ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸೂಕ್ಷ್ಮ ವಲಯ ಘೋಷಣೆ: ನಮ್ಮ ಪಾತ್ರ ಇಲ್ಲ

Last Updated 19 ಸೆಪ್ಟೆಂಬರ್ 2011, 6:55 IST
ಅಕ್ಷರ ಗಾತ್ರ

ಮಡಿಕೇರಿ:  ಕೊಡಗಿನ ವಿವಿಧ ರಾಷ್ಟ್ರೀಯ ಉದ್ಯಾನವನಗಳ, ಅಭಯಾರಣ್ಯಗಳ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಎಕೋ ಸೆನ್ಸಿಟಿವ್ ಜೋನ್) ಘೋಷಿಸುವ ಪ್ರಸ್ತಾವದಲ್ಲಿ ಕೊಡಗು ಏಕೀಕರಣ ರಂಗದ ಯಾವ ಪಾತ್ರವೂ ಇಲ್ಲ ಎಂದು ರಂಗದ ಕೇಂದ್ರ ಸಮಿತಿ ವಕ್ತಾರರಾದ ಎ.ಎ.ಪೂವಯ್ಯ ಹಾಗೂ ಎಂ.ಕೆ.ಅಪ್ಪಚ್ಚು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, 1986ರ ಎನ್ವಿರಾನ್‌ಮೆಂಟ್ ಪ್ರೊಟೆಕ್ಷನ್ ಆಕ್ಟ್(ಇಪಿಎ)ದ ಸೆಕ್ಷನ್-3ರಲ್ಲಿ ರಾಷ್ಟ್ರೀಯ ಉದ್ಯಾನವನ ಮತ್ತು ಅಭಯಾರಣ್ಯಗಳ ಸುತ್ತಲಿನ ಹತ್ತು ಕಿ.ಮೀ. ವರೆಗಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಿಸುವ ಪ್ರಸ್ತಾಪವಿದೆ. 1986ರ ಈ ಕಾಯಿದೆಯ ಕುರಿತು 2002ರವರೆಗೂ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರಗಳಾಗಲಿ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ ಎಂದು ಅವರು ವಿವರಿಸಿದ್ದಾರೆ.

ಬಿಜೆಪಿ ಅಧಿಕಾರವಧಿಯಲ್ಲೇ ಆಗಿತ್ತು: 2002ರ ಜನವರಿ 21 ರಂದು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಸಲಹಾ ಮಂಡಳಿಯ ಸಭೆಯಲ್ಲಿ ರಾಷ್ಟ್ರೀಯ ಉದ್ಯಾನವನಗಳು ಹಾಗೂ ಅಭಯಾರ ಣ್ಯಗಳ ಸುತ್ತಲಿನ ಹತ್ತು ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಿಸುವಂತೆ ತೀರ್ಮಾನಿ ಸಲಾಯಿತು.

ನ್ಯಾಯಾಲಯದ ಆದೇಶ: ಈ ಬಗ್ಗೆ ಕ್ರಮ ಕೈಗೊಳ್ಳದ ರಾಜ್ಯ ಸರಕಾರದ ಬಗ್ಗೆ ಪ್ರಶ್ನಿಸಿ ಗೋವಾ ಫೌಂಡೇಷನ್ 2004ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಪಿಟಿಷನ್ ದಾಖಲಿಸಿತ್ತು. ಇದರನ್ವಯ ಸುಪ್ರೀಂ ಕೋರ್ಟ್ ಸೂಕ್ಷ್ಮ ಪರಿಸರ ವಲಯಗಳನ್ನು ಘೋಷಿಸುವ ಪ್ರಸ್ತಾವನೆಯನ್ನು ನಾಲ್ಕು ವಾರಗಳ ಒಳಗಾಗಿ ಸಲ್ಲಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿತ್ತು.

ಸೂಕ್ಷ್ಮ ಪರಿಸರ ವಲಯ ಎಂದರೇನು?: ಜೀವ ವೈವಿಧ್ಯತೆ, ವನ್ಯಜೀವಿಗಳ ಅವಾಸ ಸ್ಥಾನಕ್ಕಿರುವ ದೂರ, ನಿಯಂತ್ರಿತ ಮಟ್ಟಕ್ಕಿಂತ ಅಧಿಕ ಪ್ರಮಾಣದ ಮಾಲಿನ್ಯ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ನಿರ್ದಿಷ್ಟ ಪ್ರದೇಶವೊಂದರಲ್ಲಿ ಕೈಗಾರಿಕೆ ಗಳನ್ನು, ಇತರ ಚಟುವಟಿಕೆಗಳನ್ನು ನಿಷೇಧಿಸುವ ಹಾಗೂ ನಿಯಂತ್ರಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ 1986 ಎನ್ವಿರಾನ್‌ಮೆಂಟ್ ಪ್ರೊಟೆಕ್ಷನ್ ಆ್ಯಕ್ಟ್‌ನ ನೀತಿ-ನಿಯಾಮಾವಳಿಗಳ ಸೆಕ್ಷನ್-5(1)ನೀಡುತ್ತದೆ.

ನಿಷೇಧಿತ ಚಟುವಟಿಕೆಗಳು: ಈ ಕಾಯ್ದೆಯಡಿ ವಾಣಿಜ್ಯ ಉದ್ದೇಶದ ಗಣಿಗಾರಿಕೆ, ಸಾಮಿಲ್ಲುಗಳ ಸ್ಥಾಪನೆ, ನೀರು, ಗಾಳಿ ಮತ್ತು ಶಬ್ದ ಮಾಲಿನ್ಯವುಂಟು ಮಾಡುವ ಕೈಗಾರಿಕೆಗಳ ಸ್ಥಾಪನೆ,  ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಿಗೆ ಬಳಕೆ, ಅಂತರ್ಜಲ, ನೈಸರ್ಗಿಕ ಜಲಮೂಲಗಳ ಬಳಕೆ, ಜಲ ವಿದ್ಯುತ್ ಯೋಜನೆಗಳ ಸ್ಥಾಪನೆ, ಹಾನಿಕಾರಕ ವಸ್ತುಗಳ ಉತ್ಪಾದನೆ ಮತ್ತು ಬಳಕೆ,  ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ವಿಮಾನ, ಬಿಸಿ ಹಬೆಯ ಬಲೂನು ಹಾರಾಟ ಸೇರಿದಂತೆ ಪ್ರವಾಸಿ ಚಟುವಟಿಕೆಗಳು, ನೈಸರ್ಗಿಕ ಜಲಮೂಲಗಳಿಗೆ ತ್ಯಾಜ್ಯಗಳ ಬಿಡುಗಡೆಯನ್ನು ನಿಷೇಧಿಸಲಾಗುತ್ತದೆ.

ಅನುಮೋದಿತ ಚಟುವಟಿಕೆಗಳು: ಚಾಲ್ತಿಯಲ್ಲಿರುವ ಕೃಷಿ ಮತ್ತು ತೋಟಗಾರಿಕಾ ಬೇಸಾಯಕ್ಕೆ ಅನುಮತಿ ನೀಡಲಾಗಿದೆ. ಮನೆ ನಿರ್ಮಾಣ, ದುರಸ್ತಿ, ಇಟ್ಟಿಗೆ ಹಾಗೂ ಹಂಚು ತಯಾರಿಕೆಯಂತಹ ಸ್ವ-ಬಳಕೆಗಾಗಿನ ಚಟುವಟಿಕೆಯ ಮೇಲೆ ಯಾವ ನಿರ್ಬಂಧವೂ ಇಲ್ಲ. ಚಾಲ್ತಿಯಲ್ಲಿರುವ ಕಾನೂನಿನನ್ವಯ ಸಂಬಂಧಿಸಿದ ಅಧಿಕಾರಿಯಿಂದ ಅನುಮತಿ ಪಡೆದು ಮರ ಕಡಿಯಬಹುದು.

ಸ್ಥಳೀಯ ಮುಖಂಡರಿಗೆ ಭ್ರಮ ನಿರಸನ: ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಪಕ್ಷದ ಸ್ಥಳೀಯ ಮುಖಂಡರಿಗೆ ತಮ್ಮ ಪಕ್ಷದ ಸರಕಾರದ ಆಡಳಿತದಿಂದ ಭ್ರಮನಿರಸನವಾಗಿದೆ. ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಜಿಲ್ಲೆಯ ನಾಗರಿಕರನ್ನು ಭಾವನಾತ್ಮಕ ವಿಚಾರಗಳಲ್ಲಿ ಮಗ್ನರಾಗುವಂತೆ ಮಾಡಲು ಅವರು ಯೋಜನೆಯ ವಿರುದ್ಧ ಮಾತನಾಡುತ್ತಿದ್ದಾರೆ.

ಕೊಡಗಿನ ಹದಿನಾರು ಹೋಬಳಿಗಳನ್ನು ಪಶ್ಚಿಮ ಘಟ್ಟ ವ್ಯಾಪ್ತಿಗೆ ಸೇರಿಸುವ ಪ್ರಸ್ತಾಪ, ಜಮ್ಮೋ ಬಾಣೆ ಪ್ರಕರಣಗಳು, ಎಲ್ಲವೂ ರಾಜ್ಯ ಸರಕಾರದ್ದೇ ಆದರೂ ಜನರನ್ನು ತಪ್ಪು ದಾರಿಗೆಳೆಯಲು ಕೇಂದ್ರ ಸರಕಾರದ ಮೇಲೆ ಹಾಗೂ ಪರಿಸರವಾದಿಗಳ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಮಾರಕ ಯೋಜನೆ ತಡೆಗಟ್ಟಬಹುದು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸುವ ಕರಡು ಪ್ರಸ್ತಾವನೆಯಲ್ಲಿ ದೊಡ್ಡಹರವೆ, ಆನೆಚೌಕೂರು, ಮಾವುಕಲ್ಲು, ದೇವಮಚ್ಚಿ ಹಾಗೂ ದುಬಾರೆ ರಕ್ಷಿತಾರಣ್ಯಗಳು ಸೇರಿವೆ.  ಇಲ್ಲಿ ಸೂಕ್ಷ್ಮ ಪರಿಸರ ವಲಯ ಎಂದು ಘೋಷಣೆಯಾದಲ್ಲಿ ಉದ್ದೇಶಿತ ಹೈ-ಟೆನ್ಷನ್ ಲೈನ್ ಹಾಗೂ ಮೈಸೂರು-ತಲಚೇರಿ ರೈಲ್ವೆ ಯೋಜನೆಗಳು ಕೊಡಗಿಗೆ ಕಾಲಿಡದಂತೆ ತಡೆಯಬಹುದು.

ಬರಪೊಳೆ ಯೋಜನೆಗೆ  ಶಾಶ್ವತವಾಗಿ ಪೂರ್ಣವಿರಾಮ ಹಾಕಬಹುದು. ರೆಸಾರ್ಟ್ ನಿರ್ಮಾಣ, ಹೆದ್ದಾರಿ ನಿರ್ಮಾಣಗಳನ್ನು ತಡೆಗಟ್ಟಬಹುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇಎಸ್‌ಜೆಡ್‌ಗೆ ಕೆಲವು ಗ್ರಾಮಗಳು ಮಾತ್ರ
ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಹರಡಿಕೊಂಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ಪರಿಸರ ವಲಯ ಘೋಷಣೆಗಾಗಿ ಕರಡು ಪ್ರಸ್ತಾಪವೊಂದನ್ನು ತಯಾರಿಸಲಾಗಿದೆ. ಅದರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಿಂದ ಹತ್ತು ಕಿ.ಮೀ. ವ್ಯಾಪ್ತಿಯ ಪ್ರದೇಶವೆಲ್ಲವನ್ನು ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಿಸಲಾಗಿಲ್ಲ. 

ಕೊಡಗು ಜಿಲ್ಲೆಯ ನೊಕ್ಯ, ಮಾಯಮುಡಿ, ಹೆಬ್ಬಾಲೆ, ಕುಟ್ಟ, ಬಾಡಗ, ನಾಲ್ಕೇರಿ, ಕೋತೂರು, ಕಾನೂರು, ನಿಟ್ಟೂರು, ಕೊಟ್ಟಗೇರಿ, ದೇವನೂರು ಮತ್ತು ಬಾಳೆಲೆ ಗ್ರಾಮಗಳನ್ನು ಮಾತ್ರ ಈ ವ್ಯಾಪ್ತಿಗೆ ಸೇರಿಸುವ ಪ್ರಸ್ತಾಪವಿದೆ. 

ಇದರ ಜೊತೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಉತ್ತರ ಭಾಗದಲ್ಲಿರುವ ದೊಡ್ಡಹರವೆ, ಆನೆಚೌಕೂರು, ಮುದ್ದನಹಳ್ಳಿ, ಮಾವುಕಲ್ಲು, ದೇವಮಚ್ಚಿ ಮತ್ತು ದುಬಾರೆ ರಕ್ಷಿತಾರಣ್ಯಗಳನ್ನು ಇದರ ವ್ಯಾಪ್ತಿಗೆ ಸೇರಿಸುವ ಪ್ರಸ್ತಾಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT