ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ಬಾಲ್ಯ ವಿವಾಹ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಗದುಗಿನಲ್ಲಿ ಭಾನುವಾರ ನಡೆದ 750 ಜೋಡಿಗಳ ಸಾಮೂಹಿಕ ವಿವಾಹದಲ್ಲಿ 98 ಮಂದಿ ಅಪ್ರಾಪ್ತ ವಯಸ್ಸಿನವರ ಮದುವೆಯೂ ನಡೆದಿರುವುದು ಕಳವಳಕಾರಿ ಸಂಗತಿ. ಬಾಲ್ಯ ವಿವಾಹ ನಿಷೇಧ ಇದ್ದರೂ, ಅದರಲ್ಲೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಸಮ್ಮುಖದಲ್ಲಿ ಈ ವಿವಾಹ ನಡೆದಿರುವುದು ಅಕ್ಷಮ್ಯ. ಬಾಲ್ಯ ವಿವಾಹದ ಪಿಡುಗನ್ನು ನಿಲ್ಲಿಸಬೇಕಾಗಿರುವ ಇಲಾಖೆಯ ಸಚಿವರೇ ಇಂತಹ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವದಿಸಿದ್ದಾರೆಂದರೆ ಅವರು ಕಾನೂನನ್ನು ಎಷ್ಟರಮಟ್ಟಿಗೆ ಗೌರವಿಸುತ್ತಾರೆ ಎನ್ನುವುದು ಇದರಿಂದ ಅರ್ಥವಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆಲವು ಅಧಿಕಾರಿಗಳು ಕೆಲವೆಡೆ ಬಾಲ್ಯ ವಿವಾಹಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಂಡಿರುವ ಪ್ರಕರಣಗಳೂ ಇವೆ. ಆದರೆ ಇಲ್ಲಿ ಅವರ ಕರ್ತವ್ಯ ಪ್ರಜ್ಞೆ ಎಲ್ಲಿ ಹೋಯಿತು ಎಂದು ಪ್ರಶ್ನಿಸುವಂತಾಗಿದೆ. ಅಪ್ರಾಪ್ತ ವಯಸ್ಸಿನವರು ವಿವಾಹಕ್ಕೆ ಮಾನಸಿಕವಾಗಿ, ದೈಹಿಕವಾಗಿ ಮತ್ತು ಸ್ವಂತ ಬದುಕನ್ನು ಕಟ್ಟಿಕೊಂಡು ನಿರ್ವಹಿಸುವ ಜ್ಞಾನವನ್ನು ಹೊಂದಿದವರಲ್ಲ. ಹಲವಾರು ವರ್ಷಗಳ ಹಿಂದೆಯೇ ಇದು ಸಾಬೀತಾಗಿ ಅಂತಹ ವಿವಾಹವನ್ನು ಕಾಯ್ದೆಬದ್ಧವಾಗಿಯೇ ನಿಷೇಧಿಸಲಾಗಿದೆ. ಬಾಲ್ಯ ವಿವಾಹ ನಡೆಯದಂತೆ ನೋಡಿಕೊಳ್ಳುವ ಇಲಾಖೆಯ ಸಚಿವರು ಮತ್ತು ಸಿಬ್ಬಂದಿಯ ಸಮ್ಮುಖದಲ್ಲಿಯೇ ಬಾಲ್ಯವಿವಾಹ ನಿಷೇಧ ಕಾಯ್ದೆ ಉಲ್ಲಂಘನೆ ನಡೆದಿರುವುದರಿಂದ ಇವರ‌್ಯಾರೂ ಅವರ ಈಗಿನ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ.

ರಾಜಕಾರಣಿಗಳು ತಮ್ಮ ಕ್ಷೇತ್ರಗಳಲ್ಲಿ ಜನರ ವಿಶ್ವಾಸ ಗಳಿಸಲು ಹಲವಾರು ಚಟುವಟಿಕೆಗಳನ್ನು ನಡೆಸುವುದು, ಅಗ್ಗದ ಪ್ರಚಾರ ತಂತ್ರಗಳನ್ನು  ಮಾಡುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ಇದೆ. ಅದರಲ್ಲಿ ಸಾಮೂಹಿಕ ವಿವಾಹ ಏರ್ಪಡಿಸುವುದೂ ಒಂದು. ಹಳ್ಳಿಗಳಲ್ಲಿ ಅನೇಕ ಬಡವರು ತಮ್ಮ ಮಕ್ಕಳನ್ನು ಮದುವೆ ಮಾಡಲಾಗದಂತಹ ಆರ್ಥಿಕ ದುಃಸ್ಥಿತಿಯಲ್ಲಿರುವುದು ವಾಸ್ತವ. ಇದಕ್ಕೆ ಸರಳ ಮದುವೆಯಂಥ ಸಾಮಾಜಿಕ ಜಾಗೃತಿಗೆ ರಾಜಕಾರಣಿಗಳು ಮುಂದಾಗಬೇಕು. ಜನರ ಬಡತನದ ಸ್ಥಿತಿಗೆ ಅವರೆಷ್ಟು ಕಾರಣವೋ ಸಮಾಜ ಮತ್ತು ಸರ್ಕಾರವೂ ಅಷ್ಟೇ ಕಾರಣ. ಏನೇ ಇದ್ದರೂ ಸಾಮೂಹಿಕ ವಿವಾಹ ವ್ಯವಸ್ಥೆ ಮಾಡುವಾಗ ಅಪ್ರಾಪ್ತ ವಯಸ್ಸಿನವರನ್ನು ಗುರುತಿಸಿ ವಿವಾಹದಿಂದ ದೂರವಿಡುವುದು ಸಂಘಟಕರ ಕರ್ತವ್ಯ. ತಮ್ಮ ಗುರಿಯ ಸಂಖ್ಯೆಯನ್ನು ಮುಟ್ಟುವ ಧಾವಂತದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಹಸೆಮಣೆಗೆ ಕೂರಿಸುವುದು ಅಮಾನವೀಯ. ಬಾಲ್ಯ ವಿವಾಹವಾಗಿ ಸಣ್ಣ ವಯಸ್ಸಿನಲ್ಲೇ ತಾಯಂದಿರಾಗುವ ಹೆಣ್ಣು ಮಕ್ಕಳು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡುವುದು ಸಾಧ್ಯವಿಲ್ಲ. ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಹೆರಿಗೆಯ ವೇಳೆಯಲ್ಲಿ ಜೀವ ಕಳೆದುಕೊಳ್ಳುವ ಅಪಾಯವೇ ಹೆಚ್ಚು. ಈ ನಿಟ್ಟಿನಲ್ಲಿ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆಗಿಂದಾಗ್ಗೆ ಹೊಸ ಹೊಸ ತೀರ್ಪು ಮತ್ತು ಆದೇಶಗಳ ಮೂಲಕ ಎಚ್ಚರಿಕೆ ಕೊಡುತ್ತಲೇ ಇವೆ. ಆದರೂ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಳು ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದು ಖಂಡನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT