ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ಪವಿತ್ರ ಕಲೆ: ಜಯಶ್ರೀ

Last Updated 4 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೊ. ಯು.ಎಸ್. ಕೃಷ್ಣ ರಾವ್ ಅವರು ನೃತ್ಯವೂ ಒಂದು ಪೂಜನೀಯ ಕಲೆ ಎಂದು ಇಡೀ ಸಮಾಜಕ್ಕೆ ತೋರಿಸಿಕೊಟ್ಟವರು. ಅವರು ಕಲೆಗೆ ನೀಡಿದ ಕೊಡುಗೆ ಅಪಾರ ಎಂದು ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಹೇಳಿದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಕರ್ನಾಟಕ ನೃತ್ಯಕಲಾ ಪರಿಷತ್ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ಮಹಾಮಾಯಾ ಪ್ರೊ.ಯು.ಎಸ್.ಕೃಷ್ಣ ರಾವ್ ಅವರ ಜನ್ಮ ಶತಮಾನೋತ್ಸವ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಆಗಿನ ಕಾಲದಲ್ಲಿ ನೃತ್ಯ ದೇವದಾಸಿಯರಿಗೆ ಮಾತ್ರ ಸೀಮಿತ ಎಂಬ ಭಾವನೆಯಿತ್ತು. ಅಂತಹ ವೇಳೆಯಲ್ಲಿ ರಾಸಾಯನಶಾಸ್ತ್ರವನ್ನು ಅಭ್ಯಸಿಸಿದ್ದ ಕೃಷ್ಣ ರಾವ್ ಅವರಿಗೆ ಒಲಿದದ್ದು ನೃತ್ಯ ಕಲೆ. ಅದನ್ನೇ ತಮ್ಮ ಧ್ಯೇಯವಾಗಿಸಿಕೊಂಡು ಕಲೆಯ ಏಳಿಗೆಗೆ ಶ್ರಮಿಸಿದರು' ಎಂದು ಅವರು ಸ್ಮರಿಸಿದರು.

`ನೃತ್ಯವೂ ಒಂದು ಪವಿತ್ರವಾದ ಕಲೆ. ಅದರ ಬಗ್ಗೆ ಕೀಳು ಭಾವನೆ ಬೇಡ ಎಂದು ಕಲೆಯನ್ನು ಆರಾಧಿಸಿ ಅದನ್ನು ಬೆಳೆಸಿದರು. ನೃತ್ಯಕಲೆಯಲ್ಲಿ ರಂಗಕಲೆಯೂ ಸೇರುತ್ತದೆ ಎಂದು ಹೇಳಲು ನನಗೆ ಸಂತಸವಾಗುತ್ತದೆ' ಎಂದು ಹೇಳಿದರು.

`ಇಂದು ನಾವು ನಮ್ಮ ಮಕ್ಕಳಲ್ಲಿನ ಕಲೆಯನ್ನು ಗುರುತಿಸದೆ, ಅವರಿಗೆ ಹೆಚ್ಚಿನ ಅಂಕಗಳನ್ನು ಗಳಿಸಬೇಕು ಎಂದು ಒತ್ತಡವನ್ನು ಹಾಕುವ ಪ್ರವೃತ್ತಿಯನ್ನು ಬಿಡಬೇಕು. ಏಕೆಂದರೆ, ನಮ್ಮ ಮಕ್ಕಳಿಗೆ ಕಲೆಯ ಕುರಿತು ಇರುವ ಆಸಕ್ತಿಯನ್ನು ಗುರುತಿಸಿ ಅವರಿಗೆ ಕಲೆಯ ಸೇವೆಯನ್ನು ಮಾಡಲು ಅವಕಾಶ ನೀಡಬೇಕು' ಎಂದರು.

ಸಚಿವ ಗೋವಿಂದ ಎಂ.ಕಾರಜೋಳ ಮಾತನಾಡಿ, `ಕೃಷ್ಣರಾವ್ ಅವರು ಭರತನಾಟ್ಯದ ಮೇರು ಪ್ರತಿಭೆ. ಅವರು ಪುರುಷರಾಗಿದ್ದರೂ ನೃತ್ಯದ ಕಲೆಯನ್ನು ಮೈಗೂಡಿಸಿಕೊಂಡು ನಡೆಯುವಾಗ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೂ, ತಮ್ಮ ಆಸಕ್ತಿಯನ್ನು ಕಡೆಗಣಿಸದೆ, ತಮಗೆ ಒಪ್ಪಿತವಾದ ದಾರಿಯಲ್ಲಿ ನಡೆದು ಕಲೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ' ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಕಲಾವಿದೆ ಸೋನಾರ್ ಮಾನ್‌ಸಿಂಗ್ ಅವರನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.  ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್.ರಾಮಕೃಷ್ಣ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ವೈಜಯಂತಿ ಕಾಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT