ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆ ಪೂರ್ಣ: ಸಿಎಂ

Last Updated 20 ಸೆಪ್ಟೆಂಬರ್ 2013, 8:23 IST
ಅಕ್ಷರ ಗಾತ್ರ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ಬಾಕಿ ಇರುವ ಎಲ್ಲ ನೀರಾವರಿ ಯೋಜನೆಗಳನ್ನು ₨ 50 ಸಾವಿರ ಕೋಟಿ ಖರ್ಚಿನಲ್ಲಿ ಮುಂದಿನ ಐದು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ವತಿಯಿಂದ ಬಸವಜಯಂತಿ ಆಚರಣೆಯ ಶತಮಾನೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ವಚನ ಓದುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದ ಜನತೆ ಕಾಂಗ್ರೆಸ್‌ ಸರ್ಕಾರದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇವೆ, ರೈತರಿಗೆ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಲಿದೆ’ ಎಂದರು.
‘ರೈತರು, ಕೂಲಿಕಾರ್ಮಿಕರು, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಅಭ್ಯುದಯಕ್ಕೆ ರಾಜ್ಯ ಸರ್ಕಾರ ಶ್ರಮಿಸಲಿದೆ, ಅಂತ್ಯೋದಯವಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧ್ಯ’ ಎಂದರು.
‘ಶ್ರೇಣೀಕೃತ ಸಮಾಜವನ್ನು ಒಡೆದು ಸಮಾನತೆಯ ಸಮಾಜ ನಿರ್ಮಾಣಕ್ಕೆ ಬಸವಣ್ಣ ಶ್ರಮಿಸಿದ್ದರು. 

ಅಲ್ಲಮಪ್ರಭುವನ್ನು ಅನುಭವ ಮಂಟಪದ ಅಧ್ಯಕ್ಷನನ್ನಾಗಿ ಮಾಡುವ ಮೂಲಕ ಕೆಳಜಾತಿಗಳನ್ನು ಮೇಲಕ್ಕೆತ್ತುವ  ಪ್ರಯತ್ನ ಮಾಡಿದರು. ಆಡು ಭಾಷೆಯಲ್ಲಿ ವಚನ ಬರೆದು ಜನಸಾಮಾನ್ಯರಿಗೆ ಧರ್ಮವನ್ನು ಪರಿಚಯಿಸುವ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು’ ಎಂದು ಹೇಳಿದರು.

‘ಬಸವಾದಿ ಶರಣರು ಕಾಯಕ, ದಾಸೋಹ ಪ್ರತಿಪಾದನೆ ಮಾಡಿದರು, ಅಂದು ಬಸವಣ್ಣನ ಜೊತೆಗಿದ್ದವರು ಕೆಳವರ್ಗದವರೇ ಹೊರತು ಮೇಲ್ವರ್ಗದವರಲ್ಲ’ ಎಂದರು.

‘ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಅಕ್ಷರ ವಂಚಿತರು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಬೆವರು ಸುರಿಸಿ ದುಡಿಯುವವರು ಅವಕಾಶ ವಂಚಿತರಾಗಬಾದರು, ಬೆವರು ಸುರಿಸುವವರು ಉತ್ಪಾದನೆಯ ಲಾಭ ಪಡೆಯುವಂತಾಗಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು’ ಎಂದು ಹೇಳಿದರು.

‘ದೇಶದಲ್ಲಿ ಪ್ರತಿ ವರ್ಷ 260 ಮಿಲಿಯನ್‌ ಟನ್‌ ಆಹಾರ ಉತ್ಪಾದನೆಯಾಗುತ್ತಿದೆ. ಆದರೂ ದೇಶದ ಜನತೆಗೆ ಎರಡು ಹೊತ್ತು ಊಟ ಸಿಗುತ್ತಿಲ್ಲ. ಇದನ್ನು ಮನಗಂಡು ಕೇಂದ್ರ ಸರ್ಕಾರ ಆಹಾರ ಭದ್ರತಾ ಮಸೂದೆ ಜಾರಿಗೆ ತಂದಿದೆ’ ಎಂದರು.

‘ರಾಜ್ಯ ಸರ್ಕಾರ ಕೂಡ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಹಸಿವು ಮುಕ್ತ  ಮತ್ತು ಅಪೌಷ್ಟಿಕ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಮುಂದಾಗಿದೆ’ಎಂದರು.

ಸೇತುವೆ ಮಂಜೂರು:
‘ಅಡವಿಹಾಳ– ಕೂಡಲಸಂಗಮ ನಡುವೆ ಅಗತ್ಯವಿರುವ ಸೇತುವೆ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ’ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ‘ರಾಜ್ಯದಲ್ಲಿ ಸ್ವಚ್ಛ ಆಡಳಿತ ನೀಡುತ್ತೇವೆ, ಅಭಿವೃದ್ಧಿ ಮತ್ತು ಸಾಮಾಜಿಕ ಸಮಾನತೆಯ ದಾರಿಯಲ್ಲಿ ಸರ್ಕಾರ ಮುನ್ನಡೆಯುತ್ತಿದೆ’ ಎಂದರು.

‘ಕರ್ನಾಟಕ ಕಾನೂನು ವಿಶ್ವವಿದ್ಯಾಲಯಕ್ಕೆ ಸರ್‌.ಸಿದ್ದಪ್ಪ ಕಂಬಳಿ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಸರ್ಕಾರಕ್ಕೆ ಮನವಿ ಮಾಡುವುದಾಗಿ’ ಹೇಳಿದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಸಚಿವರಾದ ಎಸ್‌.ಆರ್‌. ಪಾಟೀಲ, ಉಮಾಶ್ರೀ, ಎಚ್‌.ಎಸ್‌. ಮಹಾದೇವ ಪ್ರಸಾದ, ಶಾಸಕರಾದ ಎಚ್‌.ವೈ. ಮೇಟಿ. ವಿಜಯಾನಂದ ಕಾಶಪ್ಪನವರ, ಸಿದ್ದು ನ್ಯಾಮಗೌಡ, ಬಿ.ಬಿ. ಚಿಮ್ಮನಕಟ್ಟಿ, ಶಿವಾನಂದ ಎಸ್‌. ಪಾಟೀಲ, ಎಚ್‌.ಎಸ್‌. ಶಿವಶಂಕರ, ವಿನಯಕುಮಾರ ಕುಲಕರ್ಣಿ, ಸಂಸದ ಶಿವರಾಮೇಗೌಡ, ಮಹಾಂತೇಶ ಕೌಜಲಗಿ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಆರ್‌.ಬಿ. ತಿಮ್ಮಾಪುರ, ಮಾಜಿ ಶಾಸಕ ಎಸ್‌.ಜಿ. ನಂಜಯ್ಯನಮಠ, ಎ.ಬಿ. ಪಾಟೀಲ, ಡಾ.ಎಂ.ಪಿ. ನಾಡಗೌಡ, ವೇಣುಗೋಪಾಲ, ಲಕ್ಷ್ಮೀ ಹೆಬ್ಬಾಳ್ಕರ, ಡಾ.ದೇವರಾಜ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT