ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಗೆ ಹೊತ್ತು ಗೊತ್ತಿಲ್ಲ!

Last Updated 16 ಜುಲೈ 2012, 6:00 IST
ಅಕ್ಷರ ಗಾತ್ರ

ಬಳ್ಳಾರಿ: ತೀವ್ರ ಬರಗಾಲದಿಂದಾಗಿ ಬರಿದಾಗಿರುವ ತುಂಗಭದ್ರಾ ಜಲಾಶಯ, ಕಾಲುವೆಗೆ ಹರಿಯದ ನೀರು. ಬತ್ತಿ ಹೋಗಿರುವ ಅಲ್ಲಿಪುರ ಮತ್ತು ಮೋಕಾ ಕೆರೆಗಳು. 10ರಿಂದ 12 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ. ನೀರಿಗಾಗಿ ಪರದಾಟ, ಹಗಲು ರಾತ್ರಿ ಎನ್ನದೆ ನೀರಿಗೆ ಕಾದು ಕುಳಿತುಕೊಳ್ಳುವ ಅನಿವಾರ್ಯತೆ.
ಇದು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ಕ್ಷಾಮಕ್ಕೆ ತುತ್ತಾಗಿರುವ ನಗರದ ಜನ ಎದುರಿಸುತ್ತಿರುವ ಸಂಕಷ್ಟ.

ಅನೇಕ ವರ್ಷಗಳಿಂದ ನಗರದಲ್ಲಿ ಕುಡಿಯುವ ನೀರಿಗಾಗಿ ಈ ರೀತಿಯ ಹಾಹಾಕಾರ ಎದುರಾಗಿರಲಿಲ್ಲ. ಆದರೆ, ಈಗ ಕೊಳಾಯಿಯಲ್ಲಿ ನೀರು ಬಂದರೆ ಸಾಕು ಎಂಬ ಸ್ಥಿತಿ ಇದೆ.

ಕೆರೆಗಳಲ್ಲಿ ನೀರಿಲ್ಲ ಎಂಬ ಕಾರಣ ದಿಂದ ಬಹುತೇಕ ಎರಡು ವಾರ ಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಆದರೆ, ಅದಕ್ಕೆ ಹೊತ್ತು- ಗೊತ್ತು ಇಲ್ಲ. ಕೆಲವು ಬಡಾವಣೆಗಳಲ್ಲಿ ಮಧ್ಯ ರಾತ್ರಿ ನೀರು ಬಿಟ್ಟರೆ, ಇನ್ನು ಕೆಲವೆಡೆ ಬೆಳಗಿನ ಜಾವ. ಮತ್ತೆ ಕೆಲವೆಡೆ ಮಟಮಟ ಮಧ್ಯಾಹ್ನ. ಮೇಲಾಗಿ ಯಾವ ದಿನ, ಯಾವ ಪ್ರದೇಶಕ್ಕೆ ನೀರು ಬಿಡಲಾಗುತ್ತದೆ ಎಂಬ ಮುನ್ಸೂಚನೆ ದೊರೆಯುವುದಿಲ್ಲ. ಹೀಗಾಗಿ ನಿತ್ಯವೂ ನೀರಿನ ಜಪ ಮಾಡಬೇಕಾಗಿದೆ ಎಂಬುದು ಸಾರ್ವಜನಿಕ ಆರೋಪ.

ನೀರು ಬಿಡುವುದೇ ಒಂದು, ಒಂದೂವರೆ ಗಂಟೆ. ಅಷ್ಟು ಕಾಲ ವಿದ್ಯುತ್ ಕಡಿತವಾಗಿದ್ದರಿಂದ ಜನರು ಕತ್ತಲಲ್ಲೇ ನೀರು ಹಿಡಿಯ ಬೇಕಾಯಿತು. ಹೋಗಲಿ ಬಿಡು ಎಂದು ಅಸಡ್ಡೆ ಮಾಡುವಂತೆಯೂ ಇಲ್ಲ. ಬಿಟ್ಟರೆ ಮತ್ತೆ 12 ದಿನ ನೀರು ಬರುವುದಿಲ್ಲ. ಕತ್ತಲಲ್ಲೇ ಅನೇಕರು ಜೆಸ್ಕಾಂ  ಸಿಬ್ಬಂದಿಯನ್ನು ಬೈಯುತ್ತ ಹೇಗೋ ನೀರು ಹಿಡಿದಿಟ್ಟುಕೊಂಡರು ಎಂದು ಅಲ್ಲಿನ ನಿವಾಸಿ, ಬ್ಯಾಂಕ್ ಉದ್ಯೋಗಿ ರಾಜಶೇಖರ್ `ಪ್ರಜಾ ವಾಣಿ~ ಎದುರು ತೀವ್ರ ಬೇಸರ ವ್ಯಕ್ತಪಡಿಸಿದರು.

`ನಾವು ವಿದ್ಯುತ್ ಕಡಿತ ಮಾಡುವುದು ಬೇಡ ಎಂದು ಹೇಳುವುದಿಲ್ಲ. ರಾತ್ರಿಯೆಲ್ಲ ಇರುವ ವಿದ್ಯುತ್ ಸಂಪರ್ಕ ನೀರು ಬರುವ ವೇಳೆಗೇ ಕಡಿತವಾದರೆ ಜನ ಏನು ಮಾಡಬೇಕು?~ ಎಂದು ಪ್ರಶ್ನಿಸುವ ಅವರು, ವಿದ್ಯುತ್ ಸಂಪರ್ಕ ಇದ್ದಲ್ಲಿ 12 ದಿನಕ್ಕೆ ಸಾಕಾಗುವಷ್ಟು ನೀರನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.

ಓವರ್ ಹೆಡ್ ಟ್ಯಾಂಕ್‌ಗಳನ್ನು ತುಂಬಿಸಿಕೊಳ್ಳಲು ವಿದ್ಯುತ್ ಬೇಕೇ ಬೇಕು. ಈ ಕುರಿತು ಜೆಸ್ಕಾಂ ಕಚೇರಿ ಗಳಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದರೆ ಬೇಜವಾಬ್ದಾರಿಯ ಉತ್ತರಗಳು ದೊರೆಯುತ್ತವೆ ಎಂದೂ ಅವರು ಹೇಳಿದರು.

`ನಿಮ್ಮ ಏರಿಯಾಗೆ ನೀರು ಬರುವ ಬಗ್ಗೆ ನಮಗೆ ಕನಸು ಬೀಳಬೇಕಿತ್ತಾ?~ ಎಂದೇ ಮಹಿಳಾ ಅಧಿಕಾರಿಯೊಬ್ಬರು ಮರು ಪ್ರಶ್ನೆ ಎಸೆದು ಫೋನ್ ಕಟ್ ಮಾಡಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸಲೆಂದೇ ನಿಯುಕ್ತಿಗೊಂಡಿರುವ ಅಧಿಕಾರಿಗಳು ಈ ರೀತಿ ಬೇಜ ವಾಬ್ದಾರಿಯ ಉತ್ತರ ನೀಡಿದರೆ ಹೇಗೆ?  ಎಂದು ಅವರು ಅವಲತ್ತು ಕೊಂಡರು.
ಪಾಲಿಕೆ ಕಚೇರಿಗೆ ಹೋಗಿ ಬಂದರೂ ನೀರು ಕಳುಹಿಸುವುದಿಲ್ಲ. ಕೊಳವೆ ಬಾವಿಗಳಲ್ಲಿ ಸಿಹಿ ನೀರು ಬರುವುದಿಲ್ಲ ಎಂದು ಕೌಲ್‌ಬಝಾರ್ ಪ್ರದೇಶದ ಸೋಲೋಮನ್ ಅವರು ಹೇಳುತ್ತಾರೆ.

ಮಹಾನಗರ ಪಾಲಿಕೆ ಆಯಾ ಬಡಾವಣೆಗೆ ಯಾವ ವೇಳೆಯಲ್ಲಿ ನೀರು ಪೂರೈಸ ಲಾಗುತ್ತದೆ ಎಂಬ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದರೆ ಜನತೆಗೆ ಅನುೂಲ ಆಗುತ್ತದೆ ಎಂದು ರಾಮಾಂಜನೇಯ ನಗರದ ಚಂದ್ರಶೇಖರ್ ಅವರು ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT