ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆಗೂ ಮೀರಿದ ಜನ ಸಾಗರ...

Last Updated 5 ಫೆಬ್ರುವರಿ 2011, 16:30 IST
ಅಕ್ಷರ ಗಾತ್ರ

ಬೆಂಗಳೂರು: ನಿರೀಕ್ಷೆಗೂ ಮೀರಿ ಹರಿದು ಬಂದ ಜನಸಾಗರ, ಗೋಷ್ಠಿಗಳಿಗಿಂತ ತಿಂಡಿ- ತಿನಿಸು ಖರೀದಿಯಲ್ಲಿ ತಲ್ಲೆನರಾಗಿದ್ದ ಯುವ ಸಮೂಹ, ಬೆಳಿಗ್ಗೆಯಿಂದ ಸಂಜೆವರೆಗೂ ತುಂಬಿ ತುಳುಕಿದ ಸಾಹಿತ್ಯಾಭಿಮಾನಿಗಳು, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಆವರಣದಲ್ಲಿ ಕಿಕ್ಕಿರಿದ ಜನಸ್ತೋಮ, ರಾಜಧಾನಿಯಲ್ಲಿ ಕನ್ನಡಿಗರ ಶಕ್ತಿಪ್ರದರ್ಶನಕ್ಕೆ ವೇದಿಕೆಯಾದ ಸಮ್ಮೇಳನ!

- ಇವು ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ಕಂಡು ಬಂದ ಪ್ರಮುಖ ದೃಶ್ಯಗಳು. ರಾಜಧಾನಿಗಿಂತ ಹೊರಗಿನ ಸಾಹಿತ್ಯಾಸಕ್ತರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಅಕ್ಷರ ಜಾತ್ರೆ ಜನಜಂಗುಳಿಯಿಂದ ತುಂಬಿ ತುಳುಕುತ್ತಿತ್ತು. ಇದರಿಂದ ಪುಳಕಿತರಾದ ಸಂಘಟಕರು ಸಮ್ಮೇಳನ ಯಶಸ್ವಿಯಾದ ಸಾರ್ಥಕ ಭಾವ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಸಮ್ಮೇಳನ ಮಾಡಿದರೆ ಜನ ಬರುತ್ತಾರೊ, ಇಲ್ಲವೊ ಎಂಬ ಅಳುಕು ಸಂಘಟಕರನ್ನು ಕಾಡುತ್ತಿತ್ತು. ಆದರೆ ಶನಿವಾರ ಸಮ್ಮೇಳನಕ್ಕೆ ಆಗಮಿಸಿದ ಜನ ನೋಡಿ ಸಂಘಟಕರು ದಂಗಾದರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾಹಿತ್ಯಾಸಕ್ತರು ಪುಸ್ತಕ ಖರೀದಿಗೆ ಮುಗಿ ಬಿದ್ದಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಬೆಳಿಗ್ಗೆಯಿಂದ ಸಂಜೆವರೆಗೂ ಜನ ಪ್ರವಾಹದೋಪಾದಿಯಲ್ಲಿ ಹರಿದು ಬರುತ್ತಿದ್ದರಿಂದ ಸಭಾಂಗಣದ ಒಳ ಪ್ರವೇಶಿಸಲು ಹಾಗೂ ಹೊರಗೆ ಬರಲು ಹರಸಾಹಸ ಮಾಡಿದರು. ಒಳಗೆ ಹೋಗಲು, ವಾಪಸ್ ಬರಲು ಒಂದೇ ದ್ವಾರದಲ್ಲಿ ವ್ಯವಸ್ಥೆ ಮಾಡಿರುವುದೇ ನೂಕು ನುಗ್ಗಲಿಗೆ ಕಾರಣ ಎಂದು ಕೆಲವರು ಬೇಸರ ವ್ಯಕ್ತಪಡಿಸಿದರು.

ಸಿಲಿಕಾನ್ ಸಿಟಿಯ ಹೈಟೆಕ್ ಮಂದಿಗಿಂತ ಗ್ರಾಮೀಣ ಸೊಗಡಿನ ಸಾಹಿತ್ಯಾಸಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು. ಶಾಲಾ- ಕಾಲೇಜುಗಳಿಗೆ ರಜೆ ನೀಡಿದ್ದ ವಿದ್ಯಾರ್ಥಿ ಸಮೂಹವೂ ಸಮ್ಮೇಳನದಲ್ಲಿ ಕಾಣಿಸಿಕೊಂಡಿತು. ಆದರೆ ಯುವಕರು ಗೋಷ್ಠಿಗಳತ್ತ ಅಷ್ಟಾಗಿ ಒಲವು ತೋರಲಿಲ್ಲ. ನಾಮಕಾವಸ್ಥೆಗೆ 5-10 ನಿಮಿಷ ಗೋಷ್ಠಿಗಳಲ್ಲಿ ಕುಳಿತು ನಂತರ ಹೊರ ನಡೆದರು.

ಹೊರಗೆ ಐಸ್‌ಕ್ರೀಂ, ಶೇಂಗಾ, ಪಪ್ಪಾಯಿ, ಕಲ್ಲಂಗಡಿ ಹಣ್ಣು, ಸೌತೆಕಾಯಿ, ಜೋಳ, ಚಾಟ್ಸ್...ಹೀಗೆ ಹತ್ತು ಹಲವು ತಿಂಡಿ ತಿನಿಸುಗಳನ್ನು ತಿನ್ನುತ್ತಾ ಪಿಕ್‌ನಿಕ್‌ಗೆ ಬಂದವರ ಹಾಗೆ ಉಲ್ಲಾಸದಿಂದ ರಜೆಯ ಮಜಾ ಅನುಭವಿಸಿದರು. ಸಾಹಿತ್ಯದ ಬಗ್ಗೆ ನಿಜವಾದ ಆಸಕ್ತಿ ಇದೆಯೊ, ಇಲ್ಲವೊ ಎಂಬುದು ಬೇರೆ ಮಾತು. ಆದರೆ ಅಕ್ಷರ ಜಾತ್ರೆಯಲ್ಲಿ ಪಾಲ್ಗೊಂಡ ಉತ್ಸಾಹ, ಸಂಭ್ರಮ ಅವರಲ್ಲಿ ಮನೆ ಮಾಡಿತ್ತು.

ನಿಜವಾದ ಸಾಹಿತ್ಯಾಸಕ್ತರು ತಮ್ಮೊಂದಿಗೆ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಕೆಲವೊಮ್ಮೆ ನೂಕು ನುಗ್ಗಲಿನಿಂದಾಗಿ ಸ್ವಲ್ಪಮಟ್ಟಿಗೆ ಅವ್ಯವಸ್ಥೆ ಆದರೂ ಬೇಸರಿಸಿಕೊಳ್ಳಲಿಲ್ಲ. ಇದು ನಮ್ಮ ಮನೆಯ ಹಬ್ಬ. ಇಂತಹ ದೊಡ್ಡ ಸಮಾರಂಭದಲ್ಲಿ ಇವೆಲ್ಲ ಸಹಜ ಎಂದು ಭಾವಿಸಿ ಖುಷಿಯಿಂದಲೇ ಪಾಲ್ಗೊಂಡರು. ಒಟ್ಟಾರೆ ಎರಡೂ ದಿನ ಯುವಕರಿಗಿಂತ ಹಿರಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಅಚ್ಚುಕಟ್ಟಾಗಿ ನಡೆದ ಗೋಷ್ಠಿಗಳು: ನಿಗದಿತ ಸಮಯಕ್ಕಿಂತ ಸ್ವಲ್ಪ ಹೆಚ್ಚು ಕಡಿಮೆಯಾದರೂ ಎಲ್ಲ ಗೋಷ್ಠಿಗಳು ಅಚ್ಚುಕಟ್ಟಾಗಿ ನಡೆದವು. ಸಮ್ಮೇಳನಾಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು.ನಿಜವಾದ ಸಾಹಿತ್ಯಾಸಕ್ತರು ಗೋಷ್ಠಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ ಇಂತಹವರ ಸಂಖ್ಯೆ ನಿರೀಕ್ಷೆಯಷ್ಟು ಪ್ರಮಾಣದಲ್ಲಿ ಇರಲಿಲ್ಲ. ಕೆಲವರು ಸಭಾಂಗಣದಲ್ಲಿಯೇ ನಿದ್ರಾದೇವಿಯ ಮೊರೆ ಹೋಗಿದ್ದರೆ, ಹಲವರು ಪತ್ರಿಕೆ ಓದುವುದು, ತಿಂಡಿ, ತಿನಿಸುಗಳನ್ನು ಮೆಲ್ಲುವುದರಲ್ಲಿ ನಿರತರಾಗಿದ್ದರು.

ಸ್ವಯಂ ಸೇವಕರೂ ಇಲ್ಲ- ಮಾಹಿತಿಯೂ ಇಲ್ಲ: ಸಮ್ಮೇಳನಕ್ಕೆ ಬಂದವರಿಗೆ ಎಲ್ಲೆಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ, ಯಾವ ಸಭಾಂಗಣದಲ್ಲಿ ಯಾವ ಗೋಷ್ಠಿ ನಡೆಯುತ್ತಿದೆ ಎಂಬ ಮಾಹಿತಿ ನೀಡುವ ವ್ಯವಸ್ಥೆ ಇರಲಿಲ್ಲ. ಮೂರು ಕಡೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಬಂದವರೆಲ್ಲ ಸಭಾಂಗಣದ ಪಕ್ಕದಲ್ಲಿಯೇ ಅತಿ ಗಣ್ಯರಿಗೆ ವ್ಯವಸ್ಥೆ ಮಾಡಿರುವ ಮಹಿಳಾ ಸೇವಾ ಸಮಾಜದ ಆವರಣಕ್ಕೆ ನುಗ್ಗಿದರು. ಆದರೆ ಅಲ್ಲಿ ಸಾವಿರಾರು ಜನರಿಗೆ ಊಟವೇ ಸಿಗಲಿಲ್ಲ.

ಭರ್ಜರಿ ವ್ಯಾಪಾರ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ ಮತ್ತು ನ್ಯಾಷನಲ್ ಕಾಲೇಜು ಮೈದಾನ ಹೊರಗೆ ತಿಂಡಿ ತಿನಿಸುಗಳ ಮಾರಾಟ ಭರ್ಜರಿ ನಡೆಯಿತು. ಮೈದಾನಕ್ಕೆ ಹೊಂದಿಕೊಂಡಿರುವ ರಸ್ತೆಯ ಇಕ್ಕೆಲಗಳಲ್ಲಿ ಶುಕ್ರವಾರದಿಂದಲೇ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಇದು ಪ್ರತಿವರ್ಷ ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಯ ಮುಂದುವರಿದ ಭಾಗ ಎಂಬಂತೆ ಭಾಸವಾಯಿತು.

ಮಜ್ಜಿಗೆ ಹಂಚಿಕೆ
ಕನ್ನಡ ಕಸ್ತೂರಿ ಸಂಸ್ಥೆಯವರು ಸಮ್ಮೇಳನಕ್ಕೆ ಬಂದಿದ್ದ ಸಾವಿರಾರು ಜನರಿಗೆ ಉಚಿತವಾಗಿ ಮಜ್ಜಿಗೆ ಹಂಚಿದರು. ಮುಖ್ಯದ್ವಾರದ ಪಕ್ಕದಲ್ಲಿಯೇ ಇರುವ ರಸ್ತೆಯಲ್ಲಿ ಮೂರು ವ್ಯಾನ್‌ಗಳನ್ನು ನಿಲ್ಲಿಸಿಕೊಂಡು ಕಾರ್ಯಕರ್ತರು ಮಜ್ಜಿಗೆ ನೀಡಿದರು. ಪ್ರತಿ ವರ್ಷ ಸಾಹಿತ್ಯ ಸಮ್ಮೇಳನದಲ್ಲಿ ಮಜ್ಜಿಗೆ ಹಂಚುತ್ತೇವೆ. ಸುಮಾರು ಒಂದು ಸಾವಿರ ಜನರಿಗೆ ಮಜ್ಜಿಗೆ ಹಂಚಲು ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕರಂಗೂರು ಅಪ್ಪಾಜಿಗೌಡ ತಿಳಿಸಿದರು.

ಎರಡು ಲಕ್ಷ ಜನರಿಗೆ ಮಜ್ಜಿಗೆ ಹಂಚಬೇಕು ಎಂಬ ಉದ್ದೇಶವಿತ್ತು. ಆದರೆ ಅಗತ್ಯವಿರುವಷ್ಟು ಮೊಸರು ಸಿಗದ ಕಾರಣ ಕನಿಷ್ಠ ಒಂದು ಲಕ್ಷ ಜನರಿಗಾದರೂ ನೀಡುವ ಉದ್ದೇಶವಿದೆ. ಭಾನುವಾರವೂ ಮಜ್ಜಿಗೆ ಹಂಚುವ ಕಾರ್ಯವನ್ನು ಮುಂದುವರಿಸುತ್ತೇವೆ.ಇದಕ್ಕಾಗಿ 40 ಸಾವಿರ ರೂಪಾಯಿ ವೆಚ್ಚ ಮಾಡುತ್ತೇವೆ ಎಂದು ಅವರು ಹೇಳಿದರು. ಮಜ್ಜಿಗೆ ಪಡೆಯಲು ಜನ ಹಾತೊರೆಯುತ್ತಿದ್ದರು. ಸರಿಯಾದ ಊಟ, ನೀರಿನ ವ್ಯವಸ್ಥೆ ಇಲ್ಲದೆ ಬೇಸತ್ತಿದ್ದ ಸಾಹಿತ್ಯಾಭಿಮಾನಿಗಳಿಗೆ ಮಜ್ಜಿಗೆ ದೊರೆತದ್ದು ಸ್ವಲ್ಪ ಸಮಾಧಾನವನ್ನುಂಟು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT