಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ, ಅಬಕಾರಿ ಇಲಾಖೆ, ಬೆಂಗಳೂರು ಜಿಲ್ಲಾಧಿಕಾರಿ ಸೇರಿದಂತೆ ಇತರ ಪ್ರತಿವಾದಿಗಳಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.

ಸರ್ವೇ ನಂ. 112/110ರಲ್ಲಿ `ಎಸ್.ಕೆ.ವೈನ್ ಸ್ಟೋರ್ಸ್‌~ಗೆ ಮದ್ಯದಂಗಡಿ ತೆರೆಯಲು ಕಳೆದ ಜುಲೈ ತಿಂಗಳಿನಲ್ಲಿ ನೀಡಲಾದ ಅನುಮತಿಯ ರದ್ದತಿಗೆ ಅರ್ಜಿಯಲ್ಲಿ ಕೋರಲಾಗಿದೆ. ಅಂಗಡಿಯ 100 ಅಡಿ ಅಂತರದಲ್ಲಿಯೇ ಪರಿಶಿಷ್ಟರ ಕಾಲೋನಿ ಇದೆ. ಇಂತಹ ಪ್ರದೇಶದಲ್ಲಿ ಅಂಗಡಿಗೆ ಅನುಮತಿ ನೀಡಿರುವುದು ಕಾನೂನು ಬಾಹಿರ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದು ಅರ್ಜಿದಾರರ ಆರೋಪ. ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT