ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯ್ತಿ: ಇಂದು ಮತದಾನ

Last Updated 26 ಡಿಸೆಂಬರ್ 2010, 9:05 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ರಾಜ್ಯದ 12 ಜಿಲ್ಲೆಗಳಲ್ಲಿ ಭಾನುವಾರ ಮೊದಲ ಹಂತದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಕಣದಲ್ಲಿರುವ ಒಟ್ಟು 6311 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.12 ಜಿಲ್ಲೆಗಳ 374 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮತ್ತು 1335 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಮತದಾನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದ್ದು, ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮತಗಟ್ಟೆಗಳ ಸುತ್ತಮುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸುತ್ತಿದ್ದು, ಅಗತ್ಯವಿರುವ ಎಲೆಕ್ಟ್ರಾನಿಕ್ ಮತಯಂತ್ರಗಳು, ಶಾಯಿ ಮತ್ತಿತರ ಚುನಾವಣಾ ಸಾಮಗ್ರಿಗಳೊಂದಿಗೆ ಸಿಬ್ಬಂದಿಯು ಶನಿವಾರ ಮಧ್ಯಾಹ್ನದ ನಂತರ ಮತಗಟ್ಟೆಗಳಿಗೆ ತೆರಳಿದರು. ಭಾನುವಾರ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಪ್ರತ್ಯೇಕವಾಗಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಮತಗಟ್ಟೆಗಳಲ್ಲಿ ಇಡಲಾಗಿದ್ದು, ಮತದಾರರು ಪ್ರತ್ಯೇಕವಾಗಿ ಎರಡು ಮತಗಳನ್ನು ಚಲಾಯಿಸಬೇಕು. ಯಾವುದು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಮತಯಂತ್ರ ಎಂಬುದು ಮತದಾರರಿಗೆ ಗೊತ್ತಾಗುವ ಹಾಗೆ ಮತಗಟ್ಟೆಗಳಲ್ಲಿ ಸೂಚನೆ ನೀಡಲಾಗಿದೆ.

ಚುನಾವಣೆಗಾಗಿ ಒಟ್ಟು 12,800 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 2651 ಸೂಕ್ಷ್ಮ ಮತ್ತು 2216 ಅತಿ ಸೂಕ್ಷ್ಮಮತಗಟ್ಟೆಗಳು ಎಂದು ಗುರುತಿಸಲಾಗಿದೆ.51,74,915 ಮಂದಿ ಪುರುಷರು, 50,31,338 ಮಹಿಳೆಯರು ಸೇರಿದಂತೆ ಒಟ್ಟು 1,02,06,253 ಮತದಾರರು ತಮ್ಮ ಹಕ್ಕು ಚಲಾಯಿಸುವ ಅಧಿಕಾರವನ್ನು ಹೊಂದಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಮಾಚೋಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಾಗೂ ಇದೇ ಜಿಲ್ಲೆಯ ಹೆಸರಘಟ್ಟ, ಕೊಡಿಗೇಹಳ್ಳಿ, ಮಾಚೋಹಳ್ಳಿ, ಮಂಡೂರು, ಕೋಲಾರ ಜಿಲ್ಲೆಯ ಬಲಮಂದೆ ಮತ್ತು ತುಮಕೂರು ಜಿಲ್ಲೆಯ ಕಲ್ಲೂರು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಂದ ಅವಿರೋಧ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಆ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿಲ್ಲ.

ಮೇಲಿನ ಆರು ತಾ.ಪಂ. ಕ್ಷೇತ್ರಗಳ ಪೈಕಿ ಐದು ತಾ.ಪಂ. ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಪ್ರತಿ ಮತಗಟ್ಟೆಗೆ ತಲಾ ಐದು ಮಂದಿಯಂತೆ 76,800 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ ಪ್ರತಿ ಮತಗಟ್ಟೆಗೆ ಒಬ್ಬರಂತೆ 12,800 ಮಂದಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನದ ವೇಳೆ ವಿಡಿಯೊ ಚಿತ್ರೀಕರಣ ನಡೆಸಲಾಗುತ್ತದೆ.ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡಿರುವುದರಿಂದ ಅರ್ಧಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಮಹಿಳೆಯರು ಆರಿಸಿ ಬರಲಿದ್ದಾರೆ. ಅಲ್ಲದೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಲ್ಲೂ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡಿರುವುದರಿಂದ ಮೊದಲ ಬಾರಿಗೆ ಅರ್ಧಕ್ಕೂ ಅಧಿಕ ಜಿ.ಪಂ. ಮತ್ತು ತಾ.ಪಂ.ಗಳ ಅಧಿಕಾರದ ಚುಕ್ಕಾಣಿಯನ್ನು ಮಹಿಳೆಯರು ಹಿಡಿಯಲಿದ್ದಾರೆ.

ಪ್ರಚಾರಕ್ಕಾಗಿ ತೆರಳಿದ್ದ ರಾಜ್ಯ ಮಟ್ಟದ ಮುಖಂಡರು ಚುನಾವಣಾ ಆಯೋಗದ ಸೂಚನೆ ಮೇರೆಗೆ ಕ್ಷೇತ್ರಗಳನ್ನು ಬಿಟ್ಟು ಹೊರ ಬಂದಿದ್ದಾರೆ. ಸ್ಥಳೀಯ ಕಾರ್ಯಕರ್ತರು, ಅಭ್ಯರ್ಥಿಗಳು ಶನಿವಾರವೂ ಮನೆ ಮನೆಗೆ ತೆರಳಿ ಕೊನೆ ಗಳಿಗೆಯಲ್ಲಿ ಮತಯಾಚಿಸುವ ಕಸರತ್ತು ನಡೆಸಿದರು. ಮತದಾರರನ್ನು ಒಲಿಸಿಕೊಳ್ಳುವ ದೃಷ್ಟಿಯಿಂದ ಅಲ್ಲಲ್ಲಿ ಮತದಾರರಿಗೆ ಮದ್ಯ, ಸೀರೆ, ಹಣ ಹಂಚಿರುವ ಪ್ರಕರಣಗಳು ವರದಿಯಾಗಿವೆ.

 ಇದೇ ತಿಂಗಳ 31ರಂದು ಎರಡನೇ ಹಂತದಲ್ಲಿ 17 ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದ್ದು, ಮೂರನೇ ಹಂತದಲ್ಲಿ ಜನವರಿ ಒಂದರಂದು ಗುಲ್ಬರ್ಗ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿದೆ. ಜನವರಿ ನಾಲ್ಕರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದು ಮರು ಮತದಾನ ನಡೆಸಬೇಕಾದ ಸಂದರ್ಭ ಬಂದಲ್ಲಿ ಇದೇ 31ರಂದು ಮರು ಮತದಾನ ನಡೆಯಲಿದೆ.

 ಶಾಂತಿಯುತ ಚುನಾವಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳತ್ತ ಚುನಾವಣಾ ವೀಕ್ಷಕರು ಹೆಚ್ಚಿನ ನಿಗಾ ವಹಿಸಲಿದ್ದಾರೆ. ಆಯೋಗದ ವತಿಯಿಂದ ವಿಡಿಯೊ ಚಿತ್ರೀಕರಣ ಮಾಡಿಸಲಾಗುತ್ತದೆ. ಬಲವಂತವಾಗಿ ಮತಗಟ್ಟೆಗಳಿಗೆ ನುಗ್ಗಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಆಯೋಗವು ಎಚ್ಚರಿಸಿದೆ.

ಪ್ರತಿಷ್ಠೆ ಪ್ರಶ್ನೆ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಮುಖರಾದ ಬಿಜೆಪಿಯ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್, ಸಿದ್ದರಾಮಯ್ಯ, ಜೆಡಿಎಸ್‌ನ  ಎಚ್.ಡಿ.ದೇವೇಗೌಡ,  ಎಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಎರಡನೇ ಹಂತದ ಚುನಾವಣೆಗೆ  ಪ್ರಚಾರ ನಡೆಸುತ್ತಿದ್ದಾರೆ.

ಇಂದು 7ರಿಂದ 5ರವರೆಗೆ ಮತದಾನ
*12,800 ಮತಗಟ್ಟೆಗಳು
*374 ಜಿಲ್ಲಾ ಪಂಚಾಯಿತಿ, 1335 ತಾಲ್ಲೂಕು ಪಂಚಾಯಿತಿಗೆ ಚುನಾವಣೆ
*ಸೂಕ್ಷ್ಮ- ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ವಿಡಿಯೊ ಚಿತ್ರೀಕರಣ
*ಮೊದಲ ಬಾರಿಗೆ ಎಲೆಕ್ಟ್ರಾನಿಕ್ ಮತಯಂತ್ರ ಬಳಕೆ   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT