ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕೆಗಳಲ್ಲಿ ಜಾಹಿರಾತು: ಕಾಂಗ್ರೆಸ್ ಟೀಕೆ

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:`ವ್ಯಕ್ತಿಗತ ಆರೋಪಗಳಿಗೆ ಸ್ಪಷ್ಟನೆಯಾಗಿ ಜನರ ತೆರಿಗೆ ಹಣದಲ್ಲಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕ್ರಮವನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದ್ದು, ಜಾಹೀರಾತಿನ ವೆಚ್ಚವನ್ನು ಬಿಜೆಪಿಯೇ ಭರಿಸಬೇಕು~ ಎಂದು ಆಗ್ರಹಿಸಿದೆ. ಇದೇ ವೇಳೆ ಯಡಿಯೂರಪ್ಪ ನಿಲುವನ್ನು ಕೆಲ ಸಚಿವರು ಸಮರ್ಥಿಸಿಕೊಂಡಿದ್ದಾರೆ.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಉತ್ತರ ನೀಡುವುದಾದರೆ ಸ್ವಂತ ಹಣ ಅಥವಾ ಪಕ್ಷದ ಹಣವನ್ನು ವೆಚ್ಚ ಮಾಡಲಿ, ಅದು ಬಿಟ್ಟು ಜನರ ತೆರಿಗೆ ಹಣವನ್ನು ಖರ್ಚು ಮಾಡಲು ಮುಖ್ಯಮಂತ್ರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಉಪಾಧ್ಯಕ್ಷ ಬಿ.ಎಲ್.ಶಂಕರ್ ಪ್ರಶ್ನಿಸಿದ್ದಾರೆ.

`ಮಂಜುನಾಥ ಸ್ವಾಮಿಯ ಮೇಲೆ ಆಣೆ ಮಾಡೋಣ~ ಎಂದು ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರಿಗೆ ಜಾಹೀರಾತಿನ ಮೂಲಕ ನೀಡಿರುವ ಆಹ್ವಾನಕ್ಕೆ ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಾಹೀರಾತುಗಳಿಗೆ ವಾರ್ತಾ ಇಲಾಖೆ ಸುಮಾರು 80 ಲಕ್ಷ ರೂಪಾಯಿ ಖರ್ಚು ಮಾಡಿದೆ. ಸಾರ್ವಜನಿಕರ ಹಣವನ್ನು ಈ ರೀತಿ ಪೋಲು ಮಾಡುವುದು ಯಾವ ಪುರುಷಾರ್ಥಕ್ಕೆ? ಈ ವಿಚಾರವನ್ನು ಯಡಿಯೂರಪ್ಪ ಮಾತ್ರವಲ್ಲ ಬಿಜೆಪಿಯವರೆಲ್ಲರೂ ಅವಲೋಕಿಸಲಿ~ ಎಂದು ಪ್ರಕಟಣೆಯಲ್ಲಿ ಅವರು ಆಗ್ರಹಿಸಿದ್ದಾರೆ.

`ಕುಮಾರಸ್ವಾಮಿ ಆರೋಪಗಳಲ್ಲಿ ಮಾನಹಾನಿಯಾಗುವಂಥ ವಿಚಾರಗಳಿದ್ದರೆ ಯಡಿಯೂರಪ್ಪನವರು ನ್ಯಾಯಾಲಯದ ಮೊರೆ ಹೋಗಬಹುದಿತ್ತು. ಕ್ಷಮೆ ಕೋರಬೇಕು ಎಂದು ಶಾಸನಸಭೆಯಲ್ಲಿ ಒತ್ತಾಯಿಸಬಹುದಿತ್ತು.

ಆದರೆ ಜನರ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿದ್ದಾರೆ~ ಎಂದು ಅವರು ಕೆಂಡ ಕಾರಿದ್ದಾರೆ.

`ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ನ್ಯಾಯಾಲಯ ತನಿಖೆಗೆ ಎತ್ತಿಕೊಂಡಾಗ ಪಿತೂರಿ ಮಾಡಿ ಅದಕ್ಕೆ ತಡೆಯಾಜ್ಞೆ ತಂದರು. ಅಷ್ಟೇ ಅಲ್ಲದೆ ಲೋಕಾಯುಕ್ತ ತನಿಖೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ರಾಜ್ಯದ ಸಂಪತ್ತನ್ನು ಲೂಟಿ ಮಾಡಿರುವುದು ಸುಳ್ಳು ಎಂದು ಯಡಿಯೂರಪ್ಪನವರು ಧರ್ಮಸ್ಥಳದಲ್ಲಿ ಪ್ರಮಾಣ ಮಾಡುತ್ತಾರಾ? ಹಾಗೆಂದು ಜನತೆ ಕೇಳುತ್ತಿದ್ದಾರೆ~ ಎಂದು ಅವರು ಪ್ರಶ್ನಿಸಿದ್ದಾರೆ.

ಸಚಿವರಾದ ಬಿ.ಎನ್.ಬಚ್ಚೇಗೌಡ, ಆರ್.ಅಶೋಕ ಅವರು ಜಾಹೀರಾತು ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರದ ಮುಖ್ಯಸ್ಥರ ವಿರುದ್ಧ ಆರೋಪ ಮಾಡಿರುವುದರಿಂದ ಯಡಿಯೂರಪ್ಪ ಅವರು ಜಾಹೀರಾತು ನೀಡಿರುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಬಿಜೆಪಿಯಲ್ಲಿ ಅಸಮಾಧಾನ: ಯಡಿಯೂರಪ್ಪ ಅವರು ಪಕ್ಷದ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕುಮಾರಸ್ವಾಮಿ ವಿರುದ್ಧ ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವುದಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಕೆಲ ಸಚಿವರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೊಂದು ರಾಜಕೀಯ ನಿರ್ಧಾರ. ಪಕ್ಷದ ಮುಖಂಡರ ಗಮನಕ್ಕೆ ತರದೆ ಈ ರೀತಿ ಮಾಡಿರುವುದು ಸರಿಯಲ್ಲ, ಯಡಿಯೂರಪ್ಪ ಅವರ ಈ ನಿರ್ಧಾರದಿಂದ ಪಕ್ಷ ಮತ್ತು ಸರ್ಕಾರ ಮುಜುಗರಕ್ಕೆ ಒಳಗಾಗಿದೆ. ಜನರ ತೆರಿಗೆ ಹಣ ಪೋಲು ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಕೇಳಿಬರುತ್ತಿದೆ. ಈ ರೀತಿ ಮಾಡಿರುವುದರಿಂದ ಜನರಿಗೆ ಉತ್ತರ ಕೊಡುವುದು ಕಷ್ಟವಾಗುತ್ತದೆ ಎಂದು ಈಶ್ವರಪ್ಪ ತಮ್ಮ ಆಪ್ತರೊಂದಿಗೆ ಅತೃಪ್ತಿ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT