ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಶಿವಯ್ಯ ವರದಿ ಜಾರಿಗೆ ಆಗ್ರಹ

Last Updated 24 ಜನವರಿ 2012, 5:40 IST
ಅಕ್ಷರ ಗಾತ್ರ

ದಾವಣಗೆರೆ: ಶಾಶ್ವತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಡಾ.ಪರಮಶಿವಯ್ಯ ವರದಿಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಸಿಪಿಐ (ಎಂ) ಆಗ್ರಹಿಸಿದೆ.

ನೇತ್ರಾವತಿ ಮತ್ತು ಇತರ ನದಿಗಳ ಮೂಲಕ ಅರಬ್ಬಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ 1,998.3 ಟಿಎಂಸಿ ನೀರಿನಲ್ಲಿ 168.46 ಟಿಎಂಸಿ ನೀರನ್ನು ಗಾರ್ಲ್ಯಾಂಡ್ ಕೆನಾಲ್‌ಗಳ ಮೂಲಕ ಪೂರ್ವಕ್ಕೆ ಹರಿಸಿದರೆ ಮಧ್ಯಕರ್ನಾಟಕದ 8 ಜಿಲ್ಲೆಗಳಿಗೆ, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸಬಹುದು ಎಂದು ಡಾ.ಪರಮಶಿವಯ್ಯ ವರದಿ ತಿಳಿಸಿತ್ತು. ಸರ್ಕಾರ ಇದನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮಾರುತಿ ಮಾನ್ಪಡೆ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಪರಮಶಿವಯ್ಯ ವರದಿ ಜಾರಿಗೊಳಿಸಿದರೆ ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಮಂಡ್ಯ ಜಿಲ್ಲೆಯ ನಾಗಮಂಗಲ  ತಾಲ್ಲೂಕುಗಳಿಗೂ  ಕುಡಿಯುವ ನೀರು  ಒದಗಿಸಬಹುದು.  ಅಲ್ಲದೇ,  ಅಂತರ್ಜಲಮಟ್ಟ  ಹೆಚ್ಚಿಸಬಹುದು.  ಅಂತೆಯೇ, ಕೃಷ್ಣಾ ಕಣಿವೆಯ ಭದ್ರಾ ಮೇಲ್ದಂಡೆಯಿಂದ ಲಭ್ಯವಿರುವ 76.39 ಟಿಎಂಸಿ ನೀರನ್ನು ಪಶ್ಚಿಮ ಘಟ್ಟಗಳಲ್ಲಿ ಗಾರ್ಲ್ಯಾಂಡ್ ಕೆನಾಲ್ ಮೂಲಕ ದೊರೆಯವ 168.46 ಟಿಎಂಸಿ ನೀರಿಗೆ ಸೇರಿಸಿ, ಎರಡು ಭಾಗಗಳಾಗಿ ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸಬಹುದು. ಆದರೆ, ಈ ವರದಿಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ, ಜಾರಿ ಮಾಡಲು ಸರ್ಕಾರ ಮೀನ-ಮೇಷ ಎಣಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ನೇತ್ರಾವತಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಿಪಟೂರು ಮತ್ತು ಸುಳ್ಯದಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಈ ಗೊಂದಲಗಳಿಂದ ಹೊರಬಂದು ಪರಮಶಿವಯ್ಯ ನೀರಾವರಿ ವರದಿ ಜಾರಿಗೊಳಿಸಬೇಕು ಎಂದರು.

ಸಮಗ್ರ ವಸತಿ ಯೋಜನೆಗೆ ಒತ್ತಾಯ: ರಾಜ್ಯದ ವಸತಿರಹಿತ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಕುಟುಂಬಗಳಿಗೆ ನಿಗದಿತ ಕಾಲಮಿತಿಯೊಳಗೆ ನಿವೇಶನ ಒದಗಿಸಿ, ಮನೆ ನಿರ್ಮಿಸಲು ಸರ್ಕಾರ ಒಂದು ಸಮಗ್ರ ವಸತಿ ಯೋಜನೆಯನ್ನು ಮುಂದಿನ ಬಜೆಟ್‌ನಲ್ಲಿ ಅಂಗೀಕರಿಸಬೇಕೆಂದು ಮಾನ್ಪಡೆ ಒತ್ತಾಯಿಸಿದರು.

ಈ ಕುರಿತು ಫೆಬ್ರುವರಿಯಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿ, ತಾಲ್ಲೂಕು ಕಚೇರಿಗಳ ಮುಂದೆ ಸಿಪಿಎಂ ಪ್ರತಿಭಟನೆ ನಡೆಸಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಲ್. ಭಟ್, ತಾಲ್ಲೂಕು ಕಾರ್ಯದರ್ಶಿ ಶ್ರೀನಿವಾಸ್, ಮಂಜುನಾಥ ಕಲ್ಲಹಳ್ಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT