ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮನಾಭ ರೂಪ... ಹಲವು ರೂಪದ ಗಣೇಶ ಭಾರಿ ದುಬಾರಿ!

Last Updated 30 ಆಗಸ್ಟ್ 2011, 4:30 IST
ಅಕ್ಷರ ಗಾತ್ರ

ರಾಯಚೂರು: ಗಣೇಶ ಚತುರ್ಥಿ ಹಬ್ಬದ ಸಡಗರ ಪ್ರತಿ ವರ್ಷದಂತೆ ಈ ವರ್ಷವೂ ಆರಂಭಗೊಂಡಿದ್ದು, ತಿಂಗಳಾನುಗಟ್ಟಲೆ ಶೆಡ್‌ನಲ್ಲಿ ಕಲಾವಿದರ ಕೈಯಲ್ಲಿ ರೂಪಗೊಂಡ ಸುಂದರ ಗಣೇಶ ಮೂರ್ತಿಗಳನ್ನು ಭಕ್ತಸಮೂಹ ಪ್ರತಿಷ್ಠಾಪನೆಗೆ ತೆಗೆದುಕೊಂಡು ಹೋಗಲು ಕಾತುರತೆ ಕಂಡು ಬರುತ್ತಿದೆ.

ವಿವಿಧ ಆಕಾರಗಳಲ್ಲಿ, ಹಲವು ರೂಪಗಳಲ್ಲಿ ತಮ್ಮಗಿಷ್ಟವಾದ ರೀತಿ ತಿಂಗಳು ಮೊದಲೇ ಆರ್ಡರ್ ಕೊಟ್ಟು ಬೃಹತ್ ಗಾತ್ರದ ಗಣೇಶಮೂರ್ತಿ ಮಾಡಿಸಿದ ಸಾರ್ವಜನಿಕ ಗಜಾನನೋತ್ಸವ ಸಮಿತಿಗಳು, ಸಂಘಗಳು ಈಗ ಪ್ರತಿಷ್ಠಾಪನೆಗೆ ಸಿದ್ಧತೆಯಲ್ಲಿ ಮುಳುಗಿವೆ.

ಶೆಡ್‌ನಲ್ಲಿ ಹಲವು ಬಣ್ಣಗಳಲ್ಲಿ, ವೇಷ, ಭೂಷಣದಲ್ಲಿ ಅಲಂಕೃತಗೊಂಡ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿವೆ. ಸಾರ್ವಜನಿಕರು, ಯುವಕರು, ಶಾಲಾ ಮಕ್ಕಳು ಗಣೇಶಮೂರ್ತಿ ತಯಾರಿಸುವ, ಮಾರಾಟ ಮಾಡುವ ಸ್ಥಳಕ್ಕೆ ಗುಂಪು ಗುಂಪಾಗಿ ತೆರಳಿ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ನೆರೆಯ ಆಂಧ್ರಪ್ರದೇಶಕ್ಕೂ ಇಲ್ಲಿಂದ ಗಣೇಶಮೂರ್ತಿಗಳು ರೈಲು, ಬಸ್‌ನಲ್ಲಿ, ಖಾಸಗಿ ವಾಹನಗಳಲ್ಲಿ ಅಲ್ಲಿನ ಭಕ್ತರು ತೆಗೆದುಕೊಂಡು ಹೋಗುತ್ತಿದ್ದಾರೆ.

ತಿರುವಾಂಕೂರಿನ ಪದ್ಮನಾಭ ರೂಪದ ಗಣೇಶ, ಸಮುದ್ರಮಥನ ಗಣೇಶ, ಬಾಲ ಗಣೇಶ, ಸಿಂಹಾಸನದ ಮೇಲೆ ವೀರಾಜಮಾನ ಗಣೇಶ, ವರ್ಲ್ಡ್‌ಕಪ್ ಗಣೇಶ ಹೀಗೆ ಹಲವು ರೂಪದ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿವೆ. ರಾಯಚೂರಿನಲ್ಲಿ ತಯಾರಾಗಿರುವ ಈ ಪದ್ಮನಾಭ ರೂಪದ ಗಣೇಶ ಮೂರ್ತಿ ಸಿರವಾರದಲ್ಲಿ, ಮತ್ತೊಂದು ಮೂರ್ತಿ ಆಂಧ್ರಪ್ರದೇಶದ ಆದೋನಿಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿವೆ.

ರಾಯಚೂರಿನ ತೀನ್ ಕಂದೀಲ್ ವೃತ್ತದಲ್ಲಿ ಸಮುದ್ರಮಥನ ಗಣೇಶ ಪ್ರತಿಷ್ಠಾಪನೆಗೊಳ್ಳುತ್ತಿದ್ದರೆ, ಹಟ್ಟಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ `ರಥದ ಮೇಲೆ ಕುಳಿತು ಸಾಗುತ್ತಿರುವ ಗಣೇಶ~ ಗಮನ ಸೆಳೆಯುತ್ತಿದ್ದಾನೆ.

ಭಾರಿ ಬೆಲೆ: ಚಿಕ್ಕ ಗಾತ್ರದ ಗಣೇಶಮೂರ್ತಿಗೆ ಕನಿಷ್ಠ 250. ದೊಡ್ಡ ಪ್ರಮಾಣದ ಗಣೇಶಮೂರ್ತಿ 12ರಿಂದ 15 ಸಾವಿರ ರೂಪಾಯಿ ಬೆಲೆ ನಿಗದಿಪಡಿಸಿ ಮಾರಾಟ ಮಾಡುತ್ತಿದ್ದಾರೆ. ಬಣ್ಣ, ಪ್ಲಾಸ್ಟರ್ ಆಫ್ ಪ್ಯಾರಿಸ್, ಪೋರಬಂದರ್ ಮಣ್ಣು, ಕಲಾವಿದರ ಮೊತ್ತ, ಶೆಡ್ ಬಾಡಿಗೆ, ಸಾಗಾಣಿಕೆ ವೆಚ್ಚ, ವಿದ್ಯುತ್ ಹೀಗೆ ಹಲವು ರೀತಿಯ ಕರ್ಚು ವೆಚ್ಚ ಹೆಚ್ಚಾಗಿದೆ. ಹೀಗಾಗಿ ಗಣೇಶಮೂರ್ತಿ ಬೆಲೆ ಏರಿಕೆ ಅನಿವಾರ್ಯ ಎಂದು ಗಣೇಶಮೂರ್ತಿ ಮಾರಾಟಗಾರರಾದ ಶಹಾಪುರದ ರಾಜು, ರಾಯಚೂರಿನ ಅಶೋಕರೆಡ್ಡಿ ಮತ್ತು ಕಿಶನ್ ಅವರು ಹೇಳುತ್ತಾರೆ.

ಪ್ರತಿ ವರ್ಷದಂತೆ ಸಾರ್ವಜನಿಕರು ಗಣೇಶಮೂತಿ ಬೆಲೆ ಹೆಚ್ಚಾಗಿದೆ ಎಂಬ ಬಗ್ಗೆ ಚೌಕಾಸಿ ಮಾಡುತ್ತಾರೆ. ಆದರೆ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಡುತ್ತೇವೆ. ಆಸಕ್ತರು ಖರೀದಿಸುತ್ತಾರೆ ಎಂದು ಹೇಳಿದರು.

ಚಿಕ್ಕ ಗಣೇಶ ಮೂರ್ತಿಗೆ 250 ರೂಪಾಯಿ ನಿಗದಿಪಡಿಸಿದ್ದಾರೆ. ಚೌಕಾಸಿಯೇ ಮಾಡುವಂತಿಲ್ಲ. ಮಧ್ಯಮ ಗಾತ್ರದ ಗಣೇಶ ಮೂರ್ತಿಗೆ ಕನಿಷ್ಠ 1500 ಬೆಲೆ ನಿಗದಿಪಡಿಸಿದ್ದಾರೆ. ಹೀಗಾಗಿ ಗಣೇಶ ಈ ವರ್ಷ ಭಾರಿ ದುಬಾರಿಯಾಗಿದ್ದಾನೆ ಎಂದು ಗಣೇಶಮೂರ್ತಿ ಮಾರಾಟ ಕೇಂದ್ರಗಳಲ್ಲಿ ಚಡಪಡಿಸುತ್ತಿದ್ದಾರೆ.

ಇನ್ನೆರಡು ದಿನ ಬಿಟ್ಟು ಬಂದ್ರೆ ಈ ಗಣೇಶ ಮೂರ್ತಿಗಳು ಸಿಕ್ಕುವುದಿಲ್ಲ ಎಂಬ ಆತಂಕದಿಂದ ಹತ್ತಾರು ಬಾರಿ ಚೌಕಾಸಿ ಮಾಡಿ ಖರೀದಿಸಿ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT