ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಕಾರ್ಡ್‌: ಅನರ್ಹ ಫಲಾನುಭವಿಗಳ ಪತ್ತೆಗೆ ಸೂಚನೆ

Last Updated 24 ಸೆಪ್ಟೆಂಬರ್ 2013, 5:11 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಮೀರಿ ಶ್ರೀಮಂತರು ಬಿ.ಪಿ.ಎಲ್. ಹಾಗೂ ಅಂತ್ಯೋದಯ ಕಾರ್ಡ್‌ ಪಡೆದಿದ್ದರೆ ಅಂಥವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕ  ಸೋಮಲಿಂಗ ಗೆಣ್ಣೂರ ಸೂಚಿಸಿದರು.

ಅವರು ಈಚೆಗೆ ತಾಲ್ಲೂಕು ತಹಶೀಲ್ದಾರ್‌ ಕಚೇರಿಯಲ್ಲಿ ಏರ್ಪಡಿಸಿದ್ದ ಕಂದಾಯ ನಿರೀಕ್ಷಕರು, ಪಿಡಿಒ ಮತ್ತು ಗ್ರಾ.ಪಂ. ಕಂಪ್ಯೂಟರ್‌ ಆಪರೇಟರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದ ಅನ್ನಭಾಗ್ಯ ಯೋಜನೆ ಅತ್ಯಂತ ಮಹತ್ವಾ­ಕಾಂಕ್ಷಿ ಯೋಜನೆಯಾಗಿದ್ದು, ಅದು ನಿಜವಾದ ಅರ್ಹ ಕಡುಬಡವ ಫಲಾನುಭವಿಗಳಿಗೆ ತಲುಪಬೇಕು. ಆದರೆ ಆದರೆ ಅನೇಕ ಕಡೆ ಶ್ರೀಮಂತರು ಈ ಕಾರ್ಡ್‌ ಪಡೆದಿದ್ದರ ಫಲವಾಗಿ ಯೋಜನೆ ದಾರಿ ತಪ್ಪುತ್ತಿದೆ ಎಂದು ನುಡಿದರು.

ಗ್ರಾಮ ಪಂಚಾಯ್ತಿಯಲ್ಲಿರುವ ಕಂಪ್ಯೂಟರ್‌ ಆಪರೇಟರುಗಳು ಅರ್ಜಿ ಸ್ವೀಕರಿಸುವಾಗಲೇ ಅರ್ಹ­ರೆನಿಸುವ ಫಲಾನುಭವಿಗಳಿಗೆ ಆದ್ಯತೆ ನೀಡಬೇಕು. ಪಡಿತರ ಚೀಟಿ ಬಯಸಿ ಬರುವ ಅರ್ಜಿ ಸರಿಯಾಗಿ ಪರಿಶೀಲಿಸಿದರೆ ಮುಂದಿನ ಹಂತಗಳಲ್ಲಿ ನಕಲಿ ಕಾರ್ಡ್‌ ತಯಾರಿಕೆ ನಿಯಂತ್ರ­ಣಕ್ಕೆ ಬರುತ್ತದೆ. ಆಪರೇಟರ್‌ಗಳೇ  ಬೋಗಸ್  ಕಾರ್ಡ್‌ ಪಡೆಯಲು ಅವಕಾಶ ಮಾಡಿಕೊಟ್ಟರೆ ಅದು ಗಂಭೀರ ಅಪರಾಧವಾಗುತ್ತದೆ. ಹೀಗಾಗಿ ಅರ್ಜಿ ಗಣಕೀಕರಣ ಮಾಡುವ ಹಂತದಲ್ಲಿಯೇ ದಾಖಲೆಗೆ ಕೇಳಿದ ಮಾಹಿತಿಯನ್ನು ಕಡ್ಡಾಯವಾಗಿ ಖಚಿತಪಡಿಸಿಕೊಂಡು ದಾಖಲಿಸಬೇಕು ಎಂದು ಹೇಳಿದರು.

ತಾಲ್ಲೂಕಿನಲ್ಲಿ ಇದುವರೆಗೂ 17039 ಬಿ.ಪಿ.ಎಲ್‌, 1583 ಅಂತ್ಯೋದಯ, 1099 ಎ.ಪಿ.ಎಲ್‌.  ಕಾರ್ಡುಗಳನ್ನು ವಿತರಿಸಲಾಗಿದೆ. ವಿತರಣೆ ಮಾಡಿದ ಪಡಿತರ ಕಾರ್ಡುಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಂದ ಪಡೆದುಕೊಂಡ ತಲಾ ರೂ.20 ಶುಲ್ಕವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಕೂಡಲೇ ಸಂದಾಯ ಮಾಡುವಂತೆ ಅವರು ತಿಳಿಸಿದರು.

ತಹಸೀಲ್ದಾರ್‌ ಸಿ. ಲಕ್ಷ್ಮಣರಾವ ಮಾತನಾಡಿ ಪಿಡಿಒ ಮತ್ತು ಆಪರೇಟರುಗಳು ಸರಿಯಾಗಿ ಕೆಲಸ ಮಾಡಿದರೆ ಅರ್ಹ ಫಲಾನುಭವಿಗಳು ತಹಶೀಲ್ದಾರ್‌ ಕಚೇರಿವರೆಗೂ ಅಲೆಯುವುದು ತಪ್ಪುತ್ತದೆ. ಗ್ರಾಮೀಣ ಜನರು ಅರ್ಹತೆ ಇದ್ದರೂ ತಮಗೆ ಕಾರ್ಡ್‌ ಕೊಟ್ಟಿಲ್ಲ ಅಥವಾ ಈ ಮೊದಲು ಕೊಟ್ಟಿದ್ದ ಕಾರ್ಡ್‌ ರದ್ದಾಗಿದೆ ಎಂದು ದೂರು ತರುತ್ತಾರೆ. ನಂತರ ಅಧಿಕಾರಿಗಳು ತೊಂದರೆ ಅನುಭವಿಸಬೇಕಾಗುವುದು ಎಂದರು.

ತಾ.ಪಂ. ಇಒ ಅಕ್ಕಮಹಾದೇವಿ ಹೊಕ್ರಾಣಿ, ಆಹಾರ ನಿರೀಕ್ಷಕ ಎ.ವಿ. ತಾಂಡೂರ, ಡಾ. ಎಸ್.ಸಿ. ಚೌಧರಿ, ಸಿ.ಆರ್. ಪೊಲೀಸ್‌ಪಾಟೀಲ, ಬಿ.ಎಸ್‌. ಲಮಾಣಿ ಭಾಗವಹಿಸಿದ್ದರು. ಎ.ಎಸ್. ಕೊಡೇಕಲ್ಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT