ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆಯ ಶಿಸ್ತಿನಲ್ಲಿ...

ನಾದದ ಬೆನ್ನೇರಿ
Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇದು ಪರಂಪರೆಯ ಸಂಗೀತ. ಪರಂಪರಾಗತವಾಗಿ ಬಂದ ಸಂಗೀತವನ್ನು ಹಾಗೇ ಶಿಷ್ಯಂದಿರಿಗೆ ಧಾರೆಯೆರೆಯುತ್ತಾ ಬಂದು ನಾಡಿನಾದ್ಯಂತ ಸಾವಿರಾರು ಶಿಷ್ಯಂದಿರನ್ನು ರೂಪಿಸಿದ ಅದ್ಭುತ ಸಾಧನೆಯ ಕಲಾವಿದರಾಗಿದ್ದವರು ಧಾರವಾಡದ ಪಂ. ಅರ್ಜುನಸಾ ನಾಕೋಡ ಅವರು. ಸುಮಾರು ಐದು ದಶಕಗಳ ಕಾಲ ಸಂಗೀತಕ್ಕೆ ಅನನ್ಯ ಕೊಡುಗೆ ನೀಡಿದ ಈ ಅಪ್ರತಿಮ ಕಲಾವಿದರ ಮಕ್ಕಳೆಲ್ಲರೂ ಸಂಗೀತದಲ್ಲಿ ತೊಡಗಿಸಿಕೊಂಡು ಸಂಗೀತವನ್ನು ಒಂದು ‘ತಪಸ್ಸು’ ಎಂದು ಸ್ವೀಕರಿಸಿದವರು. ಇದೇ ಸಂಗೀತ ಸಂಸ್ಕೃತಿಯನ್ನು ಬೆಂಗಳೂರಿಗೆ ತಂದವರು ಇವರ ಮಗ ಪಂ. ವಿಶ್ವನಾಥ ನಾಕೋಡ್. ರೇಣುಕಾ ಸಂಗೀತ ವಿದ್ಯಾಲಯವನ್ನು ಕಳೆದ 25 ವರ್ಷಗಳ ಹಿಂದೆ ಸ್ಥಾಪಿಸಿ ನೂರಾರು ನುರಿತ ಕಲಾವಿದರನ್ನು ತಯಾರು ಮಾಡಿದ್ದಾರೆ.

ರೇಣುಕಾ ಸಂಗೀತ ವಿದ್ಯಾಲಯ ಮಹಾಲಕ್ಷ್ಮಿ ಬಡಾವಣೆಯ 11ನೇ ಕ್ರಾಸ್‌ನಲ್ಲಿದೆ. ಇಲ್ಲಿ ತಬಲಾ ಮತ್ತು ಸುಗಮ ಸಂಗೀತವನ್ನು ಪಂ. ವಿಶ್ವನಾಥ ನಾಕೋಡ್ ಹೇಳಿಕೊಡುತ್ತಿದ್ದಾರೆ. ಸುಮಾರು 50 ಮಕ್ಕಳು ಇಲ್ಲಿ ಸಂಗೀತ ಕಲಿಯುತ್ತಿದ್ದಾರೆ. 6ರಿಂದ 75 ವರ್ಷದವರೆಗಿನ ಶಿಷ್ಯಂದಿರು ಇಲ್ಲಿ ತಬಲಾ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ದೇವರನಾಮಗಳನ್ನು ಕಲಿಯುತ್ತಿದ್ದಾರೆ. ಇವರಲ್ಲಿ ಶಾಲಾ ಮಕ್ಕಳು, ಎಂಜಿನಿಯರ್, ಆರ್‌ಟಿಒ, ಬ್ಯಾಂಕ್ ಉದ್ಯೋಗಿಗಳು, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಗಳಲ್ಲಿ ಕೆಲಸ ಮಾಡುವ ವೃತ್ತಿನಿರತರು, ಗೃಹಿಣಿಯರು ಇದ್ದಾರೆ.

ಇಲ್ಲಿ ತಬಲಾ ಕಲಿತ ಪಂ. ರಾಜೇಂದ್ರ ನಾಕೋಡ್, ಎ.ಎಂ. ಮಹೇಶ್, ಎನ್.ಎಲ್. ಶಿವಶಂಕರ್, ವೇಣುಗೋಪಾಲ್ ರಾಜು, ವಿ.ದತ್ತಕುಮಾರ್, ಅಮರ ಎಚ್.ಎಸ್. ಮೈಸೂರು ಪಿ. ಅಶ್ವಿನ್, ಗುರುನಂದನ್, ಲಕ್ಷ್ಮಣ ಭಟ್, ಪ್ರವೀಣ್, ಶ್ರೀನಾಥ್ ಜೋಷಿ ಮುಂತಾದವರು ಈಗಾಗಲೇ ಅನೇಕ ಕಛೇರಿಗಳಲ್ಲಿ ಭಾಗವಹಿಸಿದ್ದು, ಆಕಾಶವಾಣಿಯ ಗ್ರೇಡೆಡ್ ಕಲಾವಿದರಾಗಿ ರೂಪುಗೊಂಡಿದ್ದಾರೆ.

ಸುಗಮ ಸಂಗೀತ ಗಾಯನದಲ್ಲಿ ಸಮನ್ವಿತಾ ಶರ್ಮ, ವಸುಮತಿ ರಂಗನಾಥನ್, ಸಾಯಿತೇಜಸ್ ಚಂದ್ರಶೇಖರ್, ನಾಗನಂದಿನಿ ವಿಶ್ವನಾಥ್, ಅಕ್ಷತಾ ರಾಮನಾಥ್, ಕೃತ್ತಿಕಾ ಚಂದ್ರಶೇಖರ್, ರಶ್ಮಿ ಕಾರ್ತಿಕ್, ಸ್ಮಿತಾ ಬೆಳ್ಳೂರ್, ರಶ್ಮಿ ವಾದಿರಾಜ್ ಪ್ರಮುಖ ಶಿಷ್ಯಂದಿರಾಗಿದ್ದು ಎಲ್ಲರೂ ಆಕಾಶವಾಣಿಯ ಕಲಾವಿದರಾಗಿದ್ದಾರೆ. ಉದಯೋನ್ಮುಖ ಕಲಾವಿದರಲ್ಲಿ ಸೌಮ್ಯ, ಸ್ನೇಹಾ ಪುರೋಹಿತ್, ಮಹಾಲಕ್ಷ್ಮೀ ಹೆಗಡೆ, ನಯನಾ ಶಂಕ್ರಪ್ಪ, ಅದಿತಿ ದತ್ತಕುಮಾರ್, ವೆಂಕಟೇಶ ನಾಯಕ್, ಅಮಿತ್ ನಾಯಕ್, ಅನಘಾ ಹರೀಶ್, ಡಾ. ಮುರಳೀಧರ್, ದೀಕ್ಷಾ ಐತಾಳ್ ಮುಂತಾದವರು ಹೆಸರು ಗಳಿಸುತ್ತಿದ್ದಾರೆ.

‘ಇಲ್ಲಿ ಕಲಿಯುವ ಶಿಷ್ಯಂದಿರು ಬಹಳ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಾರೆ. ನಾನು ಕಲಿಸುವ ಭಾವಗೀತೆ, ದೇವರನಾಮ, ವಚನ, ಹಿಂದೀ ಭಜನ್, ಮರಾಠಿ ಅಭಂಗಗಳಿಗೆ ನಾನೇ ರಾಗ ಸಂಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ವಿಭಿನ್ನ ಶೈಲಿಯಲ್ಲಿ ಹೇಳಿಕೊಡುತ್ತೇನೆ. ಪ್ರತಿಯೊಂದು ರಾಗದ ಛಾಯೆಯಲ್ಲಿ ಆ ಗೀತೆಯನ್ನು ಸವಿಸ್ತಾರವಾಗಿ ಹಾಡುವ ಕಲೆಯನ್ನು ಹೇಳಿಕೊಡುವಂಥಹ ಪದ್ಧತಿ ನಮ್ಮಲ್ಲಿದೆ’ ಎನ್ನುತ್ತಾರೆ ಪಂ. ವಿಶ್ವನಾಥ್ ನಾಕೋಡ್.

‘ಪ್ರತಿಯೊಬ್ಬರಿಗೂ ಪ್ರತ್ಯೇಕ ಪಾಠ ಲಭ್ಯ. ಒಬ್ಬರಿಗೆ ವಾರಕ್ಕೆ ಒಂದು ಕ್ಲಾಸ್ ಮಾತ್ರ ಇದ್ದು, ಇಡೀ ಕ್ಲಾಸ್ ಅವಧಿಯಲ್ಲಿ ಕಲಿಸಿದ ಪಾಠವನ್ನು ರೆಕಾರ್ಡ್ ಮಾಡಿಕೊಳ್ಳುವ ಅವಕಾಶ ವಿದ್ಯಾರ್ಥಿಗಿದೆ. ಇದರಿಂದ ಮಕ್ಕಳು ಮನೆಯಲ್ಲಿ ಅಭ್ಯಾಸ ಮಾಡಲು ಅನುಕೂಲವಾಗುತ್ತದೆ ಎನ್ನುವುದು ಇದರ ಉದ್ದೇಶ’ ಎನ್ನುತ್ತಾರೆ ಅವರು

ಗುರುವಂದನಾ ಕಾರ್ಯಕ್ರಮ
ವಿದ್ಯಾರ್ಥಿಗಳು ವರ್ಷಪೂರ್ತಿ ಕಲಿತ ಸಂಗೀತವನ್ನು ತಮ್ಮ ಗುರುಗಳ ಮುಂದೆ, ಪೋಷಕರು ಹಾಗೂ ಆಹ್ವಾನಿತ ಕಲಾವಿದರ ಎದುರಿಗೆ ಪ್ರದರ್ಶಿಸುವುದು. ಪ್ರತೀ ವರ್ಷ ವಿಜಯದಶಮಿಯ ನಂತರ ಬರುವ ಭಾನುವಾರದಂದು ಬೆಳಗಿನ 8 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಿರಂತರವಾಗಿ ನಡೆಯುವ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದಕ್ಕೆ ತಯಾರಿಯನ್ನು ಒಂದು ತಿಂಗಳಿನಿಂದಲೇ ಮಾಡಲಾಗುತ್ತದೆ.

ನಗರದ ಸಂಗೀತಪ್ರಿಯರಿಗೆ ರಾತ್ರಿಯಿಡೀ ಸಂಗೀತ ಕೇಳುವ ಸುಯೋಗವನ್ನು ಒದಗಿಸಿದ್ದು ‘ರೇಣುಕಾ ಸಂಗೀತ ಸಭಾ’ದ ಮತ್ತೊಂದು ಸಾಧನೆ. ಕಳೆದ 11 ವರ್ಷಗಳಿಂದ ‘ಸ್ಮೃತಿ’ ಹೆಸರಿನಲ್ಲಿ  ಅಹೋರಾತ್ರಿ ಸಂಗೀತ ಕಾರ್ಯಕ್ರಮ ಸಂಗೀತಪ್ರಿಯರ ಮನತಣಿಸುತ್ತಿದೆ. 

ಅಗಾಧ ಅನುಭವ

ಪಂ. ವಿಶ್ವನಾಥ್ ನಾಕೋಡ್ ಸದ್ಯ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ತಬಲಾ ಕಲಾವಿದರು. ಧಾರವಾಡದ ಪಂ. ಅರ್ಜುನಸಾ ನಾಕೋಡ ಅವರ ಮಗನಾಗಿದ್ದು, ಅವರಿಂದಲೇ ಚಿಕ್ಕ ವಯಸ್ಸಿನಿಂದಲೇ ಸಂಗೀತ ಕಲಿಯಲಾರಂಭಿಸಿದರು. ತಬಲಾವನ್ನು ತಮ್ಮ ಅಣ್ಣ ಪಂ. ರಘುನಾಥ್‌ನಾಕೋಡ ಮತ್ತು ತಂದೆಯವರ ಮಾರ್ಗದರ್ಶನದಲ್ಲಿ ಕಲಿತವರು. ಸುಗಮ ಸಂಗೀತವನ್ನು ಪಂ. ವಸಂತ ಕನಕಾಪುರ ಅವರ ಬಳಿ ಕಲಿತರು. ತಮ್ಮ 12ನೇ ವಯಸ್ಸಿನಲ್ಲೇ ಸಂಗೀತ ಕಛೇರಿಗಳಲ್ಲಿ ತಬಲಾ ಸಾಥ್ ನೀಡಿದ ಹೆಗ್ಗಳಿಕೆ ಇವರದು.

ಕಳೆದ ಸುಮಾರು 38 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿದ್ದು ನಾಡಿನ ಹಿರಿಯ ಸಂಗೀತ ದಿಗ್ಗಜರಿಗೆ ಅಲ್ಲದೆ ವಿಶ್ವವಿಖ್ಯಾತ ಕಲಾವಿದರ ಹಲವಾರು ಕಾರ್ಯಕ್ರಮಗಳಿಗೆ  ತಬಲಾ ಸಾಥಿ ನೀಡಿದ ಅನುಭವ ಇವರಿದೆ. 2005ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಸಂಗೀತ ಶ್ರಿ ಪ್ರಶಸ್ತಿ, ತಬಲಾ ಗಾರುಡಿಗ ಪ್ರಶಸ್ತಿ ಇವರಿಗೆ ಒಲಿದಿದೆ.
ವಿಳಾಸ: ಪಂ. ವಿಶ್ವನಾಥ ನಾಕೋಡ್, ರೇಣುಕಾ ಸಂಗೀತ ಸಭಾ, ನಂ. 332/ಎ, 11ನೇ ಕ್ರಾಸ್, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು-86. ಫೋನ್: 080-23496424/ 9448113924.

್ರಶಂಸಾರ್ಹ ಗುರು’

ಕಳೆದ 20 ವರ್ಷಗಳಿಂದ ರೇಣುಕಾ ಸಂಗೀತ ಸಭಾದಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದು, `ಪರಿಪೂರ್ಣ ಸಂಗೀತ ಪಾಠ'ಕ್ಕೆ ಇದು ಹೇಳಿ ಮಾಡಿಸಿದ ಜಾಗ. ನನ್ನ ಗುರುಗಳಿಗೆ ಸಂಗೀತದ ಆಳವಾದ ಹಿನ್ನೆಲೆ ಇರುವುದರಿಂದ ಅತ್ಯಂತ ಉತ್ತಮ ಗುಣಮಟ್ಟದ ಸಂಗೀತ ಶಿಕ್ಷಣ ನಮಗೆ ಅಲ್ಲಿ ಸಿಗುತ್ತಿದೆ.

ಪ್ರತಿಯೊಂದು ಕ್ಲಾಸ್‌ನಲ್ಲಿಯೂ ತಮ್ಮದೇ ರಾಗ ಸಂಯೋಜನೆಯ ದೇವರನಾಮಗಳನ್ನು ಹೇಳಿಕೊಡುವುದರಿಂದ ಅಲ್ಲಿ ನಿತ್ಯವೂ ಒಂದು ರೀತಿಯ ‘ಹೊಸರುಚಿ’ ನಮಗೆ ಸಿಗ್ತಾ ಇದೆ. ಅವರ ಶಿಷ್ಯರ ಕಲಿಕಾ ಸಾಮರ್ಥ್ಯ ಮತ್ತು ಬುದ್ಧಿಮತ್ತೆಯನ್ನು ಆಧರಿಸಿ ಅವರು ಕಲಿಸುತ್ತಿರುವುದರಿಂದ ಪ್ರತಿಯೊಬ್ಬ ಶಿಷ್ಯಂದಿರೂ ಬಹಳ ಬೇಗನೆ ಸಂಗೀತದಲ್ಲಿ ಮೇಲೇರಲು ಸಾಧ್ಯವಾಗಿದೆ. ನಾನು ಓದಿದ್ದು ಎಂಜಿನಿಯರಿಂಗ್ ಪದವಿ. ಆದರೆ ನನಗೆ ಒಲಿದದ್ದು ಸಂಗೀತ. ಇದಕ್ಕೆ ಕಾರಣ ನನ್ನ ಗುರುವೇ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ನನ್ನ ಸಾಧನೆ, ಯಶಸ್ಸಿಗೆ ಮನೆಯವರ ಜತೆಗೆ ನನ್ನ ಗುರುಗಳ ಪ್ರೋತ್ಸಾಹವೇ ಕಾರಣ. ಎಲ್ಲ ಶಿಷ್ಯಂದಿರ, ಸಂಗೀತಾಭಿಮಾನಿಗಳ ಪ್ರಶಂಸೆಗೆ ಇವರು ಅರ್ಹರು.
–ಸಮನ್ವಿತಾ ಶರ್ಮ

‘ಸಂಪೂರ್ಣ ವಿಕಸನ’

ಸಂಗೀತ ಕಲಿಸುವುದರ ಜತೆಗೆ ಸಂಗೀತದ ವಿವಿಧ ಆಯಾಮಗಳನ್ನು ರಸವತ್ತಾಗಿ ವಿಷದಪಡಿಸುವ
ಪಂ. ವಿಶ್ವನಾಥ ನಾಕೋಡ್ ಅವರು ಪ್ರತಿಯೊಬ್ಬ ವಿದ್ಯಾರ್ಥಿಯ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತಾರೆ. ಒಬ್ಬ ವಿದ್ಯಾರ್ಥಿ ಸಂಗೀತ ಕಲಿಯುವಾಗ, ಮೈಕ್ ಹಿಡಿಯುವಾಗ, ವೇದಿಕೆ ಮೇಲೆ ಹಾಡುವಾಗ ಏನೆಲ್ಲ ಶಿಸ್ತನ್ನು ಪಾಲಿಸಬೇಕೋ ಅದೆಲ್ಲವನ್ನೂ ಇಲ್ಲಿ ಕಲಿಸ
ಲಾಗುತ್ತದೆ. ನಾನು ಕಳೆದ 12 ವರ್ಷಗಳಿಂದ ಇಲ್ಲಿ ಸುಗಮ ಸಂಗೀತ ಕಲಿಯುತ್ತಿದ್ದೇನೆ. ಅದಕ್ಕೂ ಮುನ್ನ ಐದಾರು ವರ್ಷ ತಬಲಾವನ್ನೂ ಕಲಿತಿದ್ದೇನೆ.

ನಾನು ಹಿಂದೂಸ್ತಾನಿ ಸಂಗೀತಕ್ಕೆ ಮಾರುಹೋದದ್ದು ಪಂ. ನಾಕೋಡ್ ಅವರ ಶಿಸ್ತುಬದ್ಧ ಸಂಗೀತ ಶಿಕ್ಷಣದಿಂದಲೇ. ಅದಕ್ಕೂ ಮುನ್ನ ವಿದುಷಿ ರೂಪಾ ಶ್ರೀಧರ್ ಅವರ ಬಳಿ ಕರ್ನಾಟಕ ಸಂಗೀತವನ್ನೂ ಕಲಿತಿದ್ದೇನೆ. ಹಾರ್ಮೋನಿಕಾ (ಮೌತ್ ಆರ್ಗನ್) ದಲ್ಲಿ ಕರ್ನಾಟಕ ಸಂಗೀತವನ್ನು ನುಡಿಸುತ್ತೇನೆ. ಸದ್ಯ ರವಿಶಂಕರ್ ಗುರೂಜಿ ಅವರ ಶಾಲೆಯಲ್ಲಿ ಸಂಗೀತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಸಂಗೀತದಲ್ಲಿ ಮತ್ತಷ್ಟು ಸಾಧಿಸುವ ಮಹತ್ವಾಕಾಂಕ್ಷೆಯಿದೆ. 
-ಸಾಯಿತೇಜಸ್ ಚಂದ್ರಶೇಖರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT