ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು-ನೀರೆಯ ಸಾಮ್ಯ - ಸ್ತ್ರೀ ಅಸ್ಮಿತೆಯ ಹೊಸಕಟ್ಟು :ಕವಿತಾ ರೈ ಅವರ ಲೋಕಾಮುದ್ರಾ

Last Updated 3 ಜೂನ್ 2012, 6:00 IST
ಅಕ್ಷರ ಗಾತ್ರ

ಪರಂಪರಾಗತ ಭಾರತೀಯ ಮನದ ಒಂದು ಮೂಲಪ್ರತೀಕವು ಭೂಮಿ ಮತ್ತು ನೀರನ್ನು ಹೆಣ್ಣಿನ ರೂಪದಲ್ಲಿ ಕಲ್ಪಿಸಿರುತ್ತದೆ. ಇಂಥ ಮೂಲ ಪ್ರತೀಕಗಳು ವಿರೋಧಿ ದ್ವಂದ್ವಗುಣಗಳ ಸಂಯುಕ್ತ ಆಕೃತಿಗಳಾಗಿರುತ್ತವೆ.
 
ಉದಾ: ನೀರು ಮಣ್ಣುಗಳು  ಹುಟ್ಟು-ಸಾವುಗಳೆರಡಕ್ಕೂ ಸಂಕೇತಗಳು. ಅವುಗಳ ಸಾಮ್ಯದಿಂದಾಗಿ ಹೆಣ್ಣೂ ಜೀವರಕ್ಷಕಿ ಮತ್ತು ಜೀವನಾಶಕ್ತಿಯಾಗಿ ಪುರುಷಚಿಂತನೆಯಲ್ಲಿ ಇತಿಹಾಸಪೂರ್ವಕಾಲದಿಂದಲೂ ಭಾವಿಸಲ್ಪಟ್ಟಿರುತ್ತಾಳೆ.

ದುರ್ಗೆಯ ಸ್ತುತಿಯಲ್ಲಿ ಹೊರಗಿನಿಂದ ಬರುವ ಕೇಡುಗಳನ್ನು ನಾಶಮಾಡಲು ಅವುಗಳನ್ನೂ ಮೀರಿಸುವಷ್ಟು ಭೀಕರಳಾಗಿ ಅವಳನ್ನು ಬಣ್ಣಿಸುವುದಿಲ್ಲವೇ? ಸಮಷ್ಟಿಪ್ರಜ್ಞೆಯಲ್ಲಿ ಬೇರೂರಿರುವ ಇಂಥ ಆರ್ಕಿಟೈಪ್‌ಗಳ ಪರಸ್ಪರ ವಿರುದ್ಧ ಲಕ್ಷಣಗಳಲ್ಲಿ ಒಂದು ಗುಣವನ್ನು ಮಾತ್ರ ಎತ್ತಿಕೊಂಡು ಆಧುನಿಕ ಹೆಣ್ಣಿನ ಪರಿಸ್ಥಿತಿ ಮತ್ತು ಅವಳ ದಮನದ ಚರಿತ್ರೆಯ ವಾಸ್ತವಾಂಶಗಳ ಬೆಳಕಿನಲ್ಲಿ ಪುರಾಣದೊಳಗೆ ಹುದುಗಿರುವ ಸ್ತ್ರೀತ್ವದ ಆಯಾಮವೊಂದನ್ನು ಬಲಗೊಳಿಸಿ ಪ್ರತಿಪಾದಿಸುವ ಯತ್ನ ಸಮಕಾಲೀನ ಮಹಿಳಾಬರಹದಲ್ಲಿ ಎದ್ದು ಕಾಣಿಸುತ್ತದೆ.

ಲಿಂಗವ್ಯವಸ್ಥೆಯ ಸ್ಥಾಪಿತ ಮೌಲ್ಯಗಳನ್ನು ಪಲ್ಲಟಗೊಳಿಸಲು ಹೀಗೆ ಒಂದು ಗುಣವನ್ನು ಮಾತ್ರ ಸ್ವೀಕರಿಸಿ ಬಲಪಡಿಸಿ ಎತ್ತಿಹಿಡಿಯುವ ಯತ್ನ ಒಂದು ರೀತಿಯ ಹೋರಾಟ ತಂತ್ರವಾಗಿರುತ್ತದೆ.

ಕವಿತಾ ರೈ ಅವರ ನಾಟಕವು `ಲೋಪಾಮುದ್ರಾ~ ಎಂಬ ದಿವ್ಯ ಕನ್ಯೆ ಭೂಮಿಯಲ್ಲಿ ಕವೇರ ಋಷಿಯ ಮಗಳು ಕಾವೇರಿಯಾಗಿ ಅನಂತರ ಅಗಸ್ತ್ಯನ ಮಡದಿಯಾಗಿ ಕೊನೆಗೆ ಕಾವೇರಿ ನದಿಯಾಗಿ ಹರಿದುಹೋದಳು ಎಂಬ ಪುರಾಣ ಕಥಾವಸ್ತುವನ್ನು ಬಳಸಿ ಎಲ್ಲ ಕಾಲಕ್ಕೂ ಸಲ್ಲುವ `ಲೋಕಾಮುದ್ರೆ~ಯಾಗಿ ರೂಪಾಂತರ ಹೊಂದುವ ಕಥೆಯನ್ನಾಗಿಸಿ ಹೆಣ್ಣಿನ ಅಸ್ಮಿತೆ ಮತ್ತು ಅನನ್ಯತೆಯ ಹೊಸಕಟ್ಟೋಣಕ್ಕೆ ಹೊರಡುತ್ತದೆ. ಲೋಪಗಳಿರದ, ಲೋಕಕ್ಕೆ ಉಪಕಾರಿಯಾದ ನೀರಾಗಿರುವ ಸ್ಥಿತಿಯನ್ನು ಎತ್ತಿಹಿಡಿಯುವ “ಲೋಕಾಮುದ್ರಾ” ಹೀಗೆ ಜೀವದಾಯಕ-ಪೋಷಕ ಸ್ತ್ರೀಗುಣಕ್ಕೆ ಮಾನ್ಯತೆ ಕೊಡಲು ಯತ್ನಿಸುತ್ತದೆ.

ಬ್ರಹ್ಮನ ಮಾನಸಪುತ್ರಿ ಲೋಪಾಮುದ್ರಾ. ಬದುಕಿಡೀ ಸಂಸಾರವಿರಕ್ತನಾಗಿ ಉಳಿದಿದ್ದ ಕವೇರಮುನಿ ಒಬ್ಬ ಮಗಳಿಗಾಗಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡುವುದು ಮುಪ್ಪಿನಲ್ಲಿ ಸೇವೆ ಾಡಲು ಹೆಣ್ಣುದಿಕ್ಕೊಂದು ಬೇಕು ಎಂದು. ಬ್ರಹ್ಮನು ತನ್ನ ಮಾನಸ ಪುತ್ರಿಯಾದ ಲೋಪಾಮುದ್ರೆಯ ಇಚ್ಛೆ ಕೇಳದೆ ಭೂಮಿಗೆ ಕವೇರಮುನಿಯ ಮಗಳಾಗೆಂದು ಕಳಿಸುತ್ತಾನೆ.

ಭುವಿಯಲ್ಲಿ ಕವೇರನ ಮಗಳಾಗಿ ಕಾಡಿನ ಪ್ರಕೃತಿಯಲ್ಲಿ ನಲಿಯುತ್ತಾ ಬದುಕುವ ಅವಳನ್ನು ಮಹಿಮಾವಂತನಾದ ಅಗಸ್ತ್ಯಮುನಿ ಕಂಡು, ಬಯಸಿದಾಗ ಆ ವೃದ್ಧ ಋಷಿಯ ಶಾಪಶಕ್ತಿಗೆ ಹೆದರಿದ ಕವೇರನಿಗೆ ಮಗಳನ್ನು ಅವನಿಗೇ ಮದುವೆ ಮಾಡಿಕೊಡುವುದು ಅನಿವಾರ್ಯವಾಗುತ್ತದೆ. ಆ ವೃದ್ಧ ತಪಸ್ವಿಯನ್ನು ಮದುವೆಯಾಗಲು ಮುಂದಿಟ್ಟ ಶರತ್ತು ಅವನು ನಿರಂತರವಾಗಿ ತನ್ನೊಂದಿಗೇ ಇರಬೇಕು, ಎಂದೂ ಏಕಾಕಿನಿಯಾಗಿ ತನ್ನನ್ನು ಬಿಟ್ಟು ಹೋಗಬಾರದು, ಹಾಗೆ ಹೋದರೆ ತಾನು ನೀರಾಗಿ ಹರಿದು ಹೊರಟುಹೋಗುವೆ  ಎನ್ನುವುದಾಗಿತ್ತು. ಇವಳ ಷರತ್ತಿಗೆ ಒಪ್ಪಿ ಮದುವೆಯಾದ ಅಗಸ್ತ್ಯ ಋಷಿ ತನ್ನ ಲೋಕೋಪಕಾರದ ದಿನಚರಿಯನ್ನು ಬಿಡದೆ ಹೋದರೂ ಅವಳನ್ನೇ ನೀರಾಗಿ ರೂಪಾಂತರಿಸಿ ತನ್ನ ಕಮಂಡಲುವಿನಲ್ಲಿ ಇಟ್ಟುಕೊಳ್ಳುತ್ತಾನೆ.

`ಯಾವುದೇ ಪಾತ್ರೆಯೊಳಗೆ ತುಂಬಿದರೂ ಅದೇ ಆಕಾರ ಪಡೆಯುವ ನೀರಿನ~ ಈ ಕಥೆ `ಎಲ್ಲ ಹೆಣ್ಣುಗಳ ಕತೆ~, `ಹೋರಾಟ ಮತ್ತು ತ್ಯಾಗದ ಕಥೆ~ ಹೇಳುವ ಕವಿತಾ ರೈ ಅವರ ನಾಟಕದಲ್ಲಿ ಮಡಿಕೇರಿ ಪ್ರಾಂತದ ಭಾಗಮಂಡಲದ ಬ್ರಹ್ಮಗಿರಿಯಲ್ಲಿ ಹುಟ್ಟಿ ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಹರಿದು ಪೂಂಪಟ್ಟಣದಲ್ಲಿ ಸಮುದ್ರ ಸೇರುವ ಜೀವನದಿ ಕಾವೇರಿಯ ಭೌಗೋಳಿಕ ಕಥೆ ಇದೆ.
 
ಪ್ರಕೃತಿ ಸಂಪತ್ತಿನ ವಿನಾಶದ ಆತಂಕದ ಎಚ್ಚರವಿದೆ. ಜನತಾಂತ್ರಿಕತೆ ಹೆಸರಿನ ನದೀನೀರಿನ ರಾಜಕಾರಣದ ದ್ವೇಷಾಸೂಯೆಗಳ ವರ್ತಮಾನದ ಚರಿತ್ರೆ ಇದೆ. ಇಂದಿನ ಮಹಿಳೆ ಕೇಳುತ್ತಿರುವ ಪ್ರೀತಿ, ಸ್ವಾತಂತ್ರ್ಯಗಳ ಹಕ್ಕಿನ ಕಥೆ ಇದೆ. ಬಿಡುಗಡೆ ಎನ್ನುವುದರ ಅರ್ಥಜಿಜ್ಞಾಸೆ ಇದೆ.

ಕಾವೇರಿಯ ಬದುಕಿನಲ್ಲಿ ಬಾಲ್ಯದಲ್ಲಿ ತಂದೆ,ಯೌವನದಲ್ಲಿ ಗಂಡ ಹೆಣ್ಣಿನ ರಕ್ಷಕರೆನ್ನುವ ಸಮಾಜದ ನೀತಿಯೇ ತಿರುವು ಮುರುವಾಗಿದೆ. ನಿರ್ಜೀವಗೊಂಡ ಮದುವೆಯ ಸಾಂಸಾರಿಕ ಬಂಧನದಿಂದ ವಿಚ್ಛೇದಿತಳಾದ ಹೆಣ್ಣಿನ ಬದುಕು ಕೇವಲ ಒಬ್ಬನ ಮಗಳಾಗಿರುವ, ಒಬ್ಬನ ಪತ್ನಿಯಾಗುಳಿವ ಸ್ವೀಕೃತ ಸ್ತ್ರೀನೆಲೆಗೆ ಬದಲಾಗಿ ವಿಶ್ವಸಂಸಾರದ ಒಟ್ಟಾರೆ ಜೀವನದ ಸಮೃದ್ಧಿಗೆ ಪೂರಕವಾಗಿ ಬದುಕುವ ವಿಶಾಲವೂ ಸ್ವಾಯತ್ತವೂ ಆದ ಅಸ್ಮಿತೆಯ ಕಟ್ಟೋಣವಿದೆ.

ಅತ್ಯಂತ ಮುಖ್ಯವಾದ ಸಂಗತಿ ಎಂದರೆ ಪುರಾಣ, ವರ್ತಮಾನಗಳನ್ನು, ಕಲ್ಪನೆ ವಾಸ್ತವಗಳನ್ನು ಇತಿಹಾಸ ಮತ್ತು ತತ್ವಚಿಂತನಗಳನ್ನು ಅತ್ಯಂತ ಸಂಕೀರ್ಣ ರೀತಿಯಲ್ಲಿ ಜೋಡಿಸುವ ಯತ್ನವಿದೆ.

ನೀರು ಮತ್ತು ನೀರೆಯರ ಈ ಸಮೀಕರಣ ತುಂಬ ಹಳೆಯದೇ ಆದರೂ ಕವಿತಾ ಅವರ ಒಟ್ಟು ಬರಹವನ್ನು ಗಮನಿಸಿದಲ್ಲಿ ನೀರು ಅವರ ಗಾಢವಾದ ಒಲವೂ ಆಗಿದೆ ಎನ್ನುವುದನ್ನು ಕಾಣಬಹುದು.“ಹಕ್ಕಿ ಹರಿವ ನೀರು”,“ನೀರ ತೇರು”, “ನೀರ ತೇಜಿಯನೇರಿ“-ಇವು ಕವಿತಾ ಅವರ ಮೂರು ಕವನ ಸಂಕಲನಗಳ ಹೆಸರುಗಳು. ನೀರು ಅವರನ್ನು ಸದಾ ಕಾಡುವ, ಕಲಕುವ, ತುಡಿಸುವ, ಭಾವನೆಯಲ್ಲಿ ತೇಲಿಸುವ ಬಗೆಗಳನ್ನು ಅವರ ಕವನಗಳೂ ಹೇಳುತ್ತವೆ.

ನೀರನ್ನೂ ನೀರೆಯನ್ನೂ ಒಂದೇ ಎಂದು ಕಂಡಂಥ ಪುರುಷದೃಷ್ಟಿ ಹುಟ್ಟಿಸಿರಬಹುದಾದ ಅಪಾರ್ಥಗಳನ್ನು ತೊಡೆದುಹಾಕಿ ಅವೆರಡರ ಚೈತನ್ಯ, ಚಲನಶೀಲತೆ, ಜೀವಶಕ್ತಿಗಳನ್ನು ಹೆಣ್ಣಿನ ಸಬಲತೆಗೆ ದ್ಯೋತಕವೆಂದು ಪ್ರತಿಪಾದಿಸುವ ಕವಿತಾ ಅಂತಹ ಕಾವ್ಯಗುಣವನ್ನು ನಾಟಕದಲ್ಲಿ ಮತ್ತಷ್ಟು ವಿಸ್ತರಿಸಿದ್ದಾರೆ ಎನ್ನಬಹುದು.

ಸ್ತ್ರೀಭಾವ ಸಮೃದ್ಧಿಯುಳ್ಳ ಕಾವ್ಯತ್ವವಿರುವ ಭಾಷೆ, ನದಿ, ಬೆಟ್ಟ, ಕಾಡು, ನೀರಅಲೆಗಳೆಲ್ಲ ಜೀವಂತವಾಗಿ ಪಾಲುಗೊಳ್ಳುವಂತೆ ಅನ್ನಿಸುವ ರೀತಿಯಲ್ಲಿ ಸನ್ನಿವೇಶಗಳನ್ನು ಹೆಣೆದಿರುವ ಬಗೆ ಇವೆಲ್ಲವೂ “ಲೋಕಾಮುದ್ರಾ”ವನ್ನು ವಿಶೇಷ ಪ್ರಯೋಗಶಕ್ತಿಯನ್ನು ಬಯಸುವ ನಾಟಕವನ್ನಾಗಿಸಿವೆ. ಬಲವಂತವಾಗಿ ವೈಚಾರಿಕತೆ ಹೇರಿದಂತೆ ಅನ್ನಿಸುವ ಕೆಲವು ಸಂಭಾಷಣೆಗಳು ಮತ್ತು ದೃಶ್ಯ ಸಂರಚನೆಯಲ್ಲಿ ಕೊರತೆಗಳು ಇದ್ದರೂ ಮಹಿಳೆಯೊಬ್ಬರು ನಾಟಕರಚನೆಯಲ್ಲಿ ಇಷ್ಟು ಪ್ರಬುದ್ಧತೆ ತೋರಿರುವುದು ಒಂದು ಅಪೇಕ್ಷಣೀಯವಾದ ಮಹತ್ವದ ಬೆಳವಣಿಗೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT