ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ: ಸಿಗದ `ಬಯೊ ಮೆಟ್ರಿಕ್' ಲಾಭ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ತುಮಕೂರು: ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಿರುವ ಬಯೊ ಮೆಟ್ರಿಕ್ ವ್ಯವಸ್ಥೆ ಇನ್ನೂ ಕುಂಟುತ್ತಾ ಸಾಗಿದೆ.

ಗ್ರಾಹಕರ ಬಯೊ ಮೆಟ್ರಿಕ್ ದಾಖಲೆ ಆಧರಿಸಿ ಎಲೆಕ್ಟ್ರಾನಿಕ್ಸ್ ತೂಕದ ಯಂತ್ರಗಳು ಕೆಲಸ ನಿರ್ವಹಿಸಲಿವೆ. ಇದರಿಂದಾಗಿ ಗ್ರಾಹಕರಿಗೆ ತೂಕ, ಪಡಿತರದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಹಿಂದಿನಂತೆ ಗ್ರಾಹಕರ ಹೆಸರು ಬಳಸಿಕೊಂಡು ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ತಾವೇ ಮಾರಿಕೊಳ್ಳಲು ಅವಕಾಶವಾಗುವುದಿಲ್ಲ ಎಂದೆಲ್ಲ ಹೇಳಲಾಗಿತ್ತು. ಆದರೆ ಇಡೀ ವ್ಯವಸ್ಥೆ ಮೊದಲಿನಂತೆಯೇ ಮುಂದುವರಿದಿದೆ. ಯಂತ್ರದ ಮೂಲಕ ಪಡಿತರ ತೂಗುವುದು ಬಿಟ್ಟರೆ ದಾಖಲಾತಿ ನಡೆಯುತ್ತಿಲ್ಲ!

ಜಿಲ್ಲೆಯಲ್ಲಿ 1106 ನ್ಯಾಯಬೆಲೆ ಅಂಗಡಿಗಳಿಗೆ 1093 ಬಯೊ ಮೆಟ್ರಿಕ್ ಯಂತ್ರ ಅಳವಡಿಸಿದೆಯಾದರೂ ಬೆಂಗಳೂರಿನಲ್ಲಿರುವ ಮೂಲ ಸರ್ವರ್ ಜೊತೆಗೆ ಸಂಪರ್ಕ ಕಲ್ಪಿಸದ ಕಾರಣ ಇಡೀ ವ್ಯವಸ್ಥೆ ನೆನೆಗುದಿಗೆ ಬಿದ್ದಂತಾಗಿದೆ.

ಪಡಿತರ ಕಾರ್ಡ್‌ಗಳಲ್ಲಿ ಗ್ರಾಹಕರ ಹೆಸರು, ಫೋಟೊ, ವಿಳಾಸ ಇದ್ದರೂ ಯಂತ್ರಗಳಲ್ಲಿ ಗ್ರಾಹಕರ ಫೋಟೊ ಬರುತ್ತಿಲ್ಲ. ಇದರಿಂದ ಯಾರೂ ಬೇಕಾದರೂ ಕಾರ್ಡ್ ನೀಡಿ ಪಡಿತರ ಪಡೆಯಬಹುದಾಗಿದ್ದು, ಫಲಾನುಭವಿಯೇ ನೇರ ಪಡಿತರ ಪಡೆಯಬೇಕೆಂಬ ಯೋಜನೆಯ ಮೂಲ ಉದ್ದೇಶ ಈಡೇರಿಲ್ಲ.

ಪಡಿತರ ಪಡೆಯಲು ಗ್ರಾಹಕರು ಯಂತ್ರದ ಮೇಲೆ ತಮ್ಮ ಹೆಬ್ಬೆರಳು ಮುದ್ರೆ ಒತ್ತಿದಾಗ ಅವರ ಖಾತೆ ತೆರೆದುಕೊಳ್ಳಬೇಕು. ಆದರೆ ಸಾಕಷ್ಟು ಕಡೆಗಳಲ್ಲಿ ಖಾತೆ ತೆರೆದುಕೊಳ್ಳುತ್ತಿಲ್ಲ. ಹೀಗಾಗಿ ನ್ಯಾಯಬೆಲೆ ಅಂಗಡಿಯವರು ಗ್ರಾಹಕರ ಹೊಸ ಖಾತೆ ತೆರೆದು ಪಡಿತರ ನೀಡುತ್ತಿದ್ದಾರೆ.

`ಒಂದೇ ಕಾರ್ಡ್‌ಗೆ ಪ್ರತಿ ತಿಂಗಳು ಬೇರೆ ಬೇರೆಯವರ ಹೆಬ್ಬೆರಳು ಮುದ್ರೆ ತೆಗೆದುಕೊಂಡು ಖಾತೆ ಆರಂಭಿಸಬಹುದು. ಒಂದು ತಿಂಗಳಲ್ಲಿ ಓಪನ್ ಆಗುವ ಖಾತೆ ಎರಡನೇ ತಿಂಗಳಲ್ಲಿ ಓಪನ್ ಆಗುತ್ತಿಲ್ಲ. ಆಗ ಮತ್ತೊಮ್ಮೆ ಮುದ್ರೆ ಪಡೆದು ಖಾತೆ ಓಪನ್ ಮಾಡುತ್ತೇವೆ. ಫಲಾನುಭವಿಯ ಹೆಬ್ಬೆರಳು ಮುದ್ರೆಯೇ ಆಗಬೇಕೆಂದಿಲ್ಲ. ಬೇರೆಯವರ ಹೆಬ್ಬೆರಳು ಮುದ್ರೆ ಪಡೆದೂ ಖಾತೆ ತೆರೆಯಬಹುದು. ಕಾರ್ಡ್‌ಗೆ ಹೊಸದಾಗಿ ಸೇರುವ ಗ್ರಾಹಕರ ಹೆಸರು ಬಯೊ ಮೆಟ್ರಿಕ್‌ನಲ್ಲಿ ದಾಖಲಾಗಿಲ್ಲ. ಇವರಿಗೆ ಮೊದಲಿನಂತೆಯೇ ಪಡಿತರ ವಿತರಿಸುತ್ತೇವೆ. ಸರ್ಕಾರದ ಹಣ ಸುಖಾಸುಮ್ಮನೇ ವ್ಯರ್ಥ ಮಾಡಲಾಗಿದೆ' ಎಂದು ಗುಬ್ಬಿ ತಾಲ್ಲೂಕಿನ ನ್ಯಾಯಬೆಲೆ ಅಂಗಡಿಯೊಂದರ ಮಾಲೀಕರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

`ಯಂತ್ರದ ಅಳವಡಿಕೆಯಿಂದ ತೂಕದಲ್ಲಿ ಮೋಸ ಮಾಡಲು ಆಗುತ್ತಿಲ್ಲ. ಪಡಿತರದಾರರೇ ಹೆಬ್ಬೆರಳು ಮುದ್ರೆ ಕೊಡಬೇಕೆಂಬ ಪ್ರಚಾರದ ಕಾರಣ ಪಡಿತದಾರರು ನೇರವಾಗಿ ಅಂಗಡಿಗೆ ಬರುವುದು ಹೆಚ್ಚಾಗಿದೆ. ಆದರೆ ಯಂತ್ರದ ಲೋಪ ಗೊತ್ತಿರುವ ಕಡೆಗಳಲ್ಲಿ ಮೊದಲಿನಂತೆಯೇ ಬೇರೆಯವರ ಹೆಬ್ಬೆರಳು ಮುದ್ರೆ ಒತ್ತುವ ಮೂಲಕ ವಂಚನೆ ಮುಂದುವರಿದಿದೆ' ಎಂದರು.

`ಹೊಸ ವ್ಯವಸ್ಥೆ ಜಾರಿಯಾದ ಬಳಿಕ ಪಡಿತರ ಉಳಿಕೆ (ಕ್ಲೋಸಿಂಗ್ ಬ್ಯಾಲೆನ್ಸ್) ಹೆಚ್ಚಾಗಿದೆಯೇ ಅಥವಾ ಕಡಿಮೆಯಾಗಿದೆಯೇ ಎಂಬ ಮಾಹಿತಿ  ಸ್ಥಳೀಯವಾಗಿ ಇಲಾಖೆ ಬಳಿ ಇಲ್ಲವಾಗಿದೆ. ಹೀಗಾಗಿ ಹೊಸ ವ್ಯವಸ್ಥೆಯಿಂದ ಪ್ರಯೋಜನ ಏನಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ವೊಡಫೋನ್ ಕಂಪೆನಿ ಮೂಲ ಸರ್ವರ್ ಜೊತೆ ತೂಕದ ಯಂತ್ರಗಳ ಸಂಪರ್ಕ ಕಲ್ಪಿಸಬೇಕು. ಆದರೆ ಎಷ್ಟು ಯಂತ್ರಗಳಿಗೆ ಈ ಸಂಪರ್ಕ ಕಲ್ಪಿಸಲಾಗಿದೆ ಎಂಬುದು ತಿಳಿದಿಲ್ಲ. ಎಲ್ಲವನ್ನು ಬೆಂಗಳೂರಿನ ಆಯುಕ್ತರ ಕಚೇರಿಯಿಂದಲೇ ನಿರ್ವಹಿಸಲಾಗುತ್ತಿದೆ. ಆದರೆ ವ್ಯವಸ್ಥೆ ಸಾಕಷ್ಟು ನ್ಯೂನತೆಗಳಿಂದ ಕೂಡಿರುವುದು ಸತ್ಯ' ಎಂದು ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT