ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಮೃತ ಪಾಕವು

Last Updated 10 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಆ ಮನೆಯಲ್ಲಿ ಅಂದು ದೀಪಾವಳಿ ಸಂಭ್ರಮ; ಆದರೆ ಯಜಮಾನನ ಮನದಲ್ಲಿ ದುಗುಡ; ಮಾನವೀಯತೆಗೆ ಕಟ್ಟುಬಿದ್ದು ಕೈದಿಯೊಬ್ಬನನ್ನು ಮನೆಗೆ ಕಳುಹಿಸಿ, ಮಾತಿಗೆ ತಪ್ಪದೇ ಅವನು ಮರಳಿ ಬರುವನೇ ಎಂದು ದಾರಿ ಕಾಯುತ್ತಿರುತ್ತಾನೆ ಆ ಪೊಲೀಸ್ ಅಧಿಕಾರಿ. ಅವನ ನಿರೀಕ್ಷೆ ಹುಸಿಯಾಗುವುದೋ? ನಿಜವಾಗುವುದೋ? ಎಂಬ ಕುತೂಹಲಕಾರಿ ದೃಶ್ಯದ ಚಿತ್ರೀಕರಣ ಮಾಡುತ್ತಿದ್ದರು ನಿರ್ದೇಶಕ ಟಿ.ನಾಗೇಶ್.

ಆರು ಕತೆಗಳನ್ನು ಒಳಗೊಂಡ ‘ಪಂಚಾಮೃತ’ ನೀಡುವತ್ತ ನಿರ್ದೇಶಕರ ಚಿತ್ತ. ಆರೂ ಕಥೆಗಳನ್ನು ಬೆಸೆಯುವ ಒಂದು ಅಂಶ ದೀಪಾವಳಿ. ಅಂದು ಚಿತ್ರೀಕರಣ ನಡೆಯುತ್ತಿದ್ದ ಕತೆಯ ನಾಯಕ ಶ್ರೀನಗರ ಕಿಟ್ಟಿ, ನಾಯಕಿ ಯಜ್ಞಾ ಶೆಟ್ಟಿ. ಈಗಾಗಲೇ ಐದು ಕತೆಗಳ ಚಿತ್ರೀಕರಣ ಮುಗಿಸಿರುವ ನಾಗೇಶ್, ನಾಲ್ಕೈದು ದಿನದಲ್ಲಿ ಈ ಭಾಗದ ಚಿತ್ರೀಕರಣ ಮುಗಿಸಿ ಹಾಡುಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಇದುವರೆಗೂ 21 ದಿನ ಚಿತ್ರೀಕರಣ ನಡೆಸಿದ್ದು, ಅಚ್ಯುತ ಕುಮಾರ್, ತಾರಾ, ರಮ್ಯಾ ಬಾರ್ನಾ, ನೀತು, ರಘು ಮುಖರ್ಜಿ, ಪೂಜಾಗಾಂಧಿ ಮುಂತಾದ ಕಲಾವಿದರು ಸಹಕರಿಸಿದ ರೀತಿಗೆ ನಾಗೇಶ್ ಸಂತಸ ವ್ಯಕ್ತಪಡಿಸಿದರು. ನಂತರ ಮಾತಿಗೆ ತೆರೆದುಕೊಂಡ ಕಿಟ್ಟಿ, ‘ಪ್ರತಿಯೊಂದು ಕತೆಗೂ ದೀಪಾವಳಿ ಹಬ್ಬ ಸಂಪರ್ಕ ಕಲ್ಪಿಸುತ್ತದೆ. ಬೆಳಕು ಎಲ್ಲರಿಗೂ ಬೇಕು. ಅದರ ಹಿಂದಿನ ಕತ್ತಲನ್ನು ಕೆದಕುವ ಕೆಲಸ ಮಾಡಿದ್ದಾರೆ ನಮ್ಮ ನಿರ್ದೇಶಕರು’ ಎಂದು ಮೆಚ್ಚುಗೆಯ ಮಾತನಾಡಿದರು.

ಈ ಚಿತ್ರದಲ್ಲಿ ಅವರದ್ದು ರೌಡಿ ಪಾತ್ರ. ನಿರ್ಮಾಪಕ ಮರಿಸ್ವಾಮಿ ಅವರಿಗೆ ಅಂದಾಜು ವೆಚ್ಚ ಏರಿಕೆಯಾಗಿಲ್ಲವೆಂಬ ತೃಪ್ತಿ. ನಾಯಕಿ ಯಜ್ಞಾ ಶೆಟ್ಟಿಗೆ ಕತೆ ಸರಳ ಎನಿಸಿದೆ. ಛಾಯಾಗ್ರಾಹಕ ಮಹೇಂದ್ರ ಅವರಿಗೂ ಖುಷಿ.

‘ಪ್ರೇಕ್ಷಕನೇ ನಿರ್ಣಾಯಕ’
‘ಪೊಲೀಸ್ ಪಾತ್ರಗಳ ಅವಕಾಶಗಳೇ ಬರುತ್ತಿವೆ. ಏನು ಮಾಡೋಕಾಗುತ್ತೆ’ ಎಂದು ಮಾತಿನ ಮೂಡಿಗಿಳಿದ ದೇವರಾಜ್, ಆಮೇಲೆ ತುಸು ಗಂಭೀರರಾದರು. ಪ್ರಜ್ವಲ್ ಚಿತ್ರಗಳ ಸಾಲುಸಾಲು ಸೋಲಿನ ಬಗ್ಗೆ ಕೇಳಲಾಗಿ, ‘ಅವನ ರೂಪ ಎಲ್ಲರಿಗೂ ಇಷ್ಟವಾಗಿದೆ. ಆದರೆ ಪ್ರತಿಭೆ ಇಷ್ಟವಾಗಬೇಕಲ್ವಾ?’ ಎಂದರು.

‘ಎಲ್ಲಾ ತಂದೆ ತಾಯಿ ಮಕ್ಕಳು ಯಶಸ್ಸಾಗಲಿ ಎಂದು ಹಾರೈಸುವುದು ಇದ್ದದ್ದೇ. ಆದರೆ ಈ ರಂಗದಲ್ಲಿ ಸೋಲು ಗೆಲುವು ಯಾರ ಕೈಯ್ಯಲ್ಲೂ ಇರುವುದಿಲ್ಲ. ಅಂತಿಮವಾಗಿ ಪ್ರೇಕ್ಷಕ ಮಹಾಶಯ ಮಾತ್ರ ನಟನನ್ನು ತಿದ್ದಿ ತೀಡಿ ರೂಪಿಸಲು ಸಾಧ್ಯ’ ಎಂದು ಹೇಳಿ ಮುಕ್ತ ಮಾತಿಗೆ ಅಂತ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT