ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಸಮಾಜದ ಬಲವರ್ಧನೆಗೆ ಸಲಹೆ

Last Updated 24 ಅಕ್ಟೋಬರ್ 2011, 10:55 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಸಮಾಜಕ್ಕಾಗಿ ದುಡಿದವರನ್ನು ಸಮಾಜ ಎಂದೂ ಮರೆಯಬಾರದು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಚರಪೀಠದ ಜಗದ್ಗುರು ಸಿದ್ಧಲಿಂಗೇಶ್ವರ ಸ್ವಾಮೀಜಿ ನುಡಿದರು.

ಪಟ್ಟಣದಲ್ಲಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘಟನೆಯ ಆಶ್ರಯದಲ್ಲಿ  ಭಾನುವಾರ ಆಯೋಜಿಸಿದ್ದ   ಕಿತ್ತೂರ ರಾಣಿ ಚೆನ್ನಮ್ಮ ವಿಜಯೋತ್ಸವವ ಹಾಗೂ ಪ್ರೊ.ಶರಣಬಸವ ಹತ್ತಿ  ಸ್ಮರಣೋತ್ಸವದ ಸಾನ್ನಿಧ್ಯ  ವಹಿಸಿ ಮಾತನಾಡಿದರು. ಪಂಚಮಸಾಲಿ ಗುರುಪೀಠದ ವಿಷಯದಲ್ಲಿ ಗುಂಪುಗಾರಿಕೆ ಮಾಡುವುದನ್ನು ಶ್ರೀಮಠ ಸಹಿಸುವುದಿಲ್ಲ. ಸಮಾಜದ ಬಲವರ್ಧನೆಗೆ ಭಿನ್ನಾಭಿಪ್ರಾಯ ಮರೆತು ದುಡಿಯಬೇಕು ಎಂದು ಮನವಿ ಮಾಡಿದರು.

ಹಳ್ಳಿಗಳಲ್ಲಿ ಸಂಚರಿಸಿ ಪಂಚಮಸಾಲಿ ಸಮಾಜವನ್ನು ಸಂಘಟಿಸಿದ ಪ್ರೊ. ಶರಣಬಸು ಅವರಂತೆ ಸಮಾಜಕ್ಕಾಗಿ ದುಡಿಯುವ ಯುವಕರ ಪಡೆ ಕಟ್ಟುವ ಅವಶ್ಯಕತೆಯಿದೆ. ಪ್ರತಿ ಜಿಲ್ಲೆಗೆ ಪಂಚಮಸಾಲಿ ಗುರುಭವನ, ದೆಹಲಿಯಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲವಾಗು ವಂತೆ ಸಂಪೂರ್ಣ ಉಚಿತವಾದ ಐ.ಎ.ಎಸ್. ಹಾಗೂ ಐ.ಪಿ.ಎಸ್. ತರಬೇತಿ ಕೇಂದ್ರ ತೆರೆಯಲಾಗುವುದು ಎಂದು ಘೋಷಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರ ಮಾತನಾಡಿ,  ಕೇಂದ್ರ ಸರ್ಕಾರ ಕಿತ್ತೂರ ಚೆನ್ನಮ್ಮನ ನಾಣ್ಯ ಬಿಡುಗಡೆ ಮಾಡಬೇಕು. ವಿಧಾನಸೌಧದ ಮುಂದೆ ಕಿತ್ತೂರ ಚೆನ್ನಮ್ಮನ ಮೂರ್ತಿ ಪ್ರತಿಷ್ಠಾಪಿಸಬೇಕು ರಾಜ್ಯದಲ್ಲಿರುವ 80 ಲಕ್ಷ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜವನ್ನು ಡಿಸೆಂಬರ್ 31 ರೊಳಗೆ 2 ಎ ಪ್ರವರ್ಗದಲ್ಲಿ ಸೇರಿಸಬೇಕು. ಇಲ್ಲದಿದ್ದರೆ ಒಂದು ಲಕ್ಷ ಜನರು ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು.

ಮುರುಗೇಶ ನಿರಾಣಿ ಅವರನ್ನು ಪದಚ್ಯುತಗೊಳಿಸುವ ಷಡ್ಯಂತ್ರ ನಡೆಯುತ್ತಿದ್ದು, ಹಾಗೇನಾದರೂ ಆದರೆ ಸಮಾಜದ ಜನತೆ ಅದನ್ನು ಸಹಿಸುವುದಿಲ್ಲ ಎಂದವರು ಎಚ್ಚರಿಕೆ ನೀಡಿದರು.

ಸಂಘಟನೆಯ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಪ್ರೊ.ಬಿ.ಎಂ.ಹಿರೇಮಠ, ಮಹೇಶ ಚನ್ನಂಗಿ, ಸಿದ್ದರಾಜ ಹೊಳಿ, ಎಸ್.ಸಿ.ಫಣಿ, ನೀಲಮ್ಮ ಹೊಸಮನಿ, ಎಸ್.ಸಿ. ರೇವಡಿ ಮಾತನಾಡಿದರು.  ಡಾ.ಮಹಾಂತ ಸ್ವಾಮೀಜಿ,  ಮಾತೋಶ್ರೀ ಯೋಗೇಶ್ವರಿ ಅಮ್ಮ, ಚೆನ್ನವೀರ ದೇವರು, ಮಹಾಂತಪ್ಪಗೌಡ ಪಾಟೀಲ, ನಿರ್ಮಲಾ ಶೇಗುಣಸಿ, ರಮೇಶ ಕಮತ, ಶಾಂತಪ್ಪ ಕಮತ, ಡಿ.ಎಸ್. ಹಿರೇಗೌಡರ, ಅಡಿವೆಪ್ಪ ಕಡಿ, ಪ್ರಭು ದೇಸಾಯಿ, ಎಸ್.ಬಿ. ಬಂಗಾರಿ, ಶ್ರೀಶೈಲಗೌಡ ಬಿರಾದಾರ ಉಪಸ್ಥಿತರಿದ್ದರು.

ಬಾಪುಗೌಡ ಪಾಟೀಲ ಹಾಗೂ ಪ್ರೊ.ಪರಮಾನಂದ ಮಸ್ಕಿ ಪ್ರಾರ್ಥಿಸಿದರು. ಜಿಲ್ಲಾಅಧ್ಯಕ್ಷ ಗುರುಶಾಂತ ನಿಡೋಣಿ ಸ್ವಾಗತಿಸಿದರು. ರಾಜ್ಯ ಉಪಾಧ್ಯಕ್ಷ ಜಿ.ಪಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಸೋಮನಗೌಡ ಪಾಟೀಲ ನಿರೂಪಿಸಿದರು. ಪ್ರೊ.ಬಸವರಾಜ ಸಾವಕಾರ ವಂದಿಸಿದರು. ಇದಕ್ಕೂ ಮೊದಲು  ವೀರರಾಣಿ ಕಿತ್ತೂರ ಚೆನ್ನಮ್ಮನ  ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT