ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಜತೆ ಆತ್ಮಹತ್ಯೆಗೆ ಯತ್ನ...

Last Updated 17 ಏಪ್ರಿಲ್ 2013, 9:45 IST
ಅಕ್ಷರ ಗಾತ್ರ

ಬಳ್ಳಾರಿ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಬಿಡುಗಡೆ ಆಗಿದ್ದ ಕೋಟ್ಯಂತರ ರೂಪಾಯಿ ಹಣದ ಅವ್ಯವಹಾರ ಆರೋಪದಲ್ಲಿ ಸಿಲುಕಿ, ಅಮಾನತ್‌ಆಗಿರುವ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯೊಬ್ಬ ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕೋರಿ ಜಿಲ್ಲಾ ಪಂಚಾಯಿತಿ ಸಿಇಒ ಎದುರೇ ಪತ್ನಿಸಮೇತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಸಂಭವಿಸಿದೆ.

ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹಚ್ಚೊಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿದ್ದ ಜಿ.ಕೆ. ಬಸವರಾಜ್, ಪತ್ನಿ ರೇಖಾ ಜತೆ ಮಧ್ಯಾಹ್ನ ಸಿಇಓ ಮಂಜುನಾಥ ನಾಯಕ ಅವರ ಕಚೇರಿಯಲ್ಲಿ ವಿಷ ಸೇವಿಸಿದ್ದಾನೆ. ವಿಷ ಸೇವಿಸಿರುವ ಇಬ್ಬರನ್ನೂ ಕೂಡಲೇ ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ) ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಘಟನೆಯ ಹಿನ್ನೆಲೆ: 2010ರ ಅಂತ್ಯದಲ್ಲಿ ನಡೆದಿದ್ದ ಹಚ್ಚೊಳ್ಳಿ ಪಂಚಾಯಿತಿಯ 1.19 ಕೋಟಿ ಮೌಲ್ಯದ  ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತ್‌ನಲ್ಲಿರುವ ಬಸವರಾಜ್, ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಆಗಾಗ ಸಿಇಓ ಅವರನ್ನು ಭೇಟಿ ಮಾಡಿ ಮೌಖಿಕವಾಗಿ ಮನವಿ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಮಂಗಳವಾರ ಮಧ್ಯಾಹ್ನ 1.30ರ ವೇಳೆಗೆ ಪತ್ನಿ ಹಾಗೂ ಇಬ್ಬರು ಮಕ್ಕಳ ಸಮೇತ ಸಿಇಓ ಕಚೇರಿಗೆ ತೆರಳಿ, ಕೆಲಸದ ಆದೇಶ ನೀಡದಿದ್ದರೆ ವಿಷ ಸೇವಿಸುವುದಾಗಿ ಬೆದರಿಸಿದನಲ್ಲದೆ, ನೋಡ ನೋಡುತ್ತಿದ್ದಂತೆಯೇ ಪತ್ನಿಗೆ ವಿಷ ಕುಡಿಸಿ, ತಾನೂ ಕುಡಿದಿದ್ದಾನೆ.

`ವಿಷ ಸೇವಿಸಿದ ಕೂಡಲೇ ಇಬ್ಬರನ್ನೂ ಅಂಬ್ಯುಲೆನ್ಸ್ ಮೂಲಕ ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ) ಆಸ್ಪತ್ರೆಗೆ ದಾಖಲಿಸಲಾಯಿತು. ಈ ಕುರಿತು ಕೌಲ್‌ಬಝಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಜಿ.ಪಂ. ಸಿಇಓ ಮಂಜುನಾಥ ನಾಯಕ `ಪ್ರಜಾವಾಣಿ'ಗೆ ತಿಳಿಸಿದರು.

ರೂ 1.19 ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ದೂರು ದಾಖಲಿಸಿ, ಸರ್ಕಾರ ಅಮಾನತ್‌ನಲ್ಲಿರಿಸಿದೆ. ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಕೂಡ ಈ ಆದೇಶವನ್ನು ಎತ್ತಿ ಹಿಡಿದಿದೆ. ನ್ಯಾಯಾಲಯದಲ್ಲಿ ಈ ಕುರಿತ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈತನಿಂದ ರೂ 80 ಲಕ್ಷ ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ರೂ 39 ಲಕ್ಷ ಬಾಕಿ ಇದೆ ಎಂದು ಅವರು ಹೇಳಿದರು.

`ಹಗರಿ ಬೊಮ್ಮನಹಳ್ಳಿ ಮೂಲದ ಬಸವರಾಜ್, ಇಬ್ಬರನ್ನು ಮದುವೆಯಾಗಿದ್ದಾನೆ ಎಂಬ ಮಾತುಗಳೂ ಕೇಳಿಬರುತ್ತಿದ್ದು, ಎರಡನೇ ಹೆಂಡತಿಯೊಂದಿಗೆ ನನ್ನ ಕಚೇರಿಗೆ ಬಂದು ಬೆದರಿಕೆ ಹಾಕಿ ವಿಷ ಸೇವಿಸಿದ' ಎಂದು ಅವರು ಹೇಳಿದರು.

ಈ ಕುರಿತು ಕೌಲ್‌ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ವೈ.ಡಿ. ಅಗಸೀಮನಿ, ಪಿಎಸ್‌ಐ ಗೌಸ್ ತನಿಖೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT