ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶ್ರಮಕ್ಕೆ ಪ್ರಶಸ್ತಿಯ ಮನ್ನಣೆ

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ನಿರಂತರ ಪರಿಶ್ರಮಕ್ಕೆ ಮನ್ನಣೆ ಸದಾ ಇದ್ದೇ ಇರುತ್ತದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಬೆಳಗುತ್ತಿ ಗ್ರಾಮದ ರೈತ ರೇವಣಪ್ಪ ಅವರ ಮಾತಿನಲ್ಲಿ ಅದು ವ್ಯಕ್ತವಾಗುತ್ತದೆ.
2010 -11ನೇ ಸಾಲಿನ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಅವರಿಗೆ ಒಲಿದಿದೆ.

ಮಳೆಯಾಶ್ರಿತ ಜಮೀನಿನಲ್ಲಿ ಹೆಕ್ಟೇರಿಗೆ 35.698 ಕ್ವಿಂಟಲ್ ಶೇಂಗಾ ಬೆಳೆದದ್ದು ಅವರ ಸಾಧನೆ. 1997-98ರಲ್ಲಿ ಕೂಡ ಎಕರೆಗೆ 40 ಚೀಲ ಶೇಂಗಾ ಬೆಳೆದು ರಾಜ್ಯಮಟ್ಟದ ಪ್ರಶಸ್ತಿಗೆ ಪಾತ್ರರಾಗಿದ್ದರು.

ಬೆಳಗುತ್ತಿ ಅಷ್ಟೇನೂ ಬೆಳವಣಿಗೆ ಕಾಣದ ಪುಟ್ಟ ಊರು. ಹೇಳಿ ಕೇಳಿ ಅರೆ ಮಲೆನಾಡು ಪ್ರದೇಶ. ಇಲ್ಲಿ ರೇವಣಪ್ಪ ಅವರಿಗೆ 13 ಎಕರೆ ಜಮೀನು ಇದೆ. ಸ್ವಲ್ಪ ಭಾಗಕ್ಕೆ ಭದ್ರಾ ಕಾಲುವೆಯ ನೀರು ಬರುತ್ತದೆ.

ಉಳಿದಂತೆ ತೀರ್ಥರಾಮಪುರ ಪ್ರದೇಶದಲ್ಲಿರುವ ಜಮೀನಿನ ಬೆಳೆಗೆ ಮಳೆಯನ್ನೇ ನಂಬಬೇಕು. ಬೋರ್‌ವೆಲ್‌ನಿಂದ ಸ್ವಲ್ಪ ಸಹಾಯವಾಗಿದೆ. ಕೃಷಿ ಇಲಾಖೆ ಸಿಬ್ಬಂದಿಯ ಪ್ರೋತ್ಸಾಹ, ಪರಂಪರಾನುಗತ ಅನುಭವವೇ ಅವರು ನಿರೀಕ್ಷೆಗಿಂತ ಹೆಚ್ಚು ಫಸಲು ಪಡೆಯುವಂತೆ ಮಾಡಿದೆ.

ಪ್ರಶಸ್ತಿ ಪಡೆದ ಖುಷಿಯಲ್ಲಿ ಸರ್ಕಾರದ ವತಿಯಿಂದ ನಡೆಯುವ ವಿದೇಶ ಪ್ರವಾಸದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಪಾಸ್‌ಪೋರ್ಟ್ ಹಿಡಿದುಕೊಂಡು ಕಾದಿದ್ದಾರೆ. ರೇವಣಪ್ಪ ಅವರದ್ದು 18 ಜನರ ತುಂಬು ಕೂಡು ಕುಟುಂಬ. ಹಾಗಾಗಿ ಬೇಸಾಯಕ್ಕೆ ಆಳಿನ ಅವಲಂಬನೆ ಕಡಿಮೆ. ಅಗತ್ಯ ಬಿದ್ದಲ್ಲಿ ಮಾತ್ರ ಒಂದಿಬ್ಬರನ್ನು ಬಳಸಿಕೊಳ್ಳುತ್ತಾರೆ. ಒಟ್ಟಾರೆ ಇಳುವರಿ ಕುಟುಂಬ ಶ್ರಮದ ಪ್ರತಿಫಲ ಎನ್ನುತ್ತಾರೆ ಅವರು.

ಸಾವಯವ ಮತ್ತು ರಾಸಾಯನಿಕ ಮಿಶ್ರಪದ್ಧತಿಯ ಬೇಸಾಯ ಅನುಸರಿಸುತ್ತಾರೆ. ಆದರೂ ಇತ್ತೀಚೆಗೆ ಗೊಬ್ಬರ, ಕೀಟನಾಶಕಗಳ ಬೆಲೆ ಹೆಚ್ಚಿರುವುದರಿಂದ ಸಾವಯವ ಪದ್ಧತಿಯತ್ತಲೇ ಹೆಚ್ಚು ಒಲವು ತೋರಿದ್ದಾರೆ. ಕೊಟ್ಟಿಗೆ ಗೊಬ್ಬರವೇ ಬೆಳೆಗೆ ಜೀವದಾಯಿ. ಬಿಲ್ವಪತ್ರೆ, ಬೇವಿನಸೊಪ್ಪು ಇತ್ಯಾದಿ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿ ಕೀಟನಾಶಕ ತಯಾರಿಸುತ್ತಾರೆ.

ಬೆಲೆ ವೈಪರೀತ್ಯವೂ ಬಾಧಿಸಿಲ್ಲ. ಉತ್ತಮ ಧಾರಣೆ ಸಿಗುವವರೆಗೆ ಕಾದು ನಂತರ ಮಾರಾಟ ಮಾಡುತ್ತಾರೆ. ಹಾಗಾಗಿ ಅದೊಂದು ದೊಡ್ಡ ಸಮಸ್ಯೆಯಾಗಿ ಕಾಡಿಲ್ಲ.
ಉಳಿದಂತೆ ಮೆಕ್ಕೆಜೋಳ, ಊಟದ ಜೋಳ, ಬತ್ತ, ಬೇಸಿಗೆ ಬೆಳೆಯಾಗಿ ಸೂರ್ಯಕಾಂತಿ ಅವರ ಜಮೀನಿನಲ್ಲಿ ನಳನಳಿಸುತ್ತದೆ.
 
ಶೇಂಗಾ ಕಿತ್ತ ಮೇಲೆ ಬಿಳಿ ಜೋಳ ಬೆಳೆಯುತ್ತಾರೆ. ದೇವರು ನೇಗಿಲನ್ನು ನಂಬಿದವನಿಗೆ ಮೋಸ ಮಾಡಿಲ್ಲ. ಇದ್ದುದರಲ್ಲಿ ಸಂತೃಪ್ತಿಯ ಜೀವನ ನಡೆಸುತ್ತಿದ್ದೇನೆ ಎಂದು ಮುಗ್ದವಾಗಿ ನಗುತ್ತಾರೆ ರೇವಣಪ್ಪ. ಅವರೊಂದಿಗೆ ಸಹೋದರರೂ ಕೈಜೋಡಿಸಿದ್ದಾರೆ.
ವಿದೇಶ ಪ್ರವಾಸ ಮಾಡಿ ಅಲ್ಲಿನ ಬೆಳೆ ಪದ್ಧತಿ ನೋಡಿ ಬಂದು ಇಲ್ಲಿ ಅಳವಡಿಸಬೇಕು. ಇನ್ನೂ ಹೆಚ್ಚಿನ ಜ್ಞಾನ ಪಡೆಯಬೇಕು ಎಂಬ ಹುಮ್ಮಸ್ಸಿನಲ್ಲಿದ್ದಾರೆ ರೇವಣಪ್ಪ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT