ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರರ ಹಣ ಬೇಡವೆನ್ನುವ ಪಾಂಡುರಂಗ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತಿಮ್ಮಪ್ಪನ ದರ್ಶನ ಮಾಡಿ ತಿರುಪತಿಯಿಂದ ವಾಪಾಸ್ಸಾಗುತ್ತಿದ್ದ ಅಣ್ಣನಿಗೆ ಅಪಘಾತವಾಗಿ ಪ್ರಜ್ಞೆ ಕಳೆದುಕೊಂಡ್ದ್ದಿದ. ಈ ಸುದ್ದಿ ಗೊತ್ತಾಗುವಷ್ಟರಲ್ಲಿ  ಮೂರು ದಿನಗಳಾಗಿತ್ತು. ಶಸ್ತ್ರಚಿಕಿತ್ಸೆಗೆ ತಕ್ಷಣ ಹಣದ ಅಗತ್ಯವಿತ್ತು. ಅವರಿವರಿಂದ ಸಾಲಮಾಡಿ 5 ಲಕ್ಷ ರೂಪಾಯಿ ಹೊಂದಿಸಿಕೊಂಡು ಇಬ್ಬರು ತಮ್ಮಂದಿರು ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಬಂದರು.

ಸಂಬಂಧಿಕರ ಮನೆ ಇದ್ದದ್ದು ನಗರದ ಎಲಚೇನಹಳ್ಳಿಯಲ್ಲಿ. ಬನಶಂಕರಿ ಬಸ್‌ನಿಲ್ದಾಣಕ್ಕೆ ಬರುವಷ್ಟರಲ್ಲಿ ರಾತ್ರಿ 10 ಗಂಟೆಯಾಗಿತ್ತು. ರಾತ್ರಿಯಾದ್ದರಿಂದ ಬಸ್ ಸಿಕ್ಕದೇ ಆಟೊ ಮೊರೆ ಹೋದರು. ಅಂತೂ ಸಂಬಂಧಿಕರ ಮನೆ ತಲುಪಿದರು. ಆದರೆ, ಕೆಲವೇ ನಿಮಿಷಗಳಲ್ಲಿ ಬರಸಿಡಿಲು ಬಡಿದಂತಾಗಿತ್ತು. ಅಣ್ಣನ ಶಸ್ತ್ರಚಿಕಿತ್ಸೆಗೆ ತಂದಿದ್ದ 5 ಲಕ್ಷ ರೂ ನಾಪತ್ತೆ!

ತಾವು ತಂದಿದ್ದ ಬ್ಯಾಗ್‌ಗಳನ್ನೆಲ್ಲಾ ತಡಕಾಡಿದರೂ ಹಣ ಕಾಣಿಸಲಿಲ್ಲ. ಪೆಚ್ಚುಮೋರೆ ಹಾಕಿಕೊಂಡು ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದರು.

ಒಂದು ಕಡೆ ಅಪಘಾತಕ್ಕೀಡಾದ ಅಣ್ಣ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರೆ, ಇತ್ತ ಸಾಲ ಮಾಡಿಕೊಂಡು ತಂದಿದ್ದ ಹಣವೂ ಕಳೆದುಹೋದದ್ದರಿಂದ ಗಾಯದ ಮೇಲೆ ಬರೆ ಹಾಕಿದಂಥ ಅನುಭವ. ಅಣ್ಣನ ಜೀವಕ್ಕಾಗಿ ಆತಂಕ, ಕಳೆದುಹೋದ ಹಣದಿಂದಾಗಿ ಹತಾಶೆ ಎರಡೂ ಸೇರಿ ಅಯೋಮಯ ಪರಿಸ್ಥಿತಿ ಆ ಸಹೋದರರದ್ದು. ರಾತ್ರಿ ಸರಿದದ್ದೇ ಗೊತ್ತಾಗಲಿಲ್ಲ.

ಬೆಳಾಗಾಗುವಷ್ಟರಲ್ಲಿ ಬನಶಂಕರಿ ಬಸ್‌ನಿಲ್ದಾಣದಿಂದ ಮನೆಗೆ ಕರೆ ತಂದಿದ್ದ ಆಟೊ ಚಾಲಕ ಕೆ. ಪಾಂಡುರಂಗ (ಆಟೊ ಸಂಖ್ಯೆ: ಕೆ.ಎ.05 5890) ಮನೆ ಎದುರಲ್ಲಿ ಪ್ರತ್ಯಕ್ಷರಾದರು. ರಾತ್ರಿ ಬಿಟ್ಟುಹೋಗಿದ್ದ 5 ಲಕ್ಷ ರೂಪಾಯಿ ಮರಳಿಸಲು ಬಂದಿದ್ದರು.

ಈ ವಿಷಯ ತಿಳಿಯುತ್ತಿದ್ದಂತೆ ಆ ಕುಟುಂಬದ ಸದಸ್ಯರೆಲ್ಲರಿಗೂ ಹೋದ ಜೀವ ಮತ್ತೆ ಬಂದಂತಾಗಿತ್ತು. ದೇವರೇ ಪಾಂಡುರಂಗನ ರೂಪದಲ್ಲಿ ಬಂದಂತೆ ಕಣ್ತುಂಬಿ ಬಂದಿತ್ತು.  ಓಡಿಬಂದು ಚಾಲಕನನ್ನು ತಬ್ಬಿಕೊಂಡಾಗ ಹಿರಿಯಣ್ಣನ ಜೀವ ನೆನಪಾಗಿತ್ತು.

ಆಟೊ ಹತ್ತಿದ ಆ ನಾಲ್ವರು ತಮ್ಮ ಬ್ಯಾಗ್‌ಗಳನ್ನು ಸೀಟಿನ ಹಿಂಭಾಗದ ಜಾಗದಲ್ಲಿ ಇಟ್ಟಿದ್ದರು. ಅದರೊಳಗಿಟ್ಟಿದ್ದ ಹಣ ಬಿದ್ದುಹೋಗಿತ್ತು. ಬೆಳಿಗ್ಗೆ ಆಟೊ ಕ್ಲೀನ್ ಮಾಡುತ್ತಿದ್ದ ಪಾಂಡುರಂಗ ಅವರಿಗೆ ಐನೂರು, ಸಾವಿರದ ನೋಟುಗಳ ಕಂತೆಗಳು. ಎಣಿಸಲು ಮುಂದಾಗದೆ ಆ ಹಣ ಕಳೆದುಕೊಂಡವರ ಹುಡುಕಾಟಕ್ಕೆ ಮುಂದಾದರು. ಹಿಂದಿನ ದಿನ ಬಾಡಿಗೆಗೆ ಹೋದ ಎಲ್ಲಾ ಸ್ಥಳಗಳಿಗೂ ಹೋಗಿ ಹಣ ಕಳೆದುಕೊಂಡವರಿಗಾಗಿ ಹುಡುಕಾಟ ನಡೆಸಿದರು. ಕೊನೆಗೆ ರಾತ್ರಿ ಬಾಡಿಗೆಗೆ ಹೋಗಿದ್ದ ಸ್ಥಳಕ್ಕೆ ಹೋದರು.

ಅಲ್ಲಿ ಮನೆಯ ಪರಿಚಯ ಸಿಗದೇ ತಡಕಾಡುತ್ತಿದ್ದರು. ಚಾಲಕನ ಹುಡುಕಾಟ ಕಂಡ ಅಲ್ಲಿನ ಅಂಗಡಿಯವನು `ಏನನ್ನು ಹುಡುಕುತ್ತಿದ್ದಿರಾ?~ ಎಂದಾಗ ಪಾಂಡುರಂಗ ತಮ್ಮ ಹುಡುಕಾಟದ ಉದ್ದೇಶವೇನೆಂದು ಹೇಳಿದರು . ಆಗ ಅಂಗಡಿಯವನು ಹಣ ಕಳೆದುಕೊಂಡ ಕುಟುಂಬದವರ ವಿಷಯ ತಿಳಿಸಿ, ಅವರ ಮನೆಯನ್ನು ತೋರಿಸಿದರು. ಹೀಗೆ ಆಟೊ ಚಾಲಕ ಪಾಂಡುರಂಗ ತಮ್ಮ ಮನೆಯ ಸದಸ್ಯರದ್ದೇ ಹಣವೆಂಬಂತೆ ಕಾಳಜಿ ವಹಿಸಿ ಬಾಡಿಗೆ ಬಂದಿದ್ದ ಕುಟುಂಬಕ್ಕೆ ಹಣ ಹಿಂತಿರುಗಿಸಿದರು. ಆ ಮೂಲಕ ಮಾನವೀಯತೆ ಮೆರೆದರು.

ತಮಿಳುನಾಡಿನ ವೇಲೂರಿನವರಾದ ಪಾಂಡುರಂಗ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಒಮ್ಮೆ ತಮ್ಮ ಆಟೊವನ್ನು ಯಾರೋ ಕಿಡಿಗೇಡಿಗಳು ಕದ್ದು ಅದರ ಚಕ್ರಗಳನ್ನು ತೆಗೆದುಕೊಂಡು ಕುಮಾರಸ್ವಾಮಿ ಬಡಾವಣೆಯ ನಿರ್ಜನ ಪ್ರದೇಶವೊಂದರಲ್ಲಿ ಬಿಟ್ಟು ಹೋಗಿದ್ದರಂತೆ. ಎರಡು ತಿಂಗಳ ನಂತರ ಆ ಆಟೊ ಸಿಕ್ಕಿತು. “ಹಣ, ವಸ್ತುಗಳನ್ನು ಕಳೆದುಕೊಂಡಾಗ ಉಂಟಾಗುವ ದುಃಖ ಎಂಥದ್ದು ಎಂಬುದರ ಅನುಭವವ ನನಗೆ ಈ ರೀತಿ ಹಣವನ್ನು ಹಿಂತಿರುಗಿಸುವಂತೆ ಮಾಡಿತು” ಎನ್ನುತ್ತಾರೆ ಪಾಂಡುರಂಗ.

`ನನ್ನ ಆಟೊದಲ್ಲಿ ನಾಲ್ಕೈದು ಬಾರಿ ಮೊಬೈಲ್‌ಗಳು ಸಿಕ್ಕಿವೆ. ಅವುಗಳನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸಿದ ಖುಷಿ ನನ್ನಲ್ಲಿದೆ~ ಎಂದು ಸಂತೋಷದಿಂದ ಹೇಳಿಕೊಳ್ಳುತ್ತಾರೆ ಅವರು.

ಪಾಂಡುರಂಗ ಅವರ ಪ್ರಾಮಾಣಿಕತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಶಾರದಮ್ಮ ಮತ್ತು ದಕ್ಷಿಣ ವಲಯ ಡಿಸಿಪಿ ಸೋನಿಯಾ ನಾರಂಗ್ ಅವರು ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಬೇರೆಯವರ 10 ರೂಪಾಯಿ ಸಿಕ್ಕಿದರೂ ಕಣ್ಣಿಗೆ ಒತ್ತಿಕೊಂಡು `ಲಕ್ಷ್ಮಿ~  ಸಿಕ್ಕಿದಳು ಎಂದು ಜೇಬಿಗೆ ಹಾಕಿಕೊಳ್ಳುವ ಮಂದಿಯ ನಡುವೆ ಐದು ಲಕ್ಷದ ಭಾರಿ ಮೊತ್ತವನ್ನು `ಪರರ ಸ್ವತ್ತು ಅವರಿಗೇ ಸೇರಬೇಕು~ ಎಂದುಕೊಂಡು ಹಿಂದುರಿಗಿಸಿದ ಆಟೊ ಚಾಲಕ ಪಾಂಡುರಂಗ ನಿಜಕ್ಕೂ ಮಾದರಿಯಾಗಿದ್ದಾರೆ.       
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT