ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜ ಹಂತಕರ ಹುಡುಕಾಟದಲ್ಲಿ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ರಾಷ್ಟ್ರವ್ಯಾಪಿ ಪ್ರಚಾರ ಪಡೆದಿದ್ದ ಹದಿಹರಯದ ಬಾಲಕಿ ಆರುಷಿಯ ಹತ್ಯೆ ಪ್ರಕರಣದ ನೈಜ ಅಪರಾಧಿಗಳನ್ನು ಗುರುತಿಸುವ ದಿಕ್ಕಿನಲ್ಲಿ ಸಿಬಿಐ ನ್ಯಾಯಾಲಯ ಸ್ಪಷ್ಟ ಸೂಚನೆಯನ್ನು ನೀಡಿದೆ. ನೋಯ್ಡಾದ ಪ್ರತಿಷ್ಠಿತ ದಂತವೈದ್ಯ ದಂಪತಿ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅವರೇ ತಮ್ಮ  ಏಕಮಾತ್ರ ಪುತ್ರಿ ಆರುಷಿಯ ಹತ್ಯೆ ಆರೋಪಿಗಳೆಂದು ಹೆಸರಿಸಿ ವಿಚಾರಣೆಯ ಪ್ರಕ್ರಿಯೆಗೆ ಚಾಲನೆ ನೀಡಿದೆ. 2008ರ ಮೇ 16 ರಂದು ತನ್ನ ಕೋಣೆಯಲ್ಲಿ ಶವವಾಗಿದ್ದ ಆರುಷಿ ಮತ್ತು ಅದರ ಮರುದಿನ ಮನೆಯ ಮಹಡಿಯ ಮೇಲೆ ಸತ್ತುಬಿದ್ದಿದ್ದ ಮನೆಯ ಸೇವಕ ಹೇಮರಾಜ ಇವರಿಬ್ಬರ ಹತ್ಯೆ ಪ್ರಕರಣದ ತನಿಖೆಯನ್ನು ಅದೇ ವರ್ಷದ ಜೂನ್ ಒಂದರಂದು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವಹಿಸಲಾಗಿತ್ತು. ಆ ವೇಳೆಗೆ ಸಿಕ್ಕಿದ ಸುಳಿವುಗಳನ್ನು ಆಧರಿಸಿ ನಡೆಸಿದ ತನಿಖೆ, ಮಾಡಿದ ಬಂಧನ, ಅವರಿಂದ ಪಡೆದ ಹೇಳಿಕೆ, ಸಂಗ್ರಹಿಸಿದ ಮಾಹಿತಿಗಳನ್ನೆಲ್ಲ ಕಲೆಹಾಕಿರುವ ಸಿಬಿಐ, ನಿಜವಾದ ಹಂತಕರನ್ನು ‘ಖಚಿತವಾಗಿ ಹೆಸರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿ ತನಿಖೆಯನ್ನು ಪರಿಸಮಾಪ್ತಿಗೊಳಿಸಲು ನ್ಯಾಯಾಲಯದ ಅನುಮತಿ ಕೋರಿತ್ತು. ಅದನ್ನು ತಿರಸ್ಕರಿಸಿದ ಸಿಬಿಐ ನ್ಯಾಯಾಲಯ ತನಿಖೆಯ ವರದಿಯಲ್ಲಿ ಪ್ರಸ್ತಾಪಿಸಿರುವ ಸಂಶಯದ ಎಳೆಯನ್ನೇ ಹಿಡಿದು ಆರುಷಿಯ ತಂದೆ ರಾಜೇಶ್ ತಲ್ವಾರ್ ಮತ್ತು ತಾಯಿ ನೂಪುರ್ ತಲ್ವಾರ್ ಅವರ ವಿರುದ್ಧ ಕೊಲೆ, ಸಾಕ್ಷ್ಯನಾಶ, ಒಳಸಂಚು ಹಾಗೂ ಅಪರಾಧ ಕೃತ್ಯ ಎಸಗಲು ಸಮಾನ ಉದ್ದೇಶ ಹೊಂದಿದ ಆರೋಪಗಳನ್ನು ಹೊರಿಸಿ ಸಮನ್ಸ್ ಜಾರಿಗೆ ಆದೇಶಿಸಿದೆ. ತಾನೇ ಪತ್ತೆ ಮಾಡಿದ ಅಂಶಗಳನ್ನು ಆಧರಿಸಿ ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಯಾವ ಒತ್ತಡವಿತ್ತು ಎಂಬುದು ಈಗಲಾದರೂ ಬಯಲಿಗೆ ಬರಬೇಕಾಗಿದೆ. 
 

ತನಿಖೆಯನ್ನು ಪರಿಸಮಾಪ್ತಿಗೊಳಿಸಲು ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಆಕ್ಷೇಪಿಸಿ ನಿಜವಾದ ಹಂತಕರನ್ನು ಪತ್ತೆ ಮಾಡುವಂತೆ ಆಗ್ರಹಪಡಿಸಿದ್ದ ತಲ್ವಾರ್ ದಂಪತಿ ಈಗ ಆರೋಪಿಗಳಾಗಿ ನ್ಯಾಯಾಲಯವನ್ನು ಎದುರಿಸಬೇಕಾಗಿದೆ. ತನಿಖೆ ನಡೆಸಿದ್ದರೂ ನಿಜವಾದ ಆರೋಪಿಗಳನ್ನು ಹೆಸರಿಸಲು ಹಿಂಜರಿದಿದ್ದ ಸಿಬಿಐ ಸಾಂದರ್ಭಿಕ ಸಾಕ್ಷಿಗಳಿಂದ ‘ಆರುಷಿಯ ತಂದೆ ರಾಜೇಶ್ ತಲ್ವಾರ್ ಅವರೇ ಇದರಲ್ಲಿ ಏಕೈಕ ಆರೋಪಿ ಎನಿಸುತ್ತದೆ; ಆದರೆ ಹಾಗೆಂದು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ’ ಎಂದು ಕೈ ಚೆಲ್ಲಿತ್ತು. ಈ ಲೋಪಕ್ಕೂ ಸಮಜಾಯಿಷಿ ಸಿಗಬೇಕಿದೆ. ಸಿಬಿಐ ತನಿಖೆ ಕೈಗೆತ್ತಿಕೊಳ್ಳುವ ವೇಳೆಗೆ ಹತ್ಯೆ ನಡೆದ ಸ್ಥಳದಲ್ಲಿ ಸಾಕ್ಷ್ಯಗಳನ್ನು ಕಲೆಹಾಕುವುದರಲ್ಲಿ ಉತ್ತರ ಪ್ರದೇಶ ಪೊಲೀಸರು ವಿಫಲವಾಗಿದ್ದುದು ಈ ಪ್ರಕರಣದಲ್ಲಿ ಕಂಡು ಬಂದಿದ್ದ ಪ್ರಮುಖ ಲೋಪ. ಈ ಕಾರಣಕ್ಕೆ  ಅಲ್ಲಿನ ಪೋಲೀಸರನ್ನೂ ಹೊಣೆ ಮಾಡಿ ವಿಚಾರಣೆ ಮುಂದುವರಿಸುವುದು ನೈಜ ಆರೋಪಿಗಳನ್ನು ಪತ್ತೆ ಮಾಡುವುದರಲ್ಲಿ ಸಹಾಯಕವಾಗುವ ಅಂಶ. ತಮ್ಮನ್ನು ಆರೋಪಿಗಳನ್ನಾಗಿ ಹೆಸರಿಸಿದ ನ್ಯಾಯಾಲಯದ ತೀರ್ಮಾನದ ವಿರುದ್ಧ ತಲ್ವಾರ್ ದಂಪತಿ ಹೋರಾಟ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿರುವುದರಿಂದ ಆರುಷಿ ಹತ್ಯೆ ಪ್ರಕರಣದ ವಿಚಾರಣೆ ಇನ್ನಷ್ಟು ಕಾನೂನು ಹೋರಾಟದ ಸುಳಿವನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT