ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಸದಸ್ಯರ ಅನರ್ಹತೆಗೆ ಅರ್ಜಿ

ಪಕ್ಷ ವಿರೋಧಿಗಳಿಗೆ ಬಿಜೆಪಿ ತಿರುಗೇಟು
Last Updated 29 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯರಾದ ಪ್ರೊ.ಮುಮ್ತಾಜ್ ಅಲಿಖಾನ್, ಶಿವರಾಜ ಸಜ್ಜನರ, ಮೋಹನ್ ಲಿಂಬಿಕಾಯಿ, ಭಾರತಿ ಶೆಟ್ಟಿ ಮತ್ತು ಬಿ.ಜೆ.ಪುಟ್ಟಸ್ವಾಮಿ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಬಿಜೆಪಿ ಮಂಗಳವಾರ ಪರಿಷತ್ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದೆ.

ಕೆಜೆಪಿ ಜೊತೆ ಗುರುತಿಸಿಕೊಂಡಿರುವ 12 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಬಿಜೆಪಿ ಸೋಮವಾರ ವಿಧಾನಸಭೆಯ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿತ್ತು. ಮಂಗಳವಾರ ಬೆಳಿಗ್ಗೆ ವಿಧಾನ ಪರಿಷತ್ ಕಾರ್ಯದರ್ಶಿ ವಿ.ಶ್ರೀಶ್ ಅವರನ್ನು ಭೇಟಿ ಮಾಡಿದ ಪರಿಷತ್ ಸದಸ್ಯರಾದ ಬಿಜೆಪಿಯ ಅಶ್ವತ್ಥನಾರಾಯಣ ಮತ್ತು ಸೋಮಣ್ಣ ಬೇವಿನಮರದ ಅವರು, ಈ  ಐವರು ಸದಸ್ಯರನ್ನು ಅನರ್ಹಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದರು.

ಪ್ರತಿವಾದಿಗಳ ಪಟ್ಟಿಯಲ್ಲಿರುವ ಭಾರತಿ ಶೆಟ್ಟಿ ಮತ್ತು ಪುಟ್ಟಸ್ವಾಮಿ ವಿಧಾನಸಭೆಯಿಂದ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಮೋಹನ ಲಿಂಬಿಕಾಯಿ ಪದವೀಧರರ ಕ್ಷೇತ್ರದಿಂದ ಮತ್ತು ಶಿವರಾಜ ಸಜ್ಜನರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಕೆಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿರುವ ಎಂ.ಡಿ.ಲಕ್ಷ್ಮೀನಾರಾಯಣ ವಿರುದ್ಧವೂ ಅರ್ಜಿ ಸಲ್ಲಿಸಲು ಬಿಜೆಪಿ ಹಿಂದೆ ಯೋಚಿಸಿತ್ತು. ನಾಮಕರಣ ಸದಸ್ಯರಾಗಿರುವ ಅವರು ಬಿಜೆಪಿ ಶಾಸಕಾಂಗ ಪಕ್ಷದ ಸಭೆಗಳಲ್ಲಿ ಪಾಲ್ಗೊಂಡು ಸಹ ಸದಸ್ಯರ ಪಟ್ಟಿಗೆ ಸಹಿ ಮಾಡಿಲ್ಲ. ಈ ಕಾರಣದಿಂದ ಅವರ ವಿರುದ್ಧ ದೂರು ನೀಡುವ ಪ್ರಸ್ತಾವವನ್ನು ಕೈಬಿಡಲಾಗಿದೆ. ಮುಮ್ತಾಜ್ ಅಲಿಖಾನ್ ಕೂಡ ನಾಮಕರಣ ಸದಸ್ಯ. ಆದರೆ, ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಅವರು, ಶಾಸಕಾಂಗ ಸಭೆಗಳಲ್ಲಿ ಪಾಲ್ಗೊಂಡು ಸಹ ಸದಸ್ಯರ ಪಟ್ಟಿಗೆ ಸಹಿ ಮಾಡಿದ್ದಾರೆ. ಅದನ್ನು ಆಧಾರವಾಗಿ ಇಟ್ಟುಕೊಂಡು ಅವರ ವಿರುದ್ಧ ದೂರುನೀಡಲಾಗಿದೆ.

ಬಿಜೆಪಿಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವುದು ಮತ್ತು ಪಕ್ಷದಿಂದ ನಾಮಕರಣ ಹೊಂದಿ ಸಹ ಸದಸ್ಯರಾಗಿದ್ದೂ, ಕೆಜೆಪಿ ಜೊತೆ ಗುರುತಿಸಿಕೊಂಡಿರುವ ಆರೋಪದ ಮೇಲೆ ಐವರನ್ನೂ ಅನರ್ಹಗೊಳಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಪ್ರತಿವಾದಿಗಳು ಕೆಜೆಪಿ ಸಭೆ, ಸಮಾವೇಶ, ಕಾರ್ಯಕಾರಿಣಿಗಳಲ್ಲಿ ಭಾಗವಹಿಸಿರುವುದು, ಬಿಜೆಪಿ ವಿರುದ್ಧ ಹೇಳಿಕೆಗಳನ್ನು ನೀಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿಯ ಜೊತೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT