ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿಗೆ ವಿಶೇಷ ಯೋಜನೆ ಅಗತ್ಯ

Last Updated 21 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ 71 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಗೋದಾವರಿ, ಭೀಮಾ, ಕೃಷ್ಣಾ, ಕಾವೇರಿ ನದಿಗಳ ನೀರನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಲು ಸರ್ಕಾರ ವಿಶೇಷ ಯೋಜನೆ ಹಮ್ಮಿಕೊಳ್ಳಬೇಕು’ ಎಂದು ಸಂಸದ ಅನಂತಕುಮಾರ್ ತಿಳಿಸಿದರು. ಬೆಂಗಳೂರು ಜಲಮಂಡಲಿ ವತಿಯಿಂದ ನಗರದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ಮಳೆನೀರು ಸಂಗ್ರಹ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ಕಟ್ಟಡಗಳ ಮೇಲಿನಿಂದ ಮಳೆ ನೀರನ್ನು ಸಂಗ್ರಹಿಸುವಂತೆ ರಸ್ತೆಗಳಲ್ಲಿ, ವಿಶಾಲ ಮೈದಾನಗಳಲ್ಲಿ ಮಳೆ ನೀರು ಶೇಖರಿಸುವ ಪದ್ದತಿ ಬೇರೆ ದೇಶಗಳಲ್ಲಿದೆ. ಈ ಬಗ್ಗೆ ಕೂಡ ಸರ್ಕಾರ ಗಮನ ಹರಿಸಬೇಕಿದೆ. ಗುಜರಾತ್‌ನಲ್ಲಿ ಹೊಸ ರೀತಿಯ ಇಂಗು ಚರಂಡಿಗಳನ್ನು ನಿರ್ಮಿಸಲಾಗಿದೆ. ಅದೇ ಮಾದರಿಯ ಚರಂಡಿಗಳನ್ನು ನಗರದೆಲ್ಲೆಡೆ ರೂಪಿಸಬೇಕು’ ಎಂದರು.‘ನಗರದಲ್ಲಿ ಮಳೆ ನೀರು ಸಂಗ್ರಹದ ಅರಿವು ಮೂಡಿಸಲು ಕೇವಲ 15 ತಿಂಗಳಲ್ಲಿ ಸಂಗ್ರಹ ಕೇಂದ್ರ ನಿರ್ಮಿಸಿರುವುದು ಸಂತಸದ ಸಂಗತಿಯಾಗಿದೆ. ದೇಶದಲ್ಲಿ ಎಲ್ಲಿಯೂ ಇರದಂತಹ ವಿಶಿಷ್ಟ ಮಳೆ ನೀರು ಸಂಗ್ರಹ ಉದ್ಯಾನವನವನ್ನು ಜಲಮಂಡಲಿ ರೂಪಿಸಿರುವುದು ಶ್ಲಾಘನೀಯ ಸಂಗತಿ’ ಎಂದರು.

ಗೃಹ ಸಚಿವ ಆರ್.ಅಶೋಕ ಮಾತನಾಡಿ ‘ಮಳೆ ನೀರು ಸಂಗ್ರಹಕ್ಕಾಗಿ ದಿನಗಳನ್ನು ಎಣಿಸದೇ ತಕ್ಷಣವೇ ನಾಗರಿಕರು ಮಳೆ ನೀರು ಸಂಗ್ರಹಕ್ಕೆ ಮುಂದಾಗಬೇಕಿದೆ’ ಎಂದು ಹೇಳಿದರು.‘ನಗರದ 23 ಸಾವಿರ ಕಟ್ಟಡಗಳು ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ನೀರು ಪೋಲು ಮಾಡುವ ಮುನ್ನ ಜನರು ಚಿಂತಿಸಬೇಕಿದೆ. ಮುಂದಿನ ಜನಾಂಗಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಶ್ರಮಿಸಿದರೆ ಬೆಂಗಳೂರು ಜಲಮಂಡಲಿ ದೇಶಕ್ಕೆ ಮಾದರಿಯಾಗಲಿದೆ ಎಂದು ಅವರು ಹೇಳಿದರು.

ಮೇಯರ್ ಎಸ್.ಕೆ.ನಟರಾಜ್ ಮಾತನಾಡಿ  ‘ಬೆಂಗಳೂರನ್ನು ಹವಾನಿಯಂತ್ರಿತ ನಗರವನ್ನಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಳೆ ನೀರು ಸಂಗ್ರಹಕ್ಕೆ ಮುಂದಾಗಬೇಕಿದೆ. ನಗರದಲ್ಲಿರುವ 24 ಲಕ್ಷ ಕಟ್ಟಡಗಳಲ್ಲಿ ಕನಿಷ್ಠ 5 ಲಕ್ಷ ಕಟ್ಟಡಗಳಾದರೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಿದೆ’ ಎಂದು ಹೇಳಿದರು. ಶಾಸಕ ಬಿ.ಎನ್.ವಿಜಯಕುಮಾರ್ ಮಾತನಾಡಿ ‘ಜಯನಗರ ಬಡಾವಣೆಯನ್ನು ರೂಪಿಸಿದ ಸರ್.ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ಮಳೆ ನೀರು ಸಂಗ್ರಹ ಕೇಂದ್ರ ಅಸ್ತಿತ್ವಕ್ಕೆ ಬಂದಿರುವುದು ಸಂತಸದ ವಿಚಾರವಾಗಿದೆ.

ಜಯನಗರದಲ್ಲಿ ಈಗಾಗಲೇ ಗುಜರಾತ್ ಮಾದರಿಯ ಸುಮಾರು 100 ಇಂಗು ಚರಂಡಿಗಳನ್ನು ರೂಪಿಸಿದ್ದೇವೆ. ಹೀಗಾಗಿ ಮಳೆಗಾಲದಲ್ಲಿ ಈ ಪ್ರದೇಶ ಪ್ರವಾಹ ಮುಕ್ತವಾಗಿತ್ತು’ ಎಂದರು.
ಬಿಬಿಎಂಪಿ ಆರ್ಥಿಕ ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್. ಸದಾಶಿವ, ಬೆಂಗಳೂರು ಜಲಮಂಡಲಿ ಅಧ್ಯಕ್ಷ ಪಿ.ಬಿ.ರಾಮಮೂರ್ತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT