ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಲ ಗ್ರಾಮದತ್ತ ಚಾಂದೋರಿ ಹೆಜ್ಜೆ

ಗ್ರಾಮಾಯಣ
Last Updated 17 ಡಿಸೆಂಬರ್ 2013, 5:38 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಚಾಂದೋರಿ ಇದೀಗ ‘ನಿರ್ಮಲ ಗ್ರಾಮ’ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಇದರಿಂದ ಇಲ್ಲಿನ ಗ್ರಾಮಸ್ಥರಲ್ಲಿ ಮತ್ತು ಅಧಿಕಾರಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಈ ಸಂಭ್ರಮದ ಹಿಂದೆ ಹಲವು ಜನರ ಪರಿಶ್ರಮ ಇದೆ. ಇಲ್ಲಿನ ಜನರಿಗೆ ಬಯಲು ಶೌಚಾಲಯ ರೂಢಿ ಇದ್ದ ಕಾರಣ ಶೌಚಾಲಯ ಕಟ್ಟಿಕೊಳ್ಳಲು ಆರಂಭದಲ್ಲಿ ಅಷ್ಟೊಂದು ಆಸಕ್ತಿ ತೋರಲಿಲ್ಲ. ನಿರ್ಮಲ ಭಾರತ ಯೋಜನೆ ನೋಡಲ್‌ ಅಧಿಕಾರಿ ಡಾ. ಗೌತಮ ಅರಳಿ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮ­ದಲ್ಲಿ ಸ್ವಚ್ಛತಾ ಉತ್ಸವ ನಡೆಸಿದರು.

ಬಯಲು ಶೌಚಾಲಯದಿಂದ ಆಗುತ್ತಿರುವ ಪರಿಣಾಮ ಮತ್ತು ತಮ್ಮ ಮನೆಯ ಮಹಿಳೆಯರ ಗೌರವ ಕಾಪಾಡುವ ನಿಟ್ಟಿನಲ್ಲಿ ಶೌಚಾಲಯ ಕಟ್ಟಿಕೊಳ್ಳುವುದು ಅನಿವಾರ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು.

ಇದರಿಂದ ಶೌಚಾಲಯ ಸೌಲಭ್ಯ ಇಲ್ಲದ ಕುಟುಂಬಕ್ಕೆ ಸರ್ಕಾರದ ಸೌಲಭ್ಯ ಸಿಗುವುದಿಲ್ಲ ಎಂಬುದನ್ನು ಅರಿತ  ಚಾಂದೋರಿ ಈಗ ನಿರ್ಮಲ ಗ್ರಾಮದತ್ತ ಹೆಜ್ಜೆ ಇಟ್ಟಿದೆ.

ಗ್ರಾಮದ ಶೇ 60ರಷ್ಟು ಕುಟುಂಬ­ಗಳು ವೈಯಕ್ತಿಯ ಶೌಚಾಲಯ ಹೊಂದಿವೆ. ಮಾರ್ಚ್‌ ವೇಳೆಗೆ ಇಡೀ ಗ್ರಾಮವನ್ನು ಬಯಲು ಶೌಚಾಲಯ ಮುಕ್ತ ಗ್ರಾಮವನ್ನಾಗಿ ಮಾಡಲು ಉದ್ದೇಶಿಸಲಾಗಿದೆ ಎಂದು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶರತಕುಮಾರ ಹೇಳುತ್ತಾರೆ.

ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಈಗಾಗಲೇ ಗ್ರಾಮದಲ್ಲಿ 185 ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಡಲಾಗಿದೆ. ಅಧಿಕೃತ ಏಜನ್ಸಿಯೊಂದರ ಮೂಲಕ ಸರ್ಕಾರದ ನೆರವಿನಿಂದ ಈ ಶೌಚಾಲಯ­ಗಳು ನಿರ್ಮಾಣ­ಗೊಂಡಿವೆ. ಫಲಾನುಭವಿ­ಯಿಂದ ₨ 5000 ವಂತಿಗೆ ಮತ್ತು ನಿರ್ಮಲ ಭಾರತ ಯೋಜನೆಯ ₨ 4700 ಭರಿಸಿ ಒಟ್ಟು ₨ 9700 ವೆಚ್ಚದಲ್ಲಿ ಶೌಚಾಲಯ ಕಟ್ಟಿಕೊಡಲಾಗಿದೆ.

ಜಾಬ್‌ಕಾರ್ಡ್ ಹೊಂದಿದ ಕಾರ್ಮಿಕರು ಗುಂಡಿ ತಾವೇ ತೋಡಿಕೊಂಡರೆ ₨4500 ವಾಪಸ್‌ ನೀಡಲಾಗುವುದು. ಇದರಿಂದ ಬಡ ಬಿಪಿಎಲ್‌ ಫಲಾನುಭವಿಗಳು ತಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಹೆಚ್ಚಿನ ಉತ್ಸುಕತೆ ತೋರುತ್ತಿದ್ದಾರೆ ಎಂದು ಚಾಂದೋರಿ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ ಕಾರಬಾರಿ ಹೇಳುತ್ತಾರೆ.


ಔರಾದ್‌ನಲ್ಲಿ ಈಚೆಗೆ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಉಜ್ವಲಕುಮಾರ ಘೋಷ್‌, ಉಪ ಕಾರ್ಯದರ್ಶಿ ಭೀಮಶೇನ ಗುಡೂರ್‌ ಅವರು ಚಾಂದೋರಿ ಪಂಚಾಯಿತಿಯ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿ ಬೆನ್ನು ತಟ್ಟಿದ್ದಾರೆ. ಬಯಲು ಶೌಚಾಲಯ ಮುಕ್ತ ಗ್ರಾಮವನ್ನಾಗಿಸಲು ಮುಂದಾದ ಪಂಚಾಯಿತಿಗೆ ಎಲ್ಲ ರೀತಿಯಿಂದ ಸಹಕಾರ ಮತ್ತು ನೆರವು ನೀಡುವುದಾಗಿ ಹೇಳಿದ್ದಾರೆ.
–ಮನ್ಮಥಪ್ಪ ಸ್ವಾಮಿ

‘ಚಾಂದೋರಿ ಗ್ರಾಮಸ್ಥರು ಬಯಲು ಶೌಚಾಲಯದಿಂದ ಮುಕ್ತರಾಗಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಹೀಗಾಗಿ ಮಾರ್ಚ್‌ ವೇಳೆಗೆ ಎಲ್ಲ 600 ಕುಟುಂಬಗಳಲ್ಲಿ ವೈಯಕ್ತಿಕ ಶೌಚಾಲಯ ಹೊಂದುವ ಗುರಿ ಇದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಜಾರಿಯಲ್ಲಿರುತ್ತದೆ’.
–ಶರತಕುಮಾರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ


‘ಅಧಿಕೃತ ಏಜನ್ಸಿ ಸಹಾಯದಿಂದ ₨ 9700 ವೆಚ್ಚದಲ್ಲಿ ಎರಡು ತಿಂಗಳಲ್ಲಿ 185 ಶೌಚಾಲಯ ಕಟ್ಟಲಾಗಿದೆ. 4/4 ಗುಂಡಿ ತೋಡಿ, 4/4 ಕೋಣೆಯಲ್ಲಿ ಒಂದು ಕುಟುಂಬಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಶೌಚಾಲಯ ಕಟ್ಟಿಕೊಡಲಾಗಿದೆ. ಎಲ್ಲಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ’.
–ಪ್ರವೀಣ ಕಾರಬಾರಿ, ಗ್ರಾಮ ಪಂಚಾಯ್ತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT