ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ಉಲ್ಬಣ

Last Updated 14 ಡಿಸೆಂಬರ್ 2013, 3:57 IST
ಅಕ್ಷರ ಗಾತ್ರ

ಮುದ್ದೇಬಿಹಾಳ:  ತಾಲ್ಲೂಕಿನ ಇಣಚಗಲ್ಲ ಗ್ರಾಮದಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ  ತಲೆದೋರಿದೆ.  ತಾಲ್ಲೂಕು ಆಡಳಿತ ತಕ್ಷಣ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಬೇಕು ಎಂದು   ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಒಂದು ಸಾವಿರ ಜನಸಂಖ್ಯೆ ಹೊಂದಿರುವ ಇಣಚಗಲ್ಲ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸುವಂತೆ ಆಗ್ರಹಿಸಿ, ಕೊಲ್ಲಾಪುರದಲ್ಲಿ ಜಿಲ್ಲಾ  ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ   ನಿವೃತ್ತರಾದ  ಜಿ.ಡಿ.ಇನಾಮದಾರ ಅವರು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯಿತಿ ಸಿ.ಇ.ಒ. ಅವರಿಗೆ (17.10.2013 ಹಾಗೂ 27.10.2013) ಪತ್ರ ಬರೆದಿದ್ದರು. ಪತ್ರದ ನಂತರ ಜಿಲ್ಲಾ ಪಂಚಾಯಿತಿ ಸಿ.ಇ.ಒ ಅವರೇ ನೇರವಾಗಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದರು. ಮತ್ತೆ ಈಗ ಯಥಾಸ್ಥಿತಿ ಮುಂದುವರಿದಿದೆ.

ಗ್ರಾಮಸ್ಥರು ಈಗ ನೀರಿಗಾಗಿ  ಗ್ರಾಮದ ಬಸಯ್ಯ ಹಿರೇಮಠ ಹೊಲಕ್ಕೆ (ಪಂಪ ಹಚ್ಚಿ ನೀರೆತ್ತುವ ಸಮಯ ದಲ್ಲಿ)  ನೀರು ಸಂಗ್ರಹಿಸಿದರೆ, ಮತ್ತೊಮ್ಮೆ ವಿ.ಕೆ. ದೇಶಪಾಂಡೆ ಅವರ ಬಾವಿಗೆ ಹೋಗಿ ಅಲ್ಲಿಂದ ನೀರು ತರಬೇಕಿದೆ.

ಗ್ರಾಮದ ಕೆಲವು ಜನರು ಉದ್ಯೋಗ ಹುಡುಕಿಕೊಂಡು ಬೇರೆ ಬೇರೆ ಕಡೆ ವಲಸೆ ಹೋಗಿದ್ದು ಮನೆಯಲ್ಲಿರುವ ವೃದ್ಧರು, ಸಣ್ಣ ಮಕ್ಕಳು, ಮಹಿಳೆಯರು ಅನಿವಾರ್ಯವಾಗಿ ಕುಡಿಯುವ ನೀರಿಗಾಗಿ ಕೊಡ ಹಿಡಿದುಕೊಂಡು ಕಿಲೋ ಮೀಟರ್ ವರೆಗೆ ಅಲೆಯಬೇಕಾಗಿದೆ.

‘ಊರಲ್ಲಿ ನೀರು ಇಲ್ಲ.   ಕಿರು ನೀರು ಸರಬರಾಜು ಕೆಟ್ಟಿರುವುದರಿಂದ ಸಮೀಪದ ದೇಶಪಾಂಡೆ  ತೋಟಕ್ಕೆ ಹೋಗಿ ನೀರು ತರಬೇಕಿದೆ. ಊರ ಸಮೀಪದಲ್ಲಿಯೇ ಇದ್ದ ಬಾಂದಾರ ಈಗ ಬತ್ತಿ ಹೋಗಿದ್ದು, ಸಮಸ್ಯೆ ಮತ್ತಷ್ಟು ಜಟಿಲವಾಗಲು ಕಾರಣ’ ಎಂದು  ಗ್ರಾಮದ ಕಂಠೆಮ್ಮ ಶಿವಯ್ಯ ನಿಡಗುಂದಿಮಠ ಹೇಳುತ್ತಾರೆ.  

ಗ್ರಾಮ ಪಂಚಾಯಿತಿವರು ನೀರೆತ್ತುವ ವಿದ್ಯುತ್‌ ಟಿ.ಸಿ.ಯನ್ನು   ಖಾಸಗಿ ವ್ಯಕ್ತಿಯ ಹೊಲದಲ್ಲಿ ಕೂಡಿಸಿದ್ದೇ ವಿವಾದಕ್ಕೆ ಕಾರಣವಾಗಿದೆ. ಆ ರೈತ ಈ ಟಿ.ಸಿ.ನನ್ನದೇ ಎನ್ನುತ್ತಿರುವುದರಿಂದ ಪಂಚಾಯಿತಿಯವರು ಏನೂ ಮಾಡದ ಸ್ಥಿತಿ ಉಂಟಾಗಿದೆ. ಗ್ರಾಮಸ್ಥರೆಲ್ಲ ಸೇರಿ ಟಿ.ಸಿ. ಇಟ್ಟುಕೊಂಡಿರುವವನ ವಿರುದ್ಧ ಪೊಲೀರಿಗೆ ದೂರು ಕೊಡಲು ಹೋದರೆ  ಪೊಲೀಸರು  ನಾವು ರೈತರ ವಿರುದ್ಧ ದೂರು ದಾಖಲಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆ.

ನಿವೃತ್ತ ನ್ಯಾಯಾಧೀಶ ಜಿ.ಡಿ.ಇನಾಮದಾರ  ಡಿ.5 ರಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯಿತಿ ಸಿ.ಇ.ಒ. ಅವರಿಗೆ ಪತ್ರ ಬರೆದಿದ್ದಾರೆ. ನೀರಿನ ಸಮಸ್ಯೆ ಶಾಶ್ವತವಾಗಿ ಬಗೆ ಹರಿಯದಿದ್ದರೆ ಗ್ರಾಮಸ್ಥರು ಮತ್ತೆ ತಹಶೀಲ್ದಾರ್ ಕಚೇರಿ ಎದುರು ಮಕ್ಕಳು ಮರಿ ಸಮೇತ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಗ್ರಾಮದ ಆನಂದ ಹಿರೇಮಠ, ಸಾಯಬಣ್ಣ ಸಂಗಪ್ಪ ತಳವಾರ, ಈರಣ್ಣ ನಾಗಯ್ಯ ಹಿರೇಮಠ, ದತ್ತು ನೀಲಕಂಠರಾವ ದೇಶಪಾಂಡೆ, ಸಾಬಣ್ಣ ಬಸಪ್ಪ ತಳವಾರ ಎಚ್ಚರಿಸಿದ್ದಾರೆ.

ಬರಗಾಲದ ಸಮಯದಲ್ಲಿ ಮಾತ್ರ ಕುಡಿಯುವ ನೀರಿನ ಜವಾಬ್ದಾರಿ ನನಗೆ ಬರುತ್ತದೆ. ಕುಡಿಯುವ ನೀರು ಪೂರೈಕೆ ತಾಲ್ಲೂಕು ಪಂಚಾಯಿತಿ ಹಾಗೂ ಪಂಚಾಯತ್ ರಾಜ್‌ ಎಂಜಿನಿಯರಿಂಗ್‌ನವರಿಗೆ ಸಂಬಂಧಿಸಿದ್ದು, ಅವರು ನನಗೆ ಪತ್ರ ಬರೆದರೆ ಸ್ವತ: ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಹಶೀಲ್ದಾರ್ ಸಿ.ಲಕ್ಷ್ಮಣ ಹೇಳಿದರು.
ತಾ.ಪಂ. ಇ.ಒ. ಅಕ್ಕಮಹಾದೇವಿ ಹೊಕ್ರಾಣಿ ಹಾಗೂ ಪಂಚಾಯತ್ ರಾಜ್‌ ಎಂಜಿನಿಯರಿಂಗ್‌ ಉಪವಿಭಾಗದ ಎ.ಇ.ಇ. ಐ.ಆರ್‌. ಮುಂಡರಗಿಗೆ ದೂರವಾಣಿ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT