ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ಚಿಕಿತ್ಸಾ ಸಮಾವೇಶ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಲವತ್ಮೂರು ವರ್ಷಗಳಿಂದ ನಾಟ್ಯಕಲೆಯಲ್ಲಿ  ಸೇವೆ ಸಲ್ಲಿಸುತ್ತಾ ಬಂದಿರುವ ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ ಫೆಬ್ರುವರಿ 8 ಮತ್ತು 9ರಂದು ಸೃಷ್ಟಿ ರಾಷ್ಟ್ರೀಯ ನೃತ್ಯೋತ್ಸವ ಮತ್ತು ಅಂತರರಾಷ್ಟ್ರೀಯ ನೃತ್ಯ ಚಿಕಿತ್ಸಾ ಸಮಾವೇಶವನ್ನು ಹಮ್ಮಿಕೊಂಡಿದೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ನೃತ್ಯ ಚಿಕಿತ್ಸಾ ಸಮಾವೇಶ ಇದಾಗಿದ್ದು, ಭಾರತ ಮತ್ತು ಅಮೆರಿಕದ 15 ಪರಿಣತರು ನಾಟ್ಯಕಲೆ, ನೃತ್ಯ ಚಿಕಿತ್ಸೆ ಕುರಿತು ಕಾರ್ಯಾಗಾರ, ತರಬೇತಿ ನಡೆಸಿಕೊಡಲಿದ್ದಾರೆ. ಸಮಾವೇಶದಲ್ಲಿ ಪ್ರಬಂಧಗಳನ್ನೂ ಮಂಡಿಸುತ್ತಾರೆ.

ನೃತ್ಯ ಚಿಕಿತ್ಸೆ ಮಧುಮೇಹ, ಬೊಜ್ಜು, ಮಾನಸಿಕ ಒತ್ತಡ ನಿಯಂತ್ರಿಸಲು ಹೆಚ್ಚು ಸಹಕಾರಿ. ದೇಹ, ಮನಸ್ಸು ಮತ್ತು ಅಧ್ಯಾತ್ಮಕ್ಕೆ ನೃತ್ಯದೊಂದಿಗೆ ಸಂಬಂಧವಿರುವುದರಿಂದ ನೃತ್ಯ ಚಿಕಿತ್ಸೆಯ ಪರಿಣಾಮಕಾರಿ ಅಂಶಗಳನ್ನು ಈ ಕಾರ್ಯಕ್ರಮ ತಿಳಿಸಿಕೊಡಲಿದೆ ಎನ್ನುತ್ತಾರೆ ಭಾರತದಲ್ಲಿ ನೃತ್ಯ ಚಿಕಿತ್ಸೆ ಪರಿಚಯಿಸಿದ ನಾಟ್ಯವೈದ್ಯ ಎ.ವಿ.ಸತ್ಯನಾರಾಯಣ.

ನೃತ್ಯ ಚಲನೆ ಅಥವಾ ಮುದ್ರೆಗಳು ದೇಹದ ಅನೇಕ ನರಗಳಿಗೆ ವ್ಯಾಯಾಮ ಒದಗಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಉಲ್ಲಸಿತಗೊಳಿಸುತ್ತದೆ. ನೃತ್ಯದಿಂದ ರಕ್ತದಲ್ಲಿನ ಸಕ್ಕರೆ ಅಂಶದ ಸಮತೋಲನ ಸಾಧ್ಯವಿದೆ.
 
ಭರತನಾಟ್ಯ, ಕಥಕ್, ಯೋಗ, ಜಾನಪದ ನೃತ್ಯ, ಯುದ್ಧ ಕಲೆಗಳು ದೇಹಕ್ಕೆ ಉತ್ತಮವಾದ ವ್ಯಾಯಾಮದಂತೆ, ಆದರೆ ಸರಿಯಾದ ಕ್ರಮವನ್ನು ಅರಿಯಬೇಕಷ್ಟೆ ಎನ್ನುವುದು ಅವರ ಅಭಿಪ್ರಾಯ. ಮನರಂಜನೆಯೊಂದಿಗೆ ಆರೋಗ್ಯವನ್ನೂ ದುಪ್ಪಟ್ಟುಗೊಳಿಸುವ ಈ ಚಿಕಿತ್ಸೆ ಬಗ್ಗೆ  ಕಾರ್ಯಕ್ರಮದಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ.

ಈ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಫೆ 8ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ನೃತ್ಯ ಚಿಕಿತ್ಸೆ ಸಮಾವೇಶವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ `ಆಯುಶ್~ ನಿರ್ದೇಶಕ ಜಿ.ಎನ್.ಶ್ರೀಕಂಠಯ್ಯ ಆಗಮಿಸಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ನೃತ್ಯೋತ್ಸವವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಕುಮಾರಿ ಶ್ವೇತಾ ಲಕ್ಷ್ಮಣ್ ಮುಂತಾದವರು ಭಾಗವಹಿಸಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT