ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಗಣೇಶ ಅರಿವು ಜಾಥಾ

Last Updated 7 ಸೆಪ್ಟೆಂಬರ್ 2013, 8:48 IST
ಅಕ್ಷರ ಗಾತ್ರ

ಮೈಸೂರು: ಪೌರಪ್ರಜ್ಞೆ ಮಕ್ಕಳ ಚಳವಳಿ (ಸಿಎಂಸಿಎ) ಮತ್ತು ಪಾಲಿಕೆ ವತಿಯಿಂದ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ ಮತ್ತು ಡೆಂಗೆ ಜ್ವರ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲು ನಗರದಲ್ಲಿ ಶುಕ್ರವಾರ ಜಾಥಾ ಆಯೋಜಿಸಲಾಗಿತ್ತು.

ಪಾಲಿಕೆ ಆವರಣದಲ್ಲಿ ಶಾಸಕ ಎಂ.ಕೆ. ಸೋಮಶೇಖರ್ ಅವರು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಬಣ್ಣದ ಗಣೇಶ ವಿಗ್ರಹಗಳನ್ನು ಬಳಸುವುದು ಪರಿಸರಕ್ಕೆ ಹಾನಿಕರವಾಗಿದೆ. ಬಣ್ಣಲೇಪಿತ ಮೂರ್ತಿಗಳನ್ನು ಕೆರೆ/ಬಾವಿ/ಕಾಲುವೆಗಳಲ್ಲಿ ಮುಳುಗಿಸಿದಾಗ ಬಣ್ಣದಲ್ಲಿನ ರಾಸಾಯನಿಕಗಳು ನೀರಿಗೆ ಸೇರುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ. ಗೌರಿಗಣೇಶ ಹಬ್ಬದಲ್ಲಿ ಮಣ್ಣಿನ ಮೂರ್ತಿಗಳನ್ನು ಬಳಸುವ ಮೂಲಕ ನಾಗರಿಕರು ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಪಾಲಿಕೆ ಆಯಕ್ತ ಡಾ.ಎಂ.ಆರ್. ರವಿ ಮಾತನಾಡಿ, ಬಣ್ಣದ ಗಣಪತಿ ವಿಗ್ರಹಗಳ ಬಳಕೆ ಪರಿಸರ ಮತ್ತು ಜನರ ಆರೋಗ್ಯಕ್ಕೆ ಮಾರಕವಾಗಿದೆ. ಬಣ್ಣರಹಿತ ಗಣೇಶ ವಿಗ್ರಹಗಳನ್ನು ನಾಗರಿಕರಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಮಣ್ಣಿನ ಗಣೇಶ ವಿಗ್ರಹ ಮಾರಾಟಕ್ಕೆ ಕಡಿವಾಣ ಹಾಕುವಂತೆ ಪಾಲಿಕೆಯ ಪರಿಸರ ಎಂಜಿನಿಯರುಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮೇಯರ್ ಎನ್.ಎಂ. ರಾಜೇಶ್ವರಿ,  ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ, ಸಿಎಂಸಿಎ ನಗರ ಸಂಯೋಜಕ ಪಿ.ವಿ. ರಾಮದಾಸ್, ವಲಯ ಸಂಯೋಜಕ ಪಿ.ವಿ. ಭಾರದ್ವಾಜ್, ಸುನೀತಾ, ಎ. ರಮೇಶ್ ಇದ್ದರು.      

ಪಾಲಿಕೆ ಮುಂಭಾಗದಿಂದ ಆರಂಭವಾದ ಜಾಥಾವು ಚಾಮರಾಜ ಜೋಡಿರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ರಮಾವಿಲಾಸ ರಸ್ತೆಗಳಲ್ಲಿ ಸಂಚರಿಸಿ ಪಾಲಿಕೆ ಆವರಣದಲ್ಲಿ ಸಮಾಪನಗೊಂಡಿತು.

ಜಾಥಾದಲ್ಲಿ ಪಾಲ್ಗೊಂಡಿದ್ದ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಗಣಪತಿಗೆ ನಿಮ್ಮ ಭಕ್ತಿ ಮುಖ್ಯ ಅಲಂಕಾರವಲ್ಲ, ಗಣೇಶನ ಹೆಸರಿನಲ್ಲಿ ಶಬ್ದ ಮಾಲಿನ್ಯ, ಜಲ ಮಾಲಿನ್ಯ ಬೇಡ, ಬಣ್ಣದ ಗಣೇಶ ಬೇಡ ಕೇವಲ ಜೇಡಿ ಮಣ್ಣಿನ ವಿಗ್ರಹ ಬಳಸಿ, ಬಣ್ಣಪೇಪಿತ ಗಣೇಶ ವಿಗ್ರಹಗಳನ್ನು ತ್ಯಜಿಸಿ ಕರೆ ಬಾವಿಗಳನ್ನು ರಕ್ಷಿಸಿ... ಇತ್ಯಾದಿ ನಾಮಫಲಕಗಳನ್ನು ಕೈಯಲ್ಲಿ ಹಿಡಿದು ನಗರದ ರಸ್ತೆಗಳಲ್ಲಿ ಜಾಗೃತಿ ಕಹಳೆ ಮೊಳಗಿಸಿದರು.

ಡೆಂಗೆ ಜ್ವರ ಕುರಿತು ಅರಿವು ಮೂಡಿಸಲಾಯಿತು. ಡೆಂಗೆ ಜ್ವರದ ಲಕ್ಷಣಗಳು, ನಿಯಂತ್ರಣ, ಅನುಸರಿಸಬೇಕಾದ ಮುನ್ನೆಚ್ಚರಿಕೆಗಳನ್ನು ಒಳಗೊಂಡ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT